ಬೆಳಗಾವಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ: ಕಿಡಿ ಹಚ್ಚಿಸಿದ ಅಜಿತ್ ಪವಾರ್ಗೆ ಬಿಎಸ್ವೈ ತಿರುಗೇಟು
ಮುಂಬೈ, ನವೆಂಬರ್ 18: ಕರ್ನಾಟಕದಲ್ಲಿ ಮರಾಠಾ ಅಭಿವೃದ್ಧಿ ನಿಗಮದ ರಚನೆ ಘೋಷಣೆ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಮೂಲಕ ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಕನಸನ್ನು ಸಾಕಾರಗೊಳಿಸಬೇಕು ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಬಾಳ ಠಾಕ್ರೆ ಅವರ ಎಂಟನೇ ಪುಣ್ಯತಿಥಿಯ ಸಂದರ್ಭದಲ್ಲಿ ಶಿವಸೇನಾ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಮುಂತಾದವರು ದಾದರ್ನ ಶಿವಾಜಿ ಪಾರ್ಕ್ನಲ್ಲಿನ ಸ್ಮೃತಿಸ್ಥಳದಲ್ಲಿ ಬಾಳ ಠಾಕ್ರೆ ಅವರ ಸಮಾಧಿಗೆ ವಂದನೆ ಸಲ್ಲಿಸಿದ ಸಂದರ್ಭದಲ್ಲಿ ಅಜಿತ್ ಪವಾರ್ ಈ ಹೇಳಿಕೆ ನೀಡಿದ್ದಾರೆ.
ಬಾಳ ಠಾಕ್ರೆ ಅವರು ಮಹಾರಾಷ್ಟ್ರದ ಗೌರವ, ಮರಾಠಿಗರ ಘನತೆ ಮತ್ತು ಜನಸಾಮಾನ್ಯರ ನ್ಯಾಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಹೋರಾಡಿದರು ಎಂದು ಅಜಿತ್ ಪವಾರ್ ಶ್ಲಾಘಿಸಿದ್ದರು.
'ಮಹಾರಾಷ್ಟ್ರದ ಸಂಪೂರ್ಣ ಬೆಳವಣಿಗೆ ಮತ್ತು ಕರ್ನಾಟಕದಲ್ಲಿರುವ ಅಧಿಕ ಮರಾಠಿ ಭಾಷಿಕ ಜನಸಂಖ್ಯೆಯುಳ್ಳ ಪ್ರದೇಶಗಳಾದ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎನ್ನುವುದು ಬಾಳ ಠಾಕ್ರೆ ಅವರ ಕನಸಾಗಿತ್ತು. ಆ ಕನಸನ್ನು ನನಸು ಮಾಡಲು ನಾವು ಪ್ರಯತ್ನ ಮಾಡೋಣ' ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಯಡಿಯೂರಪ್ಪ ಕಿಡಿ:
ಅಜಿತ್ ಪವಾರ್ ಹೇಳಿಕೆಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಖಂಡಿಸಿದ್ದಾರೆ. 'ಅಜಿತ್ ಪವಾರ್ ಅವರು ಕ್ಯಾತೆ ತೆಗೆಯುವ ಮೂಲಕ ಜನರಲ್ಲಿ ಗೊಂದಲ ಉಂಟುಮಾಡುವ ಪ್ರಯತ್ನ ಮಾಡುತ್ತಿದ್ದು, ಅದನ್ನು ಖಂಡಿಸುತ್ತೇನೆ. ಮಹಾಜನ್ ಆಯೋಗದ ತೀರ್ಪು ಇಲ್ಲಿ ಅಂತಿಮ. ಇದು ಇಡೀ ಜಗತ್ತಿಗೆ ಗೊತ್ತಿದೆ' ಎಂದು ಅವರು ಕಿಡಿಕಾರಿದ್ದಾರೆ.
ಅಜಿತ್ ಪವಾರ್ ಉದ್ದಟತನದಿಂದ ಮಾತನಾಡಿದ್ದಾರೆ. ಅವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಮರಾಠಿಗರೂ ನಮ್ಮ ರಾಜ್ಯದ ಕನ್ನಡಿಗರು. ಕನ್ನಡಿಗ ಮರಾಠರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚಿಸಿದ್ದೇವೆ. ಇದರಲ್ಲಿ ಗೊಂದಲ ಬೇಡ ಎಂದು ಯಡಿಯೂರಪ್ಪ ಹೇಳಿದ್ದಾರೆ.