ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಆರ್‌ಎಸ್ ಡ್ಯಾಂ ಕುರಿತು ಸಂಸದೆ 'ಸುಮಲತಾ ಅಂಬರೀಶ್ ಯುಟರ್ನ್ ಹೇಳಿಕೆ' ಹಿಂದಿನ ಕಾರಣ ಇದು!

|
Google Oneindia Kannada News

ಬೆಂಗಳೂರು, ಜು. 14: ಕೆಆರ್‌ಎಸ್ ಅಣೆಕಟ್ಟು ಕುರಿತು ಹೇಳಿಕೆ ಕೊಟ್ಟು ಸಂಚಲನ ಮೂಡಿಸಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಯುಟರ್ನ್ ಹೊಡೆದಿದ್ದಾರೆ. ಸುಮಲತಾ ಅವರು ಮೈಸೂರಿನಲ್ಲಿ ಈ ಕುರಿತು ಕೊಟ್ಟಿರುವ ಹೇಳಿಕೆ ಇದೀಗ ಅಚ್ಚರಿ ಮೂಡಿಸಿದೆ.

ಅಕ್ರಮ ಗಣಿಗಾರಿಕೆಯಿಂದ ಕೆ.ಆರ್.ಎಸ್. ಡ್ಯಾಂ ಬಿರುಕು ಬಿಟ್ಟಿದೆ ಎಂದು ಕೆಲ ದಿನಗಳ ಹಿಂದೆ ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ಹೇಳಿಕೆ ನೀಡಿದ್ದರು. ಸುಮಲತಾ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೊಟ್ಟಿದ್ದ ಪ್ರತಿಕ್ರಿಯೆಯು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಅದೇ ವಿಚಾರವನ್ನಿಟ್ಟುಕೊಂಡು ಸಂಸದೆ ಸುಮಲತಾ ಅವರು ಕೆಆರ್‌ಎಸ್‌ ಅಣೆಕಟ್ಟು ಸಮೀಪದ ಗಣಿಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಜೊತೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರನ್ನೂ ಭೇಟಿ ತನಿಖೆಗೆ ಮನವಿ ಮಾಡಿದ್ದರು. ಅದಾದ ಬಳಿಕ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ಕೊಡುವ ಅಧಿಕಾರಿಗಳನ್ನು ಅಮಾನತುಗೊಳಿಸಿ ಕಠಿಣಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸಚಿವ ನಿರಾಣಿ ಕೊಟ್ಟಿದ್ದರು.

ಇದೀಗ ಮೈಸೂರಿನಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ಕೊಟ್ಟಿರುವ ಹೇಳಿಕೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಕೆಆರ್‌ಎಸ್‌ ಡ್ಯಾಂ ಕುರಿತು ಸುಮಲತಾ ಯುಟರ್ನ್!

ಕೆಆರ್‌ಎಸ್‌ ಡ್ಯಾಂ ಕುರಿತು ಸುಮಲತಾ ಯುಟರ್ನ್!

ಕೆಆರ್‌ಎಸ್‌ ಅಣೆಕಟ್ಟಿನ ಬಿರುಕಿಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಯುಟರ್ನ್‌ ಹೊಡೆದಿದ್ದಾರೆ. ಮೈಸೂರಿನಲ್ಲಿ ಇಂದು (ಜು.14) ಸಂಸದೆ ಸುಮಲತಾ ಅವರು, "ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿದೆ ಅಂತ ನಾನು ಹೇಳೇ ಇಲ್ಲ" ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

"ಕೆ.ಆರ್‌.ಎಸ್‌. ಡ್ಯಾಂ ಬಿರುಕು ಬಿಟ್ಟಿದೆಯಾ? ಅಂತಾ ನಾನು ಸಂಸದೆಯಾಗಿ ಆತಂಕವನ್ನು ದಿಶಾ ಸಭೆಯಲ್ಲಿ ವ್ಯಕ್ತಪಡಿಸಿದ್ದೇನೆ. ಕೆ.ಆರ್.ಎಸ್. ಡ್ಯಾಂ ಬಿರುಕು ಬಿಡುವ ಆತಂಕ ಶೇಕಡ 5 ನೂರರಷ್ಟು ಆತಂಕ ಇದ್ದೆ ಇದೆ. ನಾನು ಸಭೆಯಲ್ಲಿ ಹೇಳಿದ್ದನ್ನು ಹೊರಗೆ ಬೇರೆ ರೀತಿಯಲ್ಲಿ ಅರ್ಥೈಸಿ ಇಷ್ಟೆಲ್ಲ ಮಾಡುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಗಣಿ ಇಲಾಖೆಯ ಅಧಿಕಾರಿಗಳು ಕೂಡ ಡ್ಯಾಂಗೆ ಏನೂ ಆಗಿಲ್ಲ ಎಂಬಂತೆ ಮಾತನಾಡುತ್ತಾರೆ. ಆ ಆಧಿಕಾರಿಗಳ ಮೇಲೆಯೂ ಒತ್ತಡಗಳು ಇರಬಹುದು. ಹೀಗಾಗಿ ಅಕ್ರಮ ಗಣಿಗಾರಿಕೆ ಬಗ್ಗೆ ಸ್ವತಂತ್ರ ತನಿಖೆಯಾಗಬೇಕು" ಎಂದು ಆಗ್ರಹಿಸಿದ್ದಾರೆ.

ಸಿಬಿಐ ತನಿಖೆಗೆ ಸಂಸದ ಸುಮಲತಾ ಆಗ್ರಹ

ಇದೇ ಸಂದರ್ಭದಲ್ಲಿ, "ಕೆಆರ್‌ಎಸ್‌ ಸುತ್ತಲೂ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ರಾಜ್ಯದ ಅಧಿಕಾರಿಗಳಿಂದ ಸಾಧ್ಯವಾಗದಿದ್ದರೆ ಸಿಬಿಐ ತನಿಖೆ ಮಾಡಿಸಲಿ. ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಪ್ರತಿ ವರ್ಷ 12 ನೂರು ಕೋಟಿ ರೂ. ನಷ್ಟ ಆಗಿದೆ. ಅಷ್ಟೂ ರಾಜಧನ ವಸೂಲಿ ಮಾಡಿದ್ದರೆ ಮಂಡ್ಯದ ಅಭಿವೃದ್ಧಿಗೆ ಬಳಸಬಹುದಿತ್ತು. ಈಗ ನೋಡಿದ್ರೆ ಗಣಿ ಇಲಾಖೆ ಅಧಿಕಾರಿಗಳು ಡ್ರೋಣ್ ಸರ್ವೆಗೂ ಹಣ ಇಲ್ಲ ಎನ್ನುತ್ತಿದ್ದಾರೆ. ನಾನು ಗಣಿ ಸಚಿವ ಮುರುಗೇಶ್ ನಿರಾಣಿ ಅವರಿಗೆ ಎಲ್ಲವನ್ನು ಹೇಳಿದ್ದೇನೆ. ಅವರನ್ನು ಕರೆದುಕೊಂಡು ಬಂದು ಗಣಿ ಅಕ್ರಮದ ಪ್ರದೇಶ ಭೇಟಿ ಮಾಡಿಸುತ್ತೇವೆ. ನಂತರ ವಸ್ತು ಸ್ಥಿಗತಿ ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡಲಾಗುವುದು" ಎಂದು ಮೈಸೂರಿನಲ್ಲಿ ಸಂಸದೆ ಸುಮಲತಾ ಹೇಳಿಕೆ ನೀಡಿದ್ದಾರೆ.

ಅಣೆಕಟ್ಟು ಬಿರುಕು ಬಿಟ್ಟಿದೆ ಎಂದಿದ್ದ ಸುಮಲತಾ!

ಅಣೆಕಟ್ಟು ಬಿರುಕು ಬಿಟ್ಟಿದೆ ಎಂದಿದ್ದ ಸುಮಲತಾ!

ಕಲ್ಲು ಗಣಿಗಾರಿಕೆ ಸ್ಫೋಟದಿಂದ ಕೆಆರ್ಎಸ್‌ ಡ್ಯಾಂ ಬಿರುಕು ಬಿಟ್ಟಿದೆ ಎಂದು ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ಈ ಮೊದಲು ಆರೋಪಿಸಿದ್ದರು. ಅವರ ಹೇಳಿಕೆ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. "ಹೌದು ಒಂದು ಕ್ರ್ಯಾಕ್ ಬಂದಿದೆ. ಆ ಕ್ರ್ಯಾಕು ಯಾವ ಕಾರಣಕ್ಕೆ ಎನ್ನುವುದನ್ನು ತನಿಖೆ ಮಾಡುವುದಕ್ಕೆ ಬಿಡ್ತಾ ಇಲ್ಲ. ಸ್ಥಳೀಯ ಮುಖಂಡರು ನಾವು ಅಲ್ಲಿಗೆ ಹೋಗಿ ತನಿಖೆ ಮಾಡುವುದಕ್ಕೂ ಬಿಡ್ತಾ ಇಲ್ಲ. ಯಾಕೆ ಅವರು ತಡೆ ಹಾಕುತ್ತಿದ್ದಾರೆ?" ಎಂದು ಸಂಸದೆ ಸುಮಲತಾ ಪ್ರಶ್ನೆ ಮಾಡಿದ್ದರು.


ಜೊತೆಗೆ, "ನಾಳೆ ದಿನ ಕೆಆರ್‌ಎಸ್‌ ಅಣೆಕಟ್ಟಿಗೆ ಏನಾದರೂ ಒಂದು ಹೆಚ್ಚು ಕಡ್ಮೆ ಆದರೆ, ಆವಾಗ ಏನ್ ಮಾಡ್ತೇವೆ ನಾವು? ರಾಜಕಾರಣ ಮಾಡಕೊಂಡು ಕೂತ್ಕೊಂಡ್ರೆ ಎಷ್ಟು ನಷ್ಠ ಆಗಬಹುದು? ಏನು ಡಿಸಾಸ್ಟರ್ಸ್ ಆಗಬಹುದು ಅನ್ನೋದನ್ನು ಯಾರಾದರೂ ಊಹೆ ಮಾಡ್ತೀರಾ? ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡದಿದ್ದರೆ ಮುಂದೆ ಅಂಕಷ್ಟ ಕಾದಿದೆ ಎಂದಿದ್ದರು. ಈ ಬಗ್ಗೆ ಅವರು ಮಾತನಾಡಿದ್ದ ವಿಡಿಯೋ 'ಒನ್‌ಇಂಡಿಯಾ' ಕನ್ನಡದ ಬಳಿಯಿದೆ.

ಕೆಆರ್‌ಎಸ್‌ ಕುರಿತು ಎಚ್‌ಡಿಕೆ-ಸುಮಲತಾ ವಾರ್!

ಕೆಆರ್‌ಎಸ್‌ ಕುರಿತು ಎಚ್‌ಡಿಕೆ-ಸುಮಲತಾ ವಾರ್!

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು, ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನೂ ಖಾಸಗೀಕರಣಗೊಳಿಸಬಾರದು ಎಂಬುದೂ ಸೇರಿದಂತೆ ಕೆಲವು ವಿಷಯಗಳನ್ನು ಚರ್ಚಿಸಿದ್ದರು. ಆ ಬಳಿಕ ಮಾಧ್ಯಮಗಳಿಗೆ ಅವರು ಕೊಟ್ಟಿದ್ದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು.

"ಮಂಡ್ಯ ಜಿಲ್ಲೆಗೆ ಇಂತಹ ಸಂಸದೆ ಹಿಂದೆ ಬಂದಿಲ್ಲ, ಮುಂದೆ ಬರುವುದೂ ಇಲ್ಲ. ಮೊನ್ನೆ ಯಾವುದೋ ಸಭೆಯಲ್ಲಿ ಕೆಆರ್‌ಎಸ್ ಅಣೆಕಟ್ಟನ್ನು ಇವರೇ ರಕ್ಷಣೆ ಮಾಡ್ತಿರುವ ಹಾಗೆ ಹೇಳಿಕೆ ಕೊಟ್ಟಿದ್ದಾರೆ. ಕೆಆರ್‌ಎಸ್ ರಕ್ಷಣೆ ಮಾಡ್ತಾರಂತೆ ಅವರನ್ನೇ ಅಣೆಕಟ್ಟಿಗೆ ಅಡ್ಡ ಮಲಗಿಸಿಬಿಟ್ರೇ ಸರಿಯಾಗುತ್ತೆ. ಕೆಆರ್‌ಎಸ್‌ ಬಾಗಿಲಿಗೆ ನೀರು ಹೋಗದಂತೆ ಅವರನ್ನು ಮಲಗಿಸಿಬಿಡ್ಬೇಕು. ಕೆಲಸ ಬಗ್ಗೆ ಮಾಹಿತಿ ಇಲ್ಲದೆ ಕಾಟಾಚಾರಕ್ಕೆ, ಯಾರದ್ದೋ ಮೇಲೆ ವೈಯಕ್ತಿಕ ದ್ವೇಷಕ್ಕೆ ಹೀಗೆ ಮಾಡಬಾರದು" ಎಂದು ಸಂಸದೆ ಸುಮಲತಾ ಅವರ ಮೇಲೆ ಎಚ್ಡಿಕೆ ವಾಗ್ದಾಳಿ ನಡೆಸಿದ್ದರು.

ನಂತರ ಇಬ್ಬರ ಮಧ್ಯೆ ವಾಕ್ಸಮರ!

ನಂತರ ಇಬ್ಬರ ಮಧ್ಯೆ ವಾಕ್ಸಮರ!

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹೊರಡುತ್ತಿದ್ದಂತೆಯೆ ಸುಮಲಾ ಕೂಡ ಸಿಎಂ ಭೇಟಿ ಮಾಡಿದ್ದರು. ತಮ್ಮ ಕುರಿತು ಕುಮಾರಸ್ವಾಮಿ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಾರೆಂದು ಅದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಗಮನಕ್ಕೆ ಸುಮಲತಾ ತಂದಿದ್ದರು. ಸಂಸದೆ ಸುಮಲತಾ ಕುರಿತು ಮಾಜಿ ಸಿಎಂ ಎಚ್‌ಡಿಕೆ ಕೊಟ್ಟಿದ್ದ ಹೇಳಿಕೆ ನಂತರ ಇಡೀ ರಾಜ್ಯದಲ್ಲಿ ಪರ ಹಾಗೂ ವಿರೋಧದ ಚರ್ಚೆಗೆ ಕಾರಣವಾಗಿತ್ತು.

ಇದೆಲ್ಲ ಆದ ಬಳಿಕ ಸಂಸದೆ ಸುಮಲತಾ ಅವರು ಕೆಆರ್ಎಸ್‌ ಸುತ್ತಲೂ ನಡೆಯುತ್ತಿರುವ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರನ್ನೂ ಭೇಟಿ ಮಾಡಿ ಸ್ಥಳಪರಿಶೀಲನೆ ನಡೆಸುವಂತೆ ಮನವಿ ಪತ್ರ ಕೊಟ್ಟಿದ್ದರು. ಆದರೆ ಇದೀಗ, "ನಾನು ಹಾಗೇ ಹೇಳಿಯೇ ಇಲ್ಲ" ಎಂಬ ಹೇಳಿಕೆ ಕೊಡುವ ಮೂಲಕ ಸುಮಲತಾ ಅಂಬರೀಶ್ ಅಚ್ಚರಿ ಮೂಡಿಸಿದ್ದಾರೆ!

Recommended Video

ಮುಸ್ಲಿಂ ಬಾಂಧವರ ಜೊತೆ ಸಮಯ ಕಳೆದ ಡಿಕೆ ಶಿವಕುಮಾರ್ | Oneindia Kannada
ಸುಮಲತಾ ಆರೋಪಕ್ಕೆ ಸರ್ಕಾರದ ಸ್ಪಷ್ಟನೆ!

ಸುಮಲತಾ ಆರೋಪಕ್ಕೆ ಸರ್ಕಾರದ ಸ್ಪಷ್ಟನೆ!

ಸಂಸದೆ ಸುಮಲತಾ ಅಂಬರೀಶ್ ಅವರ ಗಂಭೀರ ಆರೋಪದ ಬಳಿಕ ರಾಜ್ಯ ಸರ್ಕಾರ ಸ್ಪಷ್ಟನೆ ಕೊಟ್ಟಿತ್ತು. ಕಾವೇರಿ ಜಲ ನಿಗಮದ ಎಂ.ಡಿ. ಜೈಪ್ರಕಾಶ್ ಅವರು, ಕೆಆರ್ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ನಿಗಮದಿಂದ ಪರಿಶೀಲನೆ ನಡೆಸಲಾಗಿದೆ ಎಂದು ಸ್ಪಷ್ಟನೆ ಕೊಟ್ಟಿದ್ದರು. ಈ ಬಗ್ಗೆ ಅಣೆಕಟ್ಟು ಪರಿಶೀಲನಾ ಸಮಿತಿ (DSPR) ಸದಸ್ಯರು ಹಾಗೂ ಇಲಾಖಾ ಮುಖ್ಯಸ್ಥರು ಡ್ಯಾಂನ್ನು ಕಾಲಕಾಲಕ್ಕೆ ಪರಿಶೀಲಿಸಿ ವರದಿಯನ್ನು ಕೊಟ್ಟಿದೆ. Body Wallನಲ್ಲಿ ಯಾವುದೇ ತರಹದ ಬಿರುಕುಗಳು ಇಲ್ಲ ಎಂದು ನಿಯಮಿತ (Post and pre mansoon inspections) ಅವಧಿಯಲ್ಲಿ ಪರಿಶೀಲನಾ ವರದಿಯನ್ನು ಅಣೆಕಟ್ಟು ಭದ್ರತಾ ವಿಭಾಗಕ್ಕೆ ಸಲ್ಲಿಸಿ ಗಮನ ಕೊಡಲಾಗಿದೆ ಎಂದು ಅಧಿಕೃತ ಮಾಹಿತಿ ಕೊಟ್ಟಿದ್ದರು.

ಜೊತೆಗೆ ಇದೇ ಜುಲೈ 02 ರಂದು DRIP consultant ಹಾಗೂ ರಾಜ್ಯದ ಗೇಟ್ ಸಲಹಾ ಸಮಿತಿ ಸಮಿತಿ ಸದಸ್ಯರು ಡ್ಯಾಂನ 136 ಗೇಟ್ ಬದಲಾವಣೆ ಕಾಮಗಾರಿ ಪರಿಶೀಲನೆ ಮಾಡಿರುತ್ತಾರೆ. ಹಾಗೂ ಡ್ಯಾಂನ Body Wallನಲ್ಲಿ ಯಾವುದೇ ತರಹದ Structural defects ಇರುವುದಿಲ್ಲ ಎಂದು ತಿಳಿಸಿದ್ದಾಗಿ ಕಾವೇರಿ ಜಲ ನಿಗಮದ ಎಂ.ಡಿ. ಜೈಪ್ರಕಾಶ್ ಅಧಿಕೃತ ಸ್ಪಷ್ಟನೆ ಕೊಟ್ಟಿದ್ದರು. ಇದೀಗ ಸಂಸದೆ ಸುಮಲತಾ ಅವರು ಸರ್ಕಾರದ ಸ್ಪಷ್ಟನೆ ಸಮರ್ಥಿಸುವಂತಹ ಹೇಳಿಕೆ ನೀಡಿದ್ದಾರೆ.

English summary
Mandya MP Sumalatha Ambarish, who made a statement on the KRS dam carck has been taken you turn. Sumalatha Ambareesh's 2 different statements on KRS Dam Crack Issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X