
ಮಲ್ಲಿಕಾರ್ಜುನ ಖರ್ಗೆ ದೇಶದ ಕ್ಷಮೆ ಕೇಳಲು ಎನ್.ರವಿಕುಮಾರ್ ಆಗ್ರಹ
ಬೆಂಗಳೂರು, ನವೆಂಬರ್ 30: ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಗಳು ಮತ್ತು ಜನಮೆಚ್ಚುಗೆಯನ್ನು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿ ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಹೊಟ್ಟೆ ಕಿವುಚಿಕೊಳ್ಳುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು ಆಕ್ಷೇಪಿಸಿದರು.
ಪ್ರಧಾನಿ ಮೋದಿ ತಮ್ಮ ಕೆಲಸವನ್ನು ಮರೆತು, ಕಾರ್ಪೊರೇಷನ್ ಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲೂ ಪ್ರಚಾರ ಮಾಡುತ್ತಾರೆ ಮತ್ತು ತಮ್ಮ ಮುಖ ನೋಡಿ ಮತ ಹಾಕಿ ಎಂದು ಹೇಳುತ್ತೀರಾ. ಆದರೆ ನಾವು ನಿಮ್ಮ ಮುಖವನ್ನು ಎಷ್ಟು ಬಾರಿ ನೋಡಬೇಕು? ನಿಮಗೆ ಎಷ್ಟು ರೂಪಗಳಿವೆ? ನಿಮಗೆ ರಾವಣನಂತೆ 100 ತಲೆಗಳಿವೆಯೇ? ಎಂದು ಮೋದಿ ವಿರುದ್ದ ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ ನಡೆಸಿದ್ದರು, ಈ ಕುರಿತಾಗಿ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಹಲವು ಬಾರಿ ಜನಪ್ರತಿನಿಧಿಯಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಒಬ್ಬ ಮುತ್ಸದ್ದಿಯಂತೆ ಹೇಳಿಕೆ ಕೊಡಬೇಕಿತ್ತು. ಇಡೀ ಜಗತ್ತೇ ನರೇಂದ್ರ ಮೋದಿಯವರತ್ತ ನೋಡುವುದನ್ನು ಸಹಿಸಲಾಗದ ಕಾಂಗ್ರೆಸ್ ಪಕ್ಷವು, ರಾವಣ ಶಬ್ದ ಬಳಸಿದ್ದು ಆ ಪಕ್ಷಕ್ಕೇ ನಾಚಿಕೆಗೇಡಿನ ಸಂಗತಿ. ಮಲ್ಲಿಕಾರ್ಜುನ ಖರ್ಗೆಯವರು ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ನರೇಂದ್ರ ಮೋದಿ ಅವರ ವಿಶ್ವ ಮಟ್ಟದ ಮತ್ತು ದೇಶಾದ್ಯಂತ ಇರುವ ಜನಪ್ರಿಯತೆಯನ್ನು ಕಾಂಗ್ರೆಸ್ ಮುಖಂಡರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಟೀಕಿಸಿದರು. ನರೇಂದ್ರ ಮೋದಿಜಿ ಅವರ ನಾಯಕತ್ವದಿಂದಾಗಿ ವೇಗವಾಗಿ ಏನೂ ಸಮಸ್ಯೆಗಳಿಲ್ಲದೆ ರಾಮ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಂಥ ಒಬ್ಬ ವ್ಯಕ್ತಿಯನ್ನು ರಾವಣ ಎಂದು ಕರೆದಿರುವುದು ಮಲ್ಲಿಕಾರ್ಜುನ ಖರ್ಗೆಯವರ ನಾಚಿಗೆಗೇಡಿತನ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದೆಹಲಿಗೆ ತೆರಳಿದ್ದಾರೆ. ಕರ್ನಾಟಕದ 800ಕ್ಕೂ ಹೆಚ್ಚು ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು ದೊಡ್ಡ ವಿವಾದಕ್ಕೆ ಸರಿಯಾದ ವಾದವನ್ನು ಸುಪ್ರೀಂ ಕೋರ್ಟಿನಲ್ಲಿ ಮಂಡಿಸುವ ಸಂಬಂಧ ಅವರು ತೆರಳಿದ್ದಾರೆ. ಮೋದಿಜಿ, ನಡ್ಡಾಜಿ ಅವರ ಭೇಟಿ ಈ ಪ್ರವಾಸದ ಉದ್ದೇಶವಲ್ಲ ಎಂದು ಸ್ಪಷ್ಟಪಡಿಸಿದರು.
ಬೊಮ್ಮಾಯಿಯವರ ಭೇಟಿ ಬಗ್ಗೆ ಟೀಕಿಸುವ ಕಾಂಗ್ರೆಸ್ಸಿನ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ತಾವು ಸೋನಿಯಾ ಅವರ ಮನೆ ಮುಂದೆ ಕಾಯುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳಬೇಕು. ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್, ದೆಹಲಿಗೆ ಹೋಗಿ ರಾಹುಲ್ ಗಾಂಧಿ- ಸೋನಿಯಾ ಗಾಂಧಿಯವರ ಭೇಟಿ ಸಿಗದೆ ವಾಪಸಾದುದನ್ನು ನೆನಪಿಸಲೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷವು 100 ವರ್ಷಕ್ಕಿಂತ ಹೆಚ್ಚು ಹಳೆಯದು. ಆ ಪಕ್ಷದ ನಾಯಕರು ಮತ್ತು ಪಾರ್ಟಿಗೆ ಇನ್ನಾದರೂ ಮುತ್ಸದ್ಧಿತನ ಇಲ್ಲ; ಇದು ಮೂರ್ಖತನದ ಪರಮಾವಧಿ ಎಂದು ತಿಳಿಸಿದರು. ರಾಜ್ಯ ಮತ್ತು ದೇಶದಲ್ಲಿ ಭಯೋತ್ಪಾದಕರು, ರೌಡಿಗಳು, ನಕ್ಸಲಿಸಂ ಮತ್ತು ಉಗ್ರರನ್ನು ಸದೆಬಡಿದ ಪಕ್ಷ ಮತ್ತು ಸರಕಾರ ಬಿಜೆಪಿಯದು. ಕಾಂಗ್ರೆಸ್ ಯುವ ಮೋರ್ಚಾ ಅಧ್ಯಕ್ಷರು, ರಾಜ್ಯದ ಅಧ್ಯಕ್ಷರು ಹೇಗಿದ್ದಾರೆ? ಕನ್ಹಯ್ಯಕುಮಾರ್ ಹೇಗಿದ್ದಾರೆ? ಪಾಕಿಸ್ತಾನಕ್ಕೆ ಜೈ ಎಂದವರನ್ನು ಇವರು ಹೇಗೆ ಸಮರ್ಥನೆ ಮಾಡಿಕೊಂಡರು? ಎಂದು ಕೇಳಿದ ಅವರು, ಕಾಂಗ್ರೆಸ್ ಚರಿತ್ರೆಯನ್ನು ನಾವು ತೆರೆದಿಡುತ್ತೇವೆ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಪಕ್ಷ ಅತ್ಯಂತ ದುರವಸ್ಥೆಯಲ್ಲಿದೆ. ಅವರು ಹೆಚ್ಚು ಮಾತನಾಡದೇ ಇರುವುದು ಅವರ ಪಕ್ಷದ ದೃಷ್ಟಿಯಿಂದ ಒಳ್ಳೆಯದು ಎಂದು ಸಲಹೆ ನೀಡಿದರು. ಫೈಟರ್ ರವಿ ಬಿಜೆಪಿ ಸೇರಿದ್ದಕ್ಕೆ ಕಾಂಗ್ರೆಸ್ ಟೀಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಗೂಂಡಾ ಸಂಸ್ಕೃತಿ ಇರುವವರ ದೊಡ್ಡ ಪಟ್ಟಿ ಇದೆ; ಅದನ್ನು ಬಿಡುಗಡೆ ಮಾಡುತ್ತೇವೆ ಎಂದು ಉತ್ತರಿಸಿದರು. ಕಾಂಗ್ರೆಸ್ ಪಕ್ಷ ಮುಳುಗುವ ಹಡಗಾಗಿದೆ. ಬಿಜೆಪಿ ಬೆಳವಣಿಗೆಯನ್ನು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.