ಮುಂದಿನ ವರ್ಷದಿಂದಲೇ NEP ಜಾರಿ ಕುರಿತು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಮಹತ್ವದ ಹೇಳಿಕೆ
ಬೆಂಗಳೂರು, ಡಿ. 08: ಕರ್ನಾಟಕದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪೂರ್ವ ಪ್ರಾಥಮಿಕ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡಲು ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಿದೆ. ಈ ಸಂಬಂಧ ರಚನೆ ಮಾಡಿರುವ ಉಪ ಸಮಿತಿಗಳು ಡಿಸೆಂಬರ್ 20 ರ ಒಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗಿವೆ. ಈ ಕುರಿತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಮಹತ್ವದ ಮಾಹಿತಿಯನ್ನು ಒನ್ಇಂಡಿಯಾ ಕನ್ನಡ ಜತೆ ಹಂಚಿಕೊಂಡಿದ್ದಾರೆ.
ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೇವೆ. ಮುಂದಿನ ವರ್ಷದಿಂದ ಜಾರಿ ಬಗ್ಗೆ ಉಪ ಸಮಿತಿಗಳು ಅಧ್ಯಯನ ನಡೆಸುತ್ತಿವೆ. ಈ ಕುರಿತು ರಚನೆಯಾಗಿರುವ 26 ಉಪ ಸಮಿತಿಗಳು ಡಿಸೆಂಬರ್ ತಿಂಗಳಾಂತ್ಯಕ್ಕೆ ವರದಿ ನೀಡಲಿವೆ. ಉಪ ಸಮಿತಿಗಳು ನೀಡುವ ವರದಿಯ ಬಗ್ಗೆ ಚರ್ಚಿಸಲಾಗುವುದು. ಅದರ ಸಾಧಕ ಬಾಧಕಗಳ ಬಗ್ಗೆ ಕೇಂದ್ರ ಸರ್ಕಾರದ ತಜ್ಞರ ಸಮಿತಿ ಜತೆಗೂ ಚರ್ಚಿಸುತ್ತೇವೆ. ಇದರ ಜತೆ ಜತೆಗೆ ಪಠ್ಯಕ್ರಮ, ಪಠ್ಯ ಕ್ರಮ ರಚನೆ ಕಾರ್ಯ ಆರಂಭವಾಗಲಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಸಮರ್ಥವಾಗಿ ಎನ್ಇಪಿ ಜಾರಿ ಮಾಡುವ ಬಗ್ಗೆ ಈಗಾಗಲೇ ಉಪ ಸಮಿತಿಗಳು ಸಾಕಷ್ಟು ಕೆಲಸ ಮಾಡಿವೆ. ಇದರ ಜತೆಗೆ ಶಿಕ್ಷಣ ಇಲಾಖೆಯ ಆಯುಕ್ತ ವಿಶಾಲ್, ಪಿಯು ಬೋರ್ಡ್ ನಿರ್ದೇಶಕರಾದ ನೇಹಾಲ್ ಸೇರಿದಂತೆ ಅನೇಕ ಅಧಿಕಾರಿಗಳಿಗೆ ಮಹತ್ವದ ಜವಾಬ್ಧಾರಿ ವಹಿಸಲಾಗಿದೆ. ಅವರು ಸಾಕಷ್ಟು ಪರಿಶ್ರಮ ಹಾಕುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಎನ್ಇಪಿ ಜಾರಿ ಮಾಡುವುದು ಖಚಿತ. ಆದರೆ ಮೊದಲ ಆದ್ಯತೆಯನ್ನು ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಯಾವ ತರಗತಿ ಹಂತದಲ್ಲಿ ಎನ್ಇಪಿ ಪರಿಚಯಿಸಬೇಕು. ಮುಂದಿನ ಐದು ವರ್ಷದಲ್ಲಿ ಎನ್ಇಪಿ ವ್ಯಾಪ್ತಿಗೆ ಎಲ್ಲಾ ವಿದ್ಯಾರ್ಥಿಗಳು ಒಳಪಡಬೇಕು. ಈ ನಿಟ್ಟಿನಲ್ಲಿ ಯಾವ ಯಾವ ತರಗತಿ ಹಂತದಲ್ಲಿ ಎನ್ಇಪಿ ಪರಿಚಯಿಸಬೇಕು ಎಂಬುದರ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಪೂರ್ವ ಪ್ರಾಥಮಿಕ ಶಾಲೆ ಹಂತದಲ್ಲಿ ಎನ್ಇಪಿ ಮುಂದಿನ ವರ್ಷದಿಂದ ಪರಿಚಯಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳು ನಡೆದಿವೆ ಎಂದು ಬಿ.ಸಿ. ನಾಗೇಶ್ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
ಯಾವ ಹಂತದಲ್ಲಿ ಎಂಟ್ರಿ ಪಾಯಿಂಟ್: ಪೂರ್ವ ಪ್ರಾಥಮಿಕ ಶಾಲೆ ಹಂತದಲ್ಲಿ ಎನ್ಇಪಿ ಪರಿಚಯಿಸಲಾಗುತ್ತದೆ. ಐದು ವರ್ಷದಲ್ಲಿ ಆ ಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ಎನ್ಇಪಿ ಅಡಿ ಪೂರೈಸಿ ಐದನೇ ತರಗತಿ ವರೆಗೂ ಓದಲಿದ್ದಾರೆ. ಹೀಗಾಗಿ ಐದನೇ ತರಗತಿಗೆ ಎರಡನೇ ಹಂತದಲ್ಲಿ ಎನ್ಇಪಿ ಎಂಟ್ರಿ ಕೊಡುವ ಬಗ್ಗೆ ಯೋಜನೆ ಮಾಡುತ್ತಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಗೊಂಡು ಐದು ವರ್ಷದಲ್ಲಿ ರಾಜ್ಯದಲ್ಲಿ ಎಲ್ಲಾ ವಿದ್ಯಾರ್ಥಿಗಳು ಎನ್ಇಪಿ ವ್ಯಾಪ್ತಿಗೆ ಒಳಪಡುವ ಬಗ್ಗೆ ಆಲೋಚನೆ ಮಾಡುತ್ತಿದ್ದೇವೆ. ಎಲ್ಲಾ ವಿದ್ಯಾರ್ಥಿಗಳಿಗೂ ಎನ್ಇಪಿ ವ್ಯಾಪ್ತಿಗೆ ಒಳಪಡಬೇಕು. ಹೀಗಾಗಿ ಇದರ ಸಾಧಕ ಬಾಧಕಗಳ ಬಗ್ಗೆ ತಜ್ಞರ ಜತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದರು.
ಎನ್ಇಪಿ ಅಡಿ ಸ್ಪೆಷಲ್ ಎಜುಕೇಷನ್ ಜೋನ್ ರಚನೆ: ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ 2020 ಜಾರಿಗೆ ಬರಲಿದೆ. ಈಗಾಗಲೇ ಉನ್ನತ ಶಿಕ್ಷಣ ಹಂತದಲ್ಲಿ ಎನ್ಇಪಿ ಅನುಷ್ಠಾನಕ್ಕೆ ತರಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಂತದಲ್ಲಿ ಎನ್ಇಪಿ ಅನುಷ್ಠಾನ ಮಾಡಲು ಸರ್ಕಾರ ಚಿಂತನೆ ಮಾಡಿದೆ. ನಿವೃತ್ತ ಐಎಎಸ್ ಅಧಿಕಾರಿ ಮದನ ಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚನೆ ಮಾಡಿದ್ದು, ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಾಗೂ ಆರೋಗ್ಯ ವಿಚಾರದಲ್ಲಿ ಹಿಂದುಳಿದುರವ ತಾಲೂಕುಗಳನ್ನು ಗುರುತಿಸಿ ಸ್ಪೆಷಲ್ ಎಜುಕೇಷನ್ ಜೋನ್ ಮಾಡಲು ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.

ಸ್ಪೆಷಲ್ ಎಜುಕೇಷನ್ ಜೋನ್ ನಿಂದ ಆಗುವ ಲಾಭ:
ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದಿರುವ ತಾಲೂಕು ವಾರು ವಿಶೇಷ ಶೈಕ್ಷಣಿಕ ವಲಯ ರಚನೆ ಮಾಡುವುದು. ತಾಲೂಕು ಮಟ್ಟದ ಸ್ಪೆಷಲ್ ಜೋನ್ನಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಸಂಬಂಧ ಮೂಲ ಸೌಕರ್ಯ ಒದಗಿಸಿ ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಾ ತಾಲೂಕುಗಳು ಸಮಾನತೆ ಸಾಧಿಸಲು ಚಿಂತನೆ ನಡೆದಿದೆ. ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡ ಹೆಚ್ಚು ಇರುವ ತಾಲೂಕುಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಶೈಕ್ಷಣಿಕವಾಗಿ ಹಿಂದುಳಿದಿರುವ ಪ್ರದೇಶವನ್ನು ಗುರುತಿಸಿ ವಿಶೇಷ ಶಿಕ್ಷಣ ವಲಯ ಎಂದು ಗುರುತಿಸಲು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಶಿಕ್ಷಣ, ದಾಖಲಾತಿ, ಅಪೌಷ್ಠಿಕತೆ, ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಶೈಕ್ಷಣಿಕ ಪ್ರಗತಿ, ಆರೋಗ್ಯ ಕ್ಷೇತ್ರದ ಮಾನದಂಡಗಳನ್ನು ಮುಂದಿಟ್ಟುಕೊಂಡು ವಿಶೇಷ ಶಿಕ್ಷಣ ವಲಯ ರಚನೆ ಮಾಡಲಾಗುತ್ತದೆ. ಹೀಗೆ ಗುರುತು ಮಾಡಿದ ವಿಶೇಷ ಶೈಕ್ಷಣಿಕ ವಲಯದಲ್ಲಿ ಮೂಲ ಸೌಕರ್ಯ, ಗುಣಮಟ್ಟದ ಶಿಕ್ಷಣಕ್ಕೆ ಬೇಕಾದ ಸೌಲಭ್ಯ, ಆರೋಗ್ಯ ಮತ್ತು ನೈರ್ಮಲ್ಯ ಕಲ್ಪಿಸುವ ಸಂಬಂಧ ಸಮಿತಿ ನೀಡುವ ವರದಿ ಆಧಾರದ ಮೇಲೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ.