ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಪಿ ಆದಿತ್ಯರಾವ್ ಸ್ಫೋಟಕ ತಯಾರಿಸಿದ್ದು ಹೇಗೆ?

|
Google Oneindia Kannada News

ಮಂಗಳೂರು, ಜನವರಿ 22: ಬಜ್ಪೆ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದ ಆರೋಪಿ ಆದಿತ್ಯರಾವ್ ಬೆಂಗಳೂರಿನಲ್ಲಿ ಬುಧವಾರ ಪೊಲೀಸರ ಎದುರು ಶರಣಾಗಿದ್ದಾನೆ.

ಮಣಿಪಾಲ ಮೂಲದವನಾದ ಆದಿತ್ಯರಾವ್‌ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ. ಮಂಗಳೂರಿನಿಂದ ಲಾರಿಯಲ್ಲಿ ಬೆಂಗಳೂರಿಗೆ ಬಂದ ಆದಿತ್ಯ ರಾವ್, ತಾನೇ ಡಿಜಿ ಮತ್ತು ಐಜಿಪಿ ನೀಲಮಣಿ ರಾಜು ಎದುರು ಹಾಜರಾಗಿ ಶರಣಾಗಿದ್ದಾನೆ.

ಆದಿತ್ಯರಾವ್ ಶರಣು; ಮಂಗಳೂರು ಪೊಲೀಸರು ಹೇಳಿದ್ದೇನು?ಆದಿತ್ಯರಾವ್ ಶರಣು; ಮಂಗಳೂರು ಪೊಲೀಸರು ಹೇಳಿದ್ದೇನು?

ಟೊಪ್ಪಿ ಧರಿಸಿದ್ದ ಶಂಕಿತ ವ್ಯಕ್ತಿಯ ಓಡಾಟದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯ ಸ್ಕೆಚ್ ತಯಾರಿಸಲಾಗಿತ್ತು. ಶಂಕಿತ ಪತ್ತೆಗಾಗಿ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದರು. ಆದಿತ್ಯರಾವ್ (34) ಬೆಳಿಗ್ಗೆ 8.40ರ ಸುಮಾರಿಗೆ ಸ್ವತಃ ಪೊಲೀಸರಿಗೆ ಶರಣಾಗಿದ್ದಾನೆ.

ಮಾರುವೇಷದಲ್ಲಿ ಟ್ಯಾಂಕರ್ ಹತ್ತಿ ಬೆಂಗಳೂರಿಗೆ ಬಂದ

ಮಾರುವೇಷದಲ್ಲಿ ಟ್ಯಾಂಕರ್ ಹತ್ತಿ ಬೆಂಗಳೂರಿಗೆ ಬಂದ

ಆದಿತ್ಯ ರಾವ್ ಬಗ್ಗೆ ಶಂಕೆ ವ್ಯಕ್ತವಾದಾಗ ಪೊಲೀಸರು ಆತನ ಹಿಂದೆ ವಾಸವಿದ್ದ, ಮತ್ತೆ ಪ್ರಸ್ತುತ ವಾಸವಿದ್ದ ಎಲ್ಲ ಸ್ಥಳಗಳಲ್ಲಿಯೂ ಹುಡುಕಾಟ ನಡೆಸಿದ್ದರು. ಮಂಗಳೂರು, ಉಡುಪಿ ಮಾತ್ರವಲ್ಲದೆ, ಮಡಿಕೇರಿ, ಮೈಸೂರು, ಚಿಕ್ಕಮಗಳೂರು, ಹಾಸನ ಮುಂತಾದ ಸುಮಾರು 30 ಕಡೆ ಹುಡುಕಾಟ ನಡೆಸಿದ್ದರು. ಆದರೆ ಆತ ಮಂಗಳವಾರ ರಾತ್ರಿ ಮಾರುವೇಷ ಧರಿಸಿ ರಾಷ್ಟ್ರೀಯ ಹೆದ್ದಾರಿಯಿಂದ ಟ್ಯಾಂಕರ್ ಒಂದನ್ನು ಹತ್ತಿ ಬೆಂಗಳೂರಿಗೆ ಬಂದಿದ್ದ. ತನಿಖಾ ತಂಡ ಹಾಗೂ ಪೊಲೀಸರ ಕೈಗೆ ನೇರವಾಗಿ ಸಿಕ್ಕಿಬೀಳಬಾರದು ಎಂದು ಆತ ಬೆಂಗಳೂರಿಗೆ ಬಂದು ಡಿಜಿ ಮತ್ತು ಐಜಿಪಿ ನೀಲಮಣಿ ರಾಜು ಎದುರು ಶರಣಾಗಿದ್ದಾನೆ.

ಯೂಟ್ಯೂಬ್ ನೋಡಿಯೇ ಸ್ಫೋಟಕ ತಯಾರಿಕೆ ಕಲಿತ

ಯೂಟ್ಯೂಬ್ ನೋಡಿಯೇ ಸ್ಫೋಟಕ ತಯಾರಿಕೆ ಕಲಿತ

ತನಗೆ ಕೆಲಸ ನೀಡದ ವಿಮಾನ ನಿಲ್ದಾಣ ಸಿಬ್ಬಂದಿ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಹೇಳಿದ್ದ ಆದಿತ್ಯ ರಾವ್ ಅದಕ್ಕಾಗಿ ತಯಾರಿ ನಡೆಸಿದ್ದ. ಯೂಟ್ಯೂಬ್ ನೋಡಿಕೊಂಡು ಸ್ಫೋಟಕ ತಯಾರಿಸುವ ತಂತ್ರಗಳನ್ನು ಸ್ವತಃ ಕಲಿತಿದ್ದ. ಸತತ ಒಂದು ವರ್ಷದಿಂದ ಅದಕ್ಕಾಗಿ ತಯಾರಿ ನಡೆಸಿದ್ದ. ಸ್ಫೋಟಕ ತಯಾರಿಕೆ ಕುರಿತು ಉಗ್ರ ಸಂಘಟನೆಯೊಂದನ್ನು ಸಂಪರ್ಕಿಸಲು ಕೂಡ ಮುಂದಾಗಿದ್ದ. ಆದರೆ ಅದಕ್ಕೆ ಧೈರ್ಯ ಸಾಲದೆ ಸುಮ್ಮನಾಗಿದ್ದ ಎಂದು ಮೂಲಗಳು ತಿಳಿಸಿವೆ.

ಆರೋಪಿಯ ವಿಚಾರಣೆ

ಆರೋಪಿಯ ವಿಚಾರಣೆ

ಆದಿತ್ಯರಾವ್ ಆರೋಪಿ ಎಂದು ಶಂಕೆ ವ್ಯಕ್ತವಾಗಿತ್ತು. ಡಿಜಿ & ಐಜಿಪಿ ನಿವಾಸಕ್ಕೆ ತೆರಳಿ ಆತನೇ ಹಾಜರಾಗಿದ್ದಾನೆ. ಬಳಿಕ ಹಲಸೂರು ಗೇಟ್ ಪೊಲೀಸರು ಆತನನ್ನು ಬಂಧಿಸಿದ್ದರು. ಆರೋಪಿ ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಆತನನ್ನು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಬಳಿಕ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಯಲಿದೆ ಎಂದು ಹೇಳಲಾಗಿದೆ.

ತಪ್ಪೊಪ್ಪಿಗೆ ಹೇಳಿಕೆ ನೀಡಿದ ಆರೋಪಿ

ತಪ್ಪೊಪ್ಪಿಗೆ ಹೇಳಿಕೆ ನೀಡಿದ ಆರೋಪಿ

ತಾನೇ ಸ್ಫೋಟಕ ಇರಿಸಿದ್ದೆ ಎಂದು ಪೊಲೀಸರ ಎದುರು ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮೂಲಗಳು ಹೇಳಿವೆ. ಬಾಂಬ್ ಇರಿಸಿದ ಬಳಿಕ ಆತ ಅಲ್ಲಿಂದ ನೇರವಾಗಿ ಬೆಂಗಳೂರಿಗೆ ಬಂದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಆದರೆ ಸಿಸಿಟಿವಿ ದೃಶ್ಯಾವಳಿಗಳಿಂದ ಆತನ ಹೆಸರು ಬಹಿರಂಗವಾಗುತ್ತಿದ್ದಂತೆಯೇ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವುದು ತಿಳಿದು ಆತ ಶರಣಾಗಿದ್ದಾನೆ ಎನ್ನಲಾಗಿದೆ.

ಹುಸಿ ಬಾಂಬ್ ಬೆದರಿಕೆ

ಹುಸಿ ಬಾಂಬ್ ಬೆದರಿಕೆ

ಆದಿತ್ಯ ರಾವ್ ಎಂಜಿನಿಯರ್ ಮತ್ತು ಎಂಬಿಎ ಪದವೀಧರನಾಗಿದ್ದು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಹುದ್ದೆಯ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ತಾಂತ್ರಿಕ ಕಾರಣಗಳಿಂದ ಆತನ ಅರ್ಜಿ ತಿರಸ್ಕೃತಗೊಂಡಿತ್ತು. ಇದರಿಂದ ಕೋಪಗೊಂಡಿದ್ದ ಆತ 2018ರಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವನ್ನು ಸ್ಫೋಟಿಸುವುದಾಗಿ ಹುಸಿ ಬೆದರಿಕೆ ಕರೆ ಮಾಡಿದ್ದ. ಒಟ್ಟು ಮೂರು ಹುಸಿ ಬೆದರಿಕೆ ಕರೆಗಳನ್ನು ಮಾಡಿದ್ದ ಆತನನ್ನು 2018ರ ಆಗಸ್ಟ್‌ 29ರಂದು ಬಂಧಿಸಲಾಗಿತ್ತು. ನಂತರ ಆತನ ಬಿಡುಗಡೆಯಾಗಿದ್ದ.

ತಂದೆ, ತಮ್ಮನ ವಿಚಾರಣೆ

ತಂದೆ, ತಮ್ಮನ ವಿಚಾರಣೆ

ಮಣಿಪಾಲದ ಮಣ್ಣಪಲ್ಲದ ಹುಡ್ಕೋ ಕಾಲೋನಿಯ ವಸತಿ ಸಮುಚ್ಚಯವೊಂದರಲ್ಲಿ ವಾಸವಾಗಿದ್ದ ಆದಿತ್ಯನ ಕುಟುಂಬ ಇತ್ತೀಚೆಗಷ್ಟೆ ಮಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆಂದು ಮೂಲಗಳು ತಿಳಿಸಿವೆ. ಮೊದಲು ಪೊಲೀಸರು ಮಣಿಪಾಲದಲ್ಲಿ ಆತನಿಗಾಗಿ ಹುಡುಕಾಟ ನಡೆಸಿದ್ದರು. ಬಳಿಕ ಮಂಗಳೂರಿನಲ್ಲಿ ಅವರು ವಾಸವಿರುವ ಮಾಹಿತಿ ಸಿಕ್ಕಿತ್ತು. ಈ ಕೃತ್ಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಆದಿತ್ಯನ ತಂದೆ ಬಿ.ಕೃಷ್ಣಮೂರ್ತಿ ರಾವ್ ಮತ್ತು ಆದಿತ್ಯ ರಾವ್ ತಮ್ಮನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.

ಬಿಳಿ ಪೌಡರ್ ವಶ

ಬಿಳಿ ಪೌಡರ್ ವಶ

ಆದಿತ್ಯ ರಾವ್ ಸ್ಫೋಟಕ ಬಳಕೆಗೆ ಬಿಳಿ ಪೌಡರ್ ರೂಪದ ರಾಸಾಯನಿಕ ಬಳಸಿದ್ದ ಎನ್ನಲಾಗಿದೆ. ಆನ್‌ಲೈನ್ ಮೂಲಕ ಪೌಡರ್ ತರಿಸಿಕೊಂಡಿದ್ದ. ಅದನ್ನು ಆತ ಉಳಿದುಕೊಂಡಿದ್ದ ಮಂಗಳೂರಿನ ಬಲ್ಮಠ ಸಮೀಪದ ಹೋಟೆಲ್ ಒಂದರಲ್ಲಿ ಇರಿಸಿದ್ದ. ಹೋಟೆಲ್‌ನಲ್ಲಿಯೇ ಸ್ಫೋಟಕ ತಯಾರಿಸಿದ್ದ. ಮಂಗಳೂರು ಪೊಲೀಸರು ಪೌಡರ್‌ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

English summary
Suspected accuse of Mangaluru bomb case Aditya Rao surrendered in Bengaluru on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X