
ಸಚಿವ ಉಮೇಶ್ ಕತ್ತಿಯಿಂದ ಕರ್ನಾಟಕ ಇಬ್ಭಾಗದ ಹೇಳಿಕೆ: ಸಾಫ್ಟ್ ಉತ್ತರ ಕೊಟ್ಟ ಸಿಎಂ
ನವದೆಹಲಿ, ಜೂನ್ 23: ಮುಂಬರುವ ಲೋಕಸಭಾ ಚುನಾವಣೆಯ ನಂತರ ಕರ್ನಾಟಕ ಇಬ್ಭಾಗವಾಗಿ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುತ್ತದೆ ಎಂಬ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಸಾಫ್ಟ್ ಉತ್ತರ ನೀಡಿದ್ದಾರೆ.
'ಉಮೇಶ್ ಕತ್ತಿಯವರು ಈ ರೀತಿ ಹೇಳಿಕೆ ನೀಡಿರುವುದು ಮೊದಲ ಬಾರಿಯೇನಲ್ಲ. ಹತ್ತು ಹಲವಾರು ವರ್ಷಗಳಿಂದ ಅವರು ಹೇಳಿದ್ದಾರೆ. ಅದಕ್ಕೆ ಅವರೇ ಉತ್ತರ ನೀಡಬೇಕು ಎಂದರು.
ಸರ್ಕಾರದ ಮಟ್ಟದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಚಿಂತನೆ, ವಿಚಾರ ಹಾಗೂ ಪ್ರಸ್ತಾಪವೂ ಇಲ್ಲ ಎಂದು ಅವರು ಇಂದು ಕರ್ನಾಟಕ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಹೊಸದಾಗಿ ಡಾಂಬರು ಹಾಕಿದ ರಸ್ತೆ ಕುಸಿತ:
ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಡಾ:ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕೆನಾಮಿಕ್ಸ್(ಬೇಸ್) ಕ್ಯಾಂಪ್ ಬಳಿ ಹೊಸದಾಗಿ ಡಾಂಬರೀಕರಣ ಮಾಡಿದ ರಸ್ತೆ ಕುಸಿದಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಪ್ರಾಥಮಿಕ ತನಿಖೆಯಿಂದ ಈ ಪ್ರದೇಶದಲ್ಲಿ ನೀರಿನ ಪೈಪ್ ಸೋರಿಕೆಯಿಂದ ರಸ್ತೆ ಕುಸಿದಿರುವುದು ಕಂಡು ಬಂದಿದೆ. ಬಿಬಿಎಂಪಿ ರಸ್ತೆ ಹಾಕಿದ ಎರಡೇ ದಿನದಲ್ಲಿ ಕಿತ್ತುಹೋಗಿರುವ ವಿವರಗಳನ್ನು ನೀಡಿದರೆ ತನಿಖೆ ಮಾಡಿಸಲಾಗುವುದು ಮುಖ್ಯಮಂತ್ರಿಗಳು ತಿಳಿಸಿದರು.

ವರಿಷ್ಠರ ಸೂಚನೆ ಮೇರೆಗೆ ದೆಹಲಿ ಪ್ರವಾಸ
ಭಾರತದ ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಎಲ್ಲಾ ಮುಖ್ಯಮಂತ್ರಿಗಳು ಹಾಜರಿದ್ದು ನಾಮಪಾತ್ರಕ್ಕೆ ಸೂಚಕರಾಗಿ ಸಹಿಹಾಕಲು ಹಾಗೂ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಎಲ್ಲರೂ ಹಾಜರಿರಬೇಕೆಂದು ವರಿಷ್ಠರ ಸೂಚನೆ ಮೇರೆಗೆ ಇಲ್ಲಿಗೆ ಬಂದಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
'ನಾನು ಪ್ರತಿ ಬಾರಿ ದೆಹಲಿಗೆ ಭೇಟಿ ನೀಡುವ ಸಂದರ್ಭದಲ್ಲಿ ಈ ರೀತಿ ಮಾಧ್ಯಮಗಳಲ್ಲಿ ಸುದ್ದಿ ಬಂದಿರುತ್ತದೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನಾಗಿ ಅಧಿಕೃತವಾಗಿ ಹೇಳುವವರೆಗೆ ಏನೂ ಇರುವುದಿಲ್ಲ. ಪಕ್ಷದ ವರಿಷ್ಠರನ್ನು ಭೇಟಿಯಾಗಿಲ್ಲ' ಎಂದರು.