• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಡಿಯೂರಪ್ಪ-ಕುಮಾರಸ್ವಾಮಿ ಭೇಟಿ ಆಗುತ್ತಿದ್ದಂತೆಯೆ ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದ್ಯಾಕೆ?

|
Google Oneindia Kannada News

ಬೆಂಗಳೂರು, ಜು. 05: ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸಿಎಂ ಹಾಗೂ ಮಾಜಿ ಸಿಎಂ ಭೇಟಿ ಮುಗಿಯುತ್ತಿದ್ದಂತೆಯೆ ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಬೆಂಬಲಿತ ಪಕ್ಷೇತರ ಸಂಸದೆ ಸುಮಲತಾ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಸದ್ಯದ ರಾಜಕೀಯ ಬೆಳವಣಿಗೆ ಸಂದರ್ಭದಲ್ಲಿ ಇಬ್ಬರೂ ನಾಯಕರ ಭೇಟಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ಮಾಡಿದ್ದರು. ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಕುಮಾರಸ್ವಾಮಿ ಅವರು ಮಾತನಾಡಿದ್ದರು. ಅದಾದ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಕುಮಾರಸ್ವಾಮಿ ಅವರ ಮೇಲೆ ಹರಿಹಾಯ್ದಿದ್ದಾರೆ. ಅದಕ್ಕೆ ಕಾರಣವಾಗಿದ್ದು ಕುಮಾರಸ್ವಾಮಿ ಅವರ 'ಆ' ಹೇಳಿಕೆ. ಅದಕ್ಕೆ ರಾಜ್ಯ ಬಿಜೆಪಿ ಸರ್ಕಾರ ಮುಂದೆ ಬಂದು ಸ್ಪಷ್ಟನೆ ಕೊಟ್ಟಿದೆ. ಮಂಡ್ಯ ರಾಜಕೀಯದ ಸುತ್ತ ಇಂದು ನಡೆದ ಈ ಎಲ್ಲ ಬೆಳವಣಿಗೆಯ ಕುರಿತು ಸಮಗ್ರ ಮಾಹಿತಿ ಇಲ್ಲಿದೆ!

ಕುಮಾರಸ್ವಾಮಿ ಅವಹೇಳನಕಾರಿ ಹೇಳಿಕೆ?

ಕುಮಾರಸ್ವಾಮಿ ಅವಹೇಳನಕಾರಿ ಹೇಳಿಕೆ?

ಸುಮಲತಾ ಅಂಬರೀಶ್ ಅವರು ಮಂಡ್ಯದ ಸಂಸದರಾಗಿ ಆಯ್ಕೆಯಾದ ಬಳಿಕ ಒಂದಿಲ್ಲೊಂದು ಕಾರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ನಾಯಕರ ಮಧ್ಯೆ ಆಗಾಗ ವಾಗ್ದಾಳಿ ನಡೆಯುತ್ತಲೇ ಇದೆ. ಆದರೆ ಇಂದು ನಡೆದ ಬೆಳವಣಿಗೆ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಧ್ಯದ ಭೇಟಿಯನ್ನೇ ಮಂಕಾಗಿಸಿದೆ. ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಕುಮಾರಸ್ವಾಮಿ ಅವರು, ಮೈಶುಗರ್ ಸಕ್ಕರೆ ಕಾರ್ಖಾನೆ, ಕೆಆರ್‌ಎಸ್ ಅಣೆಕಟ್ಟು, ಮೇಕೆದಾಟು ಯೋಜನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದರು. ಆದರೆ ಸಂಸದೆ ಸುಮಲತಾ ಅವರ ಸಿಟ್ಟಿಗೆ ಕಾರಣವಾಗಿರುವುದು ಕುಮಾರಸ್ವಾಮಿ ಅವರ ಅವಹೇಳನಕಾರಿ ಹೇಳಿಕೆ!

ಸುಮಲತಾ ಕುರಿತು ಎಚ್‌ಡಿಕೆ ಹೇಳಿದ್ದೇನು?

ಸುಮಲತಾ ಕುರಿತು ಎಚ್‌ಡಿಕೆ ಹೇಳಿದ್ದೇನು?

ತಮ್ಮ ಮೇಲೆ ವಾಗ್ದಾಳಿ ನಡೆಸುವಾಗ ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಳಸಿದ್ದ ಮಾತುಗಳಿಂದ ಸಂಸದೆ ಸುಮಲತಾ ಅವರು ಗರಂ ಆಗಿದ್ದಾರೆ. ಯಡಿಯೂರಪ್ಪ ಅವರ ಭೇಟಿ ಬಳಿಕ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದ ಕುಮಾರಸ್ವಾಮಿ ಅವರು, "ಮಂಡ್ಯ ಜಿಲ್ಲೆಗೆ ಇಂತಹ ಸಂಸದೆ ಹಿಂದೆ ಬಂದಿಲ್ಲ, ಮುಂದೆ ಬರುವುದೂ ಇಲ್ಲ. ಮೊನ್ನೆ ಯಾವುದೋ ಸಭೆಯಲ್ಲಿ ಕೆಆರ್‌ಎಸ್ ಅಣೆಕಟ್ಟನ್ನು ಇವರೇ ರಕ್ಷಣೆ ಮಾಡ್ತಿರುವ ಹಾಗೆ ಹೇಳಿಕೆ ಕೊಟ್ಟಿದ್ದಾರೆ. ಕೆಆರ್‌ಎಸ್ ರಕ್ಷಣೆ ಮಾಡ್ತಾರಂತೆ ಅವರನ್ನು ಮಲಗಿಸಿಬಿಟ್ರೇ ಸರಿಯಾಗುತ್ತೆ. ಕೆಆರ್‌ಎಸ್‌ ಬಾಗಿಲಿಗೆ ನೀರು ಹೋಗದಂತೆ ಅವರನ್ನೇ ಮಲಗಿಸಿಬಿಡ್ಬೇಕು. ಕೆಲಸ ಬಗ್ಗೆ ಮಾಹಿತಿ ಇಲ್ಲದೆ ಕಾಟಾಚಾರಕ್ಕೆ, ಯಾರದ್ದೋ ಮೇಲೆ ವೈಯಕ್ತಿಕ ದ್ವೇಷಕ್ಕೆ ಹೀಗೆ ಮಾಡ್ಬಾರ್ದು" ಎಂದು ಸಂಸದೆ ಸುಮಲತಾ ಅವರ ಮೇಲೆ ಎಚ್ಡಿಕೆ ವಾಗ್ದಾಳಿ ನಡೆಸಿದ್ದರು.

ಅಣೆಕಟ್ಟಿಗೆ ಅಡ್ಡಲಾಗಿ ಮಲಗಿಸುವ ಮಾತಿಗೆ ಸುಮಲತಾ ಅಂಬರೀಶ್ ಅವರು ತೀವ್ರ ಗರಂ ಆಗಿದ್ದಾರೆ. ಕುಮಾರಸ್ವಾಮಿ ಅವರ ಮೇಲೆ ಸುಮಲತಾ ಅಂಬರೀಶ್ ಅವರು ಹರಿಹಾಯ್ದಿದ್ದಾರೆ.

ಮಾಜಿ ಸಿಎಂ ಆದವರಿಗೆ ಕನಿಷ್ಠ ಜ್ಞಾನ ಬೇಡ್ವಾ?

ಮಾಜಿ ಸಿಎಂ ಆದವರಿಗೆ ಕನಿಷ್ಠ ಜ್ಞಾನ ಬೇಡ್ವಾ?

ತಮ್ಮ ಕುರಿತು ಕುಮಾರಸ್ವಾಮಿ ಅವರು ಕೊಟ್ಟಿರುವ ಹೇಳಿಕೆಗೆ ಸುಮಲತಾ ಅಂಬರೀಶ್ ಗರಂ ಆಗಿಯೇ ಉತ್ತರಸಿದ್ದಾರೆ. "ಒಬ್ಬ ಮಹಿಳೆಯ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯೇ? ಮಾಧ್ಯಮದ ಮುಂದೆ ಹೇಗೆ ಮಾತನಾಡಬೇಕು ಎಂಬ ಕನಿಷ್ಠ ಜ್ಞಾನ ಸಿಎಂ ಆದವರಿಗೆ ಬೇಡ್ವಾ? ಅಂತಹ ಹೇಳಿಕೆಗೆ ನಾನು ಕೇರ್ ಮಾಡಲ್ಲ, ತಲೆ ಕೆಡಿಸಿಕೊಳ್ಳುವುದೂ ಇಲ್ಲ. ಅವರ ಮಾತುಗಳಿಂದ ಅವರ ಸಂಸ್ಕಾರ ಗೊತ್ತಾಗುತ್ತಿದೆ. ಅವರ ವ್ಯಕ್ತಿತ್ವ ಎಂಥದ್ದು ಎಂಬುದನ್ನು ಅವರೇ ಬಿಚ್ಚಿಟ್ಟುಕೊಳ್ತಿದ್ದಾರೆ. ದೊಡ್ಡ ಹಗರಣ ನಡೆಯುತ್ತಿದೆ. ಇದು ಗೊತ್ತಿದ್ದು ಯಾಕೆ ಸುಮ್ಮನಿದ್ದರು? ಎಂಬುದು ಗೊತ್ತಾಗ್ತಿದೆ. ಕೆಆರ್‌ಎಸ್ ಬಗ್ಗೆ ನಾನು ಕಾಳಜಿ ವಹಿಸುತ್ತಿದ್ದೇನೆ. ಇವರಿಗೆ ಯಾಕೆ ಸಮಸ್ಯೆ ಆಗುತ್ತದೆ? ಮಂಡ್ಯದಲ್ಲಿ ಏನೇನು ನಡೆಯುತ್ತಿದೆ ಎಲ್ಲವೂ ನನಗೇ ಗೊತ್ತು" ಎಂದು ಕುಮಾರಸ್ವಾಮಿ ವಿರುದ್ಧ ಸುಮಲತಾ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಭೇಟಿ ಮಾಡಿ ಸ್ಪಷ್ಟನೆ ಕೊಟ್ಟ ಸುಮಲತಾ!

ಸಿಎಂ ಭೇಟಿ ಮಾಡಿ ಸ್ಪಷ್ಟನೆ ಕೊಟ್ಟ ಸುಮಲತಾ!

ತಮ್ಮ ಕುರಿತು ಕುಮಾರಸ್ವಾಮಿ ಅವರು ಹೇಳಿಕೆ ಕೊಡುತ್ತಿದ್ದಂತೆಯೆ ಸಂಸದೆ ಸುಮಲತಾ ಅಂಬರೀಶ್ ಅವರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಜೊತೆಗೆ ಕುಮಾರಸ್ವಾಮಿ ಅವರು ಕೊಟ್ಟಿರುವ ಹೇಳಿಕೆಯ ಕುರಿತೂ ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ. ಕೆಆರ್‌ಎಸ್ ಅಣೆಕಟ್ಟಿನ ಸಮೀಪದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ಸುಮಲತಾ ಅಂಬರೀಶ್ ಅವರು ಸಿಎಂ ಯಡಿಯೂರಪ್ಪ ಅವರಿಗೆ ತಿಳಿಸಿದ್ದಾರೆ ಎಂದೂ ತಿಳಿದು ಬಂದಿದೆ. ಇದೇ ವಿಚಾರದ ಕುರಿತು ಸರ್ಕಾರ ಸ್ಪಷ್ಟನೆಯನ್ನೂ ಕೊಟ್ಟಿದೆ.

  Ravi Shastri ಅವಧಿ ಮುಕ್ತಾಯ Rahul Dravid ಆಗ್ತಾರಾ ಟೀಂ ಇಂಡಿಯಾ ಗುರು | Oneindia Kannada
  ಕೆಆರ್‌ಎಸ್‌ ಕುರಿತು ಸರ್ಕಾರದ ಸ್ಪಷ್ಟನೆ!

  ಕೆಆರ್‌ಎಸ್‌ ಕುರಿತು ಸರ್ಕಾರದ ಸ್ಪಷ್ಟನೆ!

  ಇಬ್ಬರೂ ನಾಯಕರ ಮಾತಿನ ವಿನಿಮಯಕ್ಕೆ ರಾಜ್ಯ ಬಿಜೆಪಿ ಸರ್ಕಾರ ಕೂಡ ಬೆಚ್ಚಿಬಿದ್ದಿದೆ. ಈ ಬೆಳವಣಿಗೆಯ ಕುರಿತು ಸರ್ಕಾರದ ಪರವಾಗಿ ಹೇಳಿಕೆ ನೀಡಿರುವ ಕಂದಾಯ ಸಚಿವ ಆರ್ ಅಶೋಕ್ ಅವರು, "ಕೆಆರ್‌ಎಸ್ ಡ್ಯಾಂ ವಿಚಾರದಲ್ಲಿ ಪದೇ ಪದೇ ಬಿರುಕು ಅನ್ನೋ ಮಾಹಿತಿ ರವಾನೆ ಆಗಬಾರದು. ಅದನ್ನು ನೋಡಿಕೊಳ್ಳಲು ನೀರಾವರಿ ತಜ್ಞರು, ಕಾವೇರಿ ನೀರಾವರಿ ನಿಗಮ ಇದೆ. ಕೆಳಭಾಗದ ರೈತರಿಗೆ ತಪ್ಪು ಮಾಹಿತಿಯ ಸಂದೇಶ ರವಾನೆಯಾಗಬಾರದು. ಲಕ್ಷಾಂತರ ಮಂದಿ ರೈತರ ಜೊತೆಗೆ ಆಟವಾಡಬಾರದು. ಸಂಸದೆ ಸುಮಲತಾ ಅವರು ಹೇಳಬಾರದು, ಕುಮಾರಸ್ವಾಮಿ ಅವರೂ ಕೂಡ ಹೇಳಬಾರದು. ಅದು ಅವರ ವೈಯಕ್ತಿಕ ಅಭಿಪ್ರಾಯ ಮಾಹಿತಿ ಇರಬಹುದು. ಆ ಬಗ್ಗೆ ವಸ್ತುನಿಷ್ಠವಾಗಿ ತಜ್ಞರು ಪರಿಶೀಲನೆ ಮಾಡುತ್ತಾರೆ" ಎಂದು ಸ್ಪಷ್ಟನೆ ನೀಡಿದ್ದಾರೆ.

  English summary
  Mandya MP Sumalatha Ambarish expresses outrage over former CM H.D. Kumaraswamy's statement. Know more.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X