ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಠ ನಿಯಂತ್ರಣ : ಸಿದ್ದು ಸರ್ಕಾರಕ್ಕೆ ಗುದ್ದು

|
Google Oneindia Kannada News

ಬೆಂಗಳೂರು, ಜ.29 : ಮಠಗಳ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಮತ್ತೊಮ್ಮೆ ಎಡವಿದೆ. ಮಠಗಳ ಮೇಲೆ ನಿಯಂತ್ರಣ ಸಾಧಿಸುವ ಅಧಿಕಾರ ಪಡೆಯಲು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದ ಸರ್ಕಾರಕ್ಕೆ ಸ್ವಪಕ್ಷ ಮತ್ತು ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ.

ಸೋಮವಾರದ ವಿಧಾನಸಭೆ ಕಲಾಪದಲ್ಲಿ ಮುಜರಾಯಿ ಸಚಿವ ಪ್ರಕಾಶ್‌ ಹುಕ್ಕೇರಿ, ಪ್ರಸ್ತುತ ಜಾರಿಯಲ್ಲಿರುವ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಕಾಯ್ದೆಗೆ ತಿದ್ದುಪಡಿ ಮಾಡಿ, ಎಲ್ಲ ಮಠಗಳನ್ನು ಕಾಯ್ದೆಯಡಿ ತರುವ ಬಗ್ಗೆ ಚಿಂತನೆ ನಡೆದಿದೆ. ಈ ಪ್ರಸ್ತಾಪದ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದ್ದರು.

ಕಾಯ್ದೆ ಜಾರಿಗೆ ಬಂದರೆ ಮಠಗಳಲ್ಲಿ ನಡೆಯುವ ಧಾರ್ಮಿಕ ವಿಧಿ- ವಿಧಾನಗಳಲ್ಲಿ ಸರ್ಕಾರ ಹಸ್ತ ಕ್ಷೇಪ ಮಾಡುವುದಿಲ್ಲ. ಆದರೆ, ದುರಾಡಳಿತ, ಅವ್ಯವಹಾರ, ಆಸ್ತಿ ದುರುಪಯೋಗ ಪ್ರಕರಣ ತಡೆಯುವುದು ತಿದ್ದುಪಡಿಯ ಉದ್ದೇಶವಾಗಿದೆ ಎಂದು ಹೇಳಿದ್ದರು. ಆದರೆ, ಸರ್ಕಾರದ ಈ ಹೇಳಿಕೆಯನ್ನು ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ವಿರೋಧಿಸಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಮಹಾಸ್ವಾಮೀಜಿ ಮುಂತಾದವರು ಸರ್ಕಾರದ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದು, ಈ ವಿಚಾರವನ್ನು ಸರ್ಕಾರ ಇಲ್ಲಿಗೆ ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ. ವಿರೋಧದಿಂದ ಪಾಠ ಕಲಿತಿರುವ ಸರ್ಕಾರ ಮಠಗಳನ್ನು ನಿಯಂತ್ರಣಕ್ಕೆ ತರುವ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ ಎಂದು ಹೇಳಿದೆ. ಸರ್ಕಾರದ ವಿರೋಧಿ ಹೇಳಿಕೆಗಳು ಇಲ್ಲಿವೆ.

ಜನಾರ್ದನ ಪೂಜಾರಿ ಹೇಳಿದ್ದೇನು?

ಜನಾರ್ದನ ಪೂಜಾರಿ ಹೇಳಿದ್ದೇನು?

ಮಠಗಳ ವಿಚಾರದಲ್ಲಿ ಸರ್ಕಾರ ನೀಡಿದ ಹೇಳಿಕೆಗೆ ಸ್ವತಃ ಕಾಂಗ್ರೆಸ್‌ ನಾಯಕರೆ ವಿರೋಧ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ, ಮಠಗಳನ್ನು ನಿಯಂತ್ರಣಕ್ಕೆ ತರುವ ಅಗತ್ಯವಿಲ್ಲ. ಇದನ್ನು ಹೈಕಮಾಂಡ್‌ ಕೂಡ ಒಪ್ಪುವುದಿಲ್ಲ, ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲೂ ಇಂತಹ ಅಂಶಗಳಿಲ್ಲ. ಸರ್ಕಾರ ಈ ನಿರ್ಧಾರವನ್ನು ಇಲ್ಲಿಗೆ ಕೈ ಬಿಡಬೇಕು ಎಂದು ಹೇಳಿದ್ದಾರೆ.

ಶೋಭಾ ಕರಂದ್ಲಾಜೆ ಅಸಮಾಧಾನ

ಶೋಭಾ ಕರಂದ್ಲಾಜೆ ಅಸಮಾಧಾನ

ಮಠಗಳ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲು ಹೊರಟರೆ ಕ್ರಾಂತಿಯಾಗುತ್ತದೆ ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ಈ ನಿರ್ಧಾರ ಹನುಮಂತನ ಬಾಲಕ್ಕೆ ಬೆಂಕಿ ಕೊಟ್ಟಂತಾಗುತ್ತದೆ. ಸರ್ಕಾರ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಂದು ಅವರು ಹೇಳಿದ್ದಾರೆ.

ಸಮಾಜವನ್ನು ಒಡೆಯುವ ಹುನ್ನಾರ

ಸಮಾಜವನ್ನು ಒಡೆಯುವ ಹುನ್ನಾರ

ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಸಹ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಕ್ರಮ ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುವ ಹುನ್ನಾರವಾಗಿದೆ. ಹಿಂದೂ ಮಠಗಳ ಮೇಲೆ ನಿಯಂತ್ರಣ ಸಾಧಿಸಲು ಹೊರಟಿರುವ ಸರ್ಕಾರಕ್ಕೆ ಬೇರೆ ಧರ್ಮಗಳ ಸಂಸ್ಥೆಗಳು ಕಾಣಿಸುತ್ತಿಲ್ಲವೆ ಎಂದು ಪ್ರಶ್ನಿಸಿದ್ದಾರೆ.

ತಾರತಮ್ಯ ಧೋರಣೆ ಸರಿಯಲ್ಲ

ತಾರತಮ್ಯ ಧೋರಣೆ ಸರಿಯಲ್ಲ

ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಮಹಾಸ್ವಾಮೀಜಿ ಸಹ ಸರ್ಕಾರ ಪ್ರಸ್ತಾವನೆಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಕೇವಲ ಹಿಂದೂ ಧಾರ್ಮಿಕ ಸಂಸ್ಥೆಗಳನ್ನು ಮಾತ್ರ ನಿಯಂತ್ರಣದಲ್ಲಿ ತರುವುದು ತಾರತಮ್ಯ. ರಾಜ್ಯ ಸರ್ಕಾರ ಈ ಕಾಯ್ದೆಯನ್ನು ಕೂಡಲೇ ಕೈ ಬಿಡಬೇಕು. ನಿಯಂತ್ರಣ ಜಾರಿಗೆ ತಂದರೆ ಅದು ಅಲ್ಪಸಂಖ್ಯಾತ ಧಾರ್ಮಿಕ ಸಂಸ್ಥೆಗಳಿಗೂ ಅನ್ವಯವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಮಲಿಂಗಾ ರೆಡ್ಡಿ ಸ್ಪಷ್ಟನೆ

ರಾಮಲಿಂಗಾ ರೆಡ್ಡಿ ಸ್ಪಷ್ಟನೆ

ಸ್ವ ಪಕ್ಷ ಮತ್ತು ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದಿರುವ ಸರ್ಕಾರ ಸ್ಪಷ್ಟೀಕರಣ ನೀಡಿದೆ. ತುಮಕೂರಿನಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಮಠಗಳನ್ನು ನಿಯಂತ್ರಣಕ್ಕೆ ತರುವ ಬಗ್ಗೆ ಸರ್ಕಾರ ಯಾವುದೇ ಚಿಂತನೆ ನಡೆಸಿಲ್ಲ ಎಂದು ಹೇಳಿದ್ದಾರೆ. ಮಠಗಳು ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವಾಗ ಸರ್ಕಾರ ಅವುಗಳ ಮೇಲೆ ಏಕೆ ನಿಯಂತ್ರಣ ಹೇರುತ್ತದೆ. ಈ ಕುರಿತು ಯಾವುದೇ ಚಿಂತನೆ ನಡೆಸಿಲ್ಲ ಎಂದು ತಿಳಿಸಿದ್ದಾರೆ.

English summary
Opposition partys condemning the statements issued by Religious Endowment Minister Prakash Hukkeri over ratifying the Hindu Religious Endowment Act. Opposition leaders said, government should not interfere in the internal affairs of mutt and religious institutions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X