ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IPS ಅಣ್ಣಾಮಲೈ 'ರಾಜಕೀಯ' ಧರಣಿಗೆ ಕನ್ನಡಿಗರ 'ಉಪವಾಸ ಸತ್ಯಾಗ್ರಹ' ತಿರುಗೇಟು!

|
Google Oneindia Kannada News

ಬೆಂಗಳೂರು, ಆ. 05: ಮೇಕೆದಾಟು ಯೋಜನೆ ಅನುಷ್ಠಾನ ವಿಚಾರ ರಾಜ್ಯ ಬಿಜೆಪಿಗೆ ಬಿಸಿ ತುಪ್ಪವಾಗಿದೆ. ರಾಜ್ಯದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಈಗ ತಮಿಳುನಾಡು ಬಿಜೆಪಿ ಘಟಕದ ರಾಜ್ಯಾಧ್ಯಕ್ಷ. ಅಣ್ಣಾಮಲೈ ಬಿಜೆಪಿ ಸೇರುವಾಗ ಹಾಡಿ ಹೊಗಳಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಅಣ್ಣಾಮಲೈ ಇದೀಗ ಕಾಟ ಕೊಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಅನುಷ್ಠಾನ ಆಗಬಾರದು ಎಂದು ಇಂದಿನಿಂದ ಅಣ್ಣಾಮಲೈ ಅನಿರ್ಧಿಷ್ಟಾವಧಿ ಸತ್ಯಾಗ್ರಹವನ್ನು ಮಾಡುತ್ತಿದ್ದಾರೆ. ಅಣ್ಣಾಮಲೈ ಕುರಿತು ಏನು ಪ್ರತಿಕ್ರಿಯೆ ಕೊಡಬೇಕು ಎಂಬ ಗೊಂದಲ ರಾಜ್ಯ ಬಿಜೆಪಿ ನಾಯಕರಲ್ಲಿದೆ.

ಈ ಮಧ್ಯೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾವು ಯೋಜನೆಯನ್ನು ಅನುಷ್ಠಾನ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಜೊತೆಗೆ ಸಚಿವ ವಿ. ಸೋಮಣ್ಣ ಅವರು ಐಪಿಎಸ್ ಆಗ ಮಾತ್ರಕ್ಕೆ ತಾವೇ ದೊಡ್ಡವರು, ತಿಳಿದವರು ಎಂದು ಅಣ್ಣಾಮಲೈ ವರ್ತನೆ ಮಾಡಬಾರದು ಎಂದು ತರಾಟೆ ತೆಗೆದುಕೊಂಡಿದ್ದಾರೆ. ಇವರನ್ನು ಬಿಟ್ಟರೆ ರಾಜ್ಯ ಬಿಜೆಪಿ ಘಟಕದಿಂದ ಅಥವಾ ರಾಜ್ಯ ಬಿಜೆಪಿ ನಾಯಕರು ಅಣ್ಣಾಮಲೈ ಕುರಿತು ತುಟಿ ಬಿಚ್ಚುತ್ತಿಲ್ಲ. ಹೀಗಾಗಿ ಮೇಕೆದಾಟು ಯೋಜನೆ ಅನುಷ್ಠಾನವಾಗಲೇ ಬೇಕು ಅಣ್ಣಾಮಲೈಗೆ ಪ್ರತಿಭಟನೆಯ ಮೂಲಕ ತಿರುಗೇಟು ಕೊಡಲಾಗಿದೆ.

ಮೇಕೆದಾಟು ಯೋಜನೆ ನಿಲ್ಲಿಸಲು ಅಣ್ಣಾಮಲೈ ಪ್ರತಿಭಟನೆಗೆ ಕರ್ನಾಟಕದಲ್ಲಿ ಧರಣಿ ಸತ್ಯಾಗ್ರಹದ ಮೂಲಕ ತಿರುಗೇಟು ಕೊಡಲಾಗಿದೆ. ಈ ಧರಣಿ ಮಾಡುತ್ತಿರುವವರು ಯಾರು? ಮುಂದಿದೆ ಮಾಹಿತಿ!

ಅಣ್ಣಾಮಲೈಗೆ ಧರಣಿ ಮೂಲಕ ತಿರುಗೇಟು

ಅಣ್ಣಾಮಲೈಗೆ ಧರಣಿ ಮೂಲಕ ತಿರುಗೇಟು

ಮೇಕೆದಾಟು ಕಾಮಗಾರಿಯನ್ನು ತಕ್ಷಣವೇ ಆರಂಭಿಸಿ, ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಆಮ್‌ ಆದ್ಮಿ ಪಾರ್ಟಿಯ ನೂರಾರು ಕಾರ್ಯಕರ್ತರು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಬೆಂಗಳೂರಿನ ಆನಂದ್ ರಾವ್ ವೃತ್ತದ ಬಳಿ ಮಹಾತ್ಮ ಗಾಂಧಿ ಪ್ರತಿಮೆಗೆ ಬಳಿ ಆಮ್ ಆದ್ಮಿ ಪಾರ್ಟಿ ನೂರಾರು ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ಮಾಡಿದ್ದಾರೆ.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ, ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, "ಬೆಂಗಳೂರು ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. 13 ವರ್ಷಗಳ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ 100 ವಾರ್ಡ್‌ಗಳಿದ್ದವು. 2007ರಲ್ಲಿ 110 ಹಳ್ಳಿಗಳು ಸೇರಿ ವಾರ್ಡ್‌ಗಳ ಸಂಖ್ಯೆ 198 ತಲುಪಿತು. ಈಗ 45 ವಾರ್ಡ್‌ಗಳನ್ನು ಸೇರಿಸಿ 243 ವಾರ್ಡ್‌ ಮಾಡಲು ಸಿದ್ಧತೆ ನಡೆಯುತ್ತಿದೆ. 2007ರಲ್ಲಿ ಸೇರಿದ 110 ವಾರ್ಡ್‌ಗಳಿಗೇ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಅಲ್ಲಿನ ಪೈಪುಗಳಲ್ಲಿ ನೀರಿನ ಬದಲು ಕೇವಲ ಗಾಳಿ ಬರುತ್ತಿದೆ. ಮೇಕೆದಾಟು ಅಣೆಕಟ್ಟು ನಿರ್ಮಾಣವಾಗದೇ 243 ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಕೆ ಅಸಾಧ್ಯ" ಎಂದು ಹೇಳಿ ಅಣ್ಣಾಮಲೈ ಧರಣಿ ಸತ್ಯಾಗ್ರಹ ಜನವಿರೋಧಿ ಎಂದರು.

ಬೊಗಳೆ ಬಿಡುತ್ತಿರುವ ರಾಜ್ಯ-ಕೇಂದ್ರ ಸರ್ಕಾರಗಳು

ಬೊಗಳೆ ಬಿಡುತ್ತಿರುವ ರಾಜ್ಯ-ಕೇಂದ್ರ ಸರ್ಕಾರಗಳು

ಬೆಂಗಳೂರನ್ನು ಸ್ಮಾರ್ಟ್‌ ಸಿಟಿ ಮಾಡುತ್ತೇವೆ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಬೊಗಳೆ ಬಿಡುತ್ತಿದೆ. ಕುಡಿಯುವ ನೀರು ಕೂಡ ಇಲ್ಲದ ನಗರವು ಎಂತಹ ಸ್ಮಾರ್ಟ್‌ ಸಿಟಿ ಆಗಬಹುದು? ಮೇಕೆದಾಟು ಯೋಜನೆಯು ಕರ್ನಾಟಕದ ಹಕ್ಕು. ಇದರ ಜಾರಿಗೆ ಯಾವುದೇ ರೀತಿಯ ಕಾನೂನು ಅಡ್ಡಿಯಿಲ್ಲ. ನ್ಯಾಯಮಂಡಳಿಯಿಂದ ತೊಂದರೆಯಿದೆ ಎಂದು ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಒಂದು ವರ್ಷದೊಳಗೆ ಪೂರ್ಣಗೊಳ್ಳಬೇಕೆಂಬ ಕಾಲಮಿತಿ ಇಟ್ಟುಕೊಂಡು ಮೇಕೆದಾಟು ಯೋಜನೆಯ ಕಾಮಗಾರಿಗೆ ಕೂಡಲೇ ಗುದ್ದಲಿ ಪೂಜೆ ನೆರವೇರಿಸಬೇಕು ಎಂದು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಎಎಪಿ ಕಾರ್ಯಕರ್ತರು ಆಗ್ರಹಿಸಿದರು.

ಡಬಲ್ ಎಂಜಿನ್‌ ಸರ್ಕಾರಕ್ಕೆ ದನಿ ಎತ್ತುವ ತಾಕತ್ತಿಲ್ಲ

ಡಬಲ್ ಎಂಜಿನ್‌ ಸರ್ಕಾರಕ್ಕೆ ದನಿ ಎತ್ತುವ ತಾಕತ್ತಿಲ್ಲ

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಆಮ್‌ ಆದ್ಮಿ ಪಾರ್ಟಿ ಬೆಂಗಳೂರು ನಗರ ಅಧ್ಯಕ್ಷ ಮೋಹನ್‌ ದಾಸರಿ, "ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಸುವರ್ಣಯುಗ ಆರಂಭವಾಗುತ್ತದೆ ಎಂದು ಹೇಳಿಕೊಂಡು ಬಿಜೆಪಿಯು ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆದಿದೆ. ಆದರೆ ಈ ಡಬಲ್‌ ಎಂಜಿನ್‌ ಸರ್ಕಾರಕ್ಕೆ ರಾಜ್ಯದ ಪರವಾಗಿ ದನಿ ಎತ್ತುವ ತಾಕತ್ತಿಲ್ಲ. ಮೇಕೆದಾಟು ವಿಚಾರದಲ್ಲಿ ಕೇಂದ್ರ ಸರ್ಕಾರವು ತಮಿಳುನಾಡಿನ ಪರವಾಗಿದೆ ಎಂದು ತಮಿಳುನಾಡಿನ ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ʻಡಬಲ್‌ ಎಂಜಿನ್‌ʼ ಆಡಳಿತ ನೀಡುವುದಾಗಿ ಹೇಳಿದ್ದ ಬಿಜೆಪಿಯು ʻಡಬಲ್ ಸ್ಟ್ಯಾಂಡರ್ಡ್‌ʼ ಆಡಳಿತ ನೀಡುತ್ತಿದೆ. ತಮಿಳುನಾಡಿನಲ್ಲೇ ಒಂದು ನಿಲುವು, ಕರ್ನಾಟಕದಲ್ಲಿ ಮತ್ತೊಂದು ನಿಲುವು ತೆಗೆದುಕೊಳ್ಳುವ ಮೂಲಕ ವಿನಾಕಾರಣ ವಿವಾದ ಸೃಷ್ಟಿಸುತ್ತಿದೆ" ಎಂದು ಕಿಡಿಕಾರಿದರು.

Recommended Video

ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣವರ್ ರಾಜಕೀಯ ಪ್ರವೇಶ | Oneindia Kannada
ವಿನಾಕಾರಣ ಮೇಕೆದಾಟು ವಿರುದ್ಧ ಅಪಪ್ರಚಾರ

ವಿನಾಕಾರಣ ಮೇಕೆದಾಟು ವಿರುದ್ಧ ಅಪಪ್ರಚಾರ

"ಕಳೆದ ಎಪ್ಪತ್ತು ವರ್ಷಗಳಿಂದಲೂ ಕೇಂದ್ರ ಸರ್ಕಾರವು ನೀರಾವರಿ ಯೋಜನೆಗಳಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಇದನ್ನು ವಿರೋಧಿಸಿ ರಾಜ್ಯಕ್ಕೆ ನ್ಯಾಯ ದೊರೆಕಿಸಿಕೊಡಲು ರಾಜ್ಯವನ್ನಾಳಿದ ಎಲ್ಲಾ ಸರ್ಕಾರಗಳು ವಿಫಲವಾಗಿದೆ. ಮೇಕೆದಾಟು ಯೋಜನೆಯಿಂದ ಕುಡಿಯುವುದಕ್ಕಷ್ಟೇ ನೀರನ್ನು ಬಳಸಿಕೊಳ್ಳಲಾಗುತ್ತದೆ. ಕೃಷಿಗೆ ಆ ನೀರನ್ನು ಬಳಸುವುದಿಲ್ಲ. ಆದ್ದರಿಂದ ತಮಿಳುನಾಡಿಗೆ ಇದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಅಲ್ಲಿನ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ವಿನಾಕಾರಣ ಮೇಕೆದಾಟು ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ದ್ರೋಹ ಬಗೆಯುತ್ತಿರುವ ಎರಡೂ ಪಕ್ಷಗಳಿಗೆ ರಾಜ್ಯದ ಜನರು ತಕ್ಕ ಪಾಠ ಕಲಿಸಬೇಕಿದೆ" ಎಂದು ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ. ಸದಂ ಆರೋಪಿಸಿದರು.

ಎಎಪಿಯ ಅನೇಕ ಮುಖಂಡರಾದ ಲಕ್ಷ್ಮೀಕಾಂತ್‌ ರಾವ್‌, ರಾಜಶೇಖರ್‌ ದೊಡ್ಡಣ್ಣ, ಡಾ. ಸತೀಶ್‌, ಜೋತೀಶ್‌ ಕುಮಾರ್‌, ಪ್ರಕಾಶ್‌ ನಾಗರಾಜ್‌, ಉಷಾ ಮೋಹನ್‌, ಸುಹಾಸಿನಿ ಫಣಿರಾಜ್‌ ಹಾಗೂ ನೂರಾರು ಕಾರ್ಯಕರ್ತರು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

English summary
Aam Aadmi Party had protest against Annamalai to stop mekedatu project by fasting. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X