ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ವೈಗೆ ಭಾರೀ ಮುಖಭಂಗ: ದಿನೇಶ್ ಗುಂಡೂರಾವ್ ಸಂದರ್ಶನ

By ಬಾಲರಾಜ್ ತಂತ್ರಿ
|
Google Oneindia Kannada News

Recommended Video

ಯಡಿಯೂರಪ್ಪನವರಿಗೆ ಬಾರಿ ಮುಖಭಂಗವಾಗಿದೆ | ದಿನೇಶ್ ಗುಂಡೂರಾವ್ ಸಂದರ್ಶನ | Oneindia Kannada

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಬೆಂಗಳೂರಿನ ಗಾಂಧಿನಗರ ಕ್ಷೇತ್ರವನ್ನು 2004ರಿಂದ ಅಂದರೆ ಸತತವಾಗಿ ಮೂರು ಬಾರಿ ಪ್ರತಿನಿಧಿಸುತ್ತಿದ್ದಾರೆ. ನಮ್ಮ ಸರಕಾರದ ಸಾಧನೆಯೇ ನಮಗೆ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಪ್ರಮುಖ ಅಸ್ತ್ರ ಎನ್ನುವುದು ದಿನೇಶ್ ಅಭಿಮತ.

ಸಿದ್ದರಾಮಯ್ಯ ಮತ್ತು ಪರಮೇಶ್ವರ್ ನೇತೃತ್ವದಲ್ಲಿ ಸಾಗುತ್ತಿರುವ ಎರಡು ಯಾತ್ರೆ, ಕರಾವಳಿಯಲ್ಲಿನ ಅಶಾಂತಿ, ಜ್ಯೋತಿಷ್ಯದ ಬಗ್ಗೆ ದಿನೇಶ್ ಗುಂಡೂರಾವ್, 'ಒನ್ ಇಂಡಿಯಾ' ಜೊತೆಗಿನ ಸಂದರ್ಶನದಲ್ಲಿ ಮನಬಿಚ್ಚಿ ಮಾತನ್ನಾಡಿದ್ದಾರೆ. ಅವರ ಸಂದರ್ಶನದ ಮುಂದುವರಿದ ಭಾಗ.

ಪ್ರ: ಜನರನ್ನು ತಲುಪಲು ಸೋಷಿಯಲ್ ಮೀಡಿಯಾ ಸರಿಯಾದ ವೇದಿಕೆನಾ?
ದಿನೇಶ್: ಹೌದು, ಆದರೆ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳಿನ ಪ್ರಚಾರ ಹೆಚ್ಚಾಗುತ್ತಿರುವುದು ವಿಷಾದನೀಯ. ಹೊನ್ನಾವರದ ಪರೇಶ್ ಮೆಸ್ತ ಸಾವಿನ ವಿಚಾರವನ್ನೇ ನೋಡಿ, ಪೋಸ್ಟ್ ಮಾರ್ಟಂ ವರದಿ ಬರುವ ಮುನ್ನವೇ, ಏನೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರವಾಯಿತು?

ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದೆ ಶೋಭಾ ಕರಂದ್ಲಾಜೆಯವರೂ ವರದಿ ಬರುವ ಮುನ್ನವೇ ಸುಳ್ಳು ಟ್ವೀಟ್ ಮಾಡಿದ್ದು ಎಲ್ಲರಿಗೂ ಗೊತ್ತು. ಈ ರೀತಿಯ ಮೆಸೇಜ್ ನಿಂದ, ಜನ ಆ ಕ್ಷಣದಲ್ಲಿ ಉದ್ವೇಗಕ್ಕೊಳಗಾಗುತ್ತಾರೆ. ಹಾಗಾಗಿ, ಅಶಾಂತಿ ಉಂಟಾಗುತ್ತದೆ, ತಪ್ಪು ಮಾಡುತ್ತಾರೆ. ಅದನ್ನು ಸರಿಪಡಿಸುವ ಕೆಲಸ ಮೊದಲು ಆಗಬೇಕು. ಜನರು ಮೊಬೈಲ್ ಫೋನ್ ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸುಧೃಡವಾದ ಸೋಷಿಯಲ್ ಮೀಡಿಯಾ ಟೀಂ ಅನ್ನು ಸಿದ್ದಮಾಡಿದೆ. ಮುಂದೆ ಓದಿ..

ಬಿಎಸ್ವೈಗೆ ಇನ್ನಿಲ್ಲದ ಮುಖಭಂಗ: ದಿನೇಶ್ ಗುಂಡೂರಾವ್ ಸಂದರ್ಶನ

ಬಿಎಸ್ವೈಗೆ ಇನ್ನಿಲ್ಲದ ಮುಖಭಂಗ: ದಿನೇಶ್ ಗುಂಡೂರಾವ್ ಸಂದರ್ಶನ

ಪ್ರ: ನಾವು ಈ ಪ್ರಶ್ನೆಯನ್ನು ಬಿಜೆಪಿ ಮುಖಂಡರಿಗೂ ಕೇಳುತ್ತೇವೆ, ಮಹದಾಯಿ ವಿಚಾರದ ಸುತ್ತ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ, ಇನ್ನು ಇಪ್ಪತ್ತು ವರ್ಷವಾದರೂ ಇದಕ್ಕೆ ಪರಿಹಾರ ಸಿಗಬಹುದಾ?
ದಿನೇಶ್: ಮಹದಾಯಿ ವಿವಾದ ಪರಿಹಾರವಾಗಲು ಎರಡು ದಾರಿಯಿದೆ, ಅದರಲ್ಲಿ, ಒಂದು ನ್ಯಾಯಾಲಯದ ಮೂಲಕ. ಮುಂದಿನ ಒಂದೆರಡು ತಿಂಗಳಲ್ಲಿ ವಿಚಾರಣೆ ಆರಂಭವಾಗುತ್ತದೆ. ಆಗಸ್ಟ್ ತಿಂಗಳಿನೊಳಗೆ ತೀರ್ಪು ಬರಬಹುದು. ಎರಡನೆಯದ್ದು ರಾಜೀ ಸೂತ್ರ. ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು, ಪಿಎಂ ಮೂರು ರಾಜ್ಯಗಳ ಸಿಎಂ ಸಭೆ ಕರೆದರೆ ಅದಕ್ಕೆ ಒಂದು ವೇದಿಕೆ ಸಿದ್ದವಾಗುತ್ತದೆ. ನಮ್ಮ ಸಿಎಂ, ಗೋವಾ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ವಿಚಾರ ಗೊತ್ತೇ ಇದೆ. ಪಾರಿಕ್ಕರ್ ಬಿಎಸ್ವೈಗೆ ಪತ್ರ ಬರೆದದ್ದು ಸ್ವಾರ್ಥದ ನಡೆ, ಆ ಪತ್ರವನ್ನು ಬಿಜೆಪಿ ತಮ್ಮ ಸಭೆಯಲ್ಲಿ ಪ್ರಸ್ತಾವಿಸುತ್ತಾರೆಂದರೆ ಅದೊಂದು ನೀಚ ರಾಜಕಾರಣ. ನೀರಿನ ವಿಚಾರದಲ್ಲೂ ಹೀಗೆ ಮಾಡುತ್ತಾರೆಂದರೆ ಇವರನ್ನು ಏನನ್ನಬೇಕು. ಬಿಜೆಪಿಯವರ ಬಳಿ ಅಸ್ತ್ರವಿದೆ. ಅವರದ್ದೇ ಕೇಂದ್ರ ಸರಕಾರ, ಗೋವಾ ಮತ್ತು ಮಹಾರಾಷ್ಟ್ರದಲ್ಲೂ ಅವರದ್ದೇ ಸರಕಾರ. ಬಿಜೆಪಿಯವರದ್ದು ಹಾವೂ ಸಾಯಬಾರದು, ಕೋಲೂ ಮುರಿಯಬಾರದು ಎನ್ನುವ ಧೋರಣೆ. ಇವತ್ತು ಮಹಾದಾಯಿ ವಿಚಾರ ಇಷ್ಟು ದೊಡ್ಡ ಸಮಸ್ಯೆಯಾಗಲು ಕಾರಣ, ಬಿಜೆಪಿ. ಯಡಿಯೂರಪ್ಪನವರಿಗೆ ಇದು ಅತಿದೊಡ್ಡ ಮುಖಭಂಗ, ಜೊತೆಗೆ ಮಹದಾಯಿ ವಿಚಾರದಲ್ಲಿ ನಮ್ಮ ಒಗ್ಗಟ್ಟು ಮುರಿಯಿತಲ್ಲ, ನಾವು ಒಂದು ಧ್ವನಿಯಾಗಿ ಮಾತನಾಡಬೇಕಿತ್ತು,ಬಿಜೆಪಿಯವರು ಇದನ್ನು ಹಾಳು ಮಾಡಿದರು. ನಮ್ಮ ಕಚೇರಿಗೆ ಬಂದು ಪ್ರತಿಭಟನೆ ಮಾಡೋದನ್ನು ನೋಡಿದರೆ, ಅವರು ಹತಾಶರಾಗಿದ್ದಾರೆ.

ಮೇಯರ್ ಅವರನ್ನು ಕರೆಸಿ, ಸೌಕರ್ಯ ಕಲ್ಪಿಸಿ ಎಂದು ಹೇಳಲು ಹೋಗಿದ್ದೆ

ಮೇಯರ್ ಅವರನ್ನು ಕರೆಸಿ, ಸೌಕರ್ಯ ಕಲ್ಪಿಸಿ ಎಂದು ಹೇಳಲು ಹೋಗಿದ್ದೆ

ಪ್ರ: ನೀವು ಬಿಜೆಪಿ ಕಚೇರಿಗೆ ಹೋಗಿದ್ದು ತಪ್ಪಲ್ಲವೇ, ಗೋವಾ ಕಾಂಗ್ರೆಸ್ ಶಾಸಕರು ನೀರು ಬಿಡಲು ವಿರೋಧ ವ್ಯಕ್ತ ಪಡಿಸುತ್ತಿದ್ದಾರಲ್ಲ?
ದಿನೇಶ್: ಬಿಜೆಪಿ ಕಚೇರಿಗೆ ನಾನು ಹೋಗಿದ್ದು, ಅಸ್ವಸ್ಥರಾಗಿದ್ದ ರೈತರನ್ನು ನೋಡಲು ರಾಜಕೀಯ ಮಾಡಲಲ್ಲ. ಮೇಯರ್ ಅವರನ್ನು ಕರೆಸಿ ರೈತರಿಗೆ ಸೂಕ್ತ ಮೂಲಭೂತ ಸೌಕರ್ಯ ಕಲ್ಪಿಸಿ ಎಂದು ಮನವಿ ಮಾಡಲು ಅಲ್ಲಿಗೆ ಹೋಗಿದ್ದೆ. ನಾನು ರೈತರ ಬಳಿ, ಧರಣಿ ನಿಲ್ಲಿಸಿ ಎಂದು ಕೇಳಿಕೊಂಡಿದ್ದೆ, ಬಿಜೆಪಿಯ ವಿರುದ್ದ ಏನನ್ನೂ ರೈತರ ಬಳಿ ಹೇಳಲಿಲ್ಲ. ಇನ್ನು, ಗೋವಾ ಕಾಂಗ್ರೆಸ್ ಆಗಲಿ, ಬಿಜೆಪಿಯಾಗಲಿ ಯಾರೂ ಸಪೋರ್ಟ್ ಮಾಡುವುದಿಲ್ಲ. ಇದು ಅವರ ರಾಜ್ಯದ ವಿಚಾರ, ಅವರು ಹೇಗೆ ಒಪ್ಪಿಕೊಳ್ಳುತ್ತಾರೆ. ಯಾವುದೇ ರಾಜ್ಯದ ಶಾಸಕರು ಆ ರಾಜ್ಯದ ಹಿತಾಶಕ್ತಿಯನ್ನು ಕಾಪಾಡುವ ಕೆಲಸವನ್ನು ಮಾಡೇ ಮಾಡುತ್ತಾರೆ. ಗೋವಾ ಮುಖ್ಯಮಂತ್ರಿ ನಮ್ಮ ಸಿಎಂಗೆ ಪತ್ರ ಬರೆದಿದ್ದರೆ ಆಗುತ್ತಿತ್ತು, ನಮ್ಮ ಕಾಂಗ್ರೆಸ್ ಮುಖಂಡರು, ಗೋವಾ ಕಾಂಗ್ರೆಸ್ ಮುಖಂಡರ ಮನವೊಲಿಸುವ ಕೆಲಸವನ್ನು ಮಾಡುತ್ತಿದ್ದೆವು.

ಸಿದ್ದರಾಮಯ್ಯನವರು ಒಂದು ಕಡೆ, ಪರಮೇಶ್ವರ್ ನೇತೃತ್ವದಲ್ಲಿ ಇನ್ನೊಂದು ಕಡೆ

ಸಿದ್ದರಾಮಯ್ಯನವರು ಒಂದು ಕಡೆ, ಪರಮೇಶ್ವರ್ ನೇತೃತ್ವದಲ್ಲಿ ಇನ್ನೊಂದು ಕಡೆ

ಪ್ರ: ಸಿದ್ದರಾಮಯ್ಯನವರು ಒಂದು ಕಡೆ, ಪರಮೇಶ್ವರ್ ನೇತೃತ್ವದಲ್ಲಿ ಇನ್ನೊಂದು ಕಡೆ ರಾಜ್ಯ ಪ್ರವಾಸ ಮಾಡುತ್ತಿರುವುದರಿಂದ, ಜನರಿಗೆ ಮತ್ತು ನಿಮ್ಮ ಪಕ್ಷದ ಕಾರ್ಯಕರ್ತರಿಗೆ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಸಂದೇಶ ರವಾನೆಯಾದಂತಾಗುವುದಿಲ್ಲವೇ?
ದಿನೇಶ್: ಇದು ಪಕ್ಷದ ನಿರ್ಧಾರ. ಮುಖ್ಯಮಂತ್ರಿಗಳ ಯಾತ್ರೆ ಸರಕಾರೀ ಕಾರ್ಯಕ್ರಮ. ಶಂಕುಸ್ಥಾಪನೆ, ಉದ್ಘಾಟನೆ, ಸರಕಾರದ ಯೋಜನೆಗಳು, ಫಲಾನುಭವಿಗಳಿಗೆ ತಲುಪುವಂತದ್ದು, ಸರಕಾರದ ಸಾಧನೆಗಳ ಬಗ್ಗೆ ಮುಖ್ಯಮಂತ್ರಿಗಳು ತಮ್ಮ ಯಾತ್ರೆಯ ವೇಳೆ ವಿವರಿಸುತ್ತಿದ್ದಾರೆ. ಬಹುತೇಕ ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಕ್ಕೆ ಸಿಎಂ ಹೋಗುತ್ತಿದ್ದಾರೆ. ಜೊತೆಗೆ, ಇತರ ಪಕ್ಷಗಳ ಶಾಸಕರು ಇರುವ ಕ್ಷೇತ್ರಕ್ಕೂ ಸಿಎಂ ಹೋಗುತ್ತಿದ್ದಾರೆ. ಉಳಿದ ಕ್ಷೇತ್ರಗಳಿಗೆ ನಾವು ಹೋಗುತ್ತಿದ್ದೇವೆ. ಸಿಎಂಗೆ ಟೈಮ್ ಇಲ್ಲ, ಈ ಯಾತ್ರೆಯ ನಂತರ, ಬಜೆಟ್ ತಯಾರಿಕೆಯಲ್ಲಿ ತೊಡಗಬೇಕು. ಇದರಲ್ಲಿ ಯಾವ ಗೊಂದಲವೂ ಇಲ್ಲ, ನಮ್ಮ ಯಾತ್ರೆಯ ವೇಳೆಯೂ ನಾವು ಸಿದ್ದರಾಮಯ್ಯ ಸರಕಾರದ ಸಾಧನೆಯನ್ನೇ ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡುವುದು. ಮಾರ್ಚ್ ಒಂದರ ನಂತರ, ನಾವೆಲ್ಲಾ ಸೇರಿ ಜೊತೆಗೆ ಖರ್ಗೆ, ಮೊಯ್ಲಿ, ಆಸ್ಕರ್ ಮುಂತಾದ ಹಿರಿಯರೆಲ್ಲಾ ಸೇರಿ, ರಾಜ್ಯ ಪ್ರವಾಸ ಮಾಡುತ್ತೇವೆ. ಹಾಗಾಗಿ, ಇದರಲ್ಲಿ ಯಾವ ಗೊಂದಲವೂ ಇಲ್ಲ.

ಮತೀಯ ಬಣ್ಣಕ್ಕೆ ತಿರುಗುತ್ತಿರುವ ಕರಾವಳಿ ಗಲಭೆ

ಮತೀಯ ಬಣ್ಣಕ್ಕೆ ತಿರುಗುತ್ತಿರುವ ಕರಾವಳಿ ಗಲಭೆ

ಪ್ರ: ಪ್ರಮುಖವಾಗಿ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ, ಏನೇ ಘಟನೆ ನಡೆಯಲಿ, ಅದು ಕೊನೆಗೆ ಮತೀಯ ಬಣ್ಣಕ್ಕೆ ತಿರುಗುತ್ತಿದೆಯಲ್ವಾ?
ದಿನೇಶ್: ಇದಕ್ಕೆ ಸಂಘಪರಿವಾರ, ಬಿಜೆಪಿ ಮತ್ತು ಮುಸಲ್ಮಾನ ಸಂಘಟನೆಗಳು ಕಾರಣ. ಅದರಲ್ಲೂ ಪ್ರಮುಖವಾಗಿ, ರಾಜಾರೋಷವಾಗಿ ಹೇಳಿಕೆ ನೀಡುತ್ತಿರುವ ಸಂಘ ಪರಿವಾರದವರು. ಜನರನ್ನು ದಾರಿತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲಿನ ಕೋಮುಗಲಭೆಗಳಲ್ಲಿ ಹಿಂದುಗಳೂ ಸತ್ತಿದ್ದಾರೆ, ಮುಸ್ಲಿಮರೂ ಸತ್ತಿದ್ದಾರೆ. ಬಿಜೆಪಿಯವರ ಉದ್ದೇಶ ಕೋಮು ಗಲಭೆಯಾಗಬೇಕು. ಅಭಿವೃದ್ದಿ ಬೇಕಾಗಿಲ್ಲ, ಜನರ ಸಮಸ್ಯೆ ಇವರಿಗೆ ಬೇಡ. ಕೇವಲ ಘರ್ಷಣೆ, ಗಲಭೆಯಾಗಬೇಕು ಎನ್ನುವುದಷ್ಟೇ ಇವರ ಉದ್ದೇಶ. ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ, ಸಿ ಟಿ ರವಿ, ಅನಂತ್ ಕುಮಾರ್ ಹೆಗಡೆ, ಯಡಿಯೂರಪ್ಪ ಮುಂತಾದ ನಾಯಕರ ಹೇಳಿಕೆಗಳನ್ನೊಮ್ಮೆ ನೋಡಿ, ಇವರ ಅಜೆಂಡಾ ಏನು ಎಂಬುದು ಗೊತ್ತಾಗುತ್ತದೆ. ಕರಾವಳಿ ಭಾಗದಲ್ಲಿ ಸಂಘ ಪರಿವಾರ ಸ್ವಲ್ಪ ಸ್ಟ್ರಾಂಗ್ ಆಗಿರುವುದರಿಂದ, ಆ ಭಾಗದಲ್ಲಿ ನಡೆಯುತ್ತಿರುವ ಎಲ್ಲಾ ಘಟನೆಗಳಿಗೆ ನೇರ ಬಿಜೆಪಿಯೇ ಹೊಣೆ.

ಉಡುಪಿ ಕಡೆಯ ಜ್ಯೋತಿಷಿಯೊಬ್ಬರು ನುಡಿದ ಭವಿಷ್ಯ

ಉಡುಪಿ ಕಡೆಯ ಜ್ಯೋತಿಷಿಯೊಬ್ಬರು ನುಡಿದ ಭವಿಷ್ಯ

ಪ್ರ: ಉಡುಪಿ ಕಡೆಯ ಜ್ಯೋತಿಷಿಯೊಬ್ಬರು ಒಂದು ಭವಿಷ್ಯವನ್ನು ನುಡಿದಿದ್ದರು. ಅದರ ಪ್ರಕಾರ, ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆಯಗುತ್ತೆ, ನೀವು ಉಪಮುಖ್ಯಮಂತ್ರಿ ಆಗ್ತೀರಾ ಅಂತ, ಭವಿಷ್ಯ ನೀವು ನಂಬುತ್ತಿರಾ?
ದಿನೇಶ್: ನೂರು ಜ್ಯೋತಿಷಿಗಳು, ನೂರು ಬೇರೆ ಬೇರೆ ರೀತಿಯಲ್ಲಿ ಭವಿಷ್ಯ ಹೇಳುತ್ತಾರೆ, ಅದಕ್ಕೆಲ್ಲಾ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ನಾವು ಎಲ್ಲಾ 224 ಕ್ಷೇತ್ರವನ್ನು ಗೆಲ್ಲಬೇಕೆಂದು ಪ್ರಯತ್ನ ಮಾಡುತ್ತೇವೆ, ಮುಂದಿನದ್ದು ಜನರಿಗೆ ಬಿಟ್ಟಿದ್ದು, ಸಿದ್ದರಾಮಯ್ಯನವರು ಹೋದಲೆಲ್ಲಾ ಅದನ್ನೇ ಹೇಳುತ್ತಿದ್ದಾರೆ. ನಾವು ಹೇಳಿದ ಕೆಲಸವನ್ನು ಮಾಡಿದ್ದೇವೆ, ನಮಗೆ ಕೂಲಿ ಕೊಡಿ ಎಂದು, ನೋಡೋಣ..

ವಿಕಾಸ, ಅಭಿವೃದ್ದಿ, ಯುವಕರಿಗೆ ಕೆಲಸ, ರೈತರ ಬದುಕು ಹಸನಾಗಬೇಕು

ವಿಕಾಸ, ಅಭಿವೃದ್ದಿ, ಯುವಕರಿಗೆ ಕೆಲಸ, ರೈತರ ಬದುಕು ಹಸನಾಗಬೇಕು

ಪ್ರ: ಕೊನೆಯದಾಗಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ರಾಜ್ಯದ ಜನತೆಗೆ ನಿಮ್ಮ ಮನವಿ?
ದಿನೇಶ್: ವಿಕಾಸ, ಅಭಿವೃದ್ದಿ, ಯುವಕರಿಗೆ ಕೆಲಸ, ರೈತರ ಬದುಕು ಹಸನಾಗಬೇಕು, ವಿಷಯಾಧಾರಿತ ರಾಜಕಾರಣ ಮಾಡಬೇಕು. ಕೆರಳಿಸುವಂತಹ ಕೆಲಸ ಮಾಡುವ ರಾಜಕೀಯ ಪಕ್ಷಗಳನ್ನು ಜನ ತಿರಸ್ಕರಿಸಬೇಕು. ಬಸವಣ್ಣ, ಕನಕದಾಸ, ಶಿಶುನಾಳ ಶರೀಫ, ಮಧ್ವಾಚಾರ್ಯ, ಕಿತ್ತೂರು ಚೆನ್ನಮ್ಮ, ಟಿಪ್ಪು ಸುಲ್ತಾನ ಮುಂತಾದ ಮಹನೀಯರು ಬದುಕಿದ ಪುಣ್ಯಭೂಮಿ ನಮ್ಮದು. ದ್ವೇಷ, ಹಿಂಸಾಚಾರ, ವೈಯಕ್ತಿಕ ನಿಂದನೆ ಮಾಡುವಂತವರನ್ನು ಕರ್ನಾಟಕದ ಜನತೆ ತಿರಸ್ಕರಿಸಲಿ ಎನ್ನುವುದು ನನ್ನ ಮನವಿ.

English summary
Mahadayi issue is a big setback for BJP Karnataka unit President B S Yeddyurappa: KPCC working President Dinesh Gundurao interview 2
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X