ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ಕುರಿತು ಸಚಿವ ಸುರೇಶ್ ಕುಮಾರ್ ಮಹತ್ವದ ಹೇಳಿಕೆ
ಬೆಂಗಳೂರು, ಏಪ್ರಿಲ್ 8: ಎಸ್ಎಸ್ಎಲ್ಸಿ ಪರೀಕ್ಷೆ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಮಹತ್ವ ನಿರ್ಧಾರ ಪ್ರಕಟಿಸಿದ್ದಾರೆ.
ಕೊರೊನಾ ಪರಿಸ್ಥಿತಿಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಎಲ್ಲಾ ಇಲಾಖೆಗಳು , ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಕೆಲವು ಶಾಲೆಗಳಲ್ಲಿ ಪಠ್ಯ ಮುಗಿದು ಪುನರಾವರ್ತನೆ ಹಂತದಲ್ಲಿದ್ದರೆ, ಕೆಲವು ಶಾಲೆಗಳಲ್ಲಿ ಕೆಲವು ವಿಷಯಗಳಲ್ಲಿ ಒಂದೆರೆಡು ಪಠ್ಯಗಳು ಬಾಕಿ ಇವೆ ಎಂಬ ಮಾಹಿತಿ ಇದೆ.
1ರಿಂದ 9ನೇ ತರಗತಿ ವಾರ್ಷಿಕ ಪರೀಕ್ಷೆ ಕುರಿತು ಸಚಿವ ಸುರೇಶ್ ಕುಮಾರ್ ಮಾಹಿತಿ
ಈ ಬಾರಿ ತರಗತಿ ಹಾಜರಾತಿ ಕಡ್ಡಾಯವಲ್ಲ, ಹೀಗಾಗಿತರಗತಿಗೆ ಹಾಜರಾಗದಿರುವ ಮಕ್ಕಳು ಎಲ್ಲಿದ್ದಾರೆ, ಪರೀಕ್ಷೆಗೆ ಹಾಜರಾಗುವಂತೆ ಮನವೊಲಿಕೆ ಮತ್ತು ಪಠ್ಯಗಳ ಕುರಿತು ಸಲಹೆ ಸೂಚನೆ ನೀಡಲು ಶಾಲಾ ಶಿಕ್ಷಕರು ಮತ್ತು ಮುಖ್ಯೋಪಧ್ಯಾಯರು ಗಮನಹರಿಸಬೇಕು ಎಂದು ಹೇಳಿದರು.

ಎಸ್ಎಸ್ಎಲ್ಸಿ ಪಠ್ಯಕ್ರಮ ಪರಿಶೀಲಿಸಲು ರಾಜ್ಯಾದ್ಯಂತ ಪ್ರವಾಸ
ಎಸ್ಎಸ್ಎಲ್ಸಿ ಪಠ್ಯಕ್ರಮ ಮತ್ತು ಪರೀಕ್ಷೆ ಕುರಿತಂತೆ ಪರಿಶೀಲಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಇದೇ ವಾರ ಬೆಳಗಾವಿ ವಿಭಾಗ ವ್ಯಾಪ್ತಿಯ 4 ಜಿಲ್ಲೆಗಳ ಪರಿಶೀಲನೆ ನಡೆಸಿದ್ದೇನೆ, ಎಲ್ಲಾ ಕಡೆ ಪಠ್ಯಕ್ರಮ ಪುನರಾವರ್ತನೆ ಹಂತದಲ್ಲಿದ್ದು, ಆಯಾ ಭಾಗದ ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ಹೋಗಿ ಪರೀಕ್ಷೆಯ ಮಹತ್ವ ಕುರಿತು ವಿವರಿಸುವುದು ಸೇರಿದಂತೆ ತಮ್ಮದೇ ಆದ ರೀತಿಯ ವಿದ್ಯಾರ್ಥಿ ಸಂಪರ್ಕದ ಮೂಲಕ ಅವರು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಪ್ರೇರಣೆಗೊಳಿಸುತ್ತಿದ್ದಾರೆ.

ಪರೀಕ್ಷೆ ಕೊಠಡಿಯಲ್ಲಿ 18 ರಿಂದ 20 ಮಕ್ಕಳಿಗೆ ಅವಕಾಶ
ಪರೀಕ್ಷಾ ಕೊಠಡಿಯಲ್ಲಿ ಈ ಬಾರಿ ಗರಿಷ್ಠ 18 ರಿಂದ 20 ಮಕ್ಕಳಷ್ಟೇ ಇರಬೇಕು. ಪ್ರತಿ ಪರೀಕ್ಷಾ ಕೊಠಡಿಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮಂಡಳಿಯಿಂದಲೇ ಪ್ರತ್ಯೇಕ ಪ್ರಶ್ನೆ ಪತ್ರಿಕೆ ಬಂಡಲ್ಗಳನ್ನು ಮಾಡಿ ರವಾನಿಸಲು ಪರಿಶೀಲನೆ ನಡೆಯುತ್ತಿದೆ.

ವಿದ್ಯಾರ್ಥಿಗಳು ಗೈರಾಗದಂತೆ ಗಮನಹರಿಸಬೇಕು
ಯಾವುದೇ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗದಂತೆ ಗಮನಹರಿಸಬೇಕು, ಶಿಕ್ಷಕರು ಅಥವಾ ಅಧಿಕಾರಿಗಳು ಇದೊಂದು ಸರ್ಕಾರಿ ಆದೇಶ ತಿಳಿದುಕೊಳ್ಳುವುದಕ್ಕಿಂತ ಸ್ವಯಂಪ್ರೇರಣೆಯಿಂದ ಮಕ್ಕಳನ್ನು ಪ್ರೇರೇಪಿಸಬೇಕು ಎಂದರು.

ಯಾವ ಕಾರಣಗಳಿಂದ ವಿದ್ಯಾರ್ಥಿಗಳು ತರಗತಿಗೆ ದೂರವಿದ್ದಾರೆ
ಈಗಾಗಲೇ ತರಗತಿಯಿಂದ ದೂರವುಳಿದಿರುವ ವಿದ್ಯಾರ್ಥಿಗಳು ಯಾವ ಕಾರಣಗಳಿಂದ ದೂರ ಉಳಿದಿದ್ದಾರೆ ಎಂಬುದನ್ನು ಪರಿಶೀಲಿಸಬೇಕು, ಸರ್ಕಾರಿ ಶಾಲೆಗಳಲ್ಲಿ ಯಾವುದೇ ವಿಷಯಕ್ಕೆ ಶಿಕ್ಷಕರಿಲ್ಲದಿದ್ದರೆ ಅಕ್ಕಪಕ್ಕದ ಶಾಲೆಯ ಶಿಕ್ಷಕರನ್ನು ಆ ಶಾಲೆಗೆ ನಿಯೋಜಿಸುವ ಮೂಲಕ ಪಠ್ಯಕ್ರಮ ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು.