ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲವು ಸಂಕಷ್ಟಗಳನ್ನು ಎದುರಿಸಿದ್ದ ಅಗಾಧ ಶಕ್ತಿ ಪಾರ್ವತಮ್ಮ

By Prasad
|
Google Oneindia Kannada News

ಬೆಂಗಳೂರು, ಮೇ 31 : ಮುತ್ತುರಾಜ್ ನನ್ನು ರಾಜಕುಮಾರನನ್ನಾಗಿ ಮೆರೆಯುವಂತೆ ಮಾಡಿದ್ದು, ಮೂವರು ಗಂಡು ಮಕ್ಕಳನ್ನು ಕನ್ನಡ ಚಿತ್ರರಂಗದಲ್ಲಿ ನಕ್ಷತ್ರದಂತೆ ಬೆಳಗುವಂತೆ ಮಾಡಿದ್ದು, ಹಲವಾರು ಚಿತ್ರಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗಕ್ಕೆ ಆಧಾರಸ್ತಂಭವಾಗಿ ಪಾರ್ವತಮ್ಮ ರಾಜ್ ಕುಮಾರ್ ಅವರು ನಿಂತಿದ್ದು ಒಂದು ತೂಕದ್ದಾದರೆ, ವೀರಪ್ಪನ್ ನಿಂದ ರಾಜ್ ಅಪಹರಣಕ್ಕೊಳಗಾದಾಗ ಅವರು ನಿಭಾಯಿಸಿದ ರೀತಿ ಮತ್ತೊಂದು ತೂಕದ್ದು.[ದಿ. ಪಾರ್ವತಮ್ಮ ರಾಜ್ ಕುಮಾರ್ ಅವರ ಮರೆಯಲಾರದ ಚಿತ್ರಗಳು]

ಪಾರ್ವತಮ್ಮನವರದು ಅಂತಹ ಮೇರುಪರ್ವತದಂತಹ ವ್ಯಕ್ತಿತ್ವ. ಕನ್ನಡಿಗರ ಕಣ್ಮಣಿ ರಾಜ್ ಅಪಹರಣ ಮತ್ತು ಕನ್ನಡ ಸಾರ್ವಭೌಮ ಮುತ್ತುರಾಜ್ ಅವರ ಸಾವೆಂಬ ಎರಡು ಘಟನೆಗಳು ಪಾರ್ವತಮ್ಮನವರನ್ನು ಜಬಡಿ ಹಾಕಿದರೂ, ಕನ್ನಡ ಚಿತ್ರ ನಿರ್ಮಾಪಕಿಯಾಗಿ ತಮ್ಮ ಕರ್ತವ್ಯಪ್ರಜ್ಞೆಯನ್ನು ಅವರು ಎಂದೂ ಮರೆತಿರಲಿಲ್ಲ. ಸದಾಕಾಲ ಕನ್ನಡ ಚಿತ್ರರಂಗದ ಏಳ್ಗೆಯ ಬಗ್ಗೆಯೇ ಚಿಂತಿಸುತ್ತಿದ್ದರು.[ಕನ್ನಡ ಸಿನಿಮಾ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ವಿಧಿವಶ]

ರಾಜ್ ಅವರು ರಾಜಕುಮಾರರಾಗಿ ಮೆರೆದಾಡಿದ್ದಕ್ಕೆ ಅದಕ್ಕೆ ಮೂಲ ಕಾರಣ ಪಾರ್ವತಮ್ಮ ಅವರೇ. ಐದು ದಶಕಗಳ ಕಾಲ ಕನ್ನಡ ಜನತೆಯನ್ನು ರಂಜಿಸಿದ ಅಣ್ಣಾವ್ರನ್ನು ವೀರಪ್ಪನ್ ಎಂಬ ನರಹಂತಕ ತಮ್ಮ ಕಣ್ಣಮುಂದೆಯೇ ಇದ್ದಕ್ಕಿದ್ದಂತೆ ಅಪಹರಿಸಿದರೆ ಪಾರ್ವತಮ್ಮನವರಿಗೆ ಹೇಗಾಗಿರಬೇಡ? ಆ ಆಘಾತಕಾರಿ ಘಟನೆ ನಡೆದದ್ದು ಹೇಗೆ, ಅದನ್ನು ಪಾರ್ವತಮ್ಮನವರು ನಿಭಾಯಿಸಿದ್ದು ಹೇಗೆ ಎಂಬ ಚಿತ್ರಣ ಇಲ್ಲಿದೆ. [ವೀರಪ್ಪನ್ ನಿಂದ ರಾಜ್ ಅಪಹರಣ ಆಗಿದ್ದು ಹೀಗೆ...]

ಭೀಮನ ಅಮವಾಸ್ಯೆಯ ಆ ರಾತ್ರಿ

ಭೀಮನ ಅಮವಾಸ್ಯೆಯ ಆ ರಾತ್ರಿ

2000ನೇ ಇಸ್ವಿಯ ಜುಲೈ 31ರ ಭೀಮನ ಅಮವಾಸ್ಯೆಯಂದು ಪಾರ್ವತಮ್ಮ ರಾಜ್ ಕುಮಾರ್ ಅವರು ತಮಿಳುನಾಡಿನ ತಳವಾಡಿಯ ತೋಟದ ಮನೆಯಲ್ಲಿ ಗಂಡ ರಾಜ್ ಕುಮಾರ್ ಪೂಜೆ ಮಾಡಿದ್ದರು. ಅಂದು ರಾತ್ರಿ ಊಟ ಸವಿದು 9.30ರ ಸುಮಾರಿಗೆ ರಾಜ್ ಅವರು ಟಿವಿಯನ್ನು ವೀಕ್ಷಿಸುತ್ತಿದ್ದಾಗ ಕಾಡುಗಳ್ಳ ವೀರಪ್ಪನ್ ನೇತೃತ್ವದಲ್ಲಿ ರಾಜ್ ಇದ್ದ ಮನೆಗೆ ಮುತ್ತಿಗೆ ಹಾಕಲಾಗಿತ್ತು.

ರಾಜ್ಗೆ ಮಧುಮೇಹದ ಮಾತ್ರೆ ನೀಡುವಂತೆ ಆಗ್ರಹ

ರಾಜ್ಗೆ ಮಧುಮೇಹದ ಮಾತ್ರೆ ನೀಡುವಂತೆ ಆಗ್ರಹ

ಪಾರ್ವತಮ್ಮ ಅವರ ಕೈಗೆ ಹಲವಾರು ಬೇಡಿಕೆಗಳಿರುವ ಕ್ಯಾಸೆಟ್ ಕೈಗಿತ್ತು, ಅಂದಿನ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರಿಗೆ ನೀಡಬೇಕೆಂದು, ವೀರಪ್ಪನ್ ಮತ್ತಿತರರು ರಾಜ್ ಕುಮಾರ್, ಅಳಿಯ ಗೋವಿಂದರಾಜ್, ಸಂಬಂಧಿ ನಾಗೇಶ್ ಮತ್ತು ನಾಗಪ್ಪ ಎಂಬುವವರನ್ನು ಅಪರಹಿಸಿ ಕಾಡಲ್ಲಿ ಮರೆಯಾಗಿದ್ದ. ಭೂಮಿಯೇ ಕುಸಿದು ಹೋಗುವ ಆ ಕ್ಷಣದಲ್ಲಿ ಪಾರ್ವತಮ್ಮ ಅವರು ರಾಜ್ಗೆ ಕಾಡಿನಲ್ಲಿ ತಪ್ಪದೆ ಮಧುಮೇಹದ ಮಾತ್ರೆ ನೀಡಬೇಕೆಂದು ವೀರಪ್ಪನ್ ನನ್ನು ಕೇಳಿಕೊಂಡಿದ್ದರು.

ರಾತ್ರೋರಾತ್ರಿ ಕೃಷ್ಣರ ಮನೆ ಬಾಗಿಲು ಬಡಿದ ಪಾರ್ವತಮ್ಮ

ರಾತ್ರೋರಾತ್ರಿ ಕೃಷ್ಣರ ಮನೆ ಬಾಗಿಲು ಬಡಿದ ಪಾರ್ವತಮ್ಮ

ಅಂದು ಪಾರ್ವತಮ್ಮ ಅವರ ಜಂಘಾಬಲವೇ ಉಡುಗಿಹೋಗಿತ್ತು. ರಾತ್ರೋರಾತ್ರಿ ಕಾರಲ್ಲಿ ಬೆಂಗಳೂರಿಗೆ 2 ಗಂಟೆಗೆ ಪಾರ್ವತಮ್ಮ ಅವರು ಎಸ್ಎಂ ಕೃಷ್ಣ ಅವರ ಮನೆಗೆ ಹೋಗಿ ನಡೆದ ಕಥೆಯನ್ನು ಕಂಬನಿ ಮಿಡಿಯುತ್ತ ಹೇಳಿದ್ದರು. ಶಿವರಾಜ್ ಕುಮಾರ್, ಅಂದಿನ ಪೊಲೀಸ್ ಆಯುಕ್ತ ದಿನಕರನ್ ಅವರೂ ಇದ್ದ ಆ ಸಭೆಯಲ್ಲಿ, ಹೇಗೆ ಆಗಲಿ ರಾಜ್ ಕುಮಾರ್ ಅವರನ್ನು ಸುರಕ್ಷಿತವಾಗಿ ಕಾಡಿನಿಂದ ಕರೆದುಕೊಂಡು ಬರಬೇಕೆಂದು ರಾಜ್ ಕುಟುಂಬದವರು ಆಗ್ರಹಿಸಿದ್ದರು. ಆದರೆ, ಹಾದಿಯಲ್ಲಿ ಜ್ಯೋತಿಷಿಯನ್ನು ಭೇಟಿ ಮಾಡಿ ರಾಜ್ ಬಗ್ಗೆ ಕೇಳಲು ಪಾರ್ವತಮ್ಮ ಮರೆತಿರಲಿಲ್ಲ.

ಕಾಡಲ್ಲಿ ಹೇಗಿದ್ದಾರೋ ಯಜಮಾನರು?

ಕಾಡಲ್ಲಿ ಹೇಗಿದ್ದಾರೋ ಯಜಮಾನರು?

ಜುಲೈ 31ರ ರಾತ್ರಿಯಿಂದ 108 ದಿನಗಳವರೆಗೆ ಪ್ರತಿಕ್ಷಣಗಳನ್ನು ಪಾರ್ವತಮ್ಮ ಅವರು ಹೇಗೆ ಕಳೆದರೋ ಅವರಿಗೇ ಗೊತ್ತು. ಸದಾಕಾಲ ರಾಜ್ ಅವರ ನೆರಳಾಗಿ, ಅವರಿಗೆ ಆಸರೆಯಾಗಿ ಇದ್ದ ಪಾರ್ವತಮ್ಮ ಅವರ ಹೃದಯ ರಾಜ್ ಅವರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆಯೇ ಸದಾಕಾಲ ಚಿಂತಿಸುತ್ತಿತ್ತು. ಕಾಡಲ್ಲಿ ಹೇಗಿದ್ದಾರೋ ಯಜಮಾನರು? ಅವರಿಗೆ ಮೊಣಕಾಲು ನೋವು, ಜೊತೆಗೆ ಡಯಾಬಿಟಿಸ್ ಬೇರೆ ಎಂದು ಕ್ಷಣಕ್ಷಣವೂ ಪರಿತಪಿಸುತ್ತಿದ್ದರು.

ಹೃದಯ ನೋವಿನಿಂದ ಆಸ್ಪತ್ರೆ ಸೇರಿದ ಪಾರ್ವತಮ್ಮ

ಹೃದಯ ನೋವಿನಿಂದ ಆಸ್ಪತ್ರೆ ಸೇರಿದ ಪಾರ್ವತಮ್ಮ

ಸೆಪ್ಟೆಂಬರ್ 21ರಂದು ಇದ್ದಕ್ಕಿದ್ದಂತೆ ಒಂದು ಗಾಳಿಸುದ್ದಿ ಇಡೀ ರಾಜ್ಯವನ್ನೇ ಕಂಗೆಡಿಸಿತು. ಪಾರ್ವತಮ್ಮ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಮಲ್ಯ ಆಸ್ಪತ್ರೆ ಸೇರಿಕೊಂಡಿದ್ದಾರೆ ಎಂದು. ಅವರ ಅಭಿಮಾನಿಗಳು ದಂಗೆ ಏಳಲು ಇಷ್ಟು ಸಾಕಿತ್ತು. ಪಾರ್ವತಮ್ಮನವರು ಅನಾರೋಗ್ಯದಿಂದ ಮಲ್ಯ ಆಸ್ಪತ್ರೆ ಸೇರಿದ್ದೇನೋ ನಿಜ. ಆದರೆ, ಅವರಿಗೆ ಭಾರೀ ಹೃದಯಾಘಾತವೇನೂ ಆಗಿರಲಿಲ್ಲ. ಸಣ್ಣಗೆ ಎದೆನೋವು ಬಂದಿತ್ತು.

ವೀರಪ್ಪನ್ ನನ್ನು ಅಣ್ಣಾ ಎಂದು ಅತ್ತಿದ್ದರು

ವೀರಪ್ಪನ್ ನನ್ನು ಅಣ್ಣಾ ಎಂದು ಅತ್ತಿದ್ದರು

ಆಸ್ಪತ್ರೆಯ ಹಾಸಿಗೆಯ ಮೇಲೆ ಕುಳಿತುಕೊಂಡೇ ಪಾರ್ವತಮ್ಮನವರು, ವೀರಪ್ಪನ್ ನನ್ನು ಅಣ್ಣಾ ಎಂದು ಸಂಬೋಧಿಸಿ ನನ್ನ ಗಂಡನನ್ನು ಬಿಡುವಂತೆ ಮನವಿ ಮಾಡಿಕೊಂಡಿದ್ದರು. "ವೀರಪ್ಪನ್‌ ಅವರ್‌ಗಳೇ ... ನಿಮ್ಮನ್ನು ಅಣ್ಣಾ ಅಂತ ಕರಿತೀದ್ದೇನೆ. ತಂಗಿ ಮಾತಿಗೆ ಗೌರವ ಕೊಟ್ಟು ಅವರನ್ನು ಬಿಟ್ಟು ಬಿಡಿ" ಎಂದು ತಮಿಳಿನಲ್ಲಿ ಗೋಗರೆಯುತ್ತ, ಗೋಳೋ ಎಂದು ಅತ್ತುಬಿಟ್ಟಿದ್ದರು. ಇದು ವೀರಪ್ಪನ್ ನನ್ನು ತಲುಪಲೆಂದು ಬಾನುಲಿಯಲ್ಲಿ ಮೇಲಿಂದ ಮೇಲೆ ಪ್ರಸಾರ ಮಾಡಲಾಗಿತ್ತು. [ಆಕಾಶವಾಣಿಯಲ್ಲಿ ಕಣ್ಣೀರುಗರೆದ ಪಾರ್ವತಮ್ಮ, ವೀರಪ್ಪನ್‌ಗೆ ಮನವಿ]

ಬಾನುಲಿಯಿಂದ ಪಾರ್ವತಮ್ಮ ಸಂದೇಶ

ಬಾನುಲಿಯಿಂದ ಪಾರ್ವತಮ್ಮ ಸಂದೇಶ

ಈ ವಿಷಯ ಕೇಳಿ ರಾಜ್ ಗಾಬರಿಯಾಗುತ್ತಾರೆಂದು, "ರೀ ನಾನು ಆರೋಗ್ಯವಾಗಿದ್ದೇನೆ. 15 -20 ದಿನದಿಂದ ಆರೋಗ್ಯ ಚೆನ್ನಾಗಿರಲಿಲ್ಲ. ಆದ್ರೂ ಆಸ್ಪತ್ರೆ ಸೇರಿರಲಿಲ್ಲ. ನಿನ್ನೆ ಸ್ವಲ್ಪ ಎದೆ ನೋವು ಬಂದಿತ್ತು. ಹಾಸ್ಪೆಟಲ್‌ನಲ್ಲಿ ಇದ್ದೇನೆ. ನೀವು ಗಾಬರಿ ಆಗಬೇಡಿ. ನೀವು ಗಾಬರಿ ಆಗ್ತೀರಾ ಅಂತ್ಲೇ ರೇಡಿಯೋದೋರ್ನ ಕರೆದು ಮಾತಾಡಿದ್ದೀನಿ. ಇಲ್ಲಿ ಡಾಕ್ಟರು ನನ್ನ ಚೆನ್ನಾಗಿ ನೋಡ್ಕೋತಿದ್ದಾರೆ. ಎಲ್ಲರೂ ಚೆನ್ನಾಗಿದ್ದಾರೆ. ಯೋಚನೆ ಮಾಡಬೇಡಿ. ಏನಿಲ್ಲ ಹುಷಾರಾಗಿದ್ದೀನಿ. ಮನೇಲಿದ್ರೆ ರೆಸ್ಟ್‌ ತಗೋಳಲ್ಲ ಅಂತ ಆಸ್ಪತ್ರೆಗೆ ಅಡ್ಮಿಟ್‌ ಮಾಡಿದ್ದಾರೆ. ಸ್ಪಲ್ಪ ಬ್ಲಡ್‌ ಪ್ರೆಷರ್‌, ಷುಗರ್‌ ಜಾಸ್ತಿ ಆಗಿದೆ ಅಷ್ಟೇ" ಎಂದೂ ಬಾನುಲಿ ಮೂಲಕ ರಾಜ್ ಅವರಿಗೆ ಸುದ್ದಿ ಮುಟ್ಟಿಸಿದ್ದರು.

ಅಣ್ಣಾವ್ರನ್ನು ಜವರಾಯ ಕೊಂಡೊಯ್ದ ದಿನ

ಅಣ್ಣಾವ್ರನ್ನು ಜವರಾಯ ಕೊಂಡೊಯ್ದ ದಿನ

ಅವರು ನಂತರ ಆಸ್ಪತ್ರೆಯಿಂದ ಹುಷಾರಾಗಿ ಹೊರಬಂದರೂ ರಾಜ್ ಅಪಹರಣ ಅವರನ್ನು ಜಬಡಿ ಹಾಕಿತ್ತು. ನಂತರ ಅವರ ಮೇಲೆರಗಿದ್ದು ರಾಜ್ ಸಾವಿನ ಸುದ್ದಿ. 2006ರ ಏಪ್ರಿಲ್ 12ರಂದು ರಾಜ್ ಅವರನ್ನು ಜವರಾಯ ಕೊಂಡೊಯ್ದ ದಿನ ಪಾರ್ವತಮ್ಮ ಅವರ ಕಾಲಕೆಳಗಿನ ಭೂಮಿಯೇ ಕುಸಿದಂತಾಗಿತ್ತು. ಇಷ್ಟೆಲ್ಲ ಆಘಾತಗಳು ಅವರ ಜೀವನದಲ್ಲಿ ನಡೆದರೂ ತಮ್ಮ ಮಕ್ಕಳ ಚಿತ್ರಜೀವನ ಸುಗಮವಾಗುವಂತೆ ನೋಡಿಕೊಂಡಿದ್ದು, ಅವರೆಲ್ಲ ಒಟ್ಟಾಗಿರುವಂತೆ ಬಂಧಿಸಿದ್ದು, ಇಡೀ ರಾಜ್ ಕುಟುಂಬದ ಬೆನ್ನೆಲುಬಾಗಿ ನಿಂತಿದ್ದು ಇದೇ ಪಾರ್ವತಮ್ಮ ಎಂಬ ಅಗಾಧ ಶಕ್ತಿ.

ಪಾರ್ವತಮ್ಮ ಎಂಬ ಅಗಾಧ ಶಕ್ತಿ

ಪಾರ್ವತಮ್ಮ ಎಂಬ ಅಗಾಧ ಶಕ್ತಿ

ಯಾವತ್ತಿಗೂ ಕನ್ನಡ ಚಿತ್ರರಂಗದ ಬಗ್ಗೆಯೇ ಚಿಂತಿಸುತ್ತಿದ್ದ, ಮಾಲಾಶ್ರೀ, ಸುಧಾರಾಣಿ, ಆಶಾರಾಣಿಯಂಥ ಹಲವಾರು ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ 'ಅಮ್ಮ', ವಜ್ರೇಶ್ವರಿ ಬ್ಯಾನರ್ ಅಡಿಯಲ್ಲಿ ಹತ್ತುಹಲವಾರು ಅಮೋಘ ಕನ್ನಡ ಚಿತ್ರಗಳನ್ನು ಕನ್ನಡಿಗರಿಗೆ ನೀಡಿದ ಅಂತಹ ಶಕ್ತಿ ಇಂದು ಕಣ್ಮರೆಯಾಗಿದೆ. ಪಾರ್ವತಮ್ಮನವರು ತಮ್ಮ ಜೀವನಸಂಗಾತಿಯನ್ನು ಹೋಗಿ ಸೇರಿಕೊಂಡಿದ್ದಾರೆ.

English summary
Parvathamma Rajkumar (1939-2017) had tough time when Rajkumar was kidnapped by forest brigand Veerappan in 2000. Parvathamma, though shell shocked by this incident, handled the situation with guts. Here let's recall what happened when Raj was kidnapped.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X