ಕೆಎಸ್ಆರ್ಟಿಸಿ ಸಹಾಯವಾಣಿ ಬದಲಾವಣೆ, ನೂತನ ಸಹಾಯವಾಣಿ ಸಂಖ್ಯೆ ಇಲ್ಲಿದೆ
ಬೆಂಗಳೂರು, ಡಿ. 27: ಪ್ರಯಾಣಿಕರಿಗೆ ಮತ್ತಷ್ಟು ಹೆಚ್ಚಿನ ಸೌಲಭ್ಯ ಒದಗಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮುಂದಾಗಿದ್ದು, ತನ್ನ ಸೇವೆಯನ್ನು ಮತ್ತಷ್ಟು ಸರಳಗೊಳಿಸುತ್ತಿದೆ. ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಯಾಣಿಕರ ಪ್ರಯಾಣವನ್ನು ಸುಗಮಗೊಳಿಸಲು ಸಹಾಯವಾಣಿ ವ್ಯವಸ್ಥೆ ಮಾಡಿತ್ತು. ಯಾವುದೇ ಬಸ್, ಮುಂಗಡ ಬುಕ್ಕಿಂಗ್, ಬಸ್ ವೇಳಾಪಟ್ಟಿ ಸೇರಿದಂತೆ ಎಲ್ಲ ಮಾಹಿತಿಯನ್ನು ಪಡೆಯಲು ಸಹಾಯವಾಣಿ ಸಂಖ್ಯೆ 94495 96666ಯನ್ನು ಕೊಟ್ಟಿತ್ತು. ಆದರೆ ಇದೀಗ ಅದನ್ನು ಹಿಂದಕ್ಕೆ ಪಡೆಯಲು ಕೆಎಸ್ಆರ್ಟಿಸಿ ನಿರ್ಧಾರ ಮಾಡಿದೆ.
ಹಳೆಯ ಸಹಾಯವಾಣಿ ಸಂಖ್ಯೆಯ ಬದಲಿಗೆ ಹೊಸ ದೂರವಾಣಿ ಸಂಖ್ಯೆಯನ್ನು ಕೆಎಸ್ಆರ್ಟಿಸಿ ಒದಗಿಸಿದ್ದು, ಇನ್ನು ಮುಂದೆ ಹೊಸ ಸಹಾಯವಾಣಿ ಸಂಖ್ಯೆ 080-26252625ಗೆ ಕರೆ ಮಾಡುವ ಮೂಲಕ ಅಗತ್ಯ ಮಾಹಿತಿ ಪಡೆಯ ಬಹುದಾಗಿದೆ. ನೂತನ ಸಹಾಯವಾಣಿ ಸಂಖ್ಯೆಯು ಹೊಸ ವರ್ಷದ ಮೊದಲ ದಿನದಿಂದ ಅಂದರೆ ಜನವರಿ 1, 2021 ರಿಂದ ಕಾರ್ಯಾರಂಭ ಮಾಡಲಿದೆ.
ಕೊರೋನಾ ವಿಚಾರದಲ್ಲಿ KSRTC ನೌಕರರಿಗೆ ಮಹಾ ಮೋಸ..!
ಪ್ರಯಾಣಿಕರು ಜನವರಿ 1, 2021 ರಿಂದ ಸಲಹೆ, ದೂರುಗಳು ಹಾಗೂ ಸಂಸ್ಥೆಯ ಇನ್ನಿತರ ವಿವರ ಅಥವಾ ಮಾಹಿತಿ ಪಡೆಯಲು ಕಾಲ್ ಸೆಂಟರ್ ಸಹಾಯವಾಣಿಗೆ ಕರೆ ಮಾಡುವ ಮೂಲಕ ತಿಳಿದು ಕೊಳ್ಳಬಹುದು ಎಂದು ಕೆಎಸ್ಆರ್ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾರ್ಯಾಚರಣೆ) ತಿಳಿಸಿದ್ದಾರೆ.