ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಿದ್ದು ಅವರೆ, ಎಲ್ಲರೂ ಸೈ ಅನ್ನುವಂತೆ ಆಡಳಿತ ನಡೆಸಿ'

By ಮತ್ತೂರು ರಘು
|
Google Oneindia Kannada News

ಕರ್ನಾಟಕದ ಆಡಳಿತ ಈ ಮಟ್ಟಿಗೆ ಕೊಳೆಯುತ್ತಿದೆ ಎಂದರೆ ಬೇಸರವಾಗುತ್ತದೆ. ರಾಜ್ಯದ ಮುಖ್ಯಮಂತ್ರಿಯಾಗಿ ಆತ್ಮಸಾಕ್ಷಿಗೆ ವಿರುದ್ಧವಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಮಾನ್ಯ ಸಿದ್ದರಾಮಯ್ಯನವರು ತಾವು ಈ ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆತಿರುವಂತಿದೆ.

ಆಡಳಿತಪಕ್ಷದ ಪ್ರತಿ ಕೆಲಸವನ್ನೂ ವಿರೋಧಿಸಲೇಬೇಕೆಂದುಕೊಳ್ಳುವ ಪ್ರತಿಪಕ್ಷದ ನಾಯಕನ ರೀತಿಯಲ್ಲೇ ವರ್ತಿಸುತ್ತಿದ್ದಾರೆ. ಇದನ್ನು ಕಂಡರೆ ಅವರ ಅಭಿಮಾನಿಗಳೇ, ಅವರ ಹಿಂಬಾಲಕರೇ ಅಸಹ್ಯ ಪಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ.

ಭಜರಂಗದಳ, ಶ್ರೀರಾಮಸೇನೆಯಂತಹ ಸಂಘಟನೆಗಳ ವಿರುದ್ಧ ಅಸಹನೆಯನ್ನ ಎಬ್ಬಿಸುವುದು, ದೇಶದ ಕೋಟ್ಯಾಂತರ ಜನರ ಶ್ರದ್ಧಾಭಕ್ತಿಯಿಂದ ಪೂಜಿಸುವ ಗೋವಿನ ಮಾಂಸ ಸೇವನೆಯನ್ನು ಪ್ರಚೋದಿಸುವುದು, ನಿರ್ದಿಷ್ಟ ಸಮುದಾಯದ ಜನರನ್ನು ಒಲೈಸುವಂತಹ ಆಶ್ವಾಸನೆಗಳು, ಯೋಜನೆಗಳು, ಬದುಕಿರುವ ರೈತರನ್ನು ಉಳಿಸಿಕೊಳ್ಳುವ ಬದಲು ಆತ್ಮಹತ್ಯೆಯೇ ವಾಸಿ ಎನಿಸುವಂತಹ ನಿರ್ಧಾರಗಳು, ಪರಿಹಾರಗಳು..! [ಸಿಎಂಗೆ ಒಂದು ಕೆಜಿ ಹಂದಿಮಾಂಸ ಪಾರ್ಸೆಲ್!]

Opinion : Siddaramaiah should not act like opposition leader

ಇವನ್ನೆಲ್ಲ ನೋಡಿದಾಗ ಬಹುಶಃ ಸಿದ್ದರಾಮಯ್ಯನವರಿಗೆ ತಾವು ಈ ರಾಜ್ಯದ ಮುಖ್ಯಮಂತ್ರಿಗಳು ಎಂಬುದು ಮರೆತಿರಬಹುದು ಎಂದೆನಿಸುತ್ತದೆ. ಯಾರದೇ ವಿರುದ್ಧ ಏನೇ ಅಸಹನೆಯಿದ್ದರೂ ಅದನ್ನು ತೀರಿಸುಕೊಳ್ಳುವ ಸ್ಥಾನ 'ಮುಖ್ಯಮಂತ್ರಿ'ಯ ಸ್ಥಾನವಲ್ಲ. ಆ ಸ್ಥಾನಕ್ಕೆ ಆದರದ್ದೇ ಆದ ಸ್ಥಾನಗೌರವವಿರುತ್ತದೆ ಮತ್ತು ಅದನ್ನು ಕಾಪಾಡುವ ಜವಾಬ್ದಾರಿ ಸಿದ್ದರಾಮಯ್ಯನವರಿಗಿರಬೇಕಾಗಿದೆ.

ಯಾವುದೇ ಸಂಘಟನೆಗಳ ವಿರುದ್ಧದ ಆರೋಪವಿದ್ದರೆ ಅವುಗಳನ್ನು ಕಾನೂನಿನ ಮೂಲಕ ಸಾಬೀತುಪಡಿಸಿ. ಅದನ್ನು ಬಿಟ್ಟು ಬರೀ ವಿರೋಧಿ ಹೇಳಿಕೆಗಳನ್ನು ಕೊಡುವುದು ಅವರ ಸ್ಥಾನಕ್ಕೆ ತಕ್ಕುದಲ್ಲ. ಆರೋಪಗಳು ಸಾಬೀತಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಉದಾಹರಣೆಗಳಿವೆ. ಅವುಗಳ ವಿರುದ್ಧ ಕಾನೂನಿನ ಮೂಲಕ ಕ್ರಮ ಕೈಗೊಂಡು ಜನರಿಗೆ ಕಾನೂನಿನ ಮೇಲೆ, ವ್ಯವಸ್ಥೆಯ ಮೇಲೆ ನಂಬಿಕೆ ಬರುವಂತೆ ಮಾಡುವುದು ಮುಖ್ಯಮಂತ್ರಿಗಳ ಮುಂದಿರುವ ಸವಾಲು, ಅದೇ ಕರ್ತವ್ಯ. ['ಗೋಮಾಂಸ ವಿಚಾರದಲ್ಲಿ ಬಿಜೆಪಿ ಸಮಾಜ ಒಡೆಯುತ್ತಿದೆ']

ಸಿದ್ದರಾಮಯ್ಯನವರು ವೈಯಕ್ತಿಕವಾಗಿ ಎಷ್ಟೇ ಸಭ್ಯರಾಗಿದ್ದರೂ ಹಲವಾರು ಒತ್ತಡಗಳಿಗೆ ಮಣಿದು ಹೀಗೆಲ್ಲ ಮಾಡುತ್ತಿರಬಹುದು. ಆದರೆ ಇವುಗಳೆಲ್ಲದರ ಪರಿಣಾಮ ಸಮಾಜದ ಮೇಲಾಗುತ್ತದೆ ಎಂಬುದು ಕೂಡ ಅಷ್ಟೇ ಸತ್ಯ. ಸಮಾಜದ ಎಲ್ಲ ಜನರನ್ನು ಒಪ್ಪಿಸಲಾಗದಿದ್ದರೂ ಕೆಲವರಿಗೆ ಅಸಹ್ಯ ಬರಿಸುವ ರೀತಿಯಲ್ಲಿ ಆಡಳಿತ ನಡೆಸಬಾರದು.

ಗೋಮಾಂಸ ಸೇವನೆ ಎಂಬುದು ಎರಡು ಸಮುದಾಯಗಳ ನಡುವಿನ ಅಂತರದ, ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು, ಆ ಅಂತರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ನಡತೆಯಿರಬೇಕೆ ವಿನಃ ನಿರ್ದಿಷ್ಟ ಸಮುದಾಯವನ್ನು ಆಕರ್ಷಿಸುವ ಸಲುವಾಗಲ್ಲ.

ಒಗ್ಗಟ್ಟಿಲ್ಲದ ಹಿಂದೂಗಳ ಮತಗಳು ಹೇಗೂ ಹಲವು ಪಕ್ಷಗಳ ನಡುವೆ ಹಂಚಿಹೋಗುತ್ತದೆ ಎಂದು ಮುಂದಿನ ಚುನಾವಣೆಯ ದೃಷ್ಟಿಯಲ್ಲೇ ಹಿಂದೂಗಳನ್ನು ಉದಾಸೀನ ಮಾಡುವುದು, ಅವರ ನಂಬಿಕೆಗಳಿಗೆ ಅವಮಾನಿಸುವುದು ತರವಲ್ಲ. ಉತ್ತಮ ಆಡಳಿತ ನಡೆಸಿ ಮುಂದಿನ ಚುನಾವಣೆಯನ್ನು ಗೆಲ್ಲುವ ಮನವಿರಬೇಕೆ ವಿನಃ ಜನತೆಯ ನಡುವಿನ ಅಸಹನೆಯಿಂದಲ್ಲ.

ಮೊನ್ನೆ ಶಿವಮೊಗ್ಗದಲ್ಲಿ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಮುಖ್ಯಮಂತ್ರಿಯವರ ವಿರುದ್ಧ ಕೊಟ್ಟ ಹೇಳಿಕೆಯೂ ಸರಿಯಾದುದಲ್ಲ. ರಾಜ್ಯದ ಮುಖ್ಯಮಂತ್ರಿಯಾದರೂ ಹೀಗೆಲ್ಲ ಮಾಡುತ್ತಿದ್ದಾರಲ್ಲ ಎಂಬ ಅಸಹಾಯಕತೆಯ ಕಾರಣಕ್ಕೆ ಕೊಟ್ಟಂತಹ ಅಥವಾ ಪ್ರತಿಭಟನೆಯ ಓಘದಲ್ಲಿ ಕೊಟ್ಟ ಹೇಳಿಕೆಯಾದರೂ ಮುಖ್ಯಮಂತ್ರಿಯವರ ಸ್ಥಾನಕ್ಕೆ ನಾವು ಸಾರ್ವಜನಿಕವಾಗಿ ಅಗೌರವ ತರುವ ಹೇಳಿಕೆ ನೀಡುವುದು ಯಾರಿಗೂ ಶೋಭೆಯಲ್ಲ.

ಈ ಹಿಂದೆ ಎಷ್ಟೇ ಜನ ಮುಖ್ಯಮಂತ್ರಿಯಾಗಿ ಬಂದಿದ್ದರೂ ಎಲ್ಲರಿಂದ ಭಿನ್ನವಾಗಿ ಆದರೆ ಅಷ್ಟೇ ಶ್ರೇಷ್ಠವಾಗಿ ಎಲ್ಲರಿಂದಲೂ ಸೈ ಎನಿಸುವ ರೀತಿಯಲ್ಲಿ ಆಡಳಿತ ನಡೆಸಿದರೆ ಸಹಜವಾಗಿಯೇ ಪ್ರತಿ ಚುನಾವಣೆಯ ಗೆಲುವು ನಿಮ್ಮದಾಗುತ್ತದೆ ಸಿದ್ದರಾಮಯ್ಯನವರೇ. ಎಲ್ಲರಿಂದಲೂ ಸೈ ಎನಿಸಿಕೊಳ್ಳಲಾಗುವುದಿಲ್ಲ ಎಂಬುದು ಸತ್ಯವಾದರೂ ಆ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನವಾದರೂ ಇರಬೇಕಲ್ಲವೇ?

(Disclaimer : ಈ ಲೇಖನದಲ್ಲಿ ಮಂಡಿಸಲಾದ ಅಭಿಪ್ರಾಯಗಳು ಲೇಖಕರ ವೈಯಕ್ತಿಕ ಅನಿಸಿಕೆಗಳು.)

English summary
Why chief minister Siddaramaiah is acting like an opposition leader? Why does not he rule the state so that everyone can appreciate him? Why is he speaking in support of one sect of people? Why is Siddu giving provocative statements? Mathur Raghu, a reader asks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X