ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಲ್ಕ ಪಾವತಿಗೆ ಖಾಸಗಿ ಶಾಲೆಗಳಿಂದ ಮತ್ತೆ ಒತ್ತಡ: ಮಧ್ಯಪ್ರವೇಶಿಸಬಹುದೇ ಸರ್ಕಾರ?

|
Google Oneindia Kannada News

ಬೆಂಗಳೂರು, ಸೆ.22: ಖಾಸಗಿ ಶಾಲೆಗಳ ಶುಲ್ಕದ ವಿಚಾರದಲ್ಲಿ ರಾಜ್ಯ ಸರ್ಕಾರ ನೀಡಿದ್ದ ವಿನಾಯಿತಿಯನ್ನು ಕಡಿತಗೊಳಿಸಿ ಹೈಕೋರ್ಟ್‌ ಇತ್ತೀಚೆಗೆ ನೀಡಿದೆ. ಈ ತೀರ್ಪಿನ ಬೆನ್ನಲ್ಲೇ ಶಾಲೆಗಳು ಮತ್ತೆ ಪೋಷಕರ ಮೇಲೆ ಹೆಚ್ಚಿನ ಶುಲ್ಕ ಪಾವತಿಗೆ ಒತ್ತಡ ಹೇರಲಾರಂಭಿಸಿವೆ. ಹೀಗಾಗಿ, ಸರ್ಕಾರ ಮಧ್ಯಪ್ರವೇಶಿಸಬೇಕು ಎಂಬ ಒತ್ತಾಯ ಪೋಷಕರಿಂದ ಕೇಳಿಬರುತ್ತಿದೆ.

ಕೋವಿಡ್ ಕಾರಣದಿಂದಾಗಿ ಅನೇಕರು ಆರ್ಥಿಕ ಮುಗ್ಗಟ್ಟು ಅನುಭವಿಸಿದ್ದರಿಂದ ಖಾಸಗಿ ಶಾಲೆಗಳ ದುಬಾರಿ ಶುಲ್ಕ ಪಾವತಿಗೆ ಪೋಷಕರಿಗೆ ಸಾಧ್ಯವಾಗಿರಲಿಲ್ಲ. ಮತ್ತೊಂದೆಡೆ ಪೂರ್ಣ ಶುಲ್ಕ ಪಾವತಿಗೆ ಖಾಸಗಿ ಶಾಲೆಗಳು ಸಹ ಪಟ್ಟು ಹಿಡಿದಿದ್ದವು. ಶುಲ್ಕ ಪಾವತಿಸಿದಂತಹ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ರದ್ದು ಮಾಡಿದ ಉದಾಹರಣೆಗಳೂ ಇದ್ದವು. ಹೀಗೆ ಶಾಲೆಗಳು ಮತ್ತು ಪೋಷಕರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಮಧ್ಯಪ್ರವೇಶಿಸಿದ್ದ ಸರ್ಕಾರ 2020-21ನೇ ಸಾಲಿನಲ್ಲಿ ಬೋಧನಾ ಶುಲ್ಕವನ್ನು ಶೇ.30ರಷ್ಟು ಕಡಿತಗೊಳಿಸಿ ಆದೇಶ ಹೊರಡಿಸಿತ್ತು. ಇದನ್ನು ವಿರೋಧಿಸಿ ಖಾಸಗಿ ಶಾಲೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಈ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಲಯ ಸರ್ಕಾರ ನೀಡಿದ್ದ ವಿನಾಯಿತಿಯನ್ನು ಶೇ.15ಕ್ಕೆ ಇಳಿಸಿ ಸೆ.16ರಂದು ಆದೇಶ ಮಾಡಿತ್ತು.

ಸತತ ಲಾಕ್‌ಡೌನ್‌ನಿಂದ ಬೇಸತ್ತಿದ್ದ ಜನಸಾಮಾನ್ಯರು ಇತ್ತೀಚೆಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಶುಲ್ಕ ಕಡಿತದ ಆದೇಶ ಸ್ವಲ್ಪ ಮಟ್ಟಿನ ನೆಮ್ಮದಿ ನೀಡಿತ್ತು. ಈಗ ವಿನಾಯಿತಿಯನ್ನು ಅರ್ಧದಷ್ಟು ಕಡಿತ ಮಾಡಿರುವುದರಿಂದ ಮತ್ತೆ ಶಾಲೆಗಳು ಬಾಕಿ ಪಾವತಿಗೆ ಒತ್ತಡ ಹೇರಲಾರಂಭಿಸಿವೆ. ಇದು ಜನಸಾಮಾನ್ಯರನ್ನು ಮತ್ತಷ್ಟು ಹೈರಾಣ ಮಾಡುತ್ತಿದೆ. ಸರ್ಕಾರ ಮಧ್ಯಪ್ರವೇಶಿಸಬೇಕು, ಶೇ.15ರಷ್ಟು ಶುಲ್ಕದ ಹೊರೆಯನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂಬ ಒತ್ತಡ ಕೇಳಿಬರುತ್ತಿದೆ.

Parents urges Karnataka Govt to interfere on Private School Fees Row

ಶುಲ್ಕ ಕಡಿತದಿಂದ ಶಿಕ್ಷಕರ ವೇತನ ಪಾವತಿ ಮತ್ತು ಶಾಲಾ ನಿರ್ವಹಣೆಯಲ್ಲಿ ತೊಂದರೆಯಾಗುತ್ತಿದೆ ಎಂಬುದು ಖಾಸಗಿ ಶಾಲೆಗಳ ವಾದವಾಗಿತ್ತು. ಈಗ ಹೈಕೋರ್ಟ್ ಆದೇಶದ ಬೆನ್ನಲ್ಲೇ ಮತ್ತೆ ಪೋಷಕರಿಗೆ ಪ್ರತಿನಿತ್ಯ ಕರೆ ಮಾಡುತ್ತಿರುವ ಶಾಲಾ ಆಡಳಿತ ಮಂಡಳಿಗಳು, ಹೆಚ್ಚುವರಿ ಶೇ.15ರಷ್ಟು ಶುಲ್ಕ ಪಾವತಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿ ಇರುವ ಪೋಷಕರು ಈಗ ಖಾಸಗಿ ಶಾಲೆಗಳ ದಿಢೀರ್ ಒತ್ತಡದಿಂದಾಗಿ ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರ ಶಾಲಾ ಶುಲ್ಕದ ಹೊರೆಯನ್ನು ಇಳಿಸುವ ಮೂಲಕ ಆರ್ಥಿಕ ಸಂಕಷ್ಟದಲ್ಲಿ ಇರುವ ಪೋಷಕರಿಗೆ ನೆರವಾಗಬೇಕು. ಮಕ್ಕಳಿಗೆ ಹೆಚ್ಚಿನ ಮಟ್ಟದಲ್ಲಿ ವಿದ್ಯಾರ್ಥಿವೇತನ ನೀಡಬೇಕು ಅಥವಾ ಶಿಕ್ಷಕರ ವೇತನವನ್ನು ಸರ್ಕಾರವೇ ಪಾವತಿಸುವ ಮೂಲಕ ನೆರವಿಗೆ ಬರಬೇಕು ಎಂದು ಅನೇಕ ಪೋಷಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶುಲ್ಕ ಬಾರದಿದ್ದರೆ ಶಾಲೆ ಮುಚ್ಚಬೇಕಾಗುತ್ತದೆ

"ಕೋವಿಡ್ ಕಾರಣದಿಂದಾಗಿ ಶಾಲೆಗಳನ್ನು ಮುಚ್ಚುವಂತಹ ಪರಿಸ್ಥಿತಿ ಬಂದಿದೆ. ಬೋಧಕ ಸಿಬ್ಬಂದಿಗೆ ವೇತನ ಪಾವತಿ ಸಾಧ್ಯವಾಗದೆ ರಾಜ್ಯದಲ್ಲಿ ಈಗಾಗಲೇ ನೂರಾರು ಶಾಲೆಗಳು ಬಾಗಿಲು ಮುಚ್ಚಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಶುಲ್ಕ ಕಡಿತಗೊಳಿಸಿ ಅವೈಜ್ಞಾನಿಕ ಆದೇಶ ಹೊರಡಿಸಿತ್ತು. ತದನಂತರದಲ್ಲಿ ಹೈಕೋರ್ಟ್ ಆದೇಶ ಸ್ವಲ್ಪಮಟ್ಟಿನ ನೆಮ್ಮದಿ ನೀಡಿದ್ದು, ಶಾಲೆಗಳು ಸ್ವಲ್ಪಮಟ್ಟಿಗೆ ಉಸಿರುಬಿಡುವಂತಾಗಿದೆ. ಆದರೆ, ಶಾಲೆಗಳು ಪೋಷಕರ ಮೇಲೆ ಒತ್ತಡ ಹೇರುತ್ತಿಲ್ಲ. ಬದಲಾಗಿ ಶುಲ್ಕ ಪಾವರಿಸಿದರೆ ಉತ್ತಮ ಶಿಕ್ಷಣ ನೀಡಲು ಸಹಕಾರಿಯಾಗುತ್ತದೆ" ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್ ) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಹೇಳಿದರು.

''ರಾಜ್ಯದಲ್ಲಿ 20,400 ಅನುದಾನ ರಹಿತ ಖಾಸಗಿ ಶಾಲೆಗಳಿವೆ. ಇದರಲ್ಲಿ ಶೇ.10ರಷ್ಟು ಮಾತ್ರ ಪ್ರತಿಷ್ಠಿತ, ದೊಡ್ಡ ಮಟ್ಟದಲ್ಲಿ ನಡೆಸುವಂತಹ ಶಿಕ್ಷಣ ಸಂಸ್ಥೆಗಳು. ಉಳಿದ ಶೇ.90ರಷ್ಟು ಶಾಲೆಗಳಲ್ಲಿ ಕೇವಲ 10,000 ದಿಂದ ಪ್ರಾರಂಭವಾಗಿ ಗರಿಷ್ಠ 30,000 ವಾರ್ಷಿಕ ಶುಲ್ಕ ಪಡೆಯುವಂತಹ ಶಿಕ್ಷಣ ಸಂಸ್ಥೆಗಳೇ ಇವೆ. ಇದರಲ್ಲಿ ಶೇ.60ರಷ್ಟು ಶಾಲೆಗಳು ತಿಂಗಳ ಶುಲ್ಕ ಅವಲಂಭಿಸಿವೆ. ಹೀಗಿರುವಾಗ ನಿಗದಿತ ಪ್ರಮಾಣದಲ್ಲಿ ಶುಲ್ಕ ಬಾರದಿದ್ದರೆ, ಶಾಲೆಗಳನ್ನು ನಡೆಸುವುದಾದರೂ ಹೇಗೆ?,'' ಎಂದು ಶಶಿಕುಮಾರ್ ಪ್ರಶ್ನಿಸುತ್ತಾರೆ.

ಶಿಕ್ಷಣದ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಇದು ಶಿಕ್ಷಣ ಸಂಸ್ಥೆಗಳಿಗೂ ಮತ್ತು ಪೋಷಕರಿಗೂ ಸಂಬಂಧಿಸಿದ ವಿಷಯವಷ್ಟೇ ಆಗಿದ್ದರೆ ಉತ್ತಮ ಗುಣಮಟ್ಟದ ಶಿಕ್ಷಣ ಸಾಧ್ಯವಾಗುತ್ತದೆ. ಇದರಲ್ಲಿ ರಾಜಕೀಯ ಪ್ರವೇಶಿಸಿದಷ್ಟೂ ಯಡವಟ್ಟುಗಳು ಆಗುತ್ತಲೇ ಇರುತ್ತವೆ. ಪೋಷಕರು ಗೊಂದಲಕ್ಕೆ ಒಳಗಾಗುತ್ತಾರೆ. ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಬಹುದು ಎಂದು ಶಶಿಕುಮಾರ್ ಹೇಳುತ್ತಾರೆ.

ಅಮ್ ಆದ್ಮಿ ಪಕ್ಷ ಪ್ರತಿಭಟನೆ:

ಮತ್ತೊಂದೆಡೆ ಶುಲ್ಕ ಗೊಂದಲ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿಲುವು ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಶಾಲಾ ಶುಲ್ಕ ಇಳಿಸಿ ಮಕ್ಕಳ ಭವಿಷ್ಯವನ್ನು ಉಳಿಸಿ ಎಂದು ಘೋಷಣೆ ಕೂಗಿದರು. ಪೋಷಕರು ಮತ್ತು ಶಿಕ್ಷಕರ ನೇತೃತ್ವದಲ್ಲಿ ಶುಲ್ಕ ನಿಯಂತ್ರಣ ಸಮಿತಿಗಳನ್ನು ಪ್ರತಿ ಶಾಲೆಯಲ್ಲಿ ರಚಿಸಿ ಅಲ್ಲಿ ಶುಲ್ಕದ ಬಗ್ಗೆ ನಿರ್ಧಾರ ಮಾಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು. ವಿದ್ಯಾರ್ಥಿಗಳು, ಪೋಷಕರು, ವಾಯ್ಸ ಆಫ್‌ ಪೇರೆಂಟ್ ಮುಂತಾದ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು.

ಈ ಸಂದರ್ಭದಲ್ಲಿ ಮಾತನಾಡಿದ ಅಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, "ಆರೋಗ್ಯ ಬಿಕ್ಕಟ್ಟಿನ ನಂತರ ರಾಜ್ಯ ಎದುರಿಸಿದ ಬೃಹತ್ ಸಮಸ್ಯೆ ಎಂದರೆ ಶೈಕ್ಷಣಿಕ ಬಿಕ್ಕಟ್ಟು. ಸಾಲು ಸಾಲು ಲಾಕ್‌ಡೌನ್‌ನಿಂದಾಗಿ ಮಕ್ಕಳ ಪೋಷಕರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ಸಂಕಷ್ಟದ ಮಧ್ಯೆ ಶಾಲಾ ಶುಲ್ಕ ಪಾವತಿಸಲು ಹೇಗೆ ಸಾಧ್ಯ?" ಎಂದು ಪ್ರಶ್ನಿಸಿದರು.

ಹಿಂದಿನ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಅವರು ಅವೈಜ್ಞಾನಿಕವಾಗಿ ಶುಲ್ಕ ಕಡಿತ ಮಾಡಿದರು. ಶಾಲೆಗಳ ಶುಲ್ಕವನ್ನು ಹೇಗೆ ಕಡಿಮೆ ಮಾಡಬೇಕು ಎಂಬ ಸ್ಪಷ್ಟಗತೆ ಅವರಿಗೆ ಇರಲಿಲ್ಲ. ಹೀಗಾಗಿ ಖಾಸಗಿ ಶಾಲೆಗಳು ಹೈಕೋರ್ಟ್ ಮೊರೆ ಹೋದವು. ಇದರಿಂದ ಮತ್ತೆ ಪೋಷಕರು ಹೆಚ್ಚುವರಿ ಶುಲ್ಕ ಭರಿಸಬೇಕಾಗಿದೆ. ಈಗ ಸರ್ಕಾರ ಪೋಷಕರಿಗೆ ಹೇಗೆ ನೆರವಾಗುತ್ತದೆ ಎಂಬುದೇ ಪ್ರಶ್ನೆಯಾಗಿದೆ. ಪ್ರತಿ ಮಗುವಿಗೆ 14 ವರ್ಷದ ತನಕ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಆದರೆ, ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಈ ವಿಷಯದಲ್ಲಿ ಸೋತಿದೆ ಎಂದು ಅವರು ಆರೋಪಿಸಿದರು.

English summary
After High Court order on 15% reduction in private school fees, parents urges Karnataka Govt to interfere to decide Private School Fees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X