ಶ್ರಾವಣ ಮಾಸಾರಂಭದಲ್ಲಿ ಕೋಡಿ ಶ್ರೀಗಳು ನುಡಿದ ಭಯಾನಕ ಹೊಸ ಭವಿಷ್ಯ
ಹಾಸನ, ಜುಲೈ 21: ಕೊರೊನಾ ಹಾವಳಿ ವಿಪರೀತಗೊಂಡ ನಂತರ ಭವಿಷ್ಯ ನುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಆದರೂ, ಕೋಡಿಮಠದ ಶ್ರೀಗಳು ಭವಿಷ್ಯ ನುಡಿದರು ಎಂದರೆ, ಆಸ್ತಿಕರ ಕಿವಿ ಅರಳುವುದು ಜಾಸ್ತಿ.
ಈಗಾಗಲೇ, ಕೊರೊನಾ ಬಗ್ಗೆ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾಗಿದೆ. ಇದರ ಹಾವಳಿ ಜಾಸ್ತಿಯಾಗಲಿದೆ ಎಂದು ಈ ಹಿಂದೆ ಶ್ರೀಗಳು ಭವಿಷ್ಯ ನುಡಿದಿದ್ದರು. ಈಗ, ಶ್ರೀಗಳು, ಮತ್ತೆ ಈ ಸಂಬಂಧ ಭವಿಷ್ಯ ನುಡಿದಿದ್ದಾರೆ.
ಕೊರೊನಾ ವೈರಸ್ ನಿಂದ ದೇಶಕ್ಕೆ ಮುಕ್ತಿ ಯಾವಾಗ? ಖ್ಯಾತ ಜ್ಯೋತಿಷಿಯ ಭವಿಷ್ಯ
ಜೂನ್ 2020 ರಿಂದ ಮಾರ್ಚ್ 2021ರವರೆಗೆ ವಿಶ್ವ, ಹಲವು ವಿಕೋಪಗಳನ್ನು ಎದುರಿಸಬೇಕಾಗುತ್ತದೆ ಎಂದು ಕೆಲವು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು. ಸೆಪ್ಟಂಬರ್ ಕೊನೆಯ ವಾರದಿಂದ ಗಡಿಯಲ್ಲಿನ ಸಮಸ್ಯೆ ಉಲ್ಬಣಗೊಳ್ಳಲಿದೆ. ಆಗಸ್ಟ್ 20 ರಿಂದ ಸೆಪ್ಟಂಬರ್ 21ರ ಅವಧಿಯಲ್ಲಿ ಚೀನಾ ಮತ್ತು ಪಾಕಿಸ್ತಾನದಿಂದ ಹೆಚ್ಚಿನ ಪ್ರತಿರೋಧ ಎದುರಾಗಲಿದೆ ಎನ್ನುವ ಭವಿಷ್ಯವನ್ನೂ ನುಡಿಯಲಾಗಿತ್ತು.
ಕೊರೊನಾ ವೈರಸ್ : ನಿಜವಾದ ಕೋಡಿಮಠದ ಶ್ರೀಗಳ ಭವಿಷ್ಯ
ಜಗತ್ತಿಗೆ ದೊಡ್ಡ ಪೀಡೆಯಾಗಿ ಕಾಡುತ್ತಿರುವ ಕೊರೊನಾ ವೈರಸ್ ನ ಕಟ್ಟಿಹಾಕಲು ಸಮರೋಪಾದಿಯ ಕಾರ್ಯಗಳು ಚಾಲ್ತಿಯಲ್ಲಿರುವಾಗಲೇ, ಅರಸೀಕೆರೆಯ ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಮತ್ತೊಂದು ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ.

ಯುಗಾದಿ ಹಬ್ಬದ ವೇಳೆ ಕೋಡಿಶ್ರೀಗಳು
ಯುಗಾದಿ ಹಬ್ಬದ ವೇಳೆ ಭವಿಷ್ಯವನ್ನು ನುಡಿದಿದ್ದ ಕೋಡಿಶ್ರೀಗಳು, ''ಜಗತ್ತಿನ ಭೂ ಪಟದಲ್ಲಿ ಒಂದು ದೇಶ ಸಂಪೂರ್ಣ ನಾಶವಾಗಲಿದೆ'' ಎಂದಿದ್ದರು. ಅದು ಯಾವ ದೇಶ ಎಂಬುದನ್ನು ಸ್ಪಷ್ಟವಾಗಿ ಕೋಡಿಶ್ರೀಗಳು ಹೇಳಲಿಲ್ಲ, ಆದರೆ, ನಮ್ಮ ದೇಶಕ್ಕೆ ಯಾವುದೇ ಅಪಾಯವಿಲ್ಲ ಎಂದು ಶ್ರೀಗಳು ನುಡಿದಿದ್ದರು.

ಭರತಖಂಡ, ಖುಷಿಮುನಿಗಳು ತಪಸ್ಸು ಮಾಡಿದ ಪುಣ್ಯಭೂಮಿ
''ಕೊರೊನಾ ವೈರಸ್ ಮದ್ದು ಸಿಗಲಿದೆ. ಮೇ ತಿಂಗಳಲ್ಲಿ ಇದು ನಿರ್ನಾಮವಾಗಲಿದೆ. ಆದರೆ, ಸ್ವಲ್ಪ ಎಚ್ಚರ ತಪ್ಪಿದರೂ ವರ್ಷಪೂರ್ತಿ ಇರಲಿದೆ. ಆದರೆ, ಭರತಖಂಡ, ಖುಷಿಮುನಿಗಳು ತಪಸ್ಸು ಮಾಡಿದ ಪುಣ್ಯಭೂಮಿ. ನಮ್ಮ ದೇಶಕ್ಕೆ ಅಂತಹ ಗಂಢಾಂತರ ಎದುರಾಗುವುದಿಲ್ಲ'' ಎಂದು ಶ್ರೀಗಳು, ಕೆಲವು ತಿಂಗಳ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಶ್ರಾವಣ ಮಾಸದಲ್ಲಿ ಶ್ರೀಗಳ ಭವಿಷ್ಯ
ಶ್ರಾವಣ ಮಾಸಾರಂಭದಲ್ಲಿ ಮತ್ತೆ ಕೋಡಿಶ್ರೀಗಳು ಭವಿಷ್ಯ ನುಡಿದಿದ್ದಾರೆ. "ಆಶ್ವೀಜ, ಕಾರ್ತಿಕ ಮಾಸಗಳಲ್ಲಿ, ಕೊರೊನಾ ಹಾವಳಿ ಹೆಚ್ಚಾಗಲಿದೆ. ಹಳ್ಳಿಹಳ್ಳಿಗಳಲ್ಲೂ ಕೊರೊನಾ ಸೋಂಕು ಹರಡಲಿದೆ. ಜನರು ಎಚ್ಚರಿಕೆಯಿಂದ ಇರಬೇಕು, ಸರಕಾರದ ಮಾರ್ಗಸೂಚಿ ಪಾಲಿಸುವುದನ್ನು ಜನರು ಮರೆಯಬಾರದು"ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಯಾವುದೇ ಆತಂಕ ಪಡಬೇಕಾಗಿಲ್ಲ. ಎಲ್ಲಾ ಒಳಿತಾಗುತ್ತದೆ
"ಇನ್ನೂ ಕೆಲ ತಿಂಗಳು ಕೊರೊನಾ ಅಟ್ಟಹಾಸ ಇರಲಿದೆ. ಕೊರೊನಾ ಗಾಳಿಯಲ್ಲಿ ಸಂಚಾರ ಮಾಡುವುದಿಲ್ಲ. ಜನರು ಸುರಕ್ಷತೆ ಮತ್ತು ಸ್ವಚ್ಚತೆಗೆ ಆದ್ಯತೆ ನೀಡಬೇಕು. ಆದರೆ, ಸಾರ್ವಜನಿಕರು, ಯಾವುದೇ ಆತಂಕ ಪಡಬೇಕಾಗಿಲ್ಲ. ಎಲ್ಲಾ ಒಳಿತಾಗುತ್ತದೆ"ಎಂದು ಕೋಡಿಶ್ರೀಗಳು ಹೇಳಿದ್ದಾರೆ.