ಭರ್ತಿಯಾಗಲಿವೆ ಕಾವೇರಿ ಕಣಿವೆಯ ಕೆರೆ-ಕಟ್ಟೆಗಳು : ಸಿದ್ದು

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 9 : ಕುಡಿಯುವ ನೀರಿಗಾಗಿ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸಲು ಕಾವೇರಿ ಕಣಿವೆಯ ಕೆರೆ, ಕಟ್ಟೆಗಳನ್ನು ತುಂಬಿಸಲಾಗುವುದು. ಇದಕ್ಕಾಗಿ ನಾಲ್ಕು ಜಲಾಶಯಗಳಿಂದ ಆಗಸ್ಟ್ 10ರಿಂದಲೇ ನೀರು ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.

ಬುಧವಾರ ಕಾವೇರಿ ನದಿ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಕರೆದಿದ್ದ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು, ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಯವರು ಈ ವಿಷಯ ತಿಳಿಸಿದರು.

ಕುಡಿಯುವ ನೀರಿಗೆ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸಲು ಕೆರೆ, ಕಟ್ಟೆಗಳನ್ನು ತುಂಬಿಸಲಾಗುತ್ತಿದೆ. ಆದ್ದರಿಂದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭತ್ತ ನಾಟಿ ಮಾಡಲು ಮುಂದಾಗಬಾರದು ಎಂದು ಮುಖ್ಯಮಂತ್ರಿಯವರು ರೈತರಲ್ಲಿ ಕಳಕಳಿಯ ಮನವಿ ಮಾಡಿದರು.

ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಇದರಿಂದ ಜನ, ಜಾನುವಾರುಗಳಿಗೆ ತೊಂದರೆಯಾಗಿದೆ. ಹೀಗಾಗಿ ನೀರು ಬಿಡುಗಡೆ ಮಾಡಿ ಕೆರೆ, ಕಟ್ಟೆಗಳನ್ನು ತುಂಬಿಸುವಂತೆ ಒತ್ತಾಯಿಸಿ ಕೃಷ್ಣರಾಜ ಸಾಗರ, ಕಬಿನಿ, ಹೇಮಾವತಿ, ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ಹೋರಾಟ ಮಾಡುತ್ತಿದ್ದಾರೆ.

ರೈತರ ರಕ್ಷಣೆ ನಮ್ಮ ಆದ್ಯತೆ

ರೈತರ ರಕ್ಷಣೆ ನಮ್ಮ ಆದ್ಯತೆ

ಕಾವೇರಿ ಕಣಿವೆಯಲ್ಲಿ ಅಂತರ್ಜಲ ಬತ್ತಿದ್ದು, ಸಾವಿರ ಅಡಿಗಳವರೆಗೆ ಕೊರೆದರೂ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ರೈತರಿಗೆ ನೀರು ಕೊಡಬಾರದು ಎಂಬುದು ಸರ್ಕಾರದ ಉದ್ದೇಶವಲ್ಲ. ರೈತರ ರಕ್ಷಣೆ ನಮ್ಮ ಆದ್ಯತೆ. ಆದ್ದರಿಂದಲೇ ನೀರು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಕಳೆದ ವರ್ಷಕ್ಕಿಂತ ನೀರಿನ ಕೊರತೆ ಭೀಕರ

ಕಳೆದ ವರ್ಷಕ್ಕಿಂತ ನೀರಿನ ಕೊರತೆ ಭೀಕರ

ಈ ವರ್ಷದ ಮುಂಗಾರಿನಲ್ಲಿ ಮಳೆ ಕೊರತೆ ತೀವ್ರವಾಗಿದೆ. ಈ ಪ್ರಮಾಣದ ಕೊರತೆಯನ್ನು ಕಳೆದ 46 ವರ್ಷಗಳಲ್ಲಿ ಕಂಡಿರಲಿಲ್ಲ. ರಾಜ್ಯದಲ್ಲಿ ಕಳೆದ ವರ್ಷವೂ ಬರಗಾಲ ತೀವ್ರವಾಗಿತ್ತು. ಆದರೂ ಮಳೆ ಕೊರತೆ ಇಷ್ಟು ಕಾಡಿರಲಿಲ್ಲ. ಕಳೆದ ವರ್ಷ ಇದೇ ದಿನ ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ 53.52 ಟಿಎಂಸಿ ನೀರು ಇತ್ತು. ಈ ವರ್ಷ 45 ಟಿಎಂಸಿ ಇದೆ. ಒಳ ಹರಿವು ಸಹ ಕಳೆದ ವರ್ಷಕ್ಕಿಂತ ಕಡಿಮೆ ಇದೆ. ಜೊತೆಗೆ ಅಚ್ಚುಕಟ್ಟು ಪ್ರದೇಶದಲ್ಲೂ ಮಳೆಯಾಗುತ್ತಿಲ್ಲ. ಹೀಗಾಗಿ ಜಲಾಶಯಗಳ ಕೆಳ ಭಾಗದ ಪ್ರದೇಶಗಳಲ್ಲೂ ನೀರಿಲ್ಲದಂತೆ ಆಗಿದೆ.

ಭತ್ತ ಬೆಳೆಯುವ ಪ್ರದೇಶ 2.68 ಲಕ್ಷ ಎಕರೆ

ಭತ್ತ ಬೆಳೆಯುವ ಪ್ರದೇಶ 2.68 ಲಕ್ಷ ಎಕರೆ

ಇದರಿಂದಾಗಿ ರೈತರ ಬೇಡಿಕೆ ಈಡೇರಿಸಲು ಸ್ವಲ್ಪ ಮೀನಮೇಷ ಎಣಿಸುವಂತಾಗಿತ್ತು. ಜಲಾಶಯಗಳಿಂದ ನೀರು ಬಿಟ್ಟ ಕೂಡಲೇ ರೈತರು ಭತ್ತ ನಾಟಿ ಮಾಡುತ್ತಾರೆ. ನಾಟಿ ಮಾಡಿದ ಬಳಿಕ ನೀರಿಗೆ ಕೊರತೆ ಎದುರಾದರೆ ನಷ್ಟ ಅನುಭವಿಸುತ್ತಾರೆ ಎಂಬುದು ಸರ್ಕಾರದ ಲೆಕ್ಕಾಚಾರ ಆಗಿತ್ತು. ಕಳೆದ ಬಾರಿ ರೈತರಿಗೆ ಈ ಅನುಭವ ಆಗಿದೆ. ಇದಲ್ಲದೆ, ಭತ್ತ ಬೆಳೆಯುವ ಪ್ರದೇಶ 2.68 ಲಕ್ಷ ಎಕರೆಯಷ್ಟಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಆಲೋಚನೆಗಿಳಿದಿತ್ತು ಎಂದು ಸಿಎಂ ತಿಳಿಸಿದರು.

ಮಳೆ ಆಧಾರಿತ ಕೃಷಿಗೆ ಮುಂದಾಗಿ

ಮಳೆ ಆಧಾರಿತ ಕೃಷಿಗೆ ಮುಂದಾಗಿ

ಜನ, ಜಾನುವಾರುಗಳು ಕುಡಿಯುವ ನೀರಿಗೆ ಪರದಾಡುತ್ತಿರುವುದರಿಂದ ಕಬಿನಿ, ಹಾರಂಗಿ, ಕೆಆರ್ಎಸ್, ಹೇಮಾವತಿ ಜಲಾಶಯದಿಂದ ನೀರು ಬಿಡುಗಡೆ ಮಾಡಿ ಕೆರೆ, ಕಟ್ಟೆಗಳನ್ನು ತುಂಬಿಸಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಭತ್ತಕ್ಕೆ ಬದಲಾಗಿ ಮಳೆ ಆಧಾರಿತ ಕೃಷಿಗೆ ಮುಂದಾಗುವಂತೆ ರೈತರಲ್ಲಿ ನಾನು ಕಳಕಳಿಯ ಮನವಿ ಮಾಡುತ್ತೇನೆ. ಈ ಸಂಬಂಧ ಕೃಷಿ ಇಲಾಖೆ ಕರಪತ್ರಗಳನ್ನು ಮುದ್ರಿಸಿ ಮನೆ ಮನೆಗೆ ಹಂಚಲಿದೆ ಎಂದು ಸಿಎಂ ಹೇಳಿದರು.

ಭತ್ತ ಮಾತ್ರ ಬೆಳೆಯಬೇಡಿ : ಸಿಎಂ ಮನವಿ

ಭತ್ತ ಮಾತ್ರ ಬೆಳೆಯಬೇಡಿ : ಸಿಎಂ ಮನವಿ

ಯಾವುದೇ ಬೆಳೆ ಬೆಳೆಯಬೇಡಿ ಎಂದು ಹೇಳುತ್ತಿಲ್ಲ. ಕೊಡಲು ನೀರಿಲ್ಲದ ಕಾರಣ ಮತ್ತು ತೊಂದರೆಗೆ ಸಿಲುಕುವ ಸಾಧ್ಯತೆ ಇರುವುದಿರಂದ ಭತ್ತ ಮಾತ್ರ ಬೆಳೆಯಬೇಡಿ ಎಂದು ಮನವಿ ಮಾಡುತ್ತಿದ್ದೇವೆ. ರೈತರು ಸರ್ಕಾರದ ಜೊತೆ ಸಹಕರಿಸಬೇಕು. ನಾವೂ ರೈತರ ಪರ ಇದ್ದೇವೆ. ಮುಂದೆ ಮಳೆ ಆದರೆ ನೀರು ಕೊಡುತ್ತೇವೆ. ಮುಂದಿನ ವಾರ ಮೋಡ ಬಿತ್ತನೆ ಸಹ ಮಾಡುತ್ತೇವೆ. ತಮಿಳುನಾಡಿಗೆ ಬಿಡುಗಡೆ ಮಾಡಬೇಕಾದ ನೀರಿನಲ್ಲಿ ಎಷ್ಟು ಕಡಿತ ಆಗಬೇಕೋ ಅಷ್ಟು ಆಗಿದೆ ಎಂದು ಮುಖ್ಯಮಂತ್ರಿಯವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.

ಸಭೆಯಲ್ಲಿ ಯಾರ್ಯಾರು ಭಾಗಿಯಾಗಿದ್ದರು?

ಸಭೆಯಲ್ಲಿ ಯಾರ್ಯಾರು ಭಾಗಿಯಾಗಿದ್ದರು?

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಜಲ ಸಂಪನ್ಮೂಲಕ ಸಚಿವ ಎಂ.ಬಿ. ಪಾಟೀಲ್, ಕೃಷಿ ಸಚಿವ ಕೃಷ್ಣ ಬೈರೇಗೌಡ, ಮಂಡ್ಯ ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಆಗಿರುವ ವಸತಿ ಸಚಿವ ಕೃಷ್ಣಪ್ಪ, ಮಂಡ್ಯ ಸಂಸದ ಪುಟ್ಟರಾಜು, ಮಾಜಿ ಸಚಿವ ಅಂಬರೀಶ್, ಶಾಸಕರಾದ ನರೇಂದ್ರ ಸ್ವಾಮಿ, ಚಲುವರಾಯ ಸ್ವಾಮಿ, ಮರಿತಿಬ್ಬೇಗೌಡ, ಶ್ರೀಕಂಠೇಗೌಡ, ಪ್ಮಟ್ಟಣ್ಣಯ್ಯ, ರಮೇಶ್ ಬಂಡಿಸಿದ್ದೇಗೌಡ, ನಾರಾಯಣಗೌಡ ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Lakes in Cauvery river catchment area to be filled to improve ground water level. Siddaramaiah announced on Wednesday that water will be released from KRS, Kabini, Harangi and Hemavathi to fill tanks, lakes. Karnataka is facing severest drought.
Please Wait while comments are loading...