ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಚ್ಚರಿ ಹೇಳಿಕೆ: ನಾವು ಮುಖ್ಯಮಂತ್ರಿ ಯಡಿಯೂರಪ್ಪ ಪರ ನಿಲ್ಲುತ್ತೇವೆ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್!

|
Google Oneindia Kannada News

ಬೆಂಗಳೂರು, ಜು. 13: ಅಚ್ಚರಿಯ ಬೆಳವಣಿಗೆಯಲ್ಲಿ "ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪರವಾಗಿ ನಾವು ನಿಲ್ಲುತ್ತೇವೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

"ಇನ್ನು ನೂರು ವರ್ಷ ಕಳೆದರೂ ತಮಿಳುನಾಡು ಮೇಕೆದಾಟು ಯೋಜನೆಗೆ ತಗಾದೆ ಎತ್ತುತ್ತಲೇ ಇರುತ್ತದೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರ ಇದೆ ಎನ್ನುವ ಬಿಜೆಪಿ ಕೇಂದ್ರದಲ್ಲಿ ತಮ್ಮ ಅಧಿಕಾರ ಬಳಸಿ, ಅಗತ್ಯ ಅನುಮತಿ ಪಡೆದು ಈ ಯೋಜನೆಗೆ ನಾಳೆಯೇ ಭೂಮಿ ಪೂಜೆ ಮಾಡಲಿ. ರಾಜಕೀಯ ಭಿನ್ನಾಭಿಪ್ರಾಯ ಮರೆತು ಸರ್ಕಾರದ ಜತೆಗೆ ನಾವೆಲ್ಲರೂ ನಿಲ್ಲುತ್ತೇವೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿರುವ ಡಿ.ಕೆ. ಶಿವಕುಮಾರ್ ಅವರು, "ಮೇಕೆದಾಟು ಯೋಜನೆಗೆ ಅಡ್ಡಿ ಮಾಡುವುದು ತಮಿಳುನಾಡಿನ ಎಲ್ಲ ಪಕ್ಷಗಳ ಅಜೆಂಡಾ. ಇನ್ನೂ ನೂರು ವರ್ಷವಾದರೂ ಅವರ ರಾಜಕೀಯ ಅಜೆಂಡಾ ಇದೇ ಆಗಿರುತ್ತದೆ. ಮೇಕೆದಾಟು ಯೋಜನೆ ಮಾಡಲು ಯಡಿಯೂರಪ್ಪನವರಿಗೆ ರಾಜಕೀಯ ಇಚ್ಛಾಶಕ್ತಿ ಬೇಕು. ಈಗ ಕೇಂದ್ರ ಪರಿಸರ ಮಂಡಳಿಯಿಂದ ಅನುಮತಿ ಸಿಕ್ಕಿದೆ ಎಂಬ ಮಾಹಿತಿ ಇದೆ." ಎಂದರು

ನಮ್ಮ ದುಡ್ಡು, ನಮ್ಮ ಜಾಗ, ನಮ್ಮ ನೀರು

ನಮ್ಮ ದುಡ್ಡು, ನಮ್ಮ ಜಾಗ, ನಮ್ಮ ನೀರು

"ನಮ್ಮ ದುಡ್ಡು, ನಮ್ಮ ಜಾಗ, ನಮ್ಮ ನೀರು. ತಮಿಳುನಾಡು ಪಾಲಿನ ನೀರಿಗೆ ನಮ್ಮ ಯಾವುದೇ ತಕರಾರು ಇಲ್ಲ. ಅವರ ಪಾಲು ಅವರಿಗೆ ಸಿಗಲಿದೆ. ಮೇಕೆದಾಟು ಯೋಜನೆ ನನ್ನ ಕ್ಷೇತ್ರದಲ್ಲೇ ಬರಲಿದ್ದು, ಇದು ಕೇವಲ ಬೆಂಗಳೂರಿನ ಜನರಿಗೆ ಕುಡಿಯುವ ನೀರು ಪೂರೈಕೆಗೆ ಹಾಗೂ ವಿದ್ಯುತ್ ಉತ್ಪಾದನೆಗೆ ಮಾತ್ರ ಬಳಕೆ ಆಗುತ್ತದೆ. ನನ್ನ ಕ್ಷೇತ್ರದ ಹತ್ತು ಎಕರೆಗೂ ಈ ನೀರು ಬಳಸಿಕೊಳ್ಳುವುದಿಲ್ಲ. ಈ ಯೋಜನೆಗೆ ಸುಮಾರು 500 ರಿಂದ 1000 ಎಕರೆಯಷ್ಟು ರೆವಿನ್ಯೂ ಜಾಗ ಹೋಗಬಹುದು. ಯಾವ ಪ್ರದೇಶವೂ ಮುಳುಗಡೆಯಾಗುವ ಭೀತಿ ಇಲ್ಲ. ಹೀಗಾಗಿ ಇದು ಅತ್ಯಂತ ಅಗ್ಗದ ಹಾಗೂ ಉಪಯುಕ್ತ ಯೋಜನೆ" ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಾವು ಯಡಿಯೂರಪ್ಪ ಪರ ನಿಲ್ಲುತ್ತೇವೆ: ಡಿಕೆಶಿ

ನಾವು ಯಡಿಯೂರಪ್ಪ ಪರ ನಿಲ್ಲುತ್ತೇವೆ: ಡಿಕೆಶಿ

"ತಮಿಳುನಾಡಿನವರು ರಾಜಕಾರಣ ಮಾಡುತ್ತಿದ್ದಾರೆ. ಡಿಎಂಕೆ ಆಗಲಿ, ಅಣ್ಣಾಡಿಎಂಕೆ ಆಗಲಿ, ಅವರ ರಾಜಕೀಯ ಅಜೆಂಡಾ ಒಂದೇ. ಆ ಬಗ್ಗೆ ನಮ್ಮ ತಕರಾರಿಲ್ಲ. ನಮ್ಮ ರಾಜ್ಯ ಸರ್ವಪಕ್ಷ ನಿಯೋಗ ಯಾಕೆ ಕೊಂಡೊಯ್ಯಬೇಕು? ಮೇಕೆದಾಟು ವಿಚಾರದಲ್ಲಿ ನಾವು ಸರ್ಕಾರದ ಪರವಾಗಿ ನಿಲ್ಲುತ್ತೇವೆ." ಎಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್ ಅವರು ಭರವಸೆ ಕೊಟ್ಟಿದ್ದಾರೆ.

"ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಳೆ ಬೆಳಗ್ಗೆಯೇ ಟೆಂಡರೆ ಕರೆದು ಗುದ್ದಲಿ ಪೂಜೆ ಮಾಡಲಿ, ಅವರ ಜತೆ ನಾವು ನಿಲ್ಲುತ್ತೇವೆ. ನಾವು ಯೋಜನೆ ಮಾಡುತ್ತಿರುವವರು, ಹೀಗಾಗಿ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಅಗತ್ಯ ನಮಗಿಲ್ಲ. ತಮಿಳುನಾಡಿನವರು ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಲಿ, ಏನಾದರೂ ಮಾಡಿಕೊಳ್ಳಲಿ. ಇದರಲ್ಲಿ ನಾವು ಒತ್ತಡ ಹೇರುವ ಅವಶ್ಯಕತೆ ಏನಿದೆ. ಯೋಜನೆ ಅನುಷ್ಠಾನಕ್ಕೆ ತರಬೇಕು ಅಷ್ಟೇ. ಬಿಜೆಪಿಯದು ಡಬಲ್ ಇಂಜಿನ್ ಸರ್ಕಾರ ಅಂತಾರೆ, ಈ ಯೋಜನೆಗೆ ಅಗತ್ಯ ಅನುಮತಿ ಪಡೆಯಲು ತೊಂದರೆ ಏನು?" ಎಂದು ಪ್ರಶ್ನೆ ಮಾಡಿದ್ದಾರೆ

ಬಿಜೆಪಿ ಸರ್ಕಾರದ ಎರಡೂ ಇಂಜಿನ್‌ಗಳು ಫೇಲ್

ಬಿಜೆಪಿ ಸರ್ಕಾರದ ಎರಡೂ ಇಂಜಿನ್‌ಗಳು ಫೇಲ್

"ರಾಜ್ಯ ಸರ್ಕಾರ ಕೋವಿಡ್ ವಿಚಾರದಿಂದ ಹಿಡಿದು ಜಿಎಸ್‌ಟಿವರೆಗೂ ಯಾವ ವಿಚಾರದಲ್ಲೂ ಸರ್ವಪಕ್ಷ ನಿಯೋಗ ಕರೆದೊಯ್ದಿಲ್ಲ. ಸರ್ಕಾರ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅವರಿಗೆ ಏನು ಬೇಕೋ ಅದನ್ನು ಮಾಡಿಕೊಂಡಿದ್ದಾರೆ. ಈಗ ಸರ್ವಪಕ್ಷ ನಿಯೋಗ ಏಕೆ ಬೇಕು? ನೀವು ಯೋಜನೆ ಆರಂಭಿಸಿ, ನಿಮ್ಮ ಜತೆ ನಾವು ನಿಲ್ಲುತ್ತೇವೆ ಎಂದು ಸರ್ಕಾರಕ್ಕೆ ಹೇಳುತ್ತಿದ್ದೇವೆ. ಮುಖ್ಯಮಂತ್ರಿಗಳು ತಮಿಳುನಾಡಿಗೆ ಪತ್ರ ಬರೆದಿದ್ದೇ ತಪ್ಪು. ಅದರ ಅಗತ್ಯ ಏನಿತ್ತು? ನಾವು ಸರ್ಕಾರದ ಪರವಾಗಿ ಪತ್ರ ಬರೆದಾಗ ಅವರು ಏನು ಮಾಡಿದ್ದರು? ದೆಹಲಿಯಲ್ಲಿ ನಿಮ್ಮದೇ ಸರಕಾರವಿದೆ, ನಿಮ್ಮದೇ ಅಧಿಕಾರವಿದೆ, ಅದನ್ನು ಬಳಸಿಕೊಂಡು ಯೋಜನೆ ಮಾಡಿ. ನಮ್ಮ ನಡುವೆ ರಾಜಕೀಯವಾಗಿ ಎಷ್ಟೇ ಭಿನ್ನಾಭಿಪ್ರಾಯವಿದ್ದರೂ ಈ ವಿಚಾರದಲ್ಲಿ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ" ಎಂದು ಡಿಕೆಶಿ ಅವರು ಸ್ಪಷ್ಟಪಡಿಸಿದ್ದಾರೆ.

"ಇವರ ವರ್ತನೆ ನೋಡಿದರೆ ಬಿಜೆಪಿ ಡಬಲ್ ಇಂಜಿನ್ ಸರ್ಕಾರದ ಎರಡೂ ಇಂಜಿನ್ ಗಳು ಫೇಲ್ ಆಗಿವೆ. ಈ ಇಂಜಿನ್ ಓಡಲು ಪೆಟ್ರೋಲ್, ಡೀಸೆಲ್ ಇಲ್ಲವಾಗಿದೆ." ಎಂದು ಇದೇ ಸಂದರ್ಭದಲ್ಲಿ ಟೀಕಿಸಿದ್ದಾರೆ.

Recommended Video

ಮಗಳ ಫೋಟೋ ಹಂಚಿಕೊಂಡ ಅನುಷ್ಕಾ ಶರ್ಮಾ! | Oneindia Kannada

130 ಕ್ಷೇತ್ರ ಗೆಲ್ಲುವುದು ಯಡಿಯೂರಪ್ಪ ಗುರಿ

"ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷವನ್ನು ಗೆಲ್ಲಿಸಬೇಕು. ಅದೇ ನಮ್ಮ ಗುರಿ. ಮುಂದಿನ ಚುನಾವಣೆಯಲ್ಲಿ 130 ಕ್ಷೇತ್ರ ಗೆಲ್ಲುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗುರಿಯಾಗಿದ್ದರೇ, ರಾಜ್ಯದ 224 ಕ್ಷೇತ್ರಗಳೂ ನಮ್ಮ ಗುರಿ. ನನ್ನ ಕ್ಷೇತ್ರದಲ್ಲಿ ಯಾರೋ ಬಿಜೆಪಿ ನಾಯಕರು ನಮ್ಮ ವಿರುದ್ಧ ಗೆಲ್ಲಲು ಪ್ರಯತ್ನಿಸಿದರೆ ತಪ್ಪಿಲ್ಲ. ಜೆಡಿಎಸ್‌ನವರು ಪ್ರಯತ್ನಿಸಿದರೆ ತಪ್ಪಿಲ್ಲ. ಹಾಗಂತ ನಾವು ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಉಪ ಮುಖ್ಯಮಮಂತ್ರಿಗಳ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರನ್ನು ಬಿಟ್ಟುಕೊಡಲು ಸಾಧ್ಯವೇ? ಅಲ್ಲಿ ನಾವ್ಯಾಕೆ ಗೆಲ್ಲಬಾರದು? ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಹೀಗಾಗಿ 224 ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರಿಗೆ ಶಕ್ತಿ ಕೊಡುವ ಕೆಲಸ ಮಾಡುತ್ತೇವೆ. ಇದು ನಮ್ಮ ಗುರಿ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

English summary
Let the government do the ‘Bhumi Puja’ for Mekedatu project tomorrow itself, we stand with the government; D.K. Shivakumar. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X