ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಪ್ರೀತಿಯನ್ನು ಬಡ್ಡಿ ಸಮೇತ ತೀರಿಸುವೆ : ಮೋದಿ

|
Google Oneindia Kannada News

ದಾವಣಗೆರೆ, ಫೆ. 18 : " ನಾನು ನಿಮ್ಮ ಪ್ರೀತಿಯನ್ನು ಮರೆಯುವುದಿಲ್ಲ. ಬಡ್ಡಿ ಸಮೇತ ನಿಮ್ಮ ಪ್ರೀತಿಯನ್ನು ತೀರಿಸುತ್ತೇನೆ" ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮಂಗಳವಾರ ದಾವಣಗೆರೆಯಲ್ಲಿ ಜನರಿಗೆ ಭರವಸೆ ನೀಡಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲು ಬೆಂಬಲ ನೀಡಬೇಕು ಎಂದು ಮೋದಿ ಜನರಿಗೆ ಮನವಿ ಮಾಡಿದ್ದಾರೆ.

ನರೇಂದ್ರ ಮೋದಿ ದಾವಣಗೆರೆ ನಗರದ ಹೈಸ್ಕೂಲ್‌ ಮೈದಾನದಲ್ಲಿ ಮಂಗಳವಾರ ಭಾರತ ಗೆಲ್ಲಿಸಿ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದ್ದ ಬಿಜೆಪಿ ಮೋದಿ ಅವರ ಸಮಾವೇಶ ನಡೆಸುವ ಮೂಲಕ ಜಿಲ್ಲೆಯಲ್ಲಿ ತನ್ನ ಶಕ್ತಿಯನ್ನು ಮತ್ತೊಮ್ಮೆ ಪ್ರದರ್ಶಿಸಿತು ಮತ್ತು ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಸಂದೇಶ ಸಾರಿತು. [ದಾವಣಗೆರೆಯಲ್ಲಿ ಸೋತು ಗೆದ್ದವರು]

1 ಗಂಟೆಗೆ ಭಾರತ ಗೆಲ್ಲಿಸಿ ಸಮಾವೇಶಕ್ಕೆ ಆಗಮಿಸಿದ ನರೇಂದ್ರ ಮೋದಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ ಮುಂತಾದ ನಾಯಕರು ಆತ್ಮೀಯವಾಗಿ ಬರಮಾಡಿಕೊಂಡರು.

1.30ರ ಸುಮಾರಿಗೆ ಭಾಷಣ ಆರಂಭಿಸಿದ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವನ್ನು ಕಟು ಶಬ್ದಗಳಿಂದ ಟೀಕಿಸಿದರು. ಕಾಂಗ್ರೆಸ್ ಪಕ್ಷವನ್ನು ಬಡವರ ಮತ್ತು ರೈತರ ವಿರೋಧಿ ಎಂದು ದೂರಿದ ಮೋದಿ ಜನರು ಕಾಗ್ರೆಂಸ್ ಪಕ್ಷಕ್ಕೆ ಸರಿಯಾದ ಶಿಕ್ಷೆ ನೀಡಬೇಕು ಎಂದರು. ದೇಶವನ್ನು ಕಾಂಗ್ರೆಸ್ ಮುಕ್ತವಾಗಿಸುವ ಬಿಜೆಪಿ ಅಭಿಯಾನಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಯಡಿಯೂರಪ್ಪ ಹೊಗಳಿದ ಮೋದಿ : ಕೆಜೆಪಿಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ ಬಳಿಕ ಮೊದಲ ಬಾರಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನರೇಂದ್ರ ಮೋದಿ ಅವರರೊಂದಿಗೆ ವೇದಿಕೆ ಹಂಚಿಕೊಂಡರು. ತಮ್ಮ ಭಾಷಣದಲ್ಲಿ ಐದಾರು ಬಾರಿ ಯಡಿಯೂರಪ್ಪ ಹೆಸರು ಪ್ರಸ್ತಾಪಿಸಿದದ ಮೋದಿ, ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ್ದ ಯಡಿಯೂರಪ್ಪ ಅವರನ್ನು ಶ್ಲಾಘಿಷಿಸಿದರು. ['ಧರ್ಮಕ್ಕಿಂತ ದೇಶ ದೊಡ್ಡದು,ದೇಶಕ್ಕಾಗಿ ಮತ ನೀಡಿ']

ಮೋದಿ ಭಾಷಣದ ಮುಖ್ಯಾಂಶಗಳು

* ದಾವಣಗೆರೆಗೆ ಇದಕ್ಕೂ ಮೊದಲು ಆಗಮಿಸಿದ್ದೆ, ನಿಮ್ಮೊಂದಿಗೆ ಮಾತನಾಡಿದ್ದೇನೆ. ಆದರೆ, ಇಂತಹ ಜನಸಾಗರ ನೋಡಿರಲಿಲ್ಲ. ದಾವಣಗೆರೆಯ ಇತಿಹಾಸದಲ್ಲೇ ಇದು ಬೃಹತ್ ಸಮಾವೇಶ. ದಾವಣಗೆರೆ ಜಿಲ್ಲೆಯ ಜನರ ಪ್ರೀತಿಯನ್ನು ನಾನು ಮರೆಯುವುದಿಲ್ಲ, ದಾವಣಗೆರೆಯನ್ನು ಅಭಿವೃದ್ಧಿಪಡಿಸಿ ನಿಮ್ಮ ಪ್ರೀತಿಯನ್ನು ಉಳಿಸಿಕೊಳ್ಳುತ್ತೇನೆ.

* ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದಕ್ಷಿಣ ರಾಜ್ಯಗಳ ಪ್ರವಾಸ ಮಾಡುತ್ತಿದ್ದಾರೆ. ಆದರೆ, ಅವರಿಗೆ ಆಂಧ್ರಪ್ರದೇಶಕ್ಕೆ ಹೋಗಲು ಸಮಯ ಸಿಗುತ್ತಿಲ್ಲ. ತೆಲಂಗಾಣ ವಿಭಜನೆ ನಿರ್ಧಾರವನ್ನು ತೆಗೆದುಕೊಂಡು ಆಂಧ್ರದ ಜನರಿನ ಸಾಕಷ್ಟು ಕಷ್ಟವನ್ನು ನೀಡಿದ ಕಾಂಗ್ರೆಸ್ ಅಧಿನಾಯಕಿ, ಈಗ ಅಲ್ಲಿನ ಜನರ ಕಷ್ಟವನ್ನು ಕೇಳಲು ಏಕೆ ಪ್ರವಾಸ ಮಾಡಬಾರದು ಎಂದು ಮೋದಿ ಪ್ರಶ್ನಿಸಿದರು.

* ಕಾಂಗ್ರೆಸ್ ದೇಶವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ ಆದ್ದರಿಂದ ಅವರಿಗೆ ಜನರು ಸರಿಯಾದ ಶಿಕ್ಷೆ ನೀಡಬೇಕು. ಸಣ್ಣ ಪುಟ್ಟಯನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಬೇಡಿ, 'ಕಾಂಗ್ರೆಸ್ ಮುಕ್ತ' ಭಾರತ ನಿರ್ಮಾಣವೇ ಅವರಿಗೆ ಸರಿಯಾದ ಶಿಕ್ಷೆ ಎಂದು ಮೋದಿ ಹೇಳಿದರು.

* ಕಾಂಗ್ರೆಸ್ ಹೈಕಮಾಂಡ್ ಮೇಲೆ ಅವಲಂಬಿತವಾಗಿದೆ. ಕಾಂಗ್ರೆಸ್ ಪಕ್ಷದೊಳಗೆ ಪ್ರಜಾಪ್ರಭುತ್ವಕ್ಕೆ ಸ್ಥಳವಿಲ್ಲ ಎಂದು ಕುಟುಕಿದ ಮೋದಿ, ಪ್ರಜಾಪ್ರಭುತ್ವಕ್ಕೆ ಕುಟುಂಬವಾದ, ಜಾತಿವಾದ, ಸಂಪ್ರದಾಯವಾದ ಹಾಗೂ ಅವಕಾಶವಾದ ಮಾರಕ. ಆದರೆ, ಕಾಂಗ್ರೆಸ್ ಇವುಗಳನ್ನು ಅನುಸರಿಸುವ ಮೂಲಕ ಅಹಂಕಾರದಿಂದ ಮೆರೆಯುತ್ತಿದೆ ಎಂದು ಟೀಕಿಸಿದರು.

* ಜನಸಾಮಾನ್ಯರ ಹಿತವನ್ನು ತಿರಸ್ಕರಿಸುವ ಕಾಂಗ್ರೆಸ್ ಪಕ್ಷದ ನಾಯಕರು ಕಾಂಗ್ರೆಸ್ ಪಕ್ಷವಲ್ಲ ಚಿಂತನೆ ಎಂದು ಹೇಳುತ್ತಾರೆ. ಆದರೆ, ಅವರ ಚಿಂತನೆ ಹೇಳುತ್ತದೆ ಬಡತನ ಎಂಬುದು ಮನಸ್ಥಿತಿ ಎಂದು. ಬಡತನ ನಿರ್ಮೂಲನೆ ಮಾಡುವುದು ದೇವರ ಸೇವೆ ಇದ್ದಂತೆ ಎಂದು ಬಿಜೆಪಿ ಚಿಂತನೆ ಹೇಳುತ್ತದೆ. ಕಾಂಗ್ರೆಸ್ ಮತ್ತು ಬಿಜೆಪಿ ಚಿಂತನೆಯ ವ್ಯತ್ಯಾಸಗಳು ಜನರಿಗೆ ತಿಳಿದಿವೆ ಎಂದರು.

* ಕಾಂಗ್ರೆಸ್ ಪಕ್ಷದ ಪ್ರಧಾನ ಮಂತ್ರಿ ಹಣ ಮರದಲ್ಲಿ ಬೆಳೆಯುವುದಿಲ್ಲ ಎಂಬ ಉಡಾಫೆಯ ಉತ್ತರ ನೀಡುತ್ತಾರೆ. ರೈತರು ಕಷ್ಟಪಟ್ಟು ಬೆಳೆ ಬೆಳೆಯುವುದರಿಂದ ಹಣ ಬರುತ್ತದೆ ಎಂದು ಬಿಜೆಪಿಗೆ ತಿಳಿದಿದೆ. ಆದ್ದರಿಂದ ನಾವು ಕೃಷಿಕರಿಗೆ ಅಗತ್ಯ ಸೌಲಭ್ಯ ನೀಡಿದ್ದೇವೆ. ಬಿ.ಎಸ್.ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ದೇಶದಲ್ಲೇ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ರೈತರಿಗೆ ಸಹಾಯ ಮಾಡಿದರು ಎಂದು ಮೋದಿ ಹೇಳಿದರು.

* ಬಿಜೆಪಿಗೆ ದೇಶವೆಂದರೆ ತಾಯಿ ಇದ್ದಂತೆ, ನಾವು ದೇಶವನ್ನು ಹೇಗೆ ಉಳಿಸಬೇಕು ಎಂದು ಹಗಲು ರಾತ್ರಿ ಚಿಂತಿಸುತ್ತೇವೆ. ಕಾಂಗ್ರೆಸ್ ಪಕ್ಷದವರು ಭ್ರಷ್ಟಾಚಾರದ ಮೂಲಕ ಹಣ ಸಂಗ್ರಹಣೆ ಮಾಡಿಕೊಂಡು, ಅದನ್ನು ಹೇಗೆ ಉಳಿಸಿಕೊಳ್ಳಬೇಕು ಎಂದು ಚಿಂತಿಸುತ್ತಾರೆ.

* ಮಹಿಳೆಯರ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಕಾಳಜಿ ಇಲ್ಲ. ಆದ್ದರಿಂದ ಮಹಿಳೆ ಮೇಲೆ, ಬಾಲಕಿ ಮೇಲೆ ಅತ್ಯಾಚಾರ ನಡೆದ ಘಟನೆಗಳು ದೆಹಲಿಯಲ್ಲಿ ನಡೆಯುತ್ತದೆ. ನವದೆಹಲಿಯನ್ನು ರೇಪ್ ಕ್ಯಾಪಿಟಲ್ ಮಾಡಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ಮೋದಿ ವಾಗ್ದಾಳಿ ನಡೆಸಿದರು.

* ಅಟಲ್ ಬಿಹಾರಿ ವಾಜಪೇಯಿ ರೈತರ ಅನುಕೂಲಕ್ಕಾಗಿ ನದಿ ಜೋಡಣೆ ಯೋಜನೆಯನ್ನು ರೂಪಿಸಿದರು. ಇದರಿಂದ ರೈತರಿಗೆ ಅನುಕೂಲವಾಗುತ್ತಿತ್ತು, ಗುಜರಾತಿನಲ್ಲಿ ನಾವು ಇದನ್ನು ಮಾಡಿ ತೋರಿಸಿದೆವು. ಆದರೆ, ಕಾಂಗ್ರೆಸ್ ಅದನ್ನು ಮರೆತಿದೆ. ಕಾಂಗ್ರೆಸ್ ಪಕ್ಷದ ರೈತ ವಿರೋಧಿ ಧೋರಣೆಯಿಂದಾಗಿ ರೈತರು ಬೆಳೆದ ಬೆಳೆಗೆ ಅಗತ್ಯ ಬೆಲೆ ದೊರೆಯುತ್ತಿಲ್ಲ ಎಂದರು.

* ಕರ್ನಾಟಕದ ಯುವಕರು ನನಗೆ ಸ್ಫೂರ್ತಿ ತುಂಬಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲು ಬೆಂಬಲ ನೀಡಿ. ರಾಜ್ಯದ ಅಭಿವೃದ್ಧಿಗೆ ನಾನು ಸಹಕಾರ ನೀಡುತ್ತೇನೆ ಎಂದು ಮೋದಿ ಜನರಿಗೆ ಕರೆ ನೀಡಿದರು.

ಅಂದಹಾಗೆ ನರೇಂದ್ರ ಮೋದಿ ಫೆ.28ರಂದು ಪುನಃ ಕರ್ನಾಟಕಕ್ಕೆ ಆಗಮಿಸಲಿದ್ದು ಗುಲ್ಬರ್ಗ ಮತ್ತು ಹುಬ್ಬಳ್ಳಿಯಲ್ಲಿ ಎರಡು ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

English summary
BJP's prime ministerial candidate and Gujarat chief minister Narendra Modi address the 'Bharata Gellisi' public rally in Davanagere, Karnataka on Feb 18, Tuesday. In his speech Modi praises BS Yeddyurappa for pioneering India's first farmers' budget. Modi verbally attacked Congress in this speech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X