ಮೇಲುಕೋಟೆ ವೈರಮುಡಿ ಜಾತ್ರೆಯ ವೇಳೆ ನಡೆಯಿತೊಂದು ಪವಾಡ!

Posted By:
Subscribe to Oneindia Kannada

ಮಂಡ್ಯ, ಏ 11: ದಕ್ಷಿಣ ಭಾರತದ ನಾಲ್ಕು ಪ್ರಮುಖ ವೈಷ್ಣವ ಕ್ಷೇತ್ರಗಳಲ್ಲೊಂದಾದ ಮೇಲುಕೋಟೆ ಚೆಲುವನಾರಾಯಣಸ್ವಾಮಿ ವೈರಮುಡಿ ಉತ್ಸವದ ಅಂಗವಾಗಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪವಾಡವೊಂದು ನಡೆದಿದೆ. (ಶ್ರೀರಂಗಂ, ತಿರುಪತಿ, ಕಾಂಚೀಪುರಂ ಇತರ ಮೂರು ವೈಷ್ಣವ ಕ್ಷೇತ್ರಗಳು)

ಒಂಬತ್ತನೇ ತಿರುನಾಳ್ ಮತ್ತು ಸ್ವಾಮಿಯ ಪ್ರತಿಷ್ಠಾಪನೆಯ ಅಂಗವಾಗಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಭಾಗವಾಗಿ, ಸೋಮವಾರ (ಏ 10) ದೇವಾಲಯದ ಆವರಣದಲ್ಲಿರುವ ಕಲ್ಯಾಣಿಯಲ್ಲಿನ ತೀರ್ಥಸ್ನಾನದ ನಂತರ ಚೆಲುವನಾರಾಯಣಸ್ವಾಮಿಯ ಪವಾಡ ಸಾಕ್ಷೀಕರಿಸುವ ಘಟನೆಯೊಂದು ನಡೆದಿದೆ.

ವಾರ್ಷಿಕ ವೈರಮುಡಿ ಜಾತ್ರಾಮಹೋತ್ಸವದ ವೇಳೆ ಒಂದಲ್ಲಾ ಒಂದು ಸ್ವಾಮಿಯ ಪವಾಡಗಳು ನಡೆಯುತ್ತಲೇ ಬರುತ್ತಿದೆ ಎನ್ನುವುದು ಸ್ಥಳೀಯರ ಮತ್ತು ಭಕ್ತಾದಿಗಳ ನಂಬಿಕೆಯ ಮಾತು. [ಮೇಲುಕೋಟೆ ವೈರಮುಡಿ ಕ್ಷೇತ್ರ ಪುರಾಣ]

ಪುಣ್ಯಸ್ನಾನದ ನಂತರ ಗರುಡಗಳು ಕಲ್ಯಾಣಿಗೆ ಪ್ರದಕ್ಷಿಣೆಹಾಕಿದ್ದು ಮತ್ತು ಬರಡು ಹೊಲದಲ್ಲಿ ತೀರ್ಥ ಉದ್ಭವವಾದ ಘಟನೆ ಮೇಲುಕೋಟೆ ವೈರಮುಡಿ ಜಾತ್ರೆಯ ವೇಳೆ ನಡೆದಿದೆ.

ಮೇಲುಕೋಟೆಯಲ್ಲಿ ಪ್ರತಿವರ್ಷವೂ ಹಲವಾರು ಕಾರ್ಯಕ್ರಮ, ಉತ್ಸವಗಳು ನಡೆಯುತ್ತವೆಯಾದರೂ ಅವುಗಳಲ್ಲಿ ಹತ್ತು ದಿನಗಳ ಕಾಲ ನಡೆಯುವ ಚೆಲುವರಾಯಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಅತ್ಯಂತ ಪ್ರಮುಖವಾದುದು.
[ಸಂತಾನಪ್ರಾಪ್ತಿಯ ಐತಿಹ್ಯವಿರುವ ತೊಟ್ಟಿಲಮಡು ಹರಕೆ]

ವೈರಮುಡಿ ಎಂಬುವುದು ವಜ್ರ ಖಚಿತ ಕಿರೀಟವಾಗಿದ್ದು, ಶ್ರೀಮಾನ್ ನಾರಾಯಣನ ಕಿರೀಟವೆಂದೂ ದ್ವಾಪರಯುಗದಲ್ಲಿ ಕೃಷ್ಣನ ಮೂಲಕ ಚೆಲುವರಾಯನಿಗೆ ಗರುಡನಿಂದ ತೊಡಿಸಿದನೆಂಬುವುದು ಒಂದೆಡೆಯಾದರೆ, ಮತ್ತೊಂದೆಡೆ ವೈಕುಂಠದಿಂದ ರಾಕ್ಷಸ ವಿರೋಚನ ಕದ್ದಿದ್ದ ನಾರಾಯಣನ ಕಿರೀಟವನ್ನು ಗರುಡ ರಾಕ್ಷಸನೊಂದಿಗೆ ಹೋರಾಡಿ ಮರಳಿ ತಂದು ಚೆಲುವರಾಯನಿಗೆ ಅರ್ಪಿಸಿದನೆಂಬುದು ಪ್ರತೀತಿ. ಮುಂದೆ ಓದಿ..

 ಶ್ರೀದೇವಿ ಭೂದೇವಿಯರೊಂದಿಗೆ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ

ಶ್ರೀದೇವಿ ಭೂದೇವಿಯರೊಂದಿಗೆ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ

ಹತ್ತು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ನಾಲ್ಕನೆಯ ದಿನದ ರಾತ್ರಿ ಶ್ರೀದೇವಿ ಭೂದೇವಿಯರೊಂದಿಗೆ ಗರುಡಾರೂಢನಾದ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಹಾಗೂ ಬ್ರಾಹ್ಮಿ ಮುಹೂರ್ತದಲ್ಲಿ ರಾಜಮುಡಿ ಕಿರೀಟವನ್ನು ಧಾರಣೆ ಮಾಡಲಾಗುತ್ತದೆ.

 ಕಲ್ಯಾಣಿಗೆ ಪ್ರದಕ್ಷಿಣೆ ಹಾಕುವ ಗರುಡ

ಕಲ್ಯಾಣಿಗೆ ಪ್ರದಕ್ಷಿಣೆ ಹಾಕುವ ಗರುಡ

ಜಾತ್ರೆಯ ಒಂಬತ್ತನೇ ದಿನವಾದ ಸೋಮವಾರ, ತೀರ್ಥಸ್ನಾನಕ್ಕಾಗಿ ಕಲ್ಯಾಣಿಗೆ ಪೂಜೆ ಸಲ್ಲಿಸಿದ ನಂತರ ಮೂರು ಗರುಡ ಪಕ್ಷಿಗಳು ಕಲ್ಯಾಣಿಗೆ ಪ್ರದಕ್ಷಿಣೆ ಹಾಕಿದವು. ತೀರ್ಥಸ್ನಾನ, ಅವಭೃತದ ವೇಳೆ ಗರುಡಗಳು ಕಲ್ಯಾಣಿಗೆ ಪ್ರದಕ್ಷಿಣೆ ಹಾಕುವುದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.

 ಉಡುಪಿಯಲ್ಲೂ ರಥಕ್ಕೆ ಪ್ರದಕ್ಷಿಣೆ ಹಾಕುವ ಗರುಡ

ಉಡುಪಿಯಲ್ಲೂ ರಥಕ್ಕೆ ಪ್ರದಕ್ಷಿಣೆ ಹಾಕುವ ಗರುಡ

ಇದೇ ರೀತಿ ಉಡುಪಿಯಲ್ಲಿ ಮಕರ ಸಂಕ್ರಾಂತಿಯ ಮರುದಿನ ಹಗಲು ಹೊತ್ತಿನಲ್ಲಿ ನಡೆಯುವ ಉತ್ಸವದ (ಚೂರ್ಣೋತ್ಸವ) ವೇಳೆಯೂ, ಗರುಡ ಮೂರು ಬಾರಿ ಬ್ರಹ್ಮರಥಕ್ಕೆ ಪ್ರದಕ್ಷಿಣೆ ಹಾಕಿದ ನಂತರ ರಥವನ್ನು ಎಳೆಯುವ ಪದ್ದತಿಯಿದೆ.

 ಬರಡು ಹೊಲವೊಂದರಲ್ಲಿ ನೀರು ಸಂಗ್ರಹವಾಗಿ ಅಚ್ಚರಿ

ಬರಡು ಹೊಲವೊಂದರಲ್ಲಿ ನೀರು ಸಂಗ್ರಹವಾಗಿ ಅಚ್ಚರಿ

ತೀರ್ಥಸ್ನಾನ ನಡೆದ ಕೆಲವೇ ನಿಮಿಷಗಳಲ್ಲಿ ದೇವಾಲಯದಿಂದ ಅಣತಿ ದೂರದಲ್ಲಿರುವ ನಾರಾಯಣಪುರ ಗ್ರಾಮದ ಬರಡು ಹೊಲವೊಂದರಲ್ಲಿ ನೀರು ಸಂಗ್ರಹವಾಗಿ ಅಚ್ಚರಿ ಮೂಡಿಸಿದೆ. ಪ್ರತೀ ವರ್ಷದಂತೆ ಈ ವರ್ಷವೂ ಪವಾಡ ನಡೆದಿದೆ ಎನ್ನುವುದು ಭಕ್ತರ ನಂಬಿಕೆ.

 ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಮೇಲುಕೋಟೆಗೆ ಬರುವ ಕಿರೀಟ

ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಮೇಲುಕೋಟೆಗೆ ಬರುವ ಕಿರೀಟ

ಮೈಸೂರು ರಾಜರ ಆಡಳಿತದಲ್ಲಿ ವೈರಮುಡಿ ಕಿರೀಟ ರಾಜಾಶ್ರಯದಲ್ಲಿತ್ತು, ಈಗ ಅದು ರಾಜ್ಯ ಸರಕಾರದ ಕಸ್ಟಡಿಯಲ್ಲಿದೆ. ಮಂಡ್ಯ ಸರ್ಕಾರಿ ಖಜಾನೆಯಲ್ಲಿರುವ ಬೆಲೆಕಟ್ಟಲಾಗದ ವಜ್ರಖಚಿತ ವೈರಮುಡಿ, ರಾಜಮುಡಿ ಕಿರೀಟವನ್ನು ಭಾರೀ ಬಂದೋಬಸ್ತಿನಲ್ಲಿ, ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಮೇಲುಕೋಟೆಗೆ ತರಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Miracle happened soon after Kalyani punya snana in Cheluvanarayana Swamy temple in Melutkote, Mandya district.
Please Wait while comments are loading...