ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಕರ ನೇಮಕಾತಿ: ಶಿಕ್ಷಣ ಸಚಿವ ನಾಗೇಶ್‌ ಎದುರು ಮಹತ್ವದ ಬೇಡಿಕೆ ಇಟ್ಟ ಕ್ರೀಡಾ ಸಚಿವ!

|
Google Oneindia Kannada News

ಬೆಂಗಳೂರು, ಆ. 14: ಕೊರೊನಾ ಮೂರನೇ ಅಲೆ ಆತಂಕದ ಮಧ್ಯೆ ಶಾಲೆಗಳನ್ನು ಆರಂಭಿಸಲು ರಾಜ್ಯ ಶಿಕ್ಷಣ ಇಲಾಖೆ ಮುಂದಾಗಿದೆ. ಈಗಾಗಲೇ ಮೂರನೇ ಅಲೆ ಆತಂಕ ನೆರೆಯ ಕೇರಳ ರಾಜ್ಯದಲ್ಲಿ ಕಂಡು ಬಂದಿದೆ. ಜೊತೆಗೆ ಗಡಿ ಜಿಲ್ಲೆಗಳಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದೆಡೆ ಶಾಲಾ-ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ, ಇದೇ ಸರ್ಕಾರ ಮತ್ತೊಂದೆಡೆ ಆಗಸ್ಟ್ 15ರ ಬಳಿಕ ಕಠಿಣ ಮಾರ್ಗಸೂಚಿ ಜಾರಿಗೆ ತರಲು ಚಿಂತನೆ ನಡೆಸಿದೆ.

ಸ್ವಾತಂತ್ರ್ಯ ದಿನಾಚರಣೆ ನಂತರ ಕಠಿಣ ಮಾರ್ಗಸೂಚಿ ಜಾರಿಗೆ ಮಾಡುವ ಹೇಳಿಕೆಯನ್ನು ರಾಜ್ಯ ವಿಪತ್ತು ನಿರ್ವಹಣಾ ಮಂಡಳಿ ಅಧ್ಯಕ್ಷರೂ ಆಗಿರುವ ಕಂದಾಯ ಸಚಿವ ಆರ್. ಅಶೋಕ್ ಕೊಟ್ಟಿದ್ದಾರೆ. ಒಂದೆಡೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದು, ಮತ್ತೊಂದೆಡೆ ಮೂರನೇ ಅಲೆಯಲ್ಲಿ ಮಕ್ಕಳಿಗೆ ಸಂಕಷ್ಟವಿದೆ ಎಂದು ತಜ್ಞರೂ ಹೇಳಿದ್ದರೂ ಶಾಲಾಗಳನ್ನು ಆರಂಭಿಸುತ್ತಿರುವುದು ಅಚ್ಚರಿ ಮೂಡಿಸಿದೆ. ಇದೇ ಸಂದರ್ಭದಲ್ಲಿ ಕ್ರೀಡಾ ಸಚಿವ ನಾರಾಯಣಗೌಡ ಅವರು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಎದುರು ಮಹತ್ವದ ಬೇಡಿಕೆ ಇಟ್ಟಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಧನೆ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಧನೆ

ಟೋಕಿಯೋ ಒಲಿಂಪಿಕ್ ಕ್ರೀಡಾಕೂಟದಲ್ಲಿ ನಮ್ಮ ದೇಶ ಉತ್ತಮ ಸಾಧನೆ ಮಾಡಿದೆ. ಇನ್ನೂ ಹೆಚ್ಚಿನ ಸಾಧನೆ ಆಗಬೇಕೆಂದರೆ ಈಗಲೇ ಸಿದ್ಧತೆ ಆರಂಭಿಸಬೇಕು. ಬಾಲ್ಯದಲ್ಲಿಯೇ ಕ್ರೀಡೆಯಲ್ಲಿ ಆಸಕ್ತಿ ಮೂಡುವಂತಾಗಬೇಕು. ಜೊತೆಗೆ ಸೂಕ್ತ ತರಬೇತಿಯೂ ಸಿಗಬೇಕು. ಆಗ ಮಾತ್ರ ಕ್ರೀಡೆಯಲ್ಲಿ ಸಾಧನೆ ಸಾಧ್ಯ. ಅದಕ್ಕಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಕ್ರೀಡೆಗೆ ಹೆಚ್ಚಿನ ಅವಕಾಶ ನೀಡಬೇಕು. ಖಾಲಿ ಇರುವ ದೈಹಿಕ ಶಿಕ್ಷಕರ ಹುದ್ದೆ ಭರ್ತಿಯಾಗಬೇಕು. ಶಾಲೆಯಲ್ಲಿ ಪ್ರತಿ ನಿತ್ಯ ವ್ಯಾಯಾಮ, ಕ್ರೀಡೆಗೆ ಒಂದು ಗಂಟೆ ಸಮಯ ಮೀಸಲಿಡಿ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಸೌಲಭ್ಯ ಇದ್ದ ಮಾತ್ರಕ್ಕೆ ಕ್ರೀಡಾ ಸಾಧನೆ ಮಾಡಲಾಗಲ್ಲ!

ಸೌಲಭ್ಯ ಇದ್ದ ಮಾತ್ರಕ್ಕೆ ಕ್ರೀಡಾ ಸಾಧನೆ ಮಾಡಲಾಗಲ್ಲ!

ವಿದ್ಯಾರ್ಥಿ ದೆಸೆಯಲ್ಲಿಯೇ ಕ್ರೀಡೆಯ ತರಬೇತಿ ಆಗಬೇಕು. ಆಸಕ್ತಿ ಇರುವ ಸಮರ್ಥ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಮುಂದುವರೆಯುತ್ತಾರೆ. ಕ್ರೀಡಾಂಗಣ, ಕ್ರೀಡಾ ಸೌಲಭ್ಯ ಇದ್ದ ಮಾತ್ರಕ್ಕೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಆಗಲಾರದು. ಅದಕ್ಕಾಗಿ ಬುನಾದಿ ಸರಿಯಾಗಿರಬೇಕು. ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತದಲ್ಲೇ ವ್ಯಾಯಾಮ, ಕ್ರೀಡೆ ಬಗ್ಗೆ ಸೂಕ್ತ ತರಬೇತಿ ನೀಡುವ ಪ್ರಕ್ರಿಯೆ ಆರಂಭವಾಗಬೇಕು. ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ 39,308 ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇದೆ. ಇದು ಬೆಳೆವ ಸಿರಿಯನ್ನು ಮೊಳಕೆಯಲ್ಲೇ ಚಿವುಟಿದಂತೆ ಆಗುತ್ತಿದೆ. ಮುಂದಿನ ಒಲಂಪಿಕ್‌ಗೆ ನಮ್ಮ ರಾಜ್ಯದಿಂದ 100 ಕ್ರೀಡಾಪಟುಗಳನ್ನು ಕಳುಹಿಸುವ ಗುರಿ ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕ್ರೀಡಾಪಟುಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಬೇಕೆಂದರೆ ಈಗಿನಿಂದಲೇ ಸಿದ್ಧತೆ ಆಗಬೇಕು. ದೈಹಿಕ ಶಿಕ್ಷಕರ ನೇಮಕವಾಗಬೇಕು. ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಇದು ಸಹಕಾರಿಯಾಗುತ್ತದೆ. ಶಿಕ್ಷಣ ಸಚಿವರು ಕಡ್ಡಾಯವಾಗಿ ದೈಹಿಕ ಶಿಕ್ಷಕರ ನೇಮಕಕ್ಕೆ ಕ್ರಮ ತೆಗೆದುಕೊಳ್ಳಿ ಎಂದು ಪತ್ರದಲ್ಲಿ ಕೆ.ಸಿ. ನಾರಾಯಣಗೌಡ ಮನವಿ ಮಾಡಿದ್ದಾರೆ.

ಹೋರಾಟದ ಮನೋಭಾವ, ಸೋಲನ್ನು ಎದುರಿಸುವ ಶಕ್ತಿ

ಹೋರಾಟದ ಮನೋಭಾವ, ಸೋಲನ್ನು ಎದುರಿಸುವ ಶಕ್ತಿ

ಕೇವಲ ಕ್ರೀಡಾಪಟುವಾಗುವುದಕ್ಕೆ ಮಾತ್ರವಲ್ಲ, ನಮ್ಮ ಜೀವನವನ್ನು ಸುಂದರವಾಗಿ ರೂಪಿಸುವಲ್ಲಿ ವ್ಯಾಯಾಮ ಮತ್ತು ಕ್ರೀಡೆಗಳು ಅತ್ಯಂತ ಮಹತ್ವ ಪಾತ್ರ ವಹಿಸುತ್ತವೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ವ್ಯಾಯಾಮ ಮತ್ತು ಕ್ರೀಡೆಗಳು ಸುಲಭವಾದ ಮಾರ್ಗಗಳು. ಕ್ರೀಡೆ ಮತ್ತು ವ್ಯಾಯಾಮ ಸ್ಪರ್ಧಾತ್ಮಕ ಭಾವನೆ, ಸ್ನೇಹಪರ ಭಾವನೆ, ಶಿಸ್ತು, ಆತ್ಮಸ್ಥೈರ್ಯ, ಕೌಶಲ್ಯತೆಯನ್ನು ಮೂಡಿಸಿ ಶಾರೀರಿಕ ಸಂಪತ್ತನ್ನು ಹಾಗೂ ಬೌದ್ದಿಕ ಸಾಮಥ್ರ್ಯವನ್ನು ವೃದ್ಧಿಸುತ್ತದೆ. ಕ್ರೀಡೆಯು ಮನರಂಜನೆ ನೀಡುವುದರೊಂದಿಗೆ ಪ್ರೀತಿ, ಸಹಕಾರ, ಸಹಬಾಳ್ವೆ, ದೇಶಪ್ರೇಮದ ಭಾವೈಕ್ಯತೆಯನ್ನು ಬೆಳೆಸುತ್ತದೆ.


ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ಶಾರೀರಿಕ ಬೆಳವಣಿಗೆಯೊಂದಿಗೆ ಆರೋಗ್ಯದ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಧ್ಯ. ದೈಹಿಕ ಆರೋಗ್ಯ, ವ್ಯಕ್ತಿತ್ವ ನಿರ್ಮಾಣ ಮತ್ತು ಬೌದ್ಧಿಕ ಬೆಳವಣಿಗೆಯನ್ನು ಶಾರೀರಿಕ ಚಟುವಟಿಕೆಗಳ ಮೂಲಕ ಸಾಧಿಸುವುದು ದೈಹಿಕ ಶಿಕ್ಷಣದ ಮುಖ್ಯ ಉದ್ದೇಶ. ದೈಹಿಕ ಶಿಕ್ಷಣದಿಂದ ನಾಯಕತ್ವ, ಹೋರಾಟ ಮನೋಭಾವ, ಸೋಲನ್ನು ಎದುರಿಸುವ ಶಕ್ತಿ, ಮುಂತಾದ ಗುಣಗಳು ಬೆಳೆಯುತ್ತವೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮಗಳು ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆಗಳು ಕೂಡ ಅಷ್ಟೇ ಮುಖ್ಯ ಎಂದು ಕ್ರೀಡಾ ಸಚಿವ ನಾರಾಯಣಗೌಡ ವಿವರಿಸಿದ್ದಾರೆ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಉಲ್ಲೇಖ!

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಉಲ್ಲೇಖ!

ಈ ಹಿಂದೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪ್ರತಿನಿತ್ಯ ಒಂದು ಗಂಟೆ ಅವಧಿ ವಿದ್ಯಾರ್ಥಿಗಳ ದೈಹಿಕ ಶಿಕ್ಷಣಕ್ಕಾಗಿ ಮೀಸಲಿಡಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಪದ್ಧತಿಯನ್ನು ಕೈಬಿಟ್ಟಿರುವುದು, ಕ್ರಮೇಣವಾಗಿ ಕಡಿಮೆ ಮಾಡುತ್ತಿರುವುದು ವಿಷಾದದ ಸಂಗತಿ. ವಿದ್ಯಾರ್ಥಿಗಳ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಸಹ ಮುಖ್ಯವಾಗಿರುವುದರಿಂದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪ್ರತಿನಿತ್ಯ ಒಂದು ಗಂಟೆ ಅವಧಿಯನ್ನು ದೈಹಿಕ ಶಿಕ್ಷಣಕ್ಕಾಗಿ ಮೀಸಲಿಡುವುದು ಅತ್ಯವಶ್ಯಕವಾಗಿದೆ. ಇದನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಸಹ ಉಲ್ಲೇಖಿಸಲಾಗಿದೆ.

ಆದುದರಿಂದ, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಪ್ರತಿನಿತ್ಯ ಕನಿಷ್ಠ ಒಂದು ಗಂಟೆ ಅವಧಿಯನ್ನು ವಿದ್ಯಾರ್ಥಿಗಳ ದೈಹಿಕ ಶಿಕ್ಷಣಕ್ಕಾಗಿ ಮೀಸಲಿಡುವಂತೆ ಸೂಚಿಸುವಂತೆ ಶಿಕ್ಷಣ ಸಚಿವರಿಗೆ ಕ್ರೀಡಾ ಸಚಿವ ಡಾ. ನಾರಾಯಣಗೌಡ ಪತ್ರ ಬರೆದು ಮನವಿ ಮಾಡಿದ್ದಾರೆ. ಸಂಬಂಧಪಟ್ಟವರಿಗೆಲ್ಲಾ ಕಟ್ಟುನಿಟ್ಟಾಗಿ ನಿರ್ದೇಶನಗಳನ್ನು ನೀಡುವಂತೆ ಕೋರಿದ್ದಾರೆ. ಖಾಲಿ ಇರುವ ದೈಹಿಕ ಶಿಕ್ಷಕ ಹುದ್ದೆಗಳನ್ನು ಆದ್ಯತೆಯ ಮೇಲೆ ಶೀಘ್ರವಾಗಿ ಭರ್ತಿ ಮಾಡಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಲು ಅನುಕೂಲ ಕಲ್ಪಿಸುವಂತೆಯೂ ಪತ್ರದಲ್ಲಿ ಮನವಿ ಮಾಡಿದ್ದಾರೆ.

English summary
Sports Minister Narayana Gowda has made a significant demand regarding appointment of teachers in a letter to Education Minister B.C. Nagesh. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X