• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಧಾನಸಭಾ ಚುನಾವಣೆ: ಮೈಸೂರಿನ 11 ಕ್ಷೇತ್ರಗಳಲ್ಲಿ ಗೆಲ್ಲುವವರ್ಯಾರು..?

By ಯಶಸ್ವಿನಿ ಎಂ.ಕೆ
|

ಮೈಸೂರು, ಮಾರ್ಚ್ 2 : ರಾಜ್ಯದ ಅತೀ ದೊಡ್ಡ ಹಾಗೂ ಎರಡನೇ ಅಧಿಕಾರ ಶಕ್ತಿ ಕೇಂದ್ರವಾಗಿರುವ ಹಳೆಯ ಮೈಸೂರು ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ, ಮತ್ತೊಮ್ಮೆ ಸದ್ದು ಮಾಡಿದೆ. ಹಳೆಯ ಮೈಸೂರು ಪ್ರಾಂತ್ಯದಲ್ಲಿ ತಮ್ಮದೇ ಹಿಡಿತ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಜೆಡಿಎಸ್ - ಬಿಜೆಪಿ ಮಂಕಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆದ್ದರೆ ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ ಒಂದು ಶಾಸಕ ಸ್ಥಾನವನ್ನೂ ಗೆಲ್ಲದಿದ್ದರೂ ಲೋಕಸಭೆ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಗೆಲುವು ಸಾಧಿಸಿದ್ದರು. ಈಗ ಇಲ್ಲಿನ ರಾಜಕೀಯ ವಾತಾವರಣ ಸಾಕಷ್ಟು ಬದಲಾಗಿದೆ.

ಸಿದ್ದುವನ್ನು ಸೋಲಿಸಲು ಜೆಡಿಎಸ್ ಬಳಿಯಿದೆ ರೇವಣಾಸ್ತ್ರ!

ಸಿದ್ದರಾಮಯ್ಯ ಅವರೊಂದಿಗೆ ಜೊತೆಗಿದ್ದ ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಬಿಜೆಪಿಯೊಡನೆ ಹಾಗೂ ಮಾಜಿ ಸಂಸದ ಅಡಗೂರು ಹೆಚ್. ವಿಶ್ವನಾಥ್ ಜೆಡಿಎಸ್ ನಲ್ಲಿದ್ದಾರೆ. ಈಗ ಸಿದ್ದರಾಮಯ್ಯನವರೊಂದಿಗೆ ಪರಮಾಪ್ತ ಎಚ್ ಸಿ ಮಹದೇವಪ್ಪ ಮಾತ್ರ ಉಳಿದಿದ್ದು, ಮತ್ತೊಬ್ಬ ಪರಮಾಪ್ತ ಮಹದೇವಪ್ರಸಾದ್ ಅಕಾಲಿಕ ಮರಣ ಹೊಂದಿರುವುದರಿಂದ ವೀರಶೈವ ಸಮುದಾಯದ ಮುಖಂಡನ ಕೊರತೆ ಎದುರಾಗಿದೆ.

ಶಿವಮೊಗ್ಗ ಜಿಲ್ಲೆ ಬಿಜೆಪಿ ಅಭ್ಯರ್ಥಿಗಳು ಅಂತಿಮ, ಯಾರಿಗೆ ಎಲ್ಲಿ ಟಿಕೆಟ್?

ಒಟ್ಟಾರೆ ಮೈಸೂರು ಜಿಲ್ಲೆಯಲ್ಲಿ ಒಟ್ಟು 11 ವಿಧಾನಸಭಾ ಕ್ಷೇತ್ರಗಳಿದ್ದು, ಆರು ಮಾತ್ರ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿವೆ. ಇನ್ನುಳಿದ ಐದರಲ್ಲಿ ನಾಲ್ಕು (ವರುಣ, ನಂಜನಗೂಡು, ತಿ.ನರಸೀಪುರ, ಎಚ್.ಡಿ.ಕೋಟೆ) ಚಾಮರಾಜನಗರಕ್ಕೆ, ಕೆ.ಆರ್.ನಗರ- ಮಂಡ್ಯ ಲೋಕಸಭಾ ವ್ಯಾಪ್ತಿಗೊಳಪಡುತ್ತವೆ.

ಮೈಸೂರು ಲೋಕಸಭೆ ವ್ಯಾಪ್ತಿಯಲ್ಲಿ ಒಕ್ಕಲಿಗ, ಕುರುಬ, ಲಿಂಗಾಯತ, ದಲಿತ ವರ್ಗದ ಮತದಾರರು ಹೆಚ್ಚಾಗಿದ್ದಾರೆ. ಉಳಿದಂತೆ ನಾಯಕ, ಉಪ್ಪಾರ, ಅಲ್ಪಸಂಖ್ಯಾತ ಮತಗಳು ಸೋಲು - ಗೆಲುವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಇಲ್ಲಿದೆ ಒಟ್ಟಾರೆ 11 ವಿಧಾನಸಭಾ ಕ್ಷೇತ್ರದ ಸಂಪೂರ್ಣ ಮಾಹಿತಿ.

ಚಾಮರಾಜ ಕ್ಷೇತ್ರ

ಚಾಮರಾಜ ಕ್ಷೇತ್ರ

ಒಕ್ಕಲಿಗರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಕಾರ್ಮಿಕರು ಹಾಗೂ ವಿದ್ಯಾವಂತರೇ ಹೆಚ್ಚು. ಸದ್ಯ ಇದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಂಕರಲಿಂಗೇಗೌಡ ಸತತ ಮೂರು ಬಾರಿ ಆಯ್ಕೆಯಾಗಿದ್ದವರು. ನಂತರ ಜೆಡಿಎಸ್ ಸೇರ್ಪಡೆಗೊಂಡಿದ್ದ ಅವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎದುರು ಸೋಲುಂಡಿದ್ದರು. ಈಗ ಬಿಜೆಪಿಯಲ್ಲೇ ಉಳಿದಿರುವ ಅವರ ಪುತ್ರ ನಗರ ಪಾಲಿಕೆ ಸದಸ್ಯ ನಂದೀಶ್ ಪ್ರೀತಂ, ಬಿಜೆಪಿ ನಗರಾಧ್ಯಕ್ಷ ಮಂಜುನಾಥ್ , ಮುಡಾ ಮಾಜಿ ಅಧ್ಯಕ್ಷ ನಾಗೇಂದ್ರ , ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಪ್ರಸನ್ನ ಇಲ್ಲಿನ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇದು ಒಂದೆಡೆಯಾದರೇ ದೇವೇಗೌಡರ ನೆಂಟರಾಗಿರುವ ವಿಶ್ರಾಂತ ಕುಲಪತಿ ಕೆ.ಎಸ್ ರಂಗಪ್ಪ ಜೆಡಿಎಸ್ ಅಭ್ಯರ್ಥಿ ಎಂದು ಈಗಾಗಲೇ ಘೋಷಿಸಲಾಗಿದೆ.

ನರಸಿಂಹರಾಜ ಕ್ಷೇತ್ರ

ನರಸಿಂಹರಾಜ ಕ್ಷೇತ್ರ

ಅಲ್ಪಸಂಖ್ಯಾತ, ಮುಸ್ಲಿಂ ಸಮುದಾಯದ ಮತಗಳೇ ನಿರ್ಣಾಯಕವಾಗಿರುವ ನರಸಿಂಹರಾಜ ಕ್ಷೇತ್ರ ಹಿಂದಿನಿಂದಲೂ ಕಾಂಗ್ರೆಸ್ ಗೆ ಮನ್ನಣೆ ನೀಡುತ್ತಲೇ ಬಂದಿದೆ. ಸಚಿವ ತನ್ವೀರ್ ಸೇಠ್ ಅವರ ಕುಟುಂಬವು ಕ್ಷೇತ್ರ ರಚನೆಯಾದಾಗಿನಿಂದ ಜಯ ಗಳಿಸುತ್ತಾ ಬಂದಿದೆ. ಒಮ್ಮೆ ಮಾತ್ರ ಬಿಜೆಪಿಯ ಮಾರುತಿರಾವ್ ಪವಾರ್ ಚುನಾಯಿತರಾಗಿದ್ದರು. ಮುಂಬರುವ ಚುನಾವಣೆಯಲ್ಲೂ ಸಹ ತನ್ವೀರ್ ಸೇಠ್ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ . ಜೆಡಿಎಸ್ ನಿಂದ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅವರ ಸಹೋದರ ಸಂದೇಶ್ ಸ್ವಾಮಿ ಅಭ್ಯರ್ಥಿಯಾಗಲಿದ್ದಾರೆ . ಬಿಜೆಪಿ ಅಭ್ಯರ್ಥಿಯಾಗಲು ಸಹ ತೀವ್ರ ಪೈಪೋಟಿ ನಡೆದಿದ್ದು , ಮಾರುತಿರಾವ್ ಪವಾರ್ , ನಟರಾಜ್ , ರಾಜೇಂದ್ರ, ಗಿರಿಧರ್ , ಅನಿಲ್ , ಥಾಮಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಕೃಷ್ಣರಾಜ ಕ್ಷೇತ್ರ

ಕೃಷ್ಣರಾಜ ಕ್ಷೇತ್ರ

ಸಿದ್ದರಾಮಯ್ಯ ಅವರ ಆಪ್ತ ಶಾಸಕರಾಗಿರುವ ಎಂ. ಕೆ ಸೋಮಶೇಖರ್ ಕಳೆದ ಚುನಾವಣೆಯಲ್ಲಿ ಇಲ್ಲಿ ಗೆಲುವು ಕಂಡಿದ್ದರು. ಈ ಬಾರಿ ಅವರೇ ಕಾಂಗ್ರೆಸ್ ಅಭ್ಯರ್ಥಿ . ಬಿಜೆಪಿಯಿಂದ ಎರಡು ಬಾರಿ ಶಾಸಕರಾಗಿದ್ದ ರಾಮದಾಸ್ , ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದರು.

ಅವರಿಗೆ ಟಿಕೆಟ್ ತಪ್ಪಿಸಬೇಕು ಎನ್ನುವ ಒಂದು ಗುಂಪು ಪ್ರಬಲ ಪೈಪೋಟಿ ನಡೆಸಿದೆ. ಬಿಜೆಪಿ ಟಿಕೆಟ್ ಗಾಗಿ ಇಲ್ಲಿನ ಪ್ರಧಾನ ಕಾರ್ಯದರ್ಶಿ ಎಚ್. ವಿ ರಾಜೀವ್, ರಾಜ್ಯ ಕಾರ್ಯಕಾರಿ ಸಮಿತಿಯ ಶ್ರೀವತ್ಸ, ವಿಭಾಗೀಯ ಸಹ ಪ್ರಭಾರಿ ಫಣೀಶ್, ಎಸ್ಎಂಪಿ ಫೌಂಡೇಷನ್ ಶಿವಪ್ರಕಾಶ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ನಟಿ ಮಾಳವಿಕಾ ಹಾಗೂ ರಾಜ್ಯ ಯುವ ಮೋರ್ಚಾದ ತೇಜಸ್ವಿ ಸೂರ್ಯ ಹೆಸರು ಇಲ್ಲಿ ಕೇಳಿ ಬರುತ್ತಿದೆ. ಜೆಡಿಎಸ್ ನಿಂದ ನಗರ ಪಾಲಿಕೆ ಸದಸ್ಯ ಕೆ. ವಿ ಮಲ್ಲೇಶ್ ಅಭ್ಯರ್ಥಿ ಎಂದು ಈಗಾಗಲೇ ಘೋಷಿಸಲಾಗಿದೆ. ಕೆಪಿಜೆಪಿಯ ರೂಪಾ ಅಯ್ಯರ್ ಇಲ್ಲಿ ಕಣಕ್ಕಿಳಿಯಲಿದ್ದಾರೆ.

ವರುಣಾ ಕ್ಷೇತ್ರ

ವರುಣಾ ಕ್ಷೇತ್ರ

ಈ ಹಿಂದೆ ವರುಣದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಎರಡು ಬಾರಿಯೂ ಗೆಲುವು ಸಾಧಿಸಿ ರಾಜ್ಯದ ಚುಕ್ಕಾಣಿ ಹಿಡಿದಿದ್ದರು. ಸದ್ಯ ಈ ಕ್ಷೇತ್ರವನ್ನು ಪುತ್ರ ಡಾ.ಯತೀಂದ್ರಗೆ ಬಿಟ್ಟುಕೊಟ್ಟು ಅವರನ್ನು ರಾಜಕೀಯಕ್ಕೆ ಕರೆತರುವ ಸಿದ್ಧತೆ ನಡೆಸಿದ್ದು, ತಾವು ರಾಜಕೀಯ ಪುನರ್ಜನ್ಮ ಪಡೆದ ಚಾಮುಂಡೇಶ್ವರಿಗೆ ಹೋಗುವುದಾಗಿ ಘೋಷಿಸಿಕೊಂಡಿದ್ದಾರೆ.

ಯತೀಂದ್ರಗೆ ಸೆಡ್ಡು ಹೊಡೆಯಲು ಬಿಜೆಪಿಯಿಂದ ಪೈಪೋಟಿ ನೀಡುತ್ತಲೇ ಬಂದಿರುವ ಮಾಜಿ ಸಿಎಂ ಬಿಎಸ್​ವೈ ಆಪ್ತ ಕಾ.ಪು.ಸಿದ್ದಲಿಂಗಸ್ವಾಮಿ, ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಮಹದೇವ ಬಿದರಿ, ಬಿ.ಎಸ್.ಯಡಿಯೂರಪ್ಪರ ಅಕ್ಕನ ಮಗ ಅಶೋಕ್ ಹೆಸರು ಕೇಳಿಬರುತ್ತಿವೆ. ಜೆಡಿಎಸ್​ನಿಂದ ಈಗಾಗಲೇ ಅಭಿಷೇಕ್ ಗೆ ಟಿಕೆಟ್ ನೀಡಲಾಗಿದ್ದು, ತಳಮಟ್ಟದ ರಾಜ್ಯಕಾರಣ ತಿಳಿಯದ ಅಭಿಷೇಕ್ ಕುರಿತು ಕ್ಷೇತ್ರದಲ್ಲಿ ಅಷ್ಟೊಂದು ವರ್ಚಸ್ಸು ಇಲ್ಲ ಎಂದು ಕ್ಷೇತ್ರದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.

ತಿ. ನರಸೀಪುರ ಕ್ಷೇತ್ರ

ತಿ. ನರಸೀಪುರ ಕ್ಷೇತ್ರ

ಈ ಹಿಂದೆ ಅತ್ಯಲ್ಪ ಮತಗಳ ಅಂತರದಿಂದ ಜಯಗಳಿಸಿದ್ದ ಡಾ.ಎಚ್.ಸಿ.ಮಹದೇವಪ್ಪ ಈ ಬಾರಿ ತಮ್ಮ ಮಗ ಸುನಿಲ್ ಬೋಸ್‌ಗೆ ಕ್ಷೇತ್ರ ಬಿಟ್ಟುಕೊಡಲು ಸಜ್ಜಾಗಿದ್ದಾರೆ. ಈ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಮತ್ತೊಂದು ಮೀಸಲು ಕ್ಷೇತ್ರ ನಂಜನಗೂಡಿನಿಂದ ಸ್ಪರ್ಧಿಸುವ ಪ್ರಯತ್ನವನ್ನು ಅವರು ನಡೆಸಿದ್ದರು. ಹಾಲಿ ಶಾಸಕರಿಗೆ ಟಿಕೆಟ್ ಎಂದು ಸಿದ್ದರಾಮಯ್ಯ ಬಹಿರಂಗ ಸಭೆಯಲ್ಲೇ ಹೇಳಿದ್ದಾರೆ.

ತಿ.ನರಸೀಪುರ, ವರುಣಾ, ನಂಜನಗೂಡು, ಚಾಮುಂಡೇಶ್ವರಿ ಭಾಗದಲ್ಲಿ ದಲಿತರು, ಲಿಂಗಾಯತರು, ಕುರುಬರ ಮತಗಳು ಪ್ರಮುಖಪಾತ್ರ ವಹಿಸುತ್ತವೆ. ಈ ಭಾಗದಲ್ಲಿ ಲಿಂಗಾಯತರ ಮತಬುಟ್ಟಿಯನ್ನು ತನ್ನತ್ತ ತಿರುಗಿಸಲು ಕಾಂಗ್ರೆಸ್ ಸಾಕಷ್ಟು ಕಸರತ್ತು ನಡೆಸಿತ್ತು.

ಜೆಡಿಎಸ್​ನಿಂದ ಸ್ಪರ್ಧಿಸಿ ಅಲ್ಪ ಅಂತರದಿಂದ ಸೋತಿದ್ದ ಸುಂದರೇಶ್ ನಿಧನರಾಗಿದ್ದು, ಅವರ ಪತ್ನಿ ಧರಣಿ ಸುಂದರೇಶ್, ಸಿದ್ದರಾಮಯ್ಯ ವಿರುದ್ಧ ಮುನಿದು ಜೆಡಿಎಸ್ ಸೇರಿರುವ ಎಚ್.ಗೋವಿಂದಯ್ಯ, ಜಿಪಂ ಮಾಜಿ ಅಧ್ಯಕ್ಷ ಸಿದ್ದಾರ್ಥ, ಸದಸ್ಯ ಅಶ್ವಿನ್​ಕುಮಾರ್, ಮುಖಂಡ ಮಹೇಶ್​ಕುಮಾರ್, ಎಸ್.ಶಂಕರ್ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಿಂದ ವಿಧಾನಪರಿಷತ್ ಮಾಜಿ ಸದಸ್ಯ ಸಿ.ರಮೇಶ್, ಮಾಜಿ ಶಾಸಕ ಭಾರತೀಶಂಕರ್, ಜಿ.ಪಂ ಮಾಜಿ ಸದಸ್ಯ ಪುಟ್ಟಬಸವಯ್ಯ, ಸುಧಾ ಮಹದೇವಯ್ಯ ಟಿಕೆಟ್ ಪಡೆಯುವ ಯತ್ನದಲ್ಲಿದ್ದಾರೆ.

ನಂಜನಗೂಡು ಕ್ಷೇತ್ರ

ನಂಜನಗೂಡು ಕ್ಷೇತ್ರ

ಸಾಮಾನ್ಯ ಕ್ಷೇತ್ರವಾಗಿದ್ದ ನಂಜನಗೂಡು, 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾದ ಸಂದರ್ಭದಲ್ಲಿ ಮೀಸಲು ಕ್ಷೇತ್ರವಾಯಿತು. ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ ಶಾಸಕ ಕಳಲೆ ಎನ್‌.ಕೇಶವ ಮೂರ್ತಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಚುನಾವಣೆಗೆ ಸಜ್ಜಾಗುತ್ತಿದ್ದರೆ, ಉಪ ಚುನಾವಣೆಯ ಭಾರೀ ಜಿದ್ದಾಜಿದ್ದಿನ ಕಾಳಗದಲ್ಲಿ ಸೋಲುಂಡಿರುವ ಹಿರಿಯ ರಾಜಕಾರಣಿ ವಿ.ಶ್ರೀನಿವಾಸಪ್ರಸಾದ್ ಸೋಲಿನ ಸೇಡು ತೀರಿಸಿಕೊಳ್ಳಲು ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ.

ಇತ್ತ ಬಿಜೆಪಿಯಲ್ಲಿ ಶ್ರೀನಿವಾಸಪ್ರಸಾದ್ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿ ರುವುದರಿಂದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಕುತೂಹಲಕ್ಕೆ ಎಡೆ ಮಾಡಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಕೋಟೆ ಎಂ.ಶಿವಣ್ಣ, 2 ಬಾರಿ ಸೋತಿರುವ ಎಸ್‌.ಮಹಾದೇವಯ್ಯ, ಪ್ರಸಾದ್‌ ಅವರ ಅಳಿಯ ಹರ್ಷವರ್ಧನ್‌ ಅವರೂ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಬಿಜೆಪಿ ನಾಯಕರು ಮತ್ತು ಪ್ರಸಾದ್‌ ಬೆಂಬಲಿಗರು ಪ್ರಸಾದ್‌ ಅವರೇ ಸ್ಪರ್ಧೆ ಮಾಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದು ಬಿಜೆಪಿ ಸೇರಿದ ವಿ.ಶ್ರೀನಿವಾಸಪ್ರಸಾದ್ ಚುನಾವಣೆ ರಾಜಕೀಯದಿಂದ ದೂರ ಇರುವುದಾಗಿ ಹೇಳುತ್ತಿದ್ದರೂ, ಅವರ ಅಭಿಮಾನಿಗಳು ವಿಜಯದೊಂದಿಗೆ ಚುನಾವಣೆ ಮುಗಿಸಿ ಎನ್ನುವ ಒತ್ತಡ ತರುತ್ತಿದ್ದಾರೆ. ಬಿಜೆಪಿಯಿಂದ ಎರಡು ಚುನಾವಣೆಯಲ್ಲಿ ಅಲ್ಪ ಮತದಿಂದ ಸೋತಿದ್ದ ಎಸ್.ಮಹದೇವಯ್ಯ, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಶ್ರೀನಿವಾಸಪ್ರಸಾದ್ ಅಳಿಯ ಹರ್ಷವರ್ಧನ ಹೆಸರು ಕೇಳಿಬರುತ್ತಿದೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಗೆದ್ದಿರುವ ಕಳಲೆ ಕೇಶವಮೂರ್ತಿಗೆ ಟಿಕೆಟ್ ಖಾತ್ರಿಯಾಗಿದ್ದರೂ ತಿ.ನರಸೀಪುರವನ್ನು ಮಗನಿಗೆ ಬಿಟ್ಟು ಸಚಿವ ಎಚ್.ಸಿ.ಮಹದೇವಪ್ಪ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳೂ ಇವೆ. ಜೆಡಿಎಸ್​ನಿಂದ ಮೈಸೂರು ನಗರಪಾಲಿಕೆ ಮಾಜಿ ಸದಸ್ಯ ಆರ್.ಸೋಮಸುಂದರ್, ಎಸ್​ಸಿ ಘಟಕದ ಅಧ್ಯಕ್ಷ ಶಿವಕುಮಾರಸ್ವಾಮಿ ಪೈಪೋಟಿಯಲ್ಲಿದ್ದಾರೆ.

ಕೆ. ಆರ್ ನಗರ ಕ್ಷೇತ್ರ

ಕೆ. ಆರ್ ನಗರ ಕ್ಷೇತ್ರ

ಮೈಸೂರು ಹೊರತುಪಡಿಸಿ, ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕೆ.ಆರ್.ನಗರ ಕ್ಷೇತ್ರದಲ್ಲಿಯೂ ಹಿಂದುಳಿದ ಮತಗಳದ್ದೇ ಹೆಚ್ಚಿನ ಪ್ರಾಬಲ್ಯ. ಒಕ್ಕಲಿಗ, ಕುರುಬರು ಪ್ರಬಲವಾಗಿರುವ ಇಲ್ಲಿ ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಜೆಡಿಎಸ್ ಗೆಲುವು ಸಾಧಿಸಿದೆ. ಎಚ್.ಡಿ. ರೇವಣ್ಣ ಪತ್ನಿ ಭವಾನಿ ಸಾಲಿಗ್ರಾಮದವರಾದ್ದರಿಂದ ಈ ಭಾಗದಲ್ಲಿ ಅವರ ಹಿಡಿತವಿದೆ. ಬಿಜೆಪಿಯಿಂದ ರಾಜಕೀಯ ಆರಂಭಿಸಿ ಜೆಡಿಎಸ್ ಸೇರ್ಪಡೆಗೊಂಡಿರುವ ಸಾ.ರಾ.ಮಹೇಶ್ ಸತತ ಎರಡು ಬಾರಿ ಗೆಲ್ಲುವ ಮೂಲಕ ಒಮ್ಮೆ ಗೆದ್ದವರು ಮತೊಮ್ಮೆ ಗೆಲ್ಲಲಾರರು ಎನ್ನುವ ಮಾತನ್ನು ಸುಳ್ಳಾಗಿಸಿದ್ದರು. ಜೆಡಿಎಸ್​ನಿಂದ ಈಗ ಮೂರನೇ ಬಾರಿಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಕಾಂಗ್ರೆಸ್​ನಿಂದ ಕಳೆದ ಚುನಾವಣೆಯಲ್ಲಿ ಸೋತಿದ್ದ ದೊಡ್ಡಸ್ವಾಮಿಗೌಡರ ಪುತ್ರ ಜಿ.ಪಂ.ಸದಸ್ಯ ರವಿಶಂಕರ್ ಅಭ್ಯರ್ಥಿ ಎಂದು ಸಿಎಂ ಈಗಾಗಲೇ ಘೊಷಿಸಿದ್ದಾರೆ. ಬಿಜೆಪಿಯಿಂದ ಹೊಸಳ್ಳಿ ವೆಂಕಟೇಶ್, ಮಿರ್ಲೆ ಶ್ರೀನಿವಾಸಗೌಡ ಪೈಪೋಟಿಯಲ್ಲಿದ್ದಾರೆ.

ಎಚ್ ಡಿ ಕೋಟೆ

ಎಚ್ ಡಿ ಕೋಟೆ

ಎಚ್.ಡಿ.ಕೋಟೆಯಲ್ಲಿ ನಾಯಕ ಸಮುದಾಯದ ಮತಗಳೇ ನಿರ್ಣಾಯಕ. ಇಲ್ಲಿ ಜೆಡಿಎಸ್​ನ ಚಿಕ್ಕಮಾದು ಪ್ರಥಮ ಪ್ರಯತ್ನದಲ್ಲಿಯೇ ಗೆದ್ದಿದ್ದರು. ತಂದೆ ಅಕಾಲಿಕ ನಿಧನದ ಅನುಕಂಪ ಪಡೆಯಲು ಮುಂದಾಗಿರುವ ಪುತ್ರ, ಜಿ.ಪಂ.ಸದಸ್ಯ ಅನಿಲ್ ಜೆಡಿಎಸ್ ತೊರೆದು ಕೈ ಹಿಡಿದಿದ್ದಾರೆ.

ಕಾಂಗ್ರೆಸ್​ನಿಂದ ಗೆದ್ದು ಬಿಜೆಪಿಗೆ ಹೋಗಿದ್ದ ಚಿಕ್ಕಣ್ಣ ಈಗ ಜೆಡಿಎಸ್​ನಲ್ಲಿದ್ದಾರೆ. ಕಾಂಗ್ರೆಸ್​ನಿಂದ ಚಾಮರಾಜನಗರ ಜಿಪಂ ಅಧ್ಯಕ್ಷ ರಾಮಚಂದ್ರಗೆ ಟಿಕೆಟ್ ಕೊಡಿಸಲು ಸಂಸದ ಧ್ರುವನಾರಾಯಣ್ ಮುಂದಾಗಿದ್ದು, ಎಂಎಲ್​ಸಿ ವಿ.ಎಸ್.ಉಗ್ರಪ್ಪ ಹೆಸರು ಕೇಳಿಬರುತ್ತಿದೆ. ಬಿಜೆಪಿಯಿಂದ ಮಾಜಿ ಎಂಎಲ್​ಸಿ ಸಿದ್ದರಾಜು ಇಲ್ಲಿನ ಪ್ರಬಲ ಆಕಾಂಕ್ಷಿ.

ಹುಣಸೂರು ಕ್ಷೇತ್ರ

ಹುಣಸೂರು ಕ್ಷೇತ್ರ

ದಶಕದಲ್ಲಿ ಜಿಲ್ಲೆಗೆ ಪ್ರಥಮ ಮುಖ್ಯಮಂತ್ರಿ ಡಿ. ದೇವರಾಜು ಅರಸು ಅವರನ್ನು ಕೊಟ್ಟ ಕ್ಷೇತ್ರ ಹುಣಸೂರು. ಈ ಹಿಂದಿನಿಂದಲೂ ರಾಜಕೀಯ ಕದನಕ್ಕೆ ಈ ಕ್ಷೇತ್ರ ಹೆಸರುವಾಸಿ. ಹಿಂದುಳಿದ ವರ್ಗದ ಹೆಚ್. ಪ್ರೇಮಕುಮಾರ್ ಅವರ ಪುತ್ರ ಹೆಚ್. ಪಿ ಮಂಜುನಾಥ್ ಕಾಂಗ್ರೆಸ್ ನಿಂದ ಎರಡು ಬಾರಿ ಆಯ್ಕೆಯಾಗಿದ್ದು, ಈಗ ಮೂರನೇ ಬಾರಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುನಿದು, ಜೆಡಿಎಸ್ ಸೇರ್ಪಡೆಗೊಂಡಿರುವ ಮಾಜಿ ಸಂಸದ ಅಡಗೂರು ವಿಶ್ವನಾಥ್ ಸ್ಪರ್ಧಿಸಲಿದ್ದಾರೆ. ಬಿಜೆಪಿಯಿಂದ ಸಂಸದ ಪ್ರತಾಪ್ ಸಿಂಹ, ಯೋಗಾನಂದ ಕುಮಾರ್, ವಸಂತ ಕುಮಾರ್ ಗೌಡ ಅವರು ಒಬ್ಬರು ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ .

ಪಿರಿಯಾಪಟ್ಟಣ ಕ್ಷೇತ್ರ

ಪಿರಿಯಾಪಟ್ಟಣ ಕ್ಷೇತ್ರ

ಪಿರಿಯಾಪಟ್ಟಣ ಕ್ಷೇತ್ರಕ್ಕೆ ಬಿಜೆಪಿ ತಮ್ಮನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದಿದ್ದರಿಂದ ಬೇಸತ್ತು ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ವಿಜಯಶಂಕರ್ ಅವರಿಗೆ ಕಾಂಗ್ರೆಸ್ ನಲ್ಲಿಯೂ ಟಿಕೆಟ್ ಖಾತ್ರಿಯಾಗಿಲ್ಲ. ಲೋಕಸಭಾ ಚುನಾವಣೆ ಟಿಕೆಟ್ ಕೊಡುವ ಮಾತನ್ನು ಹೇಳದಿದ್ದರೂ, ಎಐಸಿಸಿ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯಾ ಮೈಸೂರಿನತ್ತ ಒಲವು ತೋರಿರುವುದು ಕುತೂಹಲ ಕೆರಳಿಸಿದೆ. ಶಾಸಕ, ಬಿಡಿಎ ಅಧ್ಯಕ್ಷ ಕೆ. ವೆಂಕಟೇಶ್ ಗೆ ಕಾಂಗ್ರೆಸ್ ಟಿಕೆಟ್ ದೊರೆಯುವುದು ಖಚಿತವಾಗಿದೆ.

ಕಳೆದ ಬಾರಿ ಗಮನಸೆಳೆದಿದ್ದ ಕೆ. ಮಹದೇವು ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ. ಬಿಜೆಪಿಯಿಂದ ಮುಖಂಡರಾದ ಗಣೇಶ್, ಉದ್ಯಮಿ ಮಂಜುನಾಥ್ ಅವರ ಹೆಸರು ಹೆಚ್ಚಾಗಿ ಚಾಲನೆಯಲ್ಲಿದೆ.

ಚಾಮುಂಡೇಶ್ವರಿ ಕ್ಷೇತ್ರ

ಚಾಮುಂಡೇಶ್ವರಿ ಕ್ಷೇತ್ರ

ಉಪ ಚುನಾವಣೆಯ ಮೂಲಕ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ಚಾಮುಂಡೇಶ್ವರಿ ಕ್ಷೇತ್ರ ಈಗ ಮತ್ತೆ ಅಂತಹದ್ದೇ ರಾಜಕೀಯ ಕಾವು ಪಡೆದುಕೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಈ ಕ್ಷೇತ್ರದಿಂದಲೇ ಕೊನೇ ಚುನಾವಣೆ ಎದುರಿಸುವುದಾಗಿ ಸಿದ್ದರಾಮಯ್ಯ ಬಹಿರಂಗ ಹೇಳಿಕೆ ನೀಡಿದ್ದಾರೆ. ಜೆಡಿಎಸ್ ನಿಂದ ಶಾಸಕ ಜಿ. ಟಿ ದೇವೇಗೌಡ ಸ್ಪರ್ಧಿಸಲಿದ್ದಾರೆ.

ಒಂದು ಕಾಲದ ಆಪ್ತಮಿತ್ರರು ಈಗ ಎದುರಾಳಿಗಳಾಗುತ್ತಿರುವುದು ಕ್ಷೇತ್ರದ ಪ್ರತಿಷ್ಠೆ ಹೆಚ್ಚಿಸಿದೆ. ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ಮಾಜಿ ಶಾಸಕ ಎಂ. ಸತ್ಯನಾರಾಯಣ ಅವರಿಗೆ ಕಾಂಗ್ರೆಸ್ ಟಿಕೆಟ್ ದೊರೆಯುವ ಸಾಧ್ಯತೆ ಇದೆ. ಬಿಜೆಪಿಯಿಂದ ಎಸ್ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಅಪ್ಪಣ್ಣ ಶೇಖರ್, ಧನಂಜಯ ಟಿಕೆಟ್ ಗೆ ಈಗಾಗಲೇ ಶತ ಪ್ರಯತ್ನ ನಡೆಸಿದ್ದಾರೆ. ಇಲ್ಲಿ ಸಿದ್ದರಾಮಯ್ಯ ಗೆಲುವು - ಸೋಲು ಮಾತ್ರ ಪ್ರತಿಷ್ಠೆಯ ಪ್ರಶ್ನೆಯೇ ಸರಿ.

ಮಂಡ್ಯ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರಿಚಯ

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka assembly elections 2018: Here is Mysuru assembly constituencies' brief introduction. Mysuru assembly constituency profiles

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more