• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಮಾಲ್' ಕನ್ನಡ ಓದಿ ನಗುವುದೋ ಅಳುವುದೋ ನೀವೇ ಹೇಳಿ

|
   ಮಾಲ್ ಗಳಲ್ಲಿ ಕನ್ನಡ ಭಾಷೆಗೆ ಅವಮಾನ | Oneindia Kannada

   ಬೆಂಗಳೂರು, ಜುಲೈ 19: ನಗರ ಪ್ರದೇಶಗಳಲ್ಲಿ ಕನ್ನಡ ಭಾಷೆ ನಿರ್ಲಕ್ಷ್ಯಕ್ಕೆ ಒಳಗಾಗುವುದು ಒಂದೆಡೆಯಾದರೆ, ಬಳಕೆಯಾಗುತ್ತಿರುವ ಕನ್ನಡದಲ್ಲಿಯೂ ತಪ್ಪುಗಳಿರುವುದು ಕನ್ನಡ ಭಾಷಾ ಪ್ರೇಮಿಗಳಲ್ಲಿ ಬೇಸರ ಮೂಡಿಸುತ್ತಿದೆ.

   ಅದರಲ್ಲಿಯೂ ದೊಡ್ಡ ದೊಡ್ಡ ಮಾಲ್‌ಗಳು, ಹೋಟೆಲ್‌ಗಳು, ವ್ಯಾಪಾರ ಕೇಂದ್ರಗಳಲ್ಲಿ ಬಳಕೆಯಾಗುತ್ತಿರುವ ವಿಚಿತ್ರ ಕನ್ನಡ ಅನುವಾದಗಳು ನಗೆಪಾಟಲಿಗೆ ಈಡಾಗುತ್ತಿವೆ.

   ಗೂಗಲ್ ಅನುವಾದ ತಂತ್ರಜ್ಞಾನ ಬಳಸಿಕೊಂಡು ಇಂಗ್ಲಿಷ್‌ನಿಂದ ತರ್ಜುಮೆ ಮಾಡಿ ಬಳಸುವವರು, ಅದು ಸರಿಯಾದ ಕನ್ನಡ ಪದವೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಗೋಜಿಗೂ ಹೋಗುವುದಿಲ್ಲ.

   ಆನ್ ಲೈನ್ ಶಾಪಿಂಗು ಎಂಬ ಮೋಹ, ದಾಹ

   ಇದು ಕನ್ನಡ ನೆಲದಲ್ಲಿನ ಕನ್ನಡದ ಪರಿಸ್ಥಿತಿ. ಕನ್ನಡ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಸಣ್ಣ ಭಯದಿಂದ ತೋರ್ಪಡಿಕೆಗಷ್ಟೇ ಕನ್ನಡ ಫಲಕಗಳನ್ನು ಅಳವಡಿಸುತ್ತಾರೆ.

   ಈ ಅಂಗಡಿ, ಮಳಿಗೆಗಳ ಮಾಲೀಕರು, ಅದರಲ್ಲಿ ಕೆಲಸ ಮಾಡುವವರು ಹೆಚ್ಚಿನವರು ಕನ್ನಡಿಗರಲ್ಲ. ಕನ್ನಡ ಬಲ್ಲವರು ಅಲ್ಲಿ ಕೆಲಸ ಮಾಡುತ್ತಿದ್ದರೂ ಅವರು ಅದರ ಬಗ್ಗೆ ದನಿ ಎತ್ತುವ ಧೈರ್ಯ ಮಾಡುತ್ತಿಲ್ಲ.

   ಬೆಂಗಳೂರು ಮಾತ್ರವಲ್ಲ, ಮೈಸೂರು, ಮಂಗಳೂರು, ಹುಬ್ಬಳ್ಳಿ ಮುಂತಾದ ರಾಜ್ಯದ ಪ್ರಮುಖ ನಗರಗಳಲ್ಲಿ ಸಹ ಪ್ರಮುಖ ವಾಣಿಜ್ಯ ಕೇಂದ್ರಗಳು, ಮಾಲ್‌ಗಳು ತಲೆ ಎತ್ತುತ್ತಿವೆ.

   ಆದರೆ, ಯಾವ ನಗರವಾದರೂ ಕನ್ನಡ ಬಳಕೆ ಕುರಿತು ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇಂತಹ ಕೆಟ್ಟ ಕನ್ನಡ ಅನುವಾದಗಳನ್ನು ಬೆಂಗಳೂರಿನ ಆಚೆಗಿನ ನಗರಗಳಲ್ಲಿನ ಮಾಲ್‌ಗಳಲ್ಲಿಯೂ ಕಾಣಬಹುದು.

   ಮಾಲ್‌ಗಳಲ್ಲಿ ಹಿಂದಿ ಮತ್ತು ಇತರೆ ಭಾಷೆಯ ಸಿನಿಮಾ ಹಾಡುಗಳನ್ನು ಹಾಕುವುದರ ವಿರುದ್ಧ ಆಗಾಗ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಮಾಲ್‌ಗಳ ಮಾಲೀಕರು ಕನ್ನಡಿಗರೇ ಆಗಿದ್ದರೂ, ಪರಭಾಷಿಕ ಗ್ರಾಹಕರನ್ನು ಸೆಳೆಯಲು ಕನ್ನಡವರನ್ನು ಕಡೆಗಣಿಸಿ ಪರಭಾಷೆಗೆ ಮಣೆಹಾಕುವುದು ಕೂಡ ನಡೆದಿದೆ.

   ಕೆಲವು ಮಾಲ್‌ಗಳಲ್ಲಿ ಬಳಕೆಯಾದ ಕನ್ನಡದ ಕುರಿತ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

   ಇಂಗ್ಲಿಷ್‌ನಿಂದ ಮಾಡಲಾದ ಅನುವಾದವನ್ನು ಕಂಡು ಜನರು ಬಿದ್ದೂಬಿದ್ದು ನಗುತ್ತಿದ್ದಾರೆ. ಇವು ತಮಾಷೆಯ, ನಗೆಯುಕ್ಕಿಸುವ ಸಂಗತಿಗಳಾದರೂ, ಅಷ್ಟೇ ಗಂಭೀರ ಚರ್ಚಾಸ್ಪದ ಸಂಗತಿಯೂ ಹೌದು.

   ಈ ರೀತಿ ಕಳಪೆ ಭಾಷೆಯ ಪ್ರಯೋಗದಿಂದ ಕನ್ನಡವನ್ನು ಹಾಳುಗಡೆವುದರ ಬದಲು ಅದನ್ನು ಬಳಸದೆ ಇರುವುದೇ ಲೇಸು ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ. ಇನ್ನು ಈ ರೀತಿ ಭಾಷೆಯೊಂದಕ್ಕೆ ಅವಮಾನ ಮಾಡಿರುವ ಮಾಲ್‌ಗಳ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹ ಕೂಡ ಕೇಳಿಬರುತ್ತಿವೆ.

   ಇಂಗ್ಲಿಷ್ ಭಾಷೆಯ ಅನೇಕ ಪದಗಳಿಗೆ ಸೂಕ್ತವಾದ ಕನ್ನಡ ಪದಗಳಿಲ್ಲ. ಕೆಲವು ಪದಗಳಿಗೆ ಕನ್ನಡ ಪದಗಳನ್ನು ಸೃಷ್ಟಿಸುವ ಪ್ರಯತ್ನಗಳು ನಡೆದಿವೆಯಾದರೂ ಎಲ್ಲವೂ ಜನಬಳಕೆಗೆ ಬರುವುದು ಕಷ್ಟ.

   ಇಂಗ್ಲಿಷ್‌ಗೆ ಪರ್ಯಾಯವಾದ ಕನ್ನಡ ಪದ ಹಾಗೂ ವಾಕ್ಯ ರಚನೆಯಿಂದ ಆಭಾಸ ಉಂಟಾಗುವುದೇ ಹೆಚ್ಚು. ಇಂತಹ ಸಂದರ್ಭಗಳಲ್ಲಿ ಕನ್ನಡ ಲಿಪಿಯಲ್ಲಿಯೇ ಇಂಗ್ಲಿಷ್ ಪದವನ್ನು ಬಳಸುವುದು ಒಳಿತು.

   ಮಾಲ್ ಒಂದರ ಉಡುಪು ಮಾರಾಟ ಮಳಿಗೆಯಲ್ಲಿ ಅಳವಡಿಸಲಾದ ಕೆಲವು ಕನ್ನಡ ಫಲಕಗಳ ಚಿತ್ರ ತೆಗೆದ ಜನರು ಅವುಗಳನ್ನು ಹಂಚಿಕೊಂಡಿದ್ದಾರೆ.

   ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಒಳಗಾಗಿರುವ, ನಿಮ್ಮನ್ನು ಹೊಟ್ಟೆಹುಣ್ಣಾಗಿಸುವಂತೆ ನಗಿಸುವ ಕೆಲವು ಕನ್ನಡ ಫಲಕಗಳು ಹೇಗಿವೆ ನೋಡಿ.

   ಪುರುಷರ ಜಾಡು ಕೊಠಡಿ!

   ಪುರುಷರ ಜಾಡು ಕೊಠಡಿ!

   ಉಡುಪಿಯ ಬಟ್ಟೆ ಮಳಿಗೆಯೊಂದರಲ್ಲಿ ಕಂಡುಬಂದಿರುವ ಭಾಷಾಂತರದ ಅವಾಂತರವಿದು. ಬಟ್ಟೆ ನಮ್ಮ ಅಳತೆಗೆ ಸೂಕ್ತವಾಗಿದೆಯೇ ಎಂದು ಪರೀಕ್ಷಿಸುವ ಕೊಠಡಿಯನ್ನು ಟ್ರಯಲ್ ರೂಮ್ ಎಂದು ಕರೆಯಲಾಗುತ್ತದೆ.

   ಇದನ್ನು ಕನ್ನಡದಲ್ಲಿಯೇ ಉಡುಪು ಪರೀಕ್ಷಿಸುವ ಸ್ಥಳ ಎಂದು ಬರೆಯುವ ಅವಕಾಶವಿತ್ತು. ಆದರೆ, ಭಾಷಾಂತರದ ಭೂಪರು ಅದನ್ನು ಜಾಡು ಕೊಠಡಿ ಎಂದು ವ್ಯಾಖ್ಯಾನಿಸಿದ್ದಾರೆ! ಪುರುಷರ ಜಾಡು ಹಿಡಿದು ಬರುವವರು ಈ ಕೊಠಡಿಗೆ ಹೋಗಬೇಕು ಎನ್ನುವ ಸೂಚನೆ ನೀಡುವ ಉದ್ದೇಶವೂ ಅವರಿಗೆ ಇರಬಹುದು!

   ಪುರುಷ ಪಕ್ಷವು ಧರಿಸುತ್ತಾರೆ

   ಪುರುಷ ಪಕ್ಷವು ಧರಿಸುತ್ತಾರೆ

   ಈಗೇನಿದ್ದರೂ ರಾಜಕೀಯ ಪಕ್ಷಗಳದ್ದೇ ಸುದ್ದಿ. ಇತ್ತೀಚೆಗೆ ನಡೆದ ರಾಜ್ಯ ಚುನಾವಣೆಯಲ್ಲಿ ಮಹಿಳಾ ಪಕ್ಷ ಎಂಬ ಪದವನ್ನು ಒಳಗೊಂಡ ಪಕ್ಷ ಕೂಡ ಸ್ಪರ್ಧಿಸಿತ್ತು.

   ಅದಕ್ಕೆ ಎದುರಾಳಿಯಾಗಿ ಯಾವುದಾದರೂ ಪುರುಷ ಪಕ್ಷ ಹುಟ್ಟಿಕೊಂಡಿರಬಹುದೇ ಎಂಬ ಆಲೋಚನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಇದು ಅಂತಹ ಯಾವ ಪಕ್ಷವೂ ಅಲ್ಲ ಮಾರಾಯ್ರೆ!

   ಸಂತೋಷಕೂಟ ಅಥವಾ ಪಾರ್ಟಿಗಳಿಗೆ ಹೋಗುವಾಗ ಧರಿಸುವ ಸೂಕ್ತವಾದ ಉಡುಪುಗಳು ಇರುವ ವಿಭಾಗ ಇದು. 'ಪುರುಷ ಪಕ್ಷವು ಧರಿಸುತ್ತಾರೆ' ಎಂಬ ಭಾಷೆ ಒಂದು ನಿಮ್ಮನ್ನು ಕಕ್ಕಾಬಿಕ್ಕಿ ಮಾಡುತ್ತದೆ.

   ಪುರುಷರ ಸಾಂದರ್ಭಿಕ ಷರ್ಟ್

   ಪುರುಷರ ಸಾಂದರ್ಭಿಕ ಷರ್ಟ್

   'ಸಾಂದರ್ಭಿಕ' ಎಂಬ ಪದ ರಾಜ್ಯ ರಾಜಕೀಯದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಪದಗಳಲ್ಲಿ ಒಂದು. ಎಚ್‌.ಡಿ. ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾದ ತಮ್ಮನ್ನು ಸಾಂದರ್ಭಿಕ ಶಿಶು ಎಂದು ಕರೆದುಕೊಂಡಿದ್ದಾರೆ.

   ಇಕ್ಕಟ್ಟಿನ ಸನ್ನಿವೇಶದಲ್ಲಿ ದೊರೆತ ಬೆಂಬಲವನ್ನು ಬಳಸಿಕೊಂಡು ಮುಖ್ಯಮಂತ್ರಿಯಾದ ಅವರು ಸಾಂದರ್ಭಿಕ ಶಿಶು ಎಂಬ ಪದಕ್ಕೆ ಸ್ಪಷ್ಟೀಕರಣಗಳನ್ನು ನೀಡಿದ್ದರೆ, ವಿರೋಧಪಕ್ಷದ ಮುಖಂಡರು ತಮ್ಮದೇ ವ್ಯಾಖ್ಯಾನ ನೀಡಿದ್ದಾರೆ.

   ಆದರೆ, ಉಡುಪಿಯ ಮಾಲ್‌ನಲ್ಲಿರುವ ಈ 'ಸಾಂದರ್ಭಿಕ ಷರ್ಟ್' ಯಾವ ಒತ್ತಡದ ಪರಿಸ್ಥಿತಿಯ ಫಲವಾಗಿ ಜನಿಸಿದ್ದೋ ಗೊತ್ತಿಲ್ಲ. ಆಡಂಬರ, ವಿಚಿತ್ರ ವಿನ್ಯಾಸಗಳಿಲ್ಲದ, ಕಚೇರಿ ಮತ್ತು ಸಮಾರಂಭಗಳಿಗೆ ಧರಿಸುವಂತಹ ಅಂಗಿಗಳು 'ಕ್ಯಾಷುವಲ್ ಶರ್ಟ್' ವಿಭಾಗದಲ್ಲಿ ಸಿಗುತ್ತವೆ.

   ಇಲ್ಲಿ ಸಾಂದರ್ಭಿಕ ಷರ್ಟ್‌ನ ಹುಟ್ಟಿಗಿಂತಲೂ ಮುಖ್ಯವಾದ ಪ್ರಶ್ನೆಯೆಂದರೆ, ಎಲ್ಲವನ್ನೂ ಕನ್ನಡಕ್ಕೆ ಅನುವಾದಿಸುವ ಭೂಪ, ಷರ್ಟ್ ಪದಕ್ಕೆ ಸುಲಭವಾಗಿ ಸಿಗುವ ಅಂಗಿ ಎಂಬ ಕನ್ನಡ ಪದವನ್ನು ಹೇಗೆ ಕೈಬಿಟ್ಟಿದ್ದಾನೆ ಎನ್ನುವುದು.

   ಹುಡುಗರ ಪಕ್ಷದ ಉಡುಗೆ

   ಹುಡುಗರ ಪಕ್ಷದ ಉಡುಗೆ

   ಪುರುಷರದ್ದು ಒಂದು ಪಕ್ಷವಾದರೆ, ಬಹುಶಃ ಇದು ಬಾಲಕರಿಗಾಗಿ ಸ್ಥಾಪಿಸಿರುವ ಪಕ್ಷದವರು ನೀಡುವ ಉಡುಗೆ ಇರಬೇಕು. ಆದರೆ, ಅಪ್ತಾಪ್ತ ವಯಸ್ಸಿನವರಿಗೆ ಮತದಾನದ ಹಕ್ಕು ಇಲ್ಲದಿರುವುದರಿಂದ ಅವರಿಗಾಗಿ ಪಕ್ಷ ಸ್ಥಾಪನೆಯ ಔಚಿತ್ಯವೇನಿರಬಹುದು ಎಂಬ ಪ್ರಶ್ನೆಯೂ ಮೂಡುತ್ತದೆ.

   ಹುಡುಗರು ಎನ್ನುವುದನ್ನು ಬಾಲಕರು ಎಂದೇ ವ್ಯಾಖ್ಯಾನಿಸಬೇಕಿಲ್ಲ ಎಂದೂ ವಾದಿಸಬಹುದು. ಏಕೆಂದರೆ 'ಹುಡುಗರು' ಸಿನಿಮಾದಲ್ಲಿ ಸ್ನೇಹಿತನ ಪ್ರೀತಿಯನ್ನು ಸರಿಪಡಿಸಲು ಕೈಕಾಲು ಮುರಿದುಕೊಂಡು ಹೋರಾಡುವ ಹುಡುಗರಾರೂ ಬಾಲಕರಲ್ಲ. ಹುಡುಗುತನ, ಹುಡುಗುಬುದ್ಧಿ ಮತ್ತು ಹುಡುಗಾಟಿಕೆಗಳು ಎಲ್ಲ ವಯಸ್ಸಿನವರಲ್ಲಿಯೂ ಇರುತ್ತದೆ.

   ಈ ವಾದ ಮುಂದಿಟ್ಟರೂ ಪುರುಷರು ಮತ್ತು ಹುಡುಗರಿಗೆ ಯಾವ ವ್ಯತ್ಯಾಸವಿದೆ? ಎರಡೂ ಒಂದೇ ವಿಭಾಗ ಎನ್ನಬಹುದಲ್ಲವೇ? ಆದರೆ, ಚಿತ್ರದಲ್ಲಿ ಕಾಣಿಸುವ ದಿರಿಸುಗಳು ಚಿಕ್ಕ ಗಾತ್ರದ್ದಾಗಿರುವುದರಿಂದ ಅವು ಬಾಲಕರಿಗಾಗಿ ಸಿದ್ಧಪಡಿಸಿರುವ ಸಂತೋಷ ಕೂಟದ ಉಡುಪುಗಳು ಎಂದು ಪರಿಗಣಿಸಬಹುದು.

   ಹೆಂಗಸರ ದೊಡ್ಡ ಗಾತ್ರದ ವಲಯ

   ಹೆಂಗಸರ ದೊಡ್ಡ ಗಾತ್ರದ ವಲಯ

   ಪುರುಷರಿಗಾಗಿಯೇ ಮೀಸಲಾಗಿರುವ ಬಟ್ಟೆ ಅಂಗಡಿಗಳ ಸಂಖ್ಯೆ ತೀರಾ ಕಡಿಮೆ. ಇನ್ನು ಕೆಲವು ಅಂಗಡಿಗಳಲ್ಲಿ ಪುರುಷರ ದಿರಿಸುಗಳು ಲಭ್ಯವಿದ್ದರೂ ಅವುಗಳದ್ದು ಸೀಮಿತ ಪ್ರಮಾಣ.

   ಮಾಲ್‌ಗಳಲ್ಲಂತೂ ಮಹಿಳೆಯರ ಉಡುಗೆಗಳಿಗೆ ಹೆಚ್ಚು ಜಾಗ ಮೀಸಲಿಡಲಾಗಿರುತ್ತದೆ. ಅಂತಹದ್ದರಲ್ಲಿ ಈ ಮಳಿಗೆಯಲ್ಲಿ ಹೆಂಗಸರಿಗಾಗಿ ದೊಡ್ಡ ಗಾತ್ರದ ವಲಯವನ್ನು ಕಲ್ಪಿಸಲಾಗಿದೆ.

   ತುಸು ತುಂಟತನ ಹುಟ್ಟಿಸುವ ಈ ಸಾಲು, ಪುರುಷರ ವಲಯದಲ್ಲಿ ಚರ್ಚೆಯನ್ನೂ ಹುಟ್ಟುಹಾಕಿದೆ. ಉಡುಪು ಮಳಿಗೆಗಳೆಲ್ಲ ಮಹಿಳೆಯರದ್ದೇ ಆಗಿರುವಾಗ ಅವರಿಗಾಗಿ ದೊಡ್ಡ ವಲಯ ಎಂದು ಪ್ರತ್ಯೇಕವಾಗಿ ಗುರುತಿಸುವ ಅಗತ್ಯವೇನು ಎನ್ನುವುದು ಶಾಪಿಂಗ್ ಪ್ರಿಯ ಪುರುಷರ ಪ್ರಶ್ನೆ.

   ಪುರುಷರ ಬಿಡಿಭಾಗಗಳು

   ಸಾಮಾನ್ಯವಾಗಿ ವಾಹನಗಳು, ಯಂತ್ರಗಳ ಬಿಡಿಭಾಗಗಳು ಅಂಗಡಿಗಳಲ್ಲಿ ದೊರಕುತ್ತವೆ. ಕೆಟ್ಟರೆ ಅದರ ಬದಲಿಯನ್ನು ಅಳವಡಿಸಬಹುದು.

   ಆರೋಗ್ಯ ಹಾಳುಮಾಡಿಕೊಂಡು ದೇಹದ ಅಂಗಗಳನ್ನು ಕೆಡಿಸಿಕೊಳ್ಳುತ್ತಿರುವ ಜನರಿಗೆ ಈ ರೀತಿ ಅವಕಾಶಗಳಿವೆಯೇ? ಈ ಮಳಿಗೆಯಲ್ಲಂತೂ ಇದೆ.

   ಆದರೆ, ಇದು ಪುರುಷರಿಗೆ ಮಾತ್ರ. ಪುರುಷರ ಬಿಡಿ ಭಾಗಗಳು ಇಲ್ಲಿ ಸಿಗುತ್ತವೆಯಂತೆ. ಕಣ್ಣು, ಕಿವಿ, ಹೃದಯ, ಯಕೃತ್ತು, ಶ್ವಾಸಕೋಶ ಹೀಗೆ ದೇಹದ ಬಿಡಿಭಾಗಗಳು ಸಿಗುವಂತಿದ್ದರೆ ಬಲು ಬೇಡಿಕೆ ಇರುತ್ತಿತ್ತು.

   ಇಲ್ಲಿ ಪುರುಷರಿಗೆ ಯಾವ್ಯಾವ ಬಿಡಿ ಭಾಗಗಳು ಸಿಗುತ್ತವೆಯೋ ಅದನ್ನು ಬೇಕಾದವರೇ ಹೋಗಿ ಪರಿಶೀಲಿಸಬೇಕು.

   English summary
   People on social media angry using kannada translation incorrectly in a mall.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more