ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್‌ನಿಂದ ದೇಶದ 43 ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆ: ಕೆ. ನೀಲಾ

|
Google Oneindia Kannada News

ಬೆಂಗಳೂರು, ಮೇ 1: ಮತ್ತೊಂದು ಕಾರ್ಮಿಕರ ದಿನಾಚರಣೆ ಬಂದಿದೆ. ಆದರೆ ಈ ಸಲ ಕಾರ್ಮಿಕರು ಬೀದಿಯಲ್ಲಿದ್ದಾರೆ. ಕೊರೊನಾ ವೈರಸ್‌ ಸೃಷ್ಟಿಸಿರುವ ಆತಂಕಕ್ಕೆ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್ ಜಾರಿಗೆ ತಂದಿದೆ. ಹೀಗಾಗಿ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಸಂದರ್ಭದಲ್ಲಿ ಶ್ರಮಿಕವರ್ಗ ಹೊಸ ಸವಾಲನ್ನು ಎದುರಿಸುತ್ತಿದೆ.

ಬಡವರೆಲ್ಲರೂ ನಮ್ಮ ದೇಶದ ಏಳ್ಗೆಗೆ ದುಡಿಯುವ ಕಾರ್ಮಿಕರೇ ಆಗಿದ್ದಾರೆ. ಪ್ರತಿವರ್ಷ ಕನಿಷ್ಠ ಕಾರ್ಮಿಕ ದಿನಾಚಣೆಯನ್ನಾದರೂ ಸಂಭ್ರಮದಿಂದ ಆಚರಿಸಲು ಕಾರ್ಮಿಕರಿಗೆ ಅವಕಾಶವಿತ್ತು. ದೇಶದ ಜನರನ್ನು ಮಾರಕ ವೈರಸ್ ನಿಂದ ಕಾಪಾಡಲು ಕೇಂದ್ರ ಸರ್ಕಾರ ಲಾಕ್‌ಡೌನ್‌ ನಿರ್ಧಾರ ತೆಗೆದುಕೊಂಡಿದೆ. ಆದರೆ ಈಗ ಕೊರೊನಾ ವೈರಸ್ ಗಿಂತ ಭೀಕರವಾಗಿ ದೇಶದ ಕಾರ್ಮಿಕ ವರ್ಗವನ್ನು ಲಾಕ್‌ಡೌನ್ ಕಾಡುತ್ತಿದೆ. ಒಂದು ದಿನದ ರಜೆಯನ್ನು ಸಂಭ್ರಮಿಸುತ್ತಿದ್ದ ಕಾರ್ಮಿಕರು ಕಳೆದ 38 ದಿನಗಳಿಂದ ಒತ್ತಾಯದ ರಜೆಯಲ್ಲಿದ್ದಾರೆ. ಲಾಕ್‌ಡೌನ್ ನಂತರದ ಬದುಕಿನ ಕುರಿತ ಆತಂಕವೀಗ ಎಲ್ಲರನ್ನೂ ಕಾಡುತ್ತಿದೆ.

ಈ ಸಂಕಷ್ಟದ ಸಂದರ್ಭದಲ್ಲಿ ಸಂಘಟಿತ, ಅಸಂಘಟಿತ ವಲಯದಲ್ಲಿ ಹಲವು ಹೋರಾಟಗಳನ್ನು ಮಾಡುವ ಮೂಲಕ ಕಾರ್ಮಿಕರಿಗೆ ನ್ಯಾಯ ಕೊಡಿಸಲು ಶ್ರಮಿಸುತ್ತಿರುವ ಶ್ರಮಿಕ ವರ್ಗದ ನಾಯಕಿ ಕೆ. ನೀಲಾ ಅವರು 'ಒನ್ಇಂಡಿಯಾ' ಜೊತೆಗೆ ಮಾತನಾಡಿದ್ದಾರೆ. ಕೊರೊನಾ ವೈರಸ್‌ಗಿಂದ ಲಾಕ್‌ಡೌನ್‌ ಹೇಗೆ ಶ್ರಮಿಕ ವರ್ಗವನ್ನು ಬೀದಿಗೆ ತಂದು ನಿಲ್ಲಿಸಿದೆ, ಇದಕ್ಕ ಪರಿಹಾರಗಳೇನು ಎಂಬುದರ ಕುರಿತು ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Labor leader K. Neela has spoken about the plight of workers after the lockdown.

ಒನ್ಇಂಡಿಯಾ: ನಮಸ್ಕಾರ ಮೆಡಂ, ಮೊದಲಿಗೆ ನಿಮಗೆ ಕಾರ್ಮಿಕ ದಿನಾಚರಣೆಯ ಶುಭಾಶಯಗಳು. ಜೊತೆಗೆ ಕೊರೊನಾ ವೈರಸ್‌ನಿಂದಾಗಿ ದೇಶಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದೆ. ಲಾಕ್‌ಡೌನ್ ಸಂದರ್ಭದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜನರ ಜೀವ ಕಾಪಾಡಲು ಶ್ರಮಿಸುತ್ತಿದ್ದೇವೆ ಎಂದು ಹೇಳಿವೆ. ಈ ಸಂದರ್ಭದಲ್ಲಿ ಕಾರ್ಮಿಕರ ಹಿತ ಕಾಪಾಡಿವೆಯಾ?

ಕೆ. ನೀಲಾ: ನಿಮಗೂ ಕಾರ್ಮಿಕ ದಿನಾಚರಣೆಯ ಶುಭಾಶಯಗಳು. ಬರಿ ಕಾರ್ಮಿಕರಲ್ಲ ಎಲ್ಲ ಶ್ರಮಜೀವಿಗಳು ಕೊರೊನಾ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾತ್ರ ಬಾಳ ಕಷ್ಟಕ್ಕೆ ಒಳಗಾಗಿದ್ದಾರೆ ಅಂತಲ್ಲ. ಕೊರೊನಾ ಎಂಬ ವೈರಸ್‌ಗಿಂತಲೂ ಬಹಳ ದೊಡ್ಡ ಪ್ರಮಾಣದಲ್ಲಿ ಹಸಿವು ಶ್ರಮಿಕ ವರ್ಗದ ಜನರ ಆಹುತಿ ತೆಗೆದುಕೊಳ್ಳುತ್ತಿದೆ, ಅವರನ್ನು ಘನತೆ ಹೀನರನ್ನಾಗಿ ಮಾಡುತ್ತಿದೆ, ಅವರಲ್ಲಿ ಇದ್ದಂತಹ ಸ್ವಾಭಿಮಾನವನ್ನು ನಾಶ ಮಾಡುತ್ತಿದೆ. ವೈರಸ್‌ನ್ನು ಇವತ್ತಲ್ಲ ನಾಳೆ ಹಿಮ್ಮೆಟ್ಟಿಸಬಹುದು, ವೈರಸ್‌ಗೆ ಲಸಿಕೆಯನ್ನೂ ಕಂಡು ಹಿಡಿಯಬಹುದು. ಆದರೆ ಈ ವೈರಸ್‌ನ್ನು ಮುಂದಿಟ್ಟುಕೊಂಡು ನಮ್ಮ ಶ್ರಮಿಕರನ್ನು ಅತ್ಯಂತ ನಿರ್ಧಯತೆಯಿಂದ, ನಿಷ್ಕರುಣೆಯಿಂದ, ಕ್ರೌರ್ಯದಿಂದ ಬೀದಿಗೆ ತಳ್ಳಿದ್ದು ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು. ಶ್ರಮಿಕ ವಿರೋಧಿ, ಬಂಡವಾಳಶಾಹಿಗಳ ಪರ ನಾನು ಎಂಬುದನ್ನು ಕೇಂದ್ರ ಸರ್ಕಾರ ಲಾಕ್‌ಡೌನ್ ಸಂದರ್ಭದಲ್ಲಿ ತೋರಿಸಿಕೊಟ್ಟಿದೆ. ಜಾರಿಗೆ ತರುವ ಕೇವಲ ಎರಡು ತಾಸು ಮೊದಲು ನಮ್ಮ ಪ್ರಧಾನಮಂತ್ರಿಗಳು ಲಾಕ್‌ಡೌನ್ ಘೊಷಣೆ ಮಾಡಿದ್ರು.

ಲಾಕ್‌ಡೌನ್ ಘೊಷಣೆ ಮಾಡುವಾಗ ಎಷ್ಟು ಜನರು ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗಿದ್ದಾರೆ ಅಂತಾ ನಮ್ಮ ಪ್ರಧಾನಮಂತ್ರಿಗಳಿಗೆ ಗೊತ್ತಿರಲಿಲ್ಲವಾ? ಕಳೆದ 10 ವರ್ಷಗಳಲ್ಲಿ ನಗರೀಕರಣ ಹೆಚ್ಚಾಗಿದೆ. ಕೃಷಿ ವಿರೋಧಿ ನೀತಿಯಿಂದ ಗ್ರಾಮೀಣಭಾಗದಲ್ಲಿ ಕೃಷಿ ಕುಸಿದಿದೆ. ಹೀಗಾಗಿ ಕೃಷಿಕರು ನಗರಕ್ಕೆ ಬಂದು ಕಾರ್ಮಿಕರಾಗಿ ಮಾರ್ಪಟ್ಟರು. ಯುರೋಪ್‌ನಲ್ಲಿ ಕೈಗಾರಿಕಾ ಕ್ರಾಂತಿಯಾದಾಗ ಕೈಗಾರಿಕೆಗಳ ಕಡೆಗೆ ಜನರು ಹೋಗಿದ್ದರು. ಅದು ಇಲ್ಲಿಯತನ ಮುಂದುವರಿತು. ಈಗ ಲಾಕ್‌ಡೌನ್‌ ಹಿನ್ನೆಲೆ ಒಳಗ ಜನ ನಗರದಿಂದ ವಾಪಾಸ್ ಹಳ್ಳಿಗೆ ಬರೊ ಸ್ಥಿತಿ ನಿರ್ಮಾಣ ಮಾಡಿದ್ರು.

Labor leader K. Neela has spoken about the plight of workers after the lockdown.

ಮೊದಲನೆಯದಾಗಿ ಲಾಕ್‌ಡೌನ್ ಘೋಷಣೆ ಮಾಡುವಾಗ ಯಾರೂ ಕೂಡ ಹಳ್ಳಿಗೆ ಹೋಗಬಾರದು. ನಿಮಗೆ ಯಾರಿಗೂ ತೊಂದರೆ ಆಗಲ್ಲ, ನಿಮ್ಮ ಕೆಲಸಕ್ಕೆ ಕುತ್ತು ಬರಲ್ಲ. ನಿಮಗೆಲ್ಲ ಕೆಲಸ ಕೊಡ್ತೇವೆ ಎಂಬ ಭರವಸೆಯನ್ನು ಸರ್ಕಾರಗಳು ಕೊಡಬೇಕಿತ್ತು. ಎರಡನೇಯದಾಗಿ ನೀವು ಮನೆಯಲ್ಲಿಯೆ ಇರಬೇಕು. ಹೊರಗಡೆ ಬರಬಾರದು. ವೈದ್ಯಕೀಯ ಹಾಗೂ ಪಡಿತರ ಸೌಲಭ್ಯವನ್ನು ನಿಮ್ಮ ಮನೆಗೆ ತಲುಪಿಸ್ತೇವೆ. ನಿಮ್ಮ ಅಕೌಂಟ್‌ಗೆ ಹಣ ಹಾಕುತ್ತೇವೆ ನಿಮ್ಮ ಪಡಿತರಕ್ಕೆ ಯಾವುದೇ ತೊಂದರೆ ಮಾಡುವುದಿಲ್ಲ ಎಂದು ಭರವಸೆ ಕೊಡಬೇಕಾಗಿತ್ತು. ಆದರೆ ಇದ್ಯಾವುದನ್ನು ಕೇಂದ್ರ ಸರ್ಕಾರ ಮಾಡಲಿಲ್ಲ.


ಒನ್ಇಂಡಿಯಾ: ಲಾಕ್‌ಡೌನ್ ಜಾರಿಯಾದ ಬಳಿಕ ಸಂಘಟಿತ, ಅಸಂಘಟಿತ ವಲಯದ ಕಾರ್ಮಿಕರಿಗೆ ಕೇಂದ್ರ, ರಾಜ್ಯ ಸರ್ಕಾರಗಳ ಕೊಡುಗೆ ಏನು?

ಕೆ. ನೀಲಾ: ವಿಶ್ವಸಂಸ್ಥೆ ವರದಿ ಪ್ರಕಾರ ಇವತ್ತು ಸುಮಾರು 43 ಕೋಟಿ ಜನರು ಭಾರತದಲ್ಲಿ ಉದ್ಯೋಗ ಕಳೆದುಕೊಂಡು ಜನರು ಬೀದಿಯಲ್ಲಿ ನಿಂತಿದ್ದಾರೆ, ಕಷ್ಟ ಅನುಭವಿಸುತ್ತಿದ್ದಾರೆ. ಲಕ್ಷ ಲಕ್ಷ ಜನರು ಲಾಕ್‌ಡೌನ್ ಸಂದರ್ಭದಲ್ಲಿ ರಸ್ತೆ ಮೇಲೆ ಬಂದರು. ಲಾಕ್‌ಡೌನ್ ಘೊಷಣೆ ಯಾದಾಗ ಭಾರತ ಎರಡು ಭಾರತವಾಗಿ ನಮ್ಮ ಕಣ್ಣಮುಂದೆ ಬಂತು. ಒಂದು ಭಾರತ ಮಧ್ಯಮ ವರ್ಗ, ಸ್ವಲ್ಪ ಮೇಲ್ಮಧ್ಯಮ ವರ್ಗ, ಸ್ವಲ್ಪ ಅನುಕೂಲ ಇರುವಂಥವರು, ಸರ್ಕಾರಿ ನೌಕರದಾರರು ಅತ್ಯಂತ ಕಮ್ಮಿಯ ಜನರು ಎಲ್ಲರೂ ಮನೆಯ ಒಳಗೆ ಉಳಿದರು. ಯಾರಿಗೆ ಉದ್ಯೋಗದ ಭದ್ರತೆ, ವೇತನವಿಲ್ಲ, ಯಾರಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲ ಅವರೆಲ್ಲರೂ ಬೀದಿ ಮೇಲೆ ಬಂದರು. ಲಾಕ್‌ಡೌನ್ ಜಾರಿಯಾದ ತಕ್ಷಣ ಶ್ರಮಿಕ ಲೋಕ ಬೀದಿ ಮೇಲೆ ಇತ್ತು, ಚೂರುಪಾರು ಮಧ್ಯಮವರ್ಗದ ಜನರು ಮನೆಯ ಒಳಗಡೆ ಇದ್ದರು.


ಒನ್ಇಂಡಿಯಾ: ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕ ಮಂತ್ರಾಲಯದ ಜಂಟಿ ಸಮಿತಿ ಕಾರ್ಮಿಕರಿಗೆ ವೇತನ ಪಾವತಿ ಮಾಡಿ ಎಂದು ನಾವು ಬಂಡವಾಳಶಾಹಿಗಳಿಗೆ ಒತ್ತಾಯ ಮಾಡಲ್ಲ ಎಂದು ಎಂದು ಹೇಳಿದೆ. ಹೀಗಾದ್ರೆ ಸರ್ಕಾರ ಯಾರ ಪರ?

ಕೆ. ನೀಲಾ: ವೈಜ್ಞಾನಿಕವಾಗಿ ಕೇಂದ್ರ ಸರ್ಕಾರ ಕೊರೊನಾ ವೈರಸ್‌ನ್ನು ನಿರ್ವಹಣೆ ಮಾಡಲು ಆಗುತ್ತಿಲ್ಲ. ಈಗಾಗಲೇ ಹೆಚ್ಚು ಹೆಚ್ಚು ಪರೀಕ್ಷೆಯನ್ನು ಮಾಡಬೇಕಿತ್ತು. ಆದರೆ ಇವರಿಗೆ ವೈಜ್ಞಾನಿಕ ಆಲೋಚನೆಯೆ ಇಲ್ಲ. ಹೀಗಾಗಿ ವೈರಸ್‌ನ್ನು ವೈರಸ್‌ ಆಗಿ ಕೇಂದ್ರ ಸರ್ಕಾರ ನೋಡುತ್ತಿಲ್ಲ. ಹೀಗಾಗಿ ನಿರ್ವಹಿಸಲು ಆಗಿಲ್ಲ. ಬೀದಿಯ ಮೇಲೆ ಇದ್ದಂತಹ ಅತ್ಯಂತ ಹೆಚ್ಚಿನ ಜನರು ಇವತ್ತು ಅತ್ಯಂತ ಧಾರುಣ ಸ್ಥಿತಿಯಲ್ಲಿದ್ದಾರೆ. ಬಹುಸಾಂಸ್ಕೃತಿಕ ಭಾರತವನ್ನು ಒಡೆಯಲಿಕ್ಕಾಗಿಯೂ ವೈರಸ್‌ನ್ನು ಕೇಂದ್ರ ಸರ್ಕಾರ ಬಳಸಿಕೊಂಡಿದೆ. ವೈರಸ್‌ನ್ನು ಒಂದು ಕೋಮಿಗೆ ಒಯ್ದು ಹಚ್ಚಿದ್ರು. ತಬ್ಲಿಘಿ ವೈರಸ್‌ ಎಂದು ಮಾತನಾಡಿದ್ರು. ಆದರೆ ಗುಜರಾತ್‌ನಲ್ಲಿ ಹಬ್ಬುತ್ತಿರುವುದು ಮುಸ್ಲಿಂ ವೈರಸ್ಸಾ? ಅಲ್ಪ ಸಂಖ್ಯಾತ ಕೋಮನ್ನು ವಿಭಜನೆ ಮಾಡಲು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ.

Labor leader K. Neela has spoken about the plight of workers after the lockdown.

ಒನ್ಇಂಡಿಯಾ: ಕೊರೊನಾ ವೈರಸ್, ಲಾಕ್‌ಡೌನ್‌ನಿಂದ ಖಂಡಿತವಾಗಿಯೂ ಎಲ್ಲ ರೀತಿಯ ಉದ್ಯೋಗಗಳಲ್ಲಿ ಕಡಿತವಾಗಲಿದೆ. ಈ ಸಂದರ್ಭದಲ್ಲಿ ಹೆಚ್ಚಾಗುವ ನಿರುದ್ಯೋಗ ಸಮಸ್ಯೆ ನಿರ್ವಹಣೆ ಮಾಡುವುದು ಸಾಧ್ಯವೆ?

ಕೆ. ನೀಲಾ: ಖಂಡಿತವಾಗಿಯೂ ಸಾಧ್ಯವಿದೆ. ಹೆಚ್ಚಾಗುತ್ತಿರುವ ನಿರುದ್ಯೋಗ ತಡೆಯಲು ಗ್ರಾಮೀಣ ಪ್ರದೇಶದಲ್ಲಿ ಸಮಗ್ರವಾಗಿ ಉದ್ಯೋಗ ಖಾತ್ರಿ ಕಾಯ್ದೆಯನ್ನು ಜಾರಿ ಮಾಡಬೇಕು. 3 ರಿಂದ 5 ಅಡಿ ಅಂತರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಡುವಂತೆ ಎಲ್ಲ ಕಡೆಗೂ ಜನರಿಗೆ ಕೆಲಸ ಕೊಡಬೇಕು ಎಂದು ಆದೇಶ ಬಂದಿದೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಎಲ್ಲರಿಗೂ ಜಾಬ್‌ ಕಾರ್ಡ್ ಕೊಡಬೇಕು. ನೂರಕ್ಕೆ ನೂರು ಜಾರಿ ಮಾಡಬೇಕು. ಬಜೆಟ್‌ನಲ್ಲಿ ಇಟ್ಟಿರುವುದಕ್ಕಿಂತ ದುಪ್ಪಟ್ಟು ಹಣವನ್ನು ಉದ್ಯೋಗ ಖಾತ್ರಿ ಯೋಜನೆಗೆ ಬಳಸಬೇಕು. ಪ್ರಧಾನಮಂತ್ರಿಗಳ ವಿಪತ್ತು ನಿರ್ವಹಣಾ ಖಾತಗೆ ಬಂದಿರುವ ಹಣವನ್ನು ಸಂಪೂರ್ಣವಾಗಿ ಉದ್ಯೋಗ ಖಾತ್ರಿ ಯೋಜನೆಗೆ ಬಳಸಬೇಕು. ಕಾಯ್ದೆಯನ್ನು ಸಂಪೂರ್ಣ ಜಾರಿ ಮಾಡಬೇಕು.

ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಂಡು ಬರುತ್ತಾರೆ. ಹೀಗಾಗಿ ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ತಕ್ಷಣ ಜಾರಿಗೆ ತರಬೇಕು. ಯಾರು ಬಂದು ಕೆಲಸ ಕೇಳಿದ್ರು ಕೆಲಸ ಕೊಡಬೇಕು. ಅವತ್ತಿನ ಕೂಲಿಯನ್ನು ಅವತ್ತೆ ಕೊಡಬೇಕು. ನಗರದಲ್ಲಿ ನಿರುದ್ಯೋಗಿಗಳಾಗಿರುವ ತಾತ್ಕಾಲಿಕವಾಗಿ ಕೆಲಸ ಕೊಡುವಂತೆ ಯೋಜನೆ ಜಾರಿಗೆ ತರಬೇಕು. ಅದಕ್ಕೆ ಕಾಲಹರಣ ಮಾಡಬಾರದು.


ಒನ್ಇಂಡಿಯಾ: ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆ ಹೇಗಿರುತ್ತದೆ? ಕಾರ್ಮಿಕ ವರ್ಗಕ್ಕೆ ಅನಕೂಲತೆಗಳು ಹೆಚ್ಚಿವೆಯಾ? ಅನಾನುಕೂಲತೆಗಳು ಹೆಚ್ಚಾಗಲಿವೆಯಾ?

ಕೆ. ನೀಲಾ: ಇನ್ನೊಂದು ಎರಡ್ಮೂರು ತಿಂಗಳಲ್ಲಿ ಆರ್ಥಿಕ ಸುನಾಮಿ ಬರಲಿದೆ. ಆಗ ಶ್ರಮಿಕ ವರ್ಗದ ಜನರು ಹಾಳಾಗುತ್ತಾರೆ. ಹೀಗಾಗಿ ಕಾರ್ಮಿಕ ವರ್ಗಕ್ಕೆ ತೊಂದರೆಗಳು ಆಗಲಿವೆ. ಅದ್ನು ತಪ್ಪಿಸಲು ತಕ್ಷಣಕ್ಕೆ ಸಂಘಟಿತ, ಅಸಂಘಟಿತ ಶ್ರಮಿಕವರ್ಗಕ್ಕೆ ತಿಂಗಳಿಗೆ 7.5 ಸಾವಿರ ರೂ. ಹಣವನ್ನು ಅವರ ಖಾತೆಗಳಿಗೆ ಹಾಕಬೇಕು. ದೊಡ್ಡ ದೊಡ್ಡ ಯೋಜನೆಗಳನ್ನು ಜಾರಿಗೆ ತರುವ ಬದಲು ಜಲಮೂಲಗಳನ್ನು ಪುನಶ್ಚೇತನ ಮಾಡುವ ಮೂಲಕ, ಬೇರೆ ಬೇರೆ ಸಣ್ಣ ಸಣ್ಣ ಗೃಹ ಕೈಗಾರಿಕೆಗಳಿಗೆ ಒತ್ತು ಕೊಡಬೇಕು. ಆ ಮೂಲಕ ಹೊಸ ಯೋಜನೆಗಳನ್ನು ಕೈಗೊಳ್ಳಬೇಕು. ಕೃಷಿಗೆ ಹೆಚ್ಚಿನ ಸೌಲಭ್ಯ ಕೊಡಬೇಕು. ಹೊಸ ಉದ್ಯೋಗಗಳನ್ನು ಸೃಷ್ಟಿ ಮಾಡುವುದರ ಸಲುವಾಗಿ ಒಂದು ಸಮಿತಿಯನ್ನು ರಚನೆ ಮಾಡಬೇಕು. ಇಲ್ಲದೆ ಹೋದರೆ ಆರ್ಥಿಕ ಸುನಾಮಿಯನ್ನು ನಾವು ಎದುರಿಸಲು ಆಗುವುದಿಲ್ಲ. ಸಮಾಜವಾದಿ ಕಣ್ಣೋಟದ ಉದ್ಯೋಗ ಸೃಷ್ಟಿ ಆಗಬೇಕು. ಹಾಗೆ ಆಗದಿದ್ದರೆ ಮಾಡುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಆಗದಿದ್ದರೆ ಆರ್ಥಿಕ ಸುನಾಮಿ ತಡೆಯಲು ಆಗುವುದಿಲ್ಲ. ಬಂಡವಾಳಶಾಹಿಗಳ ಪರವಾದಂತಹ ಕೆಲಸಗಳನ್ನು ಮಾತ್ರ ಉತ್ತೇಜನ ಮಾಡಿದ್ರೆ ನಿರುದ್ಯೋಗ ಹೋಗುವುದಿಲ್ಲ. ಜೊತೆಗೆ ಕಾರ್ಪೊರೇಟ್ ವರ್ಗದ ಜನರು ಮತ್ತೆ ನಮಗೆ ನಷ್ಠವಾಗಿದೆ ಎಂದು ಸರ್ಕಾರದಿಂದ ಹಣವನ್ನು ಸುಲಿಯುತ್ತಾರೆ.

Labor leader K. Neela has spoken about the plight of workers after the lockdown.

ಒನ್ಇಂಡಿಯಾ: ಲಾಕ್‌ಡೌನ್‌ನಿಂದ ಕೊರೊನಾ ವೈರಸ್‌ನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಬಹುದಾ?

ಕೆ. ನೀಲಾ: ವಿಶ್ವ ಆರೋಗ್ಯ ಸಂಸ್ಥೆಯೆ ಹೇಳಿದೆ ಕೊರೊನಾ ವೈರಸ್ ತಡೆಯಲು ಕೇವಲ ಲಾಕ್‌ಡೌನ್ ಒಂದೆ ಪರಿಹಾರವಲ್ಲ. ಲಾಕ್‌ಡೌನ್ ನಿಲ್ಲಿಸಿದ ಕೂಡಲೇ ಸೋಂಕು ಸ್ಪೋಟವಾಗುವಂತಹ ಸಾಧ್ಯತೆಯಿದೆ. ಹೀಗಾಗಿ ಹೆಚ್ಚೆಚ್ಚು ಪರೀಕ್ಷೆಗಳನ್ನು ಮಾಡಬೇಕು. ಲಾಕ್‌ಡೌನ್ ಸಂದರ್ಭದಲ್ಲಿ ವೈದ್ಯಕೀಯ ವ್ಯವಸ್ಥೆಯನ್ನು ಸುಧಾರಿಸಿಕೊಂಡು, ಕೊರೊನಾವುಳ್ಳ ರೋಗಿಗಳಿಗೆ, 65 ವರ್ಷ ಮೀರಿದ ರೋಗಿಗಳಿಗೆ, 10ರ ಒಳಗಿನ ವಯಸ್ಸಿನ ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿ ಜಾಗೃತಿಯನ್ನುಂಟು ಮಾಡಲು ಈ ಸಂದರ್ಭವನ್ನು ಬಳಸಿಕೊಳ್ಳಬೇಕು. ಲಾಕ್‌ಡೌನ್ ಸಂದರ್ಭದಲ್ಲಿ ಏನೂ ಕೆಲಸ ಮಾಡದೇನೆ, ಗೋಮೂತ್ರ ಕುಡಿಯಿರಿ ಎಂದು ಹೇಳುತ್ತ ಮಜಾ ಮಾಡುತ್ತಿರುವುದನ್ನು ಬಿಡಬೇಕು. ಲಾಕ್‌ಡೌನ್ ಮುಗಿದ ಬಳಿಕ ಏನೂ ಮಾಡಬೇಕು ಎಂಬುದನ್ನು ಸರ್ಕಾರ ಮುಂಜಾಗ್ರತೆ ವಹಿಸಿ ಮಾಡಬೇಕು. ಲಾಕ್‌ಡೌನ್ ಇರುವುದು ಸಚಿವರಿಗೆ ಸ್ಮಿಮ್ಮಿಂಗ್‌ಪೂಲ್‌ನಲ್ಲಿ ಮಜಾ ಮಾಡುವುದಕ್ಕೆ ಅಲ್ಲ!


ಒನ್ಇಂಡಿಯಾ: ಲಾಕ್‌ಡೌನ್‌ ಬಳಿಕ ನಗರಗಳಿಂದ ತಮ್ಮೂರಿಗೆ ವಾಪಾಸ್ ಹೋಗುತ್ತಿದ್ದ ಕೂಲಿ ಕಾರ್ಮಿಕರು ಈಗಲೂ ದಾರಿ ಮಧ್ಯೆ ಇದ್ದಾರೆ. ಇದೇ ಸಂದರ್ಭದಲ್ಲಿ ಇವತ್ತು ಬೇರೆ ದೇಶಗಳಿಂದ ಜನರನ್ನು ಕರೆದುಕೊಂಡು ಬರುತ್ತಿದ್ದಾರೆ. ಇದು ಇಬ್ಬಗೆಯ ನೀತಿ ಅಲ್ಲವಾ? ಬೇರೆ ದೇಶದಿಂದ ಕರೆದುಕೊಂಡು ಬಂದಂತೆ ಕೂಲಿ ಕಾರ್ಮಿಕರನ್ನು ತಮ್ಮೂರಿಗೆ ಹೋಗಲು ಬಿಡಬೇಕಲ್ಲವಾ?

ಕೆ. ನೀಲಾ: ಹೌದು ಶ್ರಮಿಕರನ್ನು ಮನೆಗೆ ಹೋಗದಂತೆ ತಡೆದಿರುವುದು ಅಕ್ಷಮ್ಯವಾದ ಅಪರಾಧ. ಬೇರೆ ದೇಶದಿಂದ ಕರೆದುಕೊಂಡು ಬಂದವರನ್ನು ಫ್ಲೈಟ್‌ನಲ್ಲಿ ಯಾಕೇ ಕರೆದುಕೊಂಡು ಬಂದಿದ್ದೀರಿ ಎಂದು ನಾವು ಕೇಳುತ್ತಿಲ್ಲ. ಕರದುಕೊಂಡು ಬನ್ನಿ, ಕೊನೆ ಪಕ್ಷ ಕಾರ್ಮಿಕರನ್ನು ಕನಿಷ್ಠ ಬಸ್‌ನಲ್ಲಾದ್ರೂ ಕಳಿಸಿಕೊಡಿ. ಬೇಕಾದಷ್ಟು ಬಸ್‌ಗಳಿದ್ದಾವೆ. ಅವುಗಳನ್ನು ಸ್ಯಾನಿಟೈಸ್ ಮಾಡಿ ಕಳಿಸಲಿ. ಜನರ ಆರೋಗ್ಯವನ್ನು ತಪಾಸಣೆ ಮಾಡಿ ಮನೆಗೆ ಸೇರಿಸಲಿ. ಆದರೆ ಸರ್ಕಾರ ಹಾಗೆ ಮಾಡುತ್ತಿಲ್ಲ. ಊರಿಗೆ ಹೋಗುತ್ತಿರುವ ಜನರದ್ದೆ ತಪ್ಪು ಎಂಬ ಭಾವನೆಯನ್ನು ಸರ್ಕಾರ ಉಂಟು ಮಾಡಿದೆ.

ಹಳ್ಳಿಯಲ್ಲಿ ವಾಸವಾಗಿರುವ ಸಾಮಾನ್ಯ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಜನರಿಗೂ ಬುದ್ದಿ ಇಲ್ಲ ನೋಡ್ರಿ. ಜನ ಹೇಳಿದ ಮಾತೇ ಕಳ್ತಿಲ್ಲ. ರೋಡಿಗೆ ಬರ್ತಿದ್ದಾರೆ ಅಂತಾ ಮಾತನಾಡುತ್ತಿದ್ದಾರೆ. ಅಂದರೆ ನಮ್ಮ ವಿರೋಧಿ ಅಂಶವನ್ನು ನಾವೇ ಸುಖಿಸುವಂಗೆ ನಮ್ಮ ಬಾಯಿಂದ ಬರ್ತಾಯಿದೆ. ಇದನ್ನು ಗಮನಿಸಿರಿ. ಬೀದಿಯಲ್ಲಿ ಬಂದಂತಹ ಜನರ ಬಗ್ಗೆ, ಅಯ್ಯೋ ಪಾಪಾ ಬೀದಿಗೆ ಬಂದ್ರಲ್ಲ. ಈ ಸರ್ಕಾರ ತಮ್ಮ ಮಕ್ಕಳನ್ನು, ಸಂಬಂಧಿಕರನ್ನು ವಿಮಾನದಲ್ಲಿ ಕರೆದುಕೊಂಡು ಬಂದರು, ಈ ನಮ್ಮ ಶ್ರಮಿಕ ಜನರನ್ನು ಬೀದಿಗೆ ಬಿಟ್ರಲ್ಲ ಅನ್ನೊ ಬದಲಿಗೆ. ಏನ್ ಮಾಡಿದ್ರು? ವಿಮಾನದಲ್ಲಿ ಕರೆದುಕೊಂಡು ಬಂದವರನ್ನು ನೋಡಲಿಕ್ಕೆ ಬಿಡಲೇ ಇಲ್ಲ. ಅದರ ಬದಲಿಗೆ ಇವರು ಯಾಕೇ ರಸ್ತೆಗೆ ಬರಬೇಕು? ಏನ್ ಸತ್ತೋಗ್ತಿದ್ರ ಇವ್ರು? ಇರಬಹುದಾಗಿತ್ತು ಅಲ್ಲಿನೆ ಅಂತಾ ಮಾತನಾಡುವ ಹಾಗೆ ಮಾಡಿದ್ರು. ಅಂದರೆ ಶ್ರಮಿಕರ ವಿರುದ್ಧ ಸಾಮಾನ್ಯ ಜನರನ್ನು ಎತ್ತಿಕಟ್ಟುವಂಥ ಬಹುದೊಡ್ಡ ಷಡ್ಯಂತ್ರವನ್ನು ದೇಶಾದ್ಯಂತ ಮಾಡಲಾಯ್ತು.


ಒನ್ಇಂಡಿಯಾ: ಹೊರ ದೇಶದಿಂದ ಬಂದಿದ್ದ ಎಲ್ಲರನ್ನೂ ಕ್ವಾರಂಟೈನ್ ಮಾಡಿದ್ದಾರೆ ಅನ್ನಿಸುತ್ತಿದೆಯಾ?

ಕೆ. ನೀಲಾ: ವೈರಸ್‌ ಹರಡಲು ಆರಂಭವಾದಾಗಿನಿಂದ ಲಾಕ್‌ಡೌನ್ ಮಾಡುವವರೆಗಿನ ಅವಧಿಯಲ್ಲಿ ಎಷ್ಟು ಜನ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಿದ್ದಾರೆ? ಅವರೆಲ್ಲರನ್ನು ತೆಗೆದುಕೊಂಡು ಹೋಗಿ ಕ್ವಾರಂಟೈನ್ ಮಾಡಿದ್ದಾರಾ? ಇಲ್ಲ. ವಿಮಾನದಲ್ಲಿ ಬಂದವರ ಅಡ್ರೆಸ್‌, ಫೋನ್ ನಂಬರ್ ಎಲ್ಲವೂ ಇರುತ್ತದಲ್ಲ? ಅವರನ್ನು ಹೇಗೆ? ಯಾಕೇ ಬಿಟ್ಟರು? ಶ್ರೀಮಂತರನ್ನು, ವಿಮಾನದಲ್ಲಿ ಓಡಾಡುವವರನ್ನು ಫ್ರೀಯಾಗಿ ಬಿಟ್ಟರು. ಬೀದಿ ಮೇಲೆ ಇದ್ದವರನ್ನು ಹೆದರಿಸಿದ್ರು. ಇದು ಶ್ರಮಿಕ ವರ್ಗದ ಮೇಲೆ ಸರ್ಕಾರ ಮಾಡಿದ ಕ್ರೌರ್ಯ. ಇದು ಅಕ್ಷಮ್ಯ ಅಪರಾಧ.


ಒನ್ಇಂಡಿಯಾ: ಜನರಲ್ಲಿ ರಾಜಕೀಯ ಸಾಕ್ಷರತೆಯ ಕೊರತೆಯಿಂದ ಕಾರ್ಮಿಕರಿಗೆ ಅವರ ಹಕ್ಕುಗಳು ಸಿಗುತ್ತಿಲ್ಲವಾ?

ಕೆ. ನೀಲಾ: ರಾಜಕೀಯ ಸಾಕ್ಷರತೆ ಇದ್ದಿದ್ದರೆ ಜನರು ಸಂಸದರ ಮನೆಗೆ ನುಗ್ಗುತ್ತಿದ್ದರು. ನನ್ನನ್ನು ಸೇರಿಸಿಕೊಂಡು ಮಾತನಾಡುತ್ತೇನೆ ನಾನು. ನಮ್ಮ ಜವಾಬ್ದಾರಿ ಏನು? ಜನರನ್ನು ರಾಜಕೀಯ ಸಾಕ್ಷರರನ್ನಾಗಿ ಮಾಡಲಿಲ್ಲ. ಜನರನ್ನು ರಾಜಕೀಯ ಸಾಕ್ಷರರನ್ನಾಗಿ ಮಾಡಿದ್ರೆ, ಜನ ಇಂತಹ ಪ್ರಶ್ನೆಗಳು ಬಂದಾಗ ಬೀದಿಗೆ ಬರುವ ಬದಲಿಗೆ ಪಾರ್ಲಿಮೆಂಟ್‌ಗೆ ನುಗ್ಗುತ್ತಿದ್ದರು. ತರಿಸಿ ಬಸ್ಸುಗಳನ್ನು, ನಾವು ತಯಾರಿಸಿದ ಬಸ್‌ಗಳು, ನಮ್ಮೂರಿಗೆ ಹೋಗಬೇಕು ನಾವು. ಇಲ್ಲದೆ ಇದ್ದರೆ ನಮಗೆ ರೇಶನ್ ಕೊಡಿ, ನಮ್ಮ ಖಾತೆಗೆ ಹಣ ಹಾಕಿ ಎಂದು ಕೇಳುತ್ತಿದ್ದರು.


ಒನ್ಇಂಡಿಯಾ: ಶ್ರಮಿಕ ವರ್ಗ ಈ ಹಿಂದಿಗಿಂತಲೂ ಈಗ ಸಂಕಷ್ಟದಲ್ಲಿದೆ. ಮುಂದೆಯೂ ಕೂಡ ಕಠಿಣ ದಿನಗಳು ಎಲ್ಲರಿಗೂ ಕಾದಿವೆ. ಹೀಗಿದ್ದಾಗ ಕಾರ್ಮಿಕ ವರ್ಗಕ್ಕೆ ನೀವು ಏನು ಧೈರ್ಯ ಕೊಡುತ್ತೀರಿ?

ಕೆ. ನೀಲಾ: ದುಡಿಯುವ ವರ್ಗದ ಜನ ಯಾವತ್ತೂ ಭಯ ಪಡಲ್ಲ. ಅವರು ಸಾವಿನ ಜೊತೆಗೆ, ಸಮಸ್ಯೆಯ ಜೊತೆಗೆ, ವರ್ಗ ವಿರೋಧಿಗಳ ಜೊತೆಗೆ ನಿರಂತರ ಹೋರಾಡುತ್ತಲೇ ಇಲ್ಲಿಯವರೆಗೆ ಬದುಕನ್ನು ತೆಗೆದುಕೊಂಡು ಬಂದಿದ್ದಾರೆ. ಹೀಗಾಗಿ ಅವರು ಈಗಲೂನು ಭಯ ಪಟ್ಟಿಲ್ಲ. ಆದರೆ ಶ್ರಮಿಕ ವರ್ಗ ಮಾಡಬೇಕಾದ ಕೆಲಸ ಏನೆಂದರೆ, ತಮ್ಮ ವಿರೋಧಿಗಳು ಯಾರೂ ಎಂಬುದನ್ನು ಅವರು ಗುರುತಿಸಬೇಕು. ತಮ್ಮ ವಿರೋಧಿಗಳು ಯಾವುದೇ ಕೋಮಿನವರಲ್ಲ. ಹಿಂದು, ಮುಸ್ಲಿಂ, ಸಿಖ್, ಇಸಾಯಿ, ಪಾರ್ಸಿ, ಬೌದ್ಧ್, ಜೈನ್, ಲಿಂಗಾಯತ್ ನಾವೆಲ್ಲ ಒಂದೇ ಇದ್ದೇವೆ. ನಾವೆಲ್ಲ ದುಡಿಯುವ ಜನ ಒಂದೇ ಇದ್ದೇವೆ. ನಾವು ಒಂದಾಗಬೇಕು. ಉಳ್ಳವರನ್ನು ಫ್ಲೈಟ್‌ನಲ್ಲಿ ತಂದರು, ನಮ್ಮನ್ನು ಬೀದಿಯಲ್ಲಿ ನಿಲ್ಲಿಸಿದ್ರು ಅನ್ನೋದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಕೂಡಿ ಅಂತೂ ಬದುಕುತ್ತಾ ಇದ್ದೇವೆ ನಾವು, ಬದಕುತ್ತೇವೆ.


ಒನ್ಇಂಡಿಯಾ: ಕೊರೊನಾ ವೈರಸ್, ಲಾಕ್‌ಡೌನ್‌ನಿಂದ ಕೇಂದ್ರ, ರಾಜ್ಯ ಸರ್ಕಾರಗಳ ಮೇಲೆ ಜನರ ಭಾವನೆ ಬದಲಾಗಿದೆಯಾ?

ಕೆ. ನೀಲಾ: ಜಿಡಿಪಿ ಇಷ್ಟೊಂದು ಕಡಿಮೆ ಆಗಿರೋದು, ಕಾರ್ಪೊರೇಟ್ ವಲಯದ ಸಾಲ ಮನ್ನಾಕ್ಕೆ ಈ ಕೊರೊನಾದಲ್ಲಿ ಕೇಂದ್ರ ಸರ್ಕಾರ ಕ್ಲೀನ್ ಚಿಟ್ ತೆಗೆದುಕೊಂಡಿದೆ. ಈಗಾಗಲೇ ಅವರಿಗೆ ಕ್ಲೀನ್ ಚಿಟ್ ಸಿಕ್ಕಾಯ್ತು. ಇನ್ನು ಮುಂದಿನ ಹತ್ತು ವರ್ಷಗಳ ವರೆಗೆ ಅನಭಿಶಕ್ತವಾಗಿ ಮೆರೆಯಬಹುದು ಎಂದು ಅವರು ಅಂದುಕೊಂಡಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಾಡಿರುವ ಜನವಿರೋಧಿ ನೀತಿಯನ್ನು ನಾವು ಅರ್ಥ ಮಾಡಿಕೊಳ್ಳಲಿಕ್ಕೆ ಸಾಧ್ಯ ಆಗಬೇಕು. ಲಾಕ್‌ಡೌನ್‌ನ್ನು ಜನರು ಮನಃಪೂರ್ವಕವಾಗಿ ಪಾಲಿಸಿದ್ದಾರೆ. ಬೀದಿಗೆ ಬಂದಿದ್ದಾರೆ ಅಂದರೆ ಜನರು ಅನ್ನಕ್ಕಾಗಿ ಬೀದಿಗೆ ಬಂದಿದ್ದಾರೆ.


ಒನ್ಇಂಡಿಯಾ: ಈ ಸಂದರ್ಭದಲ್ಲಿ ಕಾರ್ಮಿಕ ದಿನಾಚರಣೆಯನ್ನು ಹೇಗೆ ಆಚರಿಸುತ್ತೀರಿ?

ಕೆ. ನೀಲಾ: ಕಾರ್ಮಿಕ ಸಂಘಟನೆಗಳು "ಮನೆ ಮನೆಯಲ್ಲೂ ಮೇ ಡೇ' ಅಂತಾ ಹೇಳಿ, 68,660 ಕೋಟಿ ರೂ. ಸಾಲವನ್ನು ಮನ್ನಾ ಮಾಡಿದ್ರಲ್ಲ ಅದನ್ನು ವಿರೋಧಿಸಿ ನಾವು ನಮ್ಮ ನಮ್ಮ ಮನೆಯ ಎದುರು ನಿಂತು ಪ್ರತಿಭಟನೆ ಮಾಡುತ್ತಿದ್ದೇವೆ. ಮನೆ ಮನೆಯಲ್ಲೂ ಮೇ ಡೇ ಕೇಂದ್ರ ಸರ್ಕಾರದ ಕಾರ್ಮಿಕ ನೀತಿಯನ್ನು ವಿರೋಧಿಸಿ ಮೇ ಡೇಯನ್ನು ಮಾಡುತ್ತಿದ್ದೇವೆ. ಸಾಹಿತಿ ದೇವನೂರು ಮಹಾದೇವ, ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿ ಎಲ್ಲರೂ ಇರದಲ್ಲಿ ಭಾಗಿಯಾಗುತ್ತಿದ್ದಾರೆ.

English summary
Workers' Day is being celebrated today amid a lockdown. Labor leader K. Neela has spoken about the plight of workers after the lockdown. ಲಾಕ್ ಡೌನ್ ಮಧ್ಯೆ ಇಂದು ಕಾರ್ಮಿಕರ ದಿನಾಚರಣೆಯನ್ನು ಆಚರಿಲಾಗುತ್ತಿದೆ. ಲಾಕ್ ಡೌನ್ ಬಳಿಕ ಕಾರ್ಮಿಕರ ಸ್ಥಿತಿಗತಿಯ ಕುರಿತು ಕಾರ್ಮಿಕ ನಾಯಕಿ ಕೆ. ನೀಲಾ ಮಾತನಾಡಿದ್ದಾರೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X