ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸವಣೂರಲ್ಲಿ ಸತ್ಯಾತ್ಮತೀರ್ಥರಿಂದ ನೀರು ತುಂಬುವ ಹಬ್ಬ

By ಚಂದ್ರಶೇಖರ ಆರ್, ಸವಣೂರು
|
Google Oneindia Kannada News

ಸವಣೂರ, ಅ. 23 : ನಗರದ ಶ್ರೀ ಸತ್ಯಬೋಧ ಸ್ವಾಮಿಗಳ ಮೂಲವೃಂದಾವನ ಸನ್ನಿಧಿಯಲ್ಲಿ, ದೀಪಾವಳಿಯ ನರಕಚತುರ್ದಶಿ ಹಬ್ಬದ ಆಚರಣೆಯನ್ನು ಶ್ರೀಮದ್ ಉತ್ತರಾಧಿಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರ ದಿವ್ಯ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಬುಧವಾರ ಆಚರಿಸಲಾಯಿತು.

ಮಂಗಳವಾರ ಸಂಜೆ ಸವಣೂರಿನ ಶ್ರೀಮಠಕ್ಕೆ ಆಗಮಿಸಿದ ಸತ್ಯಾತ್ಮತೀರ್ಥರಿಗೆ ಪೂರ್ಣಕುಂಭ ಕಲಶಗಳ ಭವ್ಯ ಸ್ವಾಗತ ನೀಡುವುದರೊಂದಿಗೆ ಆರಂಭಗೊಂಡ ಹಬ್ಬದ ಆಚರಣೆ, ಬುಧವಾರ ದಿನಪೂರ್ತಿ ಹತ್ತಾರು ವಿಶೇಷ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.

ಶ್ರೀಮಠದ ಪ್ರಾಂಗಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ. ಅಲಂಕೃತವಾದ ಪೂರ್ಣ ಕುಂಭಕಲಶಗಳಿಗೆ ಪೂಜೆ ಸಲ್ಲಿಸಿದ ಸತ್ಯಾತ್ಮತೀರ್ಥರು, ನೀರು ತುಂಬುವ ಹಬ್ಬದ ಆಚರಣೆ ಕೈಗೊಂಡರು. ಅಹೋಬಲ ಲಕ್ಷ್ಮಿ ನೃಸಿಂಹ ದೇವರ ದರ್ಶನ ಪಡೆದುಕೊಂಡರು.

Naraka Chaturdashi celebration by Satyatma Teertha swamiji in Savanur

ಮರುದಿನ ಬುಧವಾರದಂದು ಗಂಗಾ ಸಾನಿಧ್ಯವಿರುವ ವಿಷ್ಣುತೀರ್ಥ ಪುಷ್ಕರಣಿಯಲ್ಲಿ ಪೂರ್ವ ಪ್ರಾತಃಕಾಲದಲ್ಲಿ ಕಾರ್ತಿಕ ಸ್ನಾನ ಹಾಗೂ ದಂಡೋದಕದ ವಿಧಿ ವಿಧಾನಗಳನ್ನು ಆಚರಿಸಿದ ಶ್ರೀಗಳು, ನೆರೆದ ಭಕ್ತರಿಗೆ ದಂಡೋದಕದ ಪ್ರೋಕ್ಷಣೆ ಮಾಡಿದರು.

ಶ್ರೀಮಠದಲ್ಲಿ ಸಂಸ್ಥಾನದ ಆರಾಧ್ಯಮೂರ್ತಿ ದಿಗ್ವಿಜಯ ಮೂಲರಾಮದೇವರಿಗೆ ತೈಲಾಭ್ಯಂಗ, ಆರತಿಯ ಸೇವೆ ಸಲ್ಲಿಸಿದ ಶ್ರೀಗಳು, ಶ್ರೀ ಸತ್ಯಬೋಧರ ಮೂಲವೃಂದಾವನ ಸನ್ನಿಧಿಗೂ ತೈಲದ ಲೇಪನ ಮಾಡಿದರು.

ಬಳಿಕ ಸಂಪ್ರದಾಯದ ಪ್ರಕಾರ ಗುರುಪಾದುಕಾ ಪೂಜೆ, ತುಳಸಿ ಪೂಜೆ, ಗೋಪೂಜೆಯನ್ನು ಕೈಗೊಂಡರು. ಸುಮಂಗಲಿ ಸ್ತ್ರೀಯರಿಂದ ಗುರುಗಳಿಗೆ ಆರತಿಯ ಆಚರಣೆ ನೆರವೇರಿತು. ಬಳಿಕ ಸಮಸ್ತ ಭಕ್ತವೃಂದಕ್ಕೆ ತೈಲದ ವಿತರಣೆ, ಆರತಿ, ಶ್ರೀಗಳ ಪಾದಪೂಜೆ, ಶ್ರೀ ಸುಧಾಪಾಠ, ಮುದ್ರಾಧಾರಣೆಯನ್ನು ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಸಿಡಿ ಮದ್ದುಗಳನ್ನು ಸಿಡಿಸಿದ ಶ್ರೀಮಠದ ಶಿಷ್ಯವೃಂದ ಶ್ರೀಕೃಷ್ಣನ ಸ್ಮರಣೆಯೊಂದಿಗೆ ನರಕಾಸುರನ ವಧೆಯ ಸಂಭ್ರಮಾಚರಣೆ ಮಾಡಿದರು.

ಶ್ರೀಮಠದಲ್ಲಿ ಆರಂಭಿಸಲಾಗಿರುವ 'ಶ್ರೀಸತ್ಯಾತ್ಮ ಸದ್ಗ್ರಂಥಾಲಯ'ದ ಉದ್ಘಾನೆಯನ್ನು ನೆರವೇರಿಸಿದ ಶ್ರೀಗಳು, ಮಠದ ಆವರಣದಲ್ಲಿ ಅಳವಡಿಸಲಾಗಿರುವ ದೇವಾನುದೇವತೆಗಳ ಭಾವಚಿತ್ರಗಳ ಅನಾವರಣ ಕೈಗೊಂಡರು. ಬಳಿಕ ಶ್ರೀ ದಿಗ್ವಿಜಯ ಮೂಲರಾಮದೇವರ ಮಹಾಪೂಜೆ, ತೀರ್ಥಪ್ರಸಾದ, ಫಲಮಂತ್ರಾಕ್ಷತೆ ವಿತರಣೆಗಳು ನೆರವೇರಿದವು.

ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಮಠದ ಪೂಜಾ ಪರ್ಯಾಯಸ್ಥರಾದ ಸತ್ಯಬೋಧಾಚಾರ್ಯ ರಾಯಚೂರ ನಿರ್ವಹಿಸಿದರು. ಪಾಂಡುರಂಗಾಚಾರ್ಯ ರಾಯಚೂರ, ರಂಗಾಚಾರ್ಯ ರಾಯಚೂರ, ಗುರುರಾಜಾಚಾರ್ಯ ರಾಯಚೂರ, ಪಾಂಡುರಂಗಿ ಆಚಾರ್ಯರು ಸೇರಿದಂತೆ ಹಲವಾರು ಪ್ರಮುಖರು, ಶ್ರೀಮಠದ ದಿವಾನರು, ಶಿಷ್ಯ ವರ್ಗ, ಭಕ್ತವೃಂದ ಹಾಗೂ ಸವಣೂರ ತಾಲೂಕಾ ವಿಪ್ರ ಸಮಾಜದ ಪದಾಧಿಕಾರಿಗಳು, ಸದಸ್ಯರು, ಭಜನಾ ಮಂಡಳಿಯ ಸದಸ್ಯರು ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡರು.

English summary
Naraka Chaturdashi (Deepavali) celebration by Satyatma Teertha swamiji in Savanur Uttaradhi math, in Haveri district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X