ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NEP ಎಂದರೆ ರಾಷ್ಟ್ರೀಯ ಶಿಕ್ಷಣ ನೀತಿ ಅಲ್ಲ, ನಾಗ್ಪುರ ಶಿಕ್ಷಣ ನೀತಿ!

|
Google Oneindia Kannada News

ಬೆಂಗಳೂರು, ಸೆ. 06: ದೇಶದಲ್ಲಿಯೇ ಮೊದಲನೇಯದಾಗಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಹೊರಟಿರುವ ರಾಜ್ಯ ಬಿಜೆಪಿ ಸರ್ಕಾರದ ನಿರ್ಧಾರಕ್ಕೆ ಮತ್ತೆ ತೀವ್ರ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಕೆಲ ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಚರ್ಚೆ ಮಾಡದೆಯೇ ಶಿಕ್ಷಣ ನೀತಿ ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಶಿಕ್ಷಣ ನೀತಿ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

"ಬಿಜೆಪಿ ಸರ್ಕಾರ ತರಾತುರಿಯಲ್ಲಿ ಜಾರಿಗೆ ತರಲು ಮುಂದಾಗಿರುವ NEP ರಾಷ್ಟ್ರೀಯ ಶಿಕ್ಷಣ ನೀತಿ ಅಲ್ಲ, ಅದು ನಾಗ್ಪುರ ಶಿಕ್ಷಣ ನೀತಿ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಸಂಸತ್ತಿನಲ್ಲಿ ಚರ್ಚೆ ಆಗದೇ ಇರುವ ನೀತಿಯನ್ನು ರಾಜ್ಯದಲ್ಲಿ ತರಾತುರಿಯಲ್ಲಿ ಜಾರಿಗೆ ತರಲು ಹೊರಟಿರುವುದರ ವಿರುದ್ಧ ಕಾಂಗ್ರೆಸ್ ಪಕ್ಷ ಹೋರಾಟ ಮಾಡಲಿದೆ. ನೀವು ಏನೇ ತಿಪ್ಪರಲಾಗ ಹಾಕಿದರೂ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆಯಾಗದೇ ಇದನ್ನು ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ" ಎಂದು ಡಿ.ಕೆ. ಶಿವಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಶಿಕ್ಷಣ ನೀತಿ ಜಾರಿಗೆ ಬಿಡುವುದಿಲ್ಲ!

ಶಿಕ್ಷಣ ನೀತಿ ಜಾರಿಗೆ ಬಿಡುವುದಿಲ್ಲ!

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಜಿಲ್ಲಾವಾರು ಮುಖಂಡರ ಸಭೆ ನಡೆಸಿದ ಶಿವಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರವಾಗಿ ಪಕ್ಷದ ನಿಲುವು ಹಾಗೂ ಪಕ್ಷದ ಸಂಘಟನೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು;

"ರಾಷ್ಟ್ರೀಯ ಶಿಕ್ಷಣ ನೀತಿ ಎಂದರೆ ಅದರ ಬಗ್ಗೆ ರಾಷ್ಟ್ರಾದ್ಯಂತ ವ್ಯಾಪಕ ಚರ್ಚೆ ಆಗಬೇಕು. ಸಂಸತ್ತು, ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಚರ್ಚಿಸಬೇಕು. ಆದರೆ ಅದ್ಯಾವುದು ನಡೆದಿಲ್ಲ. ಸದನ ಸಮಿತಿ ರಚಿಸಿ, ರಾಜ್ಯದುದ್ದಗಲಕ್ಕೂ ಜನರ ಜತೆ ಚರ್ಚಿಸಿ, ಅಭಿಪ್ರಾಯ ಪಡೆಯುವವರೆಗೂ ರಾಜ್ಯದಲ್ಲಿ ಇದರ ಜಾರಿಗೆ ನಾವು ಅವಕಾಶ ನೀಡುವುದಿಲ್ಲ" ಎಂದಿದ್ದಾರೆ.

ಒಳಗುಟ್ಟು ಏನೆಂದು ಅರ್ಥವಾಗುತ್ತಿಲ್ಲ!

ಒಳಗುಟ್ಟು ಏನೆಂದು ಅರ್ಥವಾಗುತ್ತಿಲ್ಲ!

ನಾನು ಕೂಡ ಶಿಕ್ಷಣ ಕ್ಷೇತ್ರದಲ್ಲಿ ಬಹಳ ಆಸಕ್ತಿ ಹೊಂದಿದ್ದು, ವಿದ್ಯಾಸಂಸ್ಥೆಗಳನ್ನು ನಡೆಸುತ್ತಾ ಬಂದಿದ್ದೇನೆ. ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಟ್ರಸ್ಟಿಯಾಗಿದ್ದೇನೆ. ಈ ನೂತನ ಶಿಕ್ಷಣ ನೀತಿ ಏನು, ಅದರಿಂದ ಆಗುವ ಪ್ರಯೋಜನೆಗಳೇನು? ಎಂಬುದನ್ನು ಅರ್ಥ ಮಾಡಿಕೊಳ್ಳಲು ನನ್ನಿಂದಲೇ ಸಾಧ್ಯವಾಗುತ್ತಿಲ್ಲ.

ಇದನ್ನು ಅರ್ಥ ಮಾಡಿಕೊಳ್ಳಲು ಹಲವು ಬಾರಿ ವಿದ್ಯಾರ್ಥಿಗಳು, ಶಿಕ್ಷಕರು, ತಜ್ಞರ ಜತೆ ಚರ್ಚೆ ಮಾಡಿ ಪ್ರಯತ್ನಪಟ್ಟರೂ ಇದರ ಒಳಗುಟ್ಟು ಏನು ಎಂಬುದೇ ಅರ್ಥವಾಗುತ್ತಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಯಾಕಿಷ್ಟು ಆತುರದಲ್ಲಿ ಇದನ್ನು ಜಾರಿ ತರಲು ಮುಂದಾಗಿದೆಯೋ ತಿಳಿಯುತ್ತಿಲ್ಲ. ಶಿಕ್ಷಕರು ಇಲ್ಲ, ವಿದ್ಯಾರ್ಥಿಗಳು ಶಾಲೆ ಸೇರಲು ಸಾಧ್ಯವಾಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟ ಯಾರ ಜತೆಗೂ ಸರ್ಕಾರ ಈ ನೂತನ ಶಿಕ್ಷಣ ನೀತಿ ಬಗ್ಗೆ ಚರ್ಚೆ ಮಾಡಿಲ್ಲ. ಸಂಸತ್ತಿನಿಂದ ಹಿಡಿದು, ವಿಧಾನ ಮಂಡಲದ ಉಭಯ ಸದನಗಳವರೆಗೂ ಎಲ್ಲೂ ಚರ್ಚೆ ಆಗಿಲ್ಲ.

ಹಿಂಬಾಗಿಲಿನಿಂದ ಹಿಂದಿ ಹೇರಿಕೆ!

ಹಿಂಬಾಗಿಲಿನಿಂದ ಹಿಂದಿ ಹೇರಿಕೆ!

ಶಿಕ್ಷಣ ರಾಜ್ಯಗಳಿಗೆ ಸಂಬಂಧಿಸಿದ ವಿಚಾರ. ರಾಷ್ಟ್ರ ಮಟ್ಟದಲ್ಲಿ ನೀತಿ ನಿರೂಪಿಸಬೇಕು ನಿಜ. ಆದರೆ ಅದರ ಬಗ್ಗೆ ಎಲ್ಲ ಕಡೆಗಳಲ್ಲೂ ವ್ಯಾಪಕ ಚರ್ಚೆ ಆಗಬೇಕಲ್ಲವೇ? ಚರ್ಚೆಯೇ ನಡೆಯದೇ, ಏಕಾಏಕಿ ಈ ನೀತಿ ಜಾರಿಗೊಳಿಸುತ್ತೇವೆ ಎಂದು ಶಿಕ್ಷಣ ಸಚಿವರು ಹೇಳಿಕೆ ನೀಡಿರುವುದರಿಂದ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಎಲ್ಲರೂ ಗಾಬರಿ ಬಿದ್ದಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಈ ನೀತಿ ಬಗ್ಗೆ ವಿಧಾನಸಭೆ, ವಿಧಾನ ಪರಿಷತ್, ಶಿಕ್ಷಣ ಸಂಸ್ಥೆಗಳು, ಪೋಷಕರು, ಶಿಕ್ಷಕರ ಮಟ್ಟದಲ್ಲಿ ಸಂಪೂರ್ಣವಾಗಿ ಚರ್ಚೆಯಾಗುವವರೆಗೂ ಈ ನೀತಿ ಜಾರಿಯನ್ನು ತಡೆ ಹಿಡಿಯಬೇಕು. ಅಲ್ಲಿಯವರೆಗೂ ನಾವು ಕೂಡ ಇದನ್ನು ವಿರೋಧಿಸುತ್ತೇವೆ.

ಈ ನೀತಿಯಲ್ಲಿ ಕೆಲವು ಉತ್ತಮ ಅಂಶಗಳು ಇರಬಹುದು. ಇದು ಮಕ್ಕಳು, ರಾಜ್ಯ, ದೇಶದ ಭವಿಷ್ಯದ ವಿಚಾರ. ಈ ನೀತಿಯಲ್ಲಿ ತ್ರಿಭಾಷಾ ಸೂತ್ರ ಪರಿಚಯಿಸುವ ಮೂಲಕ ಹಿಂಬಾಗಿಲಿನಿಂದ ಹಿಂದಿ ಭಾಷೆ ಹೇರಿಕೆಗೆ ಪ್ರಯತ್ನಿಸಲಾಗುತ್ತಿದೆ. ಈ ವಿಚಾರವಾಗಿ ಕನ್ನಡಪರ ಸಂಘಟನೆಗಳು ನನ್ನನ್ನು ಸಂಪರ್ಕಿಸುತ್ತಿದ್ದಾರೆ. ಇದೇ ನೀತಿಯನ್ನು ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್ ನಲ್ಲಿ ಯಾಕೆ ಜಾರಿತರಲು ಪ್ರಯತ್ನಿಸುತ್ತಿಲ್ಲ. ಕೇರಳ ಹಾಗೂ ತಮಿಳುನಾಡಿನಲ್ಲಿ ಇದರ ವಿಚಾರದಲ್ಲಿ ಮಾತು ಕೂಡ ಆಡುವ ಸ್ಥಿತಿ ಇಲ್ಲ. ಮಾತನಾಡಿದರೆ, ಅಲ್ಲಿನ ಜನ ಬಡಿಯುತ್ತಾರೆ.

Recommended Video

ಭಾರತೀಯ ಸೈನಿಕರು ಉಪಯೋಗಿಸಿದ ಯೂನಿಫಾರ್ಮ್ ಹೇಗೆ ಮರುಬಳಕೆಯಾಗುತ್ತೆ? | Oneindia Kannada
ಶಿಕ್ಷಣ ಸಚಿವರಿಗೆ ಸಾಮಾನ್ಯ ಪ್ರಜ್ಞೆಯೇ ಇಲ್ಲ!

ಶಿಕ್ಷಣ ಸಚಿವರಿಗೆ ಸಾಮಾನ್ಯ ಪ್ರಜ್ಞೆಯೇ ಇಲ್ಲ!

ಶಿಕ್ಷಣ ಸಚಿವರಿಗೆ ಸಾಮಾನ್ಯ ಪ್ರಜ್ಞೆಯೇ ಇಲ್ಲ ಎಂದು ಕಾಣುತ್ತದೆ. ಮುಖ್ಯಮಂತ್ರಿಗಳು ಅವರದೇ ಜಂಜಾಟದಲ್ಲಿ ಮುಳುಗಿರಬೇಕು, ಹೀಗಾಗಿ ಸಭೆಗಳ ಮೇಲೆ ಸಭೆ ನಡೆಯುತ್ತಿದ್ದರೂ ಈ ಬಗ್ಗೆ ಅವರು ಗಮನ ಹರಿಸಿಲ್ಲ. ಈ ನೀತಿಯಲ್ಲಿ ವಿದ್ಯಾರ್ಥಿ ಪದವಿ ಅವಧಿಯಲ್ಲಿ ಎರಡು ಮೂರು ವಿಷಯಗಳನ್ನು ವಿದ್ಯಾಭ್ಯಾಸ ಮಾಡಬಹುದಂತೆ. ಇದು ಹೇಗೆ ಸಾಧ್ಯ? ಇದಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆಯೇ? ಸರ್ಕಾರ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಟ್ಯಾಬ್ ಒದಗಿಸಿದೆಯೇ? ಆನ್ಲೈನ್ ಶಿಕ್ಷಣಕ್ಕೆ ಒತ್ತು ನೀಡಲು ರಾಜ್ಯಾದ್ಯಂತ ಇಂಟರ್ ನೆಟ್ ವ್ಯವಸ್ಥೆ ಕಲ್ಪಿಸಿದೆಯೇ? ಈ ಶಿಕ್ಷಣ ನೀತಿ ಕೇವಲ ನಗರದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆಯೇ ಹೊರತು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಯಾವುದೇ ಲಾಭವಿಲ್ಲ, ಅನುಕೂಲವೂ ಇಲ್ಲ.

ನಮ್ಮಲ್ಲಿ ಎಲ್ಲ ವರ್ಗದ ಜನ ಆತಂಕಕ್ಕೆ ಒಳಗಾಗಿದ್ದು, ಈ ನೀತಿ ಜಾರಿಗೊಳಿಸುವುದನ್ನು ನಿಲ್ಲಿಸಬೇಕು. ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತಿದ್ದೇನೆ. ಈ ವಿಚಾರವಾಗಿ ನಾವು ಶಿಕ್ಷಣ ತಜ್ಞರ ಜತೆ ಚರ್ಚೆ ಮಾಡಿ ಅಧಿವೇಶನದಲ್ಲಿ ನಮ್ಮ ಪಕ್ಷದ ಅಭಿಪ್ರಾಯ ಮಂಡಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

English summary
NEP means Nagpur Education Policy not National Education Policy: KPCC President D.K. Shivakumar. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X