ಮಹಾದಾಯಿ ವಿವಾದ, ಫೆಬ್ರವರಿ ಮೊದಲ ವಾರದಲ್ಲಿ ಸರ್ವಪಕ್ಷದ ಸಭೆ: ಸಿಎಂ

Posted By: ಯಶಸ್ವಿನಿ ಎಂಕೆ
Subscribe to Oneindia Kannada
   ಮಹಾದಾಯಿ ವಿಚಾರವಾಗಿ ಸರ್ವಪಕ್ಷದ ಸಭೆ : ಸಿಎಂ | Oneindia Kannada

   ಮೈಸೂರು, ಜನವರಿ 12 : ಮಹಾದಾಯಿ ಜಲ ವಿವಾದ ಬಗೆಹರಿಸಲು ಜನವರಿ ಅಂತ್ಯದೊಳಗೆ ಅಥವಾ ಫೆಬ್ರವರಿ ಮೊದಲ ವಾರ ಸರ್ವಪಕ್ಷ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

   ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಮಹಾದಾಯಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ 'ರೈತ ಸೇನಾ ಕರ್ನಾಟಕ ಸಂಘ'ದ ಪದಾಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಫೆಬ್ರವರಿ 2ರಂದು ಸರ್ವ ಪಕ್ಷ ಮುಖಂಡರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದೇವೆ. ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲಾಗುವುದು," ಎಂದು ಹೇಳಿದರು.

   ಪರಿಕ್ಕರ್ ಯು ಟರ್ನ್, ಮಹಾದಾಯಿ ವಿವಾದದಲ್ಲಿ ಮಾತುಕತೆ ಸಾಧ್ಯವಿಲ್ಲ

   "ಬಿಜೆಪಿಯವರು ಚುನಾವಣೆ ಸಮೀಪದಲ್ಲಿ ಸಮಸ್ಯೆ ಬಗೆಹರಿಸಿ ಮತದಾರರನ್ನು ಓಲೈಕೆ ಮಾಡಲು ಯತ್ನಿಸುತ್ತಿದ್ದಾರಾ?" ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, "ಬಿಜೆಪಿಯವರನ್ನು ಸಮಸ್ಯೆ ಬಗೆಹರಿಸಬೇಡಿ ಎಂದು ಯಾರು ಹೇಳಿದ್ದಾರೆ? ನೀರಿನಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಸಮಸ್ಯೆ ಬಗೆಹರಿಸಲು ಮುಂದಾಗಲಿ. ಕೇಂದ್ರದಲ್ಲಿ ಅವರ ಸರ್ಕಾರವೇ ಇದೆ. ಜನರಿಗೆ ಒಳ್ಳೆಯದಾದರೆ ಅವರ ಕೆಲಸವನ್ನು ಸ್ವಾಗತಿಸುತ್ತೇನೆ," ಎಂದರು.

   Mahadayi row: All-party meeting in first week of February says Siddaramaiah

   ಮಹಾದಾಯಿ ನೀರಿನ ಸಮಸ್ಯೆ ನಿವಾರಣೆಗಾಗಿ ರೈತ ಸಂಘಟನೆಗಳು ಜ. 25ರಂದು ಕರ್ನಾಟಕ ಬಂದ್ ಮಾಡಲು ಕರೆ ನೀಡಿದ್ದು, "ಬಂದ್‍ಗೆ ಸರ್ಕಾರದ ವಿರೋಧವಿಲ್ಲ. ಆದರೆ ಕಾನೂನು ಕೈಗೆತ್ತಿಕೊಂಡು ಹೋರಾಟ ಮಾಡಬಾರದು," ಎಂದು ಸ್ಪಷ್ಟಪಡಿಸಿದರು.

   ನಂತರ 'ರೈತ ಸೇನಾ ಕರ್ನಾಟಕ ಸಂಘ'ದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, "ಮುಖ್ಯಮಂತ್ರಿಗಳು ಸರ್ವ ಪಕ್ಷಗಳ ಸಭೆ ಕರೆದು, ಸಮಸ್ಯೆ ಬಗೆಹರಿಸಲು ಪ್ರಧಾನಿ ಬಳಿ ನಿಯೋಗ ಕರೆದುಕೊಂಡು ಹೋಗಲಿ. ಯಾವ ಪಕ್ಷದವರೇ ಆಗಲಿ ಈ ಸಮಸ್ಯೆಯನ್ನು ಬಗೆಹರಿಸಿದರೆ ಸ್ವಾಗತ ಮಾಡುತ್ತೇವೆ," ಎಂದು ಹೇಳಿದರು.

   ಸಂಕ್ರಾಂತಿ ವಿಶೇಷ ಪುಟ

   "ಮಹಾದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ರಾಹುಲ್‍ ಗಾಂಧಿ ಅವರಿಗೆ ಪತ್ರ ಬರೆಯಲಾಗಿದೆ. ಅವರು ಗೋವಾ ಕಾಂಗೆಸ್ಸಿಗರು ಇದಕ್ಕೆ ಅಡ್ಡಿ ಪಡಿಸಿದರೆ ತಿಳಿ ಹೇಳಲಿ. 40 ವರ್ಷದಿಂದ ನೀರಿನ ವಿಚಾರವಾಗಿ ಉತ್ತರ ಕರ್ನಾಟಕ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರು ದೇಶದ ಪ್ರಧಾನಿಯಾಗಿ ಕೆಲಸ ಮಾಡಲಿ. ಪಕ್ಷದ ಪ್ರಧಾನಿಯಾಗಿ ಕೆಲಸ ಮಾಡುವುದು ಬೇಡ," ಎಂದು ತಿಳಿಸಿದರು.
   ಉಪಾಧ್ಯಕ್ಷ ಶಂಕರ್ ಅಂಬಲಿ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ ಜಿಲ್ಲೆಗಳಿಂದ 60ಕ್ಕೂ ಹೆಚ್ಚು ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Chief Minister Siddaramaiah said the all-party meeting would be called by the end of January or in the first week of February to resolve the Mahadayi water dispute.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ