ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾತಿವಾರು ಜನಗಣತಿಗೆ 100 ಕೋಟಿ ರು. ಮೀಸಲು

By Prasad
|
Google Oneindia Kannada News

ಬೆಂಗಳೂರು, ಅ. 18 : ಕೆಳವರ್ಗಗಳ ಜನರು ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬಂದಾಗ ಮಾತ್ರ ಸಮಾನತೆ ತಾನಾಗಿಯೇ ಬಂದು ಎಲ್ಲರಿಗೂ ನ್ಯಾಯ ಸಿಗುವಂತಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಿಳಿಸಿದ್ದಾರೆ.

ಸರ್ಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಅಪೌಷ್ಠಿಕ ರಹಿತ ಹಾಗೂ ಹಸಿವು ಮುಕ್ತ ರಾಜ್ಯವನ್ನಾಗಿಸುವುದು ನಮ್ಮ ಸರ್ಕಾರದ ಮುಖ್ಯ ಗುರಿ ಎಂದರು.

ನಿಜವಾದ ಬಡವರಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತಾಗಬೇಕು. ಹಾಗಾಗಬೇಕಾದ್ದಲ್ಲಿ ರಾಜ್ಯದಲ್ಲಿ ಜಾತಿವಾರು ಜನಗಣತಿ ಕಾರ್ಯ ನಡೆಯಬೇಕಾಗಿದೆ. ಈ ವರ್ಷ ಜಾತಿವಾರು ಜನಗಣತಿ ಕಾರ್ಯಕ್ಕೆ ರೂ. 100 ಕೋಟಿ ಮೀಸಲಿಡಲಾಗಿದೆ. ಜಾತಿವಾರು ಜನಗಣತಿಯಿಂದಾಗಿ ಸಮುದಾಯಗಳ ಆರ್ಥಿಕ ಸ್ಥಿತಿಗತಿ ತಿಳಿಯುತ್ತದೆ. ಆಗ ಸೌಲಭ್ಯವಂಚಿತ ಸಮುದಾಯಗಳ ಅಭಿವೃದ್ಧಿಗೆ ಆಯವ್ಯಯದಲ್ಲಿ ಹೆಚ್ಚಿನ ಆದ್ಯತೆ ನೀಡಲು ಅನುಕೂಲವಾಗುತ್ತದೆ ಎಂದು ನುಡಿದರು.

Needy poor should get facilities : Siddaramaiah

ಪರಿವಾರ ಹಾಗೂ ತಳವಾರ ಸಮುದಾಯಗಳನ್ನು ಪರಿಶಿಷ್ಟ ವರ್ಗಗಳ ಜಾತಿಗೆ ಸೇರಿಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದ ಅವರು, ಪರಿಶಿಷ್ಟ ವರ್ಗಗಳ ಮೀಸಲಾತಿ ಪ್ರಮಾಣವನ್ನು ಶೇ. 7.5ಕ್ಕೆ ಹೆಚ್ಚಿಸುವ ಸಂಬಂಧ ಕೆಲವು ಕಾನೂನು ತೊಡಕುಗಳಿದ್ದು, ಪರಿಹರಿಸುವ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಪರಿಶಿಷ್ಟ ವರ್ಗಗಳ ಸಮುದಾಯಕ್ಕೆ ಪ್ರತ್ಯೇಕ ಸಚಿವಾಲಯ ಪ್ರಾರಂಭಿಸುವ ಸಂಬಂಧ ಗಂಭೀರ ಪ್ರಯತ್ನ ಮಾಡಲಾಗುವುದು ಎಂದ ಅವರು, ಈ ವರ್ಷ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ರೂ. 3 ಕೋಟಿ ಅಂದಾಜು ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗುವುದು ಎಂಬ ಆಶಯ ವ್ಯಕ್ತಪಡಿಸಿದರು.

ಒಂದು ಸಾವಿರ ಭೂರಹಿತ ಮಹಿಳಾ ಕೃಷಿಕರಿಗೆ ಭೂಮಿಯನ್ನು ಖರೀದಿಸಿ ಭೂ ಒಡೆತನ ನೀಡಲು ಸರ್ಕಾರ ಬದ್ಧವಾಗಿದೆ. ಪರಿಶಿಷ್ಟ ವರ್ಗಗಳ ಮಕ್ಕಳಿಗೆ 15 ವಸತಿ ಶಾಲೆಗಳನ್ನು ಶ್ರೀ ಮಹರ್ಷಿ ವಾಲ್ಮೀಕಿ ಇವರ ಹೆಸರಿನಲ್ಲಿ ಪ್ರಾರಂಭಿಸಲಾಗುವುದು. ಅಲ್ಲದೆ 30 ವಸತಿ ನಿಲಯಗಳನ್ನು ಪ್ರಾರಂಭಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಕೇಂದ್ರ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಸ್ವತಂತ್ರ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು, ಐತಿಹಾಸಿಕ ಕಾರಣಗಳಿಂದಾಗಿ ಸಮಾಜದ ಕೆಳವರ್ಗದವರು ಶೋಷಣೆಗೆ ಒಳಗಾಗಿದ್ದಾರೆ. ಇವರನ್ನು ಮುಖ್ಯವಾಹಿನಿಗೆ ತರಬೇಕಾದ ಅಗತ್ಯವಿದೆ. ಕೆಳವರ್ಗದ ಜನರಲ್ಲಿ ಉತ್ಕೃಷ್ಟ ಸತ್ವ ಇದೆ. ಪರಿಶಿಷ್ಟ ವರ್ಗಗಳ ಸಮುದಾಯದ ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದರು.

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯವಹಿಸಿ ಆಶೀರ್ವದಿಸಿದರು. ಈ ವರ್ಷದ ವಾಲ್ಮೀಕಿ ಪ್ರಶಸ್ತಿಯನ್ನು ಮರಣೋತ್ತರವಾಗಿ ವಾಲ್ಮೀಕಿ ಪೀಠದ ಮೊದಲ ಜಗದ್ಗುರು ಶ್ರೀ ಪುಣ್ಯನಂದಪುರಿ ಸ್ವಾಮೀಜಿಯವರಿಗೆ ನೀಡಲಾಯಿತು. ವಾಲ್ಮೀಕಿ ಮಠದ ಈಗಿನ ಶ್ರೀಗಳಾದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮೀಜಿಯವರು ಪ್ರಶಸ್ತಿ ಸ್ವೀಕರಿಸಿದರು.

English summary
Karnataka chief minister has said caste-wise census has to be conducted in Karnataka to identify and help the poor people. He said govt will be allocating Rs. 100 cr to conduct this census. He was speaking on the occasion of Valmiki jayanti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X