ಆರ್ ಟಿಇ: ರಾಜ್ಯ ಸರಕಾರದಿಂದ ಇದೆಂಥ ನಿಯಮಗಳು?

Posted By:
Subscribe to Oneindia Kannada

ಬೆಂಗಳೂರು, ಮೇ 11: ಕಡ್ಡಾಯ ಶಿಕ್ಷಣ ಹಕ್ಕು (ಆರ್ ಟಿಇ) ಎಂಬುದು ಸಂಜೀವಿನಿ ಅಂತ ಹಲವು ಪೋಷಕರ ನಂಬಿಕೆ. ಇದರಿಂದ ಬಡವರ ಮಕ್ಕಳಿಗೆ ಬಹಳ ಅನುಕೂಲ ಆಗಿದೆ ಎಂದು ಭಾಷಣ ಚಚ್ಚುವವರಿಗೂ ಕಡಿಮೆ ಇಲ್ಲ. ಆದರೆ ಸರಕಾರದಿಂದ ವರ್ಷಕ್ಕೊಂದು ರೀತಿ ಹೊರಬರುತ್ತಿರುವ ಮಾರ್ಗ ಸೂಚಿಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಈ ಎಲ್ಲ ಪ್ರಶ್ನೆಗಳು ಮಕ್ಕಳು ಹಾಗೂ ಪೋಷಕರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಈ ಪ್ರಶ್ನೆಗಳ ವ್ಯಾಪ್ತಿ ತುಂಬ ದೊಡ್ಡದಿದೆ. ಒಂದು ಸಣ್ಣ ಉದಾಹರಣೆ ಹೇಳುವುದಾದರೆ ಈ ವರ್ಷದಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಕ್ಕಳ ಪೋಷಕರು ಜಾತಿ ಪ್ರಮಾಣ ಪತ್ರ ನೀಡಿದರೆ ಸಾಕು, ಆದಾಯ ಎಷ್ಟಿದ್ದರೂ ಅರ್ಜಿ ಹಾಕಬಹುದು ಎಂಬ ನಿಯಮ ಮಾಡಿದ್ದಾರೆ.[ಡಿಕೆ ಶಿವಕುಮಾರ್ ಕುಟುಂಬ ಒಡೆತನದ ಶಾಲೆ ವಿರುದ್ಧ ಪ್ರತಿಭಟನೆ]

ಆರ್ ಟಿಇ ಜಾರಿಗೆ ಬಂದದ್ದು ಆರ್ಥಿಕವಾಗಿ ದುರ್ಬಲರಾದವರ ನೆರವಿಗೆ ಬರುವುದಕ್ಕೋ ಅಥವಾ ಜಾತಿಯ ಆಧಾರದಲ್ಲಿ ಅನುಕೂಲ ಕಲ್ಪಿಸುವುದಕ್ಕೋ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕೆ ಶಿಕ್ಷಣ ಸಚಿವರಾದ ತನ್ವೀರ್ ಸೇಠ್ ಅವರು ಉತ್ತರಿಸಬೇಕು. ಅಥವಾ ಮಾನ್ಯ ಮುಖ್ಯಮಂತ್ರಿಗಳು ಏನು ಹೇಳುತ್ತಾರೋ ಕೇಳಬೇಕು.

ಪಠ್ಯಪುಸ್ತಕ, ಸಮವಸ್ತ್ರಕ್ಕೇ ಸಾವಿರಾರು ರುಪಾಯಿ

ಪಠ್ಯಪುಸ್ತಕ, ಸಮವಸ್ತ್ರಕ್ಕೇ ಸಾವಿರಾರು ರುಪಾಯಿ

ಕಡ್ಡಾಯ ಶಿಕ್ಷಣ ಹಕ್ಕು ಅಡಿಯಲ್ಲಿ ಮಗುವಿನ ಪ್ರವೇಶ ಶುಲ್ಕ, ಫೀ ಉಚಿತವಿರುತ್ತದೆ. ಆದರೆ ಸಮವಸ್ತ್ರ, ಪಠ್ಯಪುಸ್ತಕ, ಶೂ, ಬೆಲ್ಟ್ ಇವೆಲ್ಲಕ್ಕೆ ಎಷ್ಟು ಖರ್ಚು ಬೀಳುತ್ತದೆ ಎಂಬುದು ಯೋಚಿಸಿದ್ದೀರಾ? ಅದನ್ನೂ ಸರಕಾರವೇ ಕೊಡಬೇಕು ಅಂತ ಖಂಡಿತಾ ನಿರೀಕ್ಷಿಸಬಾರದು. ಆದರೆ ಕೆಲ ಖಾಸಗಿ ಶಾಲೆಗಳಲ್ಲಿ ಇವುಗಳಿಗೆ ಸಾವಿರಾರು ರುಪಾಯಿ ಆಗುತ್ತದೆ. ಬಡವರಿಗೆ ಅಂಥ ಶಾಲೆಗಳು ಮೆಟ್ಟಿಲು ಹತ್ತುವುದಕ್ಕೂ ಭಯವಾಗುತ್ತದೆ.

ಸರಕಾರದ ಪಠ್ಯಕ್ರಮ ಎಷ್ಟು ಕಡೆ ಅನುಸರಿಸುತ್ತಾರೆ?

ಸರಕಾರದ ಪಠ್ಯಕ್ರಮ ಎಷ್ಟು ಕಡೆ ಅನುಸರಿಸುತ್ತಾರೆ?

ಇದನ್ನು ಗಮನದಲ್ಲಿಟ್ಟುಕೊಂಡೋ ಏನೋ, ಆರ್ ಟಿಇ ಅಡಿಯಲ್ಲಿ ಆಯ್ಕೆಯಾದ ಮಕ್ಕಳಿಗೆ ಸರಕಾರದಿಂದಲೇ ಪಠ್ಯಪುಸ್ತಕವನ್ನು ಈ ವರ್ಷ ವಿತರಿಸುತ್ತೇವೆ ಎಂಬ ಘೋಷಣೆ ಮಾಡಲಾಗಿದೆ. ತಮಾಷೆ ವಿಷಯ ಏನೆಂದರೆ, ಸರಕಾರ ವಿತರಿಸುವಂತೆ ಪಠ್ಯಕ್ರಮವನ್ನು ಅನುಸರಿಸುವ ಖಾಸಗಿ ಶಾಲೆಗಳು ಎಷ್ಟಿವೆ? ಆಯಾ ಶಾಲೆಗಳವರು ಇಂಥದ್ದೇ ಪಠ್ಯಪುಸ್ತಕ ತೆಗೆದುಕೊಳ್ಳಬೇಕು ಎಂಬ ನಿಯಮ ಮಾಡಿರುತ್ತಾರೆ. ಅಲ್ಲೇ ಖರೀದಿಸಿದರೆ ಸಾವಿರಾರು ರುಪಾಯಿ ಬೇಕಾಗುತ್ತದೆ.

ಆದಾಯದ ಮಿತಿ ಪ್ರಶ್ನೆಯೇ ಇಲ್ಲ

ಆದಾಯದ ಮಿತಿ ಪ್ರಶ್ನೆಯೇ ಇಲ್ಲ

ಈ ಬಾರಿಯಿಂದ ಪರಿಶಿಷ್ಟ ಜಾತಿ-ಪಂಗಡದ ಮಕ್ಕಳ ಪೋಷಕರ ಆದಾಯ ಎಷ್ಟಿದ್ದರೂ ಅವರು ಯಾವುದೇ ಹುದ್ದೆಯಲ್ಲಿದ್ದರೂ ಆರ್ ಟಿಇ ಅಡಿಯಲ್ಲಿ ಅರ್ಜಿ ಹಾಕಿಕೊಳ್ಳಬಹುದು ಎಂಬ ನಿಯಮ ಬಂದಿದೆ. ಇದೊಂದು ನಿಯಮ ಸಾಕಲ್ಲವೇ ಬಡ ಮಕ್ಕಳಿಗೆ ಶಿಕ್ಷಣ ಎಂಬ ಉದ್ದೇಶವನ್ನೇ ಸೋಲಿಸಲು.

ಮಕ್ಕಳ ಆಯ್ಕೆಯಲ್ಲಿ ಮೀಸಲಾತಿ ಹೇಗೆ ತರ್ತೀರಿ?

ಮಕ್ಕಳ ಆಯ್ಕೆಯಲ್ಲಿ ಮೀಸಲಾತಿ ಹೇಗೆ ತರ್ತೀರಿ?

ಇನ್ನು ಮಕ್ಕಳ ಆಯ್ಕೆ ವಿಚಾರದಲ್ಲಿ ಮೀಸಲಾತಿ ಜಾರಿಗೆ ತಂದಿದ್ದೀರಿ. ಒಂದು ಉದಾಹರಣೆ ಅಂದುಕೊಳ್ಳಿ. ಗೊಲ್ಲರ ಹಟ್ಟಿಯ ಬಳಿ ಒಂದು ಶಾಲೆಯಿರುತ್ತದೆ. ಅಲ್ಲಿಗೆ ಅರ್ಜಿ ಹಾಕಿಕೊಳ್ಳುವವರೆಲ್ಲ ಒಂದೇ ಜಾತಿಯವರಿರುತ್ತಾರೆ. ಅಲ್ಲಿ ಮೀಸಲಾತಿ ತಂದರೆ ಆ ನಿರ್ದಿಷ್ಟ ಜಾತಿಯ ಎಷ್ಟು ಮಕ್ಕಳಿಗೆ ಅವಕಾಶ ಸಿಗುತ್ತದೆ? ಬರೀ ಗೊಲ್ಲರ ಹಟ್ಟಿಯಷ್ಟೇ ಅಲ್ಲ, ಎಸ್ ಸಿ-ಎಸ್ ಟಿ ಕಾಲೋನಿ, ಕುಂಬಾರರ ಬಡಾವಣೆ, ಅಗ್ರಹಾರ... ಹೀಗೆ ನಿರ್ದಿಷ್ಟ ಜಾತಿಯವರೇ ಹೆಚ್ಚಿರುವ ಪ್ರದೇಶದಲ್ಲಿನ ಶಾಲೆಗಳಿಗೆ ನಿಯಮ ಹೇಗೆ ಸರಿ ಅನ್ನಿಸುತ್ತದೆ.

ಸರಕಾರದ ಹಣ ತಲುಪಿಲ್ಲ

ಸರಕಾರದ ಹಣ ತಲುಪಿಲ್ಲ

ಇನ್ನು ಮಕ್ಕಳನ್ನು ದಾಖಲಿಸುವ ಶಾಲೆಗಳಿಗೆ ತಲಾ ಇಷ್ಟು ಎಂದು ಹಣವನ್ನು ಸರಕಾರ ನೀಡುತ್ತದೆ. ಆ ಹಣ ಇಪ್ಪತ್ತು-ಮೂವತ್ತು ರುಪಾಯಿಯಿಂದ ಹನ್ನೊಂದು ಸಾವಿರದವರೆಗೆ ಇದೆಯಂತೆ. ಬಂಗಾರಪೇಟೆ ತಾಲೂಕು ವ್ಯಾಪ್ತಿಯ ಒಂದು ಶಾಲೆಗೆ ಒಂದು ಮಗುವಿಗೆ ಇಪ್ಪತ್ತೆಂಟು ರುಪಾಯಿ ಕೊಡಲಾಗಿದೆಯಂತೆ. ಅಯ್ಯೋ, ಕೊಡಲಾಗಿದೆ ಎಂಬ ಪದ ಬಳಸುವುದು ತಪ್ಪು. ನಿಗದಿ ಮಾಡಲಾಗಿದೆ. ಬಹುತೇಕ ಕಡೆ ಎರಡು ಕಂತಿನಲ್ಲಿ ಸರಕಾರದಿಂದ ಸಂದಾಯ ಆಗಬೇಕಾದ ಮೊತ್ತ ಶಾಲೆಗಳಿಗೆ ಇನ್ನೂ ತಲುಪಿಲ್ಲ.

ಪ್ರವಾಸದ ಖರ್ಚೇ ಸಾವಿರಾರು ರುಪಾಯಿ

ಪ್ರವಾಸದ ಖರ್ಚೇ ಸಾವಿರಾರು ರುಪಾಯಿ

ಬೆಂಗಳೂರಿನ ಕೆಲವು ಖಾಸಗಿ ಶಾಲೆಗಳಲ್ಲಿ ವರ್ಷಕ್ಕೊಮ್ಮೆ ಉತ್ತರ ಭಾರತಕ್ಕೆ ಅಥವಾ ವಿದೇಶಕ್ಕೆ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗ್ತಾರೆ. ಅದರ ವೆಚ್ಚವೇ ಸಾವಿರಾರು ರುಪಾಯಿ ಆಗುತ್ತದೆ. ಅಂಥ ಕಡೆ ಒಂದು ಬಡ ಮಗು ಆರ್ ಟಿಇ ಅಡಿಯಲ್ಲಿ ಸೇರಿಬಿಟ್ಟರೆ ಅದರ ಮಾನಸಿಕ ಸ್ಥಿತಿ ಏನಾಗಬಹುದು? ಕೆಲವೊಮ್ಮೆ ವರವೇ ಶಾಪದಂತಾಗುತ್ತದೆ. ಅಂತಹ ಶಾಲೆಗಳಲ್ಲಿ ಓದುವ ಮಕ್ಕಳ ಪಾಕೆಟ್ ಮನಿ, ಧೋರಣೆಗಳಿಂದ ಈ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರಬಹುದು. ಅದಕ್ಕೆ ಪರಿಹಾರ ಏನು?

ಆ ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆ

ಆ ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆ

ಕೆಲವು ಪ್ರತಿಷ್ಠಿತ ಶಾಲೆಗಳು ಆರ್ ಟಿಇ ಅಡಿ ಆಯ್ಕೆಯಾದ ಮಕ್ಕಳಿಗೆ ಪ್ರತ್ಯೇಕ ಬೋಧನಾ ವ್ಯವಸ್ಥೆ ಮಾಡಿವೆ. ಅದನ್ನು ಸಬ್ ಸ್ಟ್ಯಾಂಡರ್ಡ್ ಅಂತಲೂ ಕರೆಯಬಹುದು. ಆ ಬಗ್ಗೆ ಸರಕಾರದಿಂದ ಏನಾದರೂ ದಿಢೀರ್ ಪರಿಶೀಲನೆ ಆಗಿದೆಯಾ?

ಸರಕಾರದಿಂದಲೇ ಅಂಥ ಶಾಲೆ ಆರಂಭಿಸಿ

ಸರಕಾರದಿಂದಲೇ ಅಂಥ ಶಾಲೆ ಆರಂಭಿಸಿ

ಇಷ್ಟೆಲ್ಲ ಯಾಕೆ ಹೇಳಬೇಕಾಯಿತು ಅಂದರೆ ಆರ್ ಟಿಇಯಿಂದ ಖಂಡಿತವಾಗಿಯೂ ಹಳ್ಳಿ ಮಕ್ಕಳಿಗೆ ಪ್ರಯೋಜನ ಆಗ್ತಿಲ್ಲ. ಸರಕಾರದಿಂದಲೇ ಒಳ್ಳೆ ಇಂಗ್ಲಿಷು ಹೇಳಿಕೊಡುವ ಅತ್ಯುತ್ತಮ ಕನ್ನಡ ಶಾಲೆಗಳು ಆರಂಭವಾಗಲಿ. ಖಾಸಗಿ ಶಾಲೆಯವರು ಹೊಟ್ಟೆಕಿಚ್ಚು ಪಡುವಂತೆ ಈ ಮಕ್ಕಳಿಗೆ ಸೌಕರ್ಯ ನೀಡಿ. ಯಾರನ್ನೋ ಮೆಚ್ಚಿಸುವುದಕ್ಕೆ ಎಂಥೆಂಥದೋ ಯೋಜನೆ ಮಾಡುವ ಬದಲು ಶಿಕ್ಷಣಕ್ಕಾಗಿಯೇ ಹೆಚ್ಚಿನ ಹಣ, ಗಮನ, ಆಸಕ್ತಿ, ಒಳ್ಳೆ ಶಿಕ್ಷಕರು, ಅಧಿಕಾರಿಗಳನ್ನು ಮೀಸಲಿಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Here is an explaination about loopholes in RTE followed by Karnataka education department.
Please Wait while comments are loading...