ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಟ್ಟು ಸತ್ತಿರುವುದು ನಿಮ್ಮದೇ ಹಣದಲ್ಲಿ ಖರೀದಿಸಿದ ಬಸ್‌ಗಳು!

|
Google Oneindia Kannada News

Recommended Video

ಕಲಬುರಗಿಯಲ್ಲಿ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ | Oneindia Kannada

ಬೆಂಗಳೂರು, ಸೆಪ್ಟೆಂಬರ್ 13: ಕೆಲವು ಬಡಪಾಯಿಗಳಿರುತ್ತಾರೆ. ಪದೇ ಪದೇ ಬೇರೆಯವರ ಆಕ್ರೋಶ, ಕೋಪ, ಬೇಸರ, ಹತಾಶೆ, ಕಿಡಿಗೇಡಿತನಗಳಿಗೆ ಬಲಿಪಶುಗಳಾಗುತ್ತಿರುತ್ತಾರೆ. ಈ ಬಲಿಪಶುಗಳ ಮೇಲೆ ಕೆಲವರು ಮತ್ತೆ ಮತ್ತೆ ದಾಳಿ ಮಾಡಿ ವಿಕೃತ ಸಂತೋಷ ಪಡುತ್ತಾರೆ.

ನಿಮ್ಮ ಅಮಾನವೀಯ ಕ್ರೌರ್ಯಕ್ಕೆ ಹೀಗೆ ಬಲಿಯಾದವನೊಬ್ಬ ನೀವು ಮೆಜೆಸ್ಟಿಕ್‌ಗೆ ಹೋದರೆ ಕಾಣಿಸುತ್ತಾನೆ. ಆತನ ಮೈತುಂಬಾ ಸುಟ್ಟಗಾಯಗಳಿವೆ. ತನ್ನ ಬದುಕನ್ನು ಕಳೆದುಕೊಂಡು ಅಸಹಾಯಕನಂತೆ ನಿಂತಿದ್ದಾನೆ. ನಿಮ್ಮಲ್ಲಿ ಭಾವನೆಗಳಿದ್ದರೆ ಆತನ ನೋವು ಏನು ಎಂಬುದನ್ನು ಆಲಿಸುತ್ತೀರಿ. ಆತನ ಕಣ್ಣೀರಿಗೆ ನೀವೂ ಕಣ್ಣೀರಾಗುತ್ತೀರಿ. ಆತನ ದಯನೀಯ ಪರಿಸ್ಥಿತಿಗೆ ನಾನೂ ಕಾರಣಕರ್ತನಲ್ಲವೇ ಎಂದು ಪಶ್ಚಾತ್ತಾಪಪಡುತ್ತೀರಿ. ಅಂತಹದ್ದೊಂದು ಮಾನವೀಯ ಸ್ಪಂದನೆ ನಿಮಗೆ ಇಲ್ಲದಿದ್ದರೆ ಆ ರೀತಿ ಮತ್ತಷ್ಟು ದೇಹಗಳನ್ನು ಬೆಂಕಿಯಲ್ಲಿ ದಹಿಸುತ್ತಾ ಗಹಗಹಿಸುವ ಕ್ರೌರ್ಯ ಪ್ರದರ್ಶಿಸುತ್ತೀರಿ.

ಸಂಕಷ್ಟದಲ್ಲಿರುವ ಸಹಕಾರ ಸಾರಿಗೆಯ ಸಹಾಯಕ್ಕೆ ಬಂದ ಯಡಿಯೂರಪ್ಪಸಂಕಷ್ಟದಲ್ಲಿರುವ ಸಹಕಾರ ಸಾರಿಗೆಯ ಸಹಾಯಕ್ಕೆ ಬಂದ ಯಡಿಯೂರಪ್ಪ

ಹೆಚ್ಚು ದಿನಗಳೇನಾಗಿಲ್ಲ, ಇತ್ತೀಚೆಗೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಬಂಧನ ಖಂಡಿಸಿ ನಡೆದ ಪ್ರತಿಭಟನೆ ವೇಳೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್‌ ಒಂದಕ್ಕೆ ಬೆಂಕಿ ಹಚ್ಚಿ ಸುಡಲಾಯಿತು. ರಸ್ತೆಯಲ್ಲಿ ಸಿಕ್ಕ ಇತರೆ ಬಸ್ ಹಾಗೂ ವಾಹನಗಳಿಗೂ ಕಲ್ಲು ತೂರಿದರು. ಇದನ್ನು ಪ್ರತಿಭಟನೆಯೋ ಅಥವಾ ಕಿಡಿಗೇಡಿತನದ ಕೃತ್ಯವೋ ಎಂಬುದನ್ನು ನಿರ್ಧರಿಸಬೇಕಿರುವುದು ನಾವು.

ಬಸ್‌ಗಳ ಮೇಲೇಕೆ ಸಿಟ್ಟು?

ಬಸ್‌ಗಳ ಮೇಲೇಕೆ ಸಿಟ್ಟು?

ಮೊನ್ನೆಯ ಪ್ರತಿಭಟನೆ ಮಾತ್ರವಲ್ಲ, ನಮ್ಮ ರಾಜ್ಯದ ಸರ್ಕಾರಿ ಬಸ್‌ಗಳಿಗೆ ಕಲ್ಲು ತೂರುವುದು, ಬೆಂಕಿ ಹಚ್ಚುವ ಘಟನೆಗಳು ಹಲವು ಬಾರಿ ನಡೆದಿವೆ. ಕಾವೇರಿ ಪ್ರತಿಭಟನೆ ಸಂದರ್ಭದಲ್ಲಿ, ಬೇರೆ ಬೇರೆ ಮುಷ್ಕರಗಳ ವೇಳೆ ಸಿಕ್ಕ ವಾಹನಗಳಿಗೆಲ್ಲ ಕಲ್ಲು ತೂರಿ ಹಾನಿ ಮಾಡಿದ ದೃಷ್ಟಾಂತಗಳಿವೆ. ಕಳೆದೆರಡು ವರ್ಷಗಳ ಹಿಂದೆ ಇದೇ ಸಾರಿಗೆ ಇಲಾಖೆಯ ಸಿಬ್ಬಂದಿ ಮುಷ್ಕರ ನಡೆಸಿದ್ದರು. ಆಗ ಕೆಲವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳದೆ ಬಸ್ ಚಾಲನೆಯಲ್ಲಿ ತೊಡಗಿದ್ದರು. ಅದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಿಬ್ಬಂದಿಯೇ ಕಲ್ಲು ತೂರಾಟ ನಡೆಸಿದ್ದು ವರದಿಯಾಗಿತ್ತು.

ಪ್ರತಿಭಟನಾಕಾರರ ಆಕ್ರೋಶಕ್ಕೆ ಯಾವಾಗಲೂ ಬಲಿಯಾಗುವ ಬಸ್‌ ಮೇಲೆ ಅದರ ಸಿಬ್ಬಂದಿಯೇ ಕಲ್ಲು ತೂರಿದರೆ ಹೇಗಿರಬಹುದು ಎಂಬುದನ್ನು ರಾಜ್ಯದ ಖ್ಯಾತ ವ್ಯಂಗ್ಯಚಿತ್ರಕಾರರೊಬ್ಬರು, ಕೆಂಬಣ್ಣದ ಬಸ್ 'ಮಚ್ಚಾ ನೀನೂ...?' ಎಂದು ಗಾಬರಿ, ಅಚ್ಚರಿ ಮತ್ತು ವೇದನೆಯಿಂದ ಕಲ್ಲೆಸೆಯುವ ತನ್ನ ಸಿಬ್ಬಂದಿಯನ್ನು ಪ್ರಶ್ನಿಸುವಂತೆ ಮನೋಜ್ಞವಾಗಿ ಚಿತ್ರಿಸಿದ್ದರು.

ಕೇಂದ್ರದಿಂದ ಬೆಂಗಳೂರಿಗೆ 300 ಎಲೆಕ್ಟ್ರಿಕ್ ಬಸ್ ಕೊಡುಗೆ?ಕೇಂದ್ರದಿಂದ ಬೆಂಗಳೂರಿಗೆ 300 ಎಲೆಕ್ಟ್ರಿಕ್ ಬಸ್ ಕೊಡುಗೆ?

ಬಸ್ ಸುಡುವುದರಿಂದ ಪರಿಹಾರ ಸಿಕ್ಕೀತೇ?

ಬಸ್ ಸುಡುವುದರಿಂದ ಪರಿಹಾರ ಸಿಕ್ಕೀತೇ?

ಹೀಗೆ ಪ್ರತಿಭಟನಾಕಾರರ ಸಿಟ್ಟು, ಪ್ರಜ್ಞಾವಂತಿಕೆ ಮರೆತ ನಡೆಗಳಿಗೆ ಆಹುತಿಯಾದ ಬಸ್‌ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇರಿಸಿ, ಅದರ ಮೌಲ್ಯ, ಅದನ್ನು ಸುಡುವುದರಿಂದ ಆಗುವ ನಷ್ಟಗಳನ್ನು ಮನವರಿಕೆ ಮಾಡುವ ಪ್ರಯತ್ನವನ್ನು ಈ ಹಿಂದೆಯೂ ಸಾರಿಗೆ ಇಲಾಖೆ ಮಾಡಿತ್ತು. ಆದರೂ ಜನರ ಮನಸ್ಸು ಕರಗಿಲ್ಲವೆನಿಸುತ್ತದೆ. ಬಸ್‌ಗಳನ್ನು ಸುಡುವುದರಿಂದ, ಯಾರದ್ದೋ ವಾಹನಗಳಿಗೆ ಕಲ್ಲು ಹೊಡೆಯುವುದರಿಂದ ಸಮಸ್ಯೆ ಪರಿಹಾರವಾಗಿದ್ದಕ್ಕೆ ಎಲ್ಲಿಯಾದರೂ ನಿದರ್ಶನವಿದೆಯೇ? ಹಾಗಾದರೆ ನಮ್ಮದೇ ಹಣದಿಂದ ನಡೆಯುವ ಈ ಬಸ್‌ಗಳು, ಇತರೆ ವಾಹನಗಳ ಮೇಲೆ ದಾಳಿ ನಡೆಸುವ ವಿಕೃತಿಯೇಕೆ?

ಮೆಜೆಸ್ಟಿಕ್‌ನಲ್ಲಿ ನಿಂತ ಸುಟ್ಟ ಬಸ್

ಮೆಜೆಸ್ಟಿಕ್‌ನಲ್ಲಿ ನಿಂತ ಸುಟ್ಟ ಬಸ್

ಸಾರಿಗೆ ಇಲಾಖೆ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಮುಂದುವರಿಸಿದೆ. ರಾಮನಗರ ಜಿಲ್ಲೆಯಲ್ಲಿ ಸೆ. 4ರಂದು ಪ್ರತಿಭಟನೆ ವೇಳೆ ಬೆಂಕಿಗೆ ಬಲಿಯಾದ ಕೆಎಸ್‌ಆರ್‌ಟಿಸಿ ಬಸ್‌ಅನ್ನು ಬೆಂಗಳೂರಿನ ಮೆಜೆಸ್ಟಿಕ್‌ಗೆ ತಂದಿರಿಸಲಾಗಿದೆ. ತನ್ನ ಮೇಲೆ ನಡೆದ ದೌರ್ಜನ್ಯದ ಆಕ್ರಮಣದ ಕಥೆಯನ್ನು ಕಣ್ಣೀರಿಡುತ್ತಾ ಅದು ವಿವರಿಸುವಂತೆ ಫಲಕಗಳನ್ನು ಅಳವಡಿಸಲಾಗಿದೆ. 'ನಾನು ನಿಮ್ಮ ಸೇವಕ, ಆವೇಶಕ್ಕೆ ಸಿಲುಕಿ ನನ್ನನ್ನು ಕೊಲ್ಲದಿರಿ', 'ನಿಮ್ಮ ಸೇವೆಗೆ ಮುಡುಪಾಗಿರುವ ನನಗೆ ಇಂದು ಈ ಶಿಕ್ಷೆ. ಇದು ನ್ಯಾಯವೇ?', 'ಆಗಲಿ ಅದೆಷ್ಟೇ ಮುಷ್ಕರ-ಬಂದ್ ನಿಮ್ಮ ಮನಸ್ಸಿನಲ್ಲಿರಲಿ ಈ ಬಸ್ ನನ್ನದೆಂದು ಈ ಬಸ್ಸು ನನ್ನದು' ಮುಂತಾದ ಬರಹಗಳನ್ನು ಪ್ರಕಟಿಸಲಾಗಿದೆ. ಇಲಾಖೆಯ ಪ್ರಯತ್ನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಡಿಪೋ ಹತ್ತಿರವಿದ್ದರೂ ಬಿಎಂಟಿಸಿ ಬಸ್ ಇಲ್ಲ, ಜನರ ಆಕ್ರೋಶಡಿಪೋ ಹತ್ತಿರವಿದ್ದರೂ ಬಿಎಂಟಿಸಿ ಬಸ್ ಇಲ್ಲ, ಜನರ ಆಕ್ರೋಶ

ನಾವು ಸುಟ್ಟಿದ್ದು ಎಷ್ಟು ದುಡ್ಡು ಗೊತ್ತೇ?

ನಾವು ಸುಟ್ಟಿದ್ದು ಎಷ್ಟು ದುಡ್ಡು ಗೊತ್ತೇ?

ಕಳೆದ ಮೂರು ವರ್ಷಗಳಲ್ಲಿ ಮುಷ್ಕರ, ಬಂದ್ ಮುಂತಾದವುಗಳಿಂದ ಕೆಎಸ್‌ಆರ್‌ಟಿಸಿಗೆ ಆಗಿರುವ ನಷ್ಟದ ಪ್ರಮಾಣ ಸುಮಾರಿ 20 ಕೋಟಿ ರೂ. 2016-17ನೇ ಸಾಲಿನಲ್ಲಿ 2.99 ಕೋಟಿ ರೂ ನಷ್ಟವಾಗಿದ್ದರೆ. 20117-18ನೇ ಸಾಲಿನಲ್ಲಿ 3.97 ಕೋಟಿ ರೂ. ನಷ್ಟ ಸಂಭವಿಸಿದೆ. ಇನ್ನು 2018-19ರಲ್ಲಿ ಸಂಭವಿಸಿದ ನಷ್ಟದ ಮೊತ್ತ ಬರೋಬ್ಬರಿ 13.16 ಕೋಟಿ ರೂ.

ಇಷ್ಟೇ ಅಲ್ಲ, ಕಳೆದ ನಾಲ್ಕು ವರ್ಷದಲ್ಲಿ 244 ಬಸ್‌ಗಳಿಗೆ ಪ್ರತಿಭಟನಾಕಾರರು ಹಾನಿ ಮಾಡಿದ್ದಾರೆ. 2016-17ರಲ್ಲಿ 171 ಬಸ್‌ಗಳಿಗೆ ಹಾನಿ ಮಾಡಲಾಗಿತ್ತು. ಜತೆಗೆ 4 ಬಸ್‌ಗಳನ್ನು ಸುಟ್ಟು ಹಾಕಲಾಗಿತ್ತು. 2017-18ರಲ್ಲಿ 16 ಬಸ್‌ಗಳು ಜಖಂಗೊಂಡಿದ್ದವು. 2018-19ರಲ್ಲಿ 34 ಬಸ್‌ಗಳಿಗೆ ಹಾನಿ ಮಾಡಲಾಗಿತ್ತು. ಪ್ರಸಕ್ತ ವರ್ಷ ಏಪ್ರಿಲ್ ತಿಂಗಳಿನಿಂದ ಈಚೆಗೆ 23 ಬಸ್‌ಗಳನ್ನು ಜಖಂ ಮಾಡಲಾಗಿದೆ. ಒಂದು ಬಸ್‌ಗೆ ಬೆಂಕಿ ಹಚ್ಚಲಾಗಿದೆ. ಕಲ್ಲುತೂರಾಟದಂತಹ ಕೃತ್ಯಗಳಿಂದ ಹಾನಿಗೆ ಒಳಗಾದ ಬಸ್‌ಗಳ ದುರಸ್ತಿಗೆ ಉಂಟಾದ ನಷ್ಟ 28,51,874 ರೂ. ಇನ್ನು ಐದು ಬಸ್‌ಗಳನ್ನು ಸುಡುವ ಮೂಲಕ ಪ್ರತಿಭಟನಾಕಾರರು ನಮ್ಮದೇ ಹಣವಾದ 49,50,000 ರೂ.ವನ್ನು ಕೂಡ ಸುಟ್ಟುಹಾಕಿದ್ದಾರೆ ಎನ್ನುತ್ತದೆ ಸಾರಿಗೆ ಇಲಾಖೆಯ ಮಾಹಿತಿ.

ಜನರಲ್ಲಿ ತಿಳಿವಳಿಕೆ ಮೂಡಿಸುವ ಅಗತ್ಯ

ಜನರಲ್ಲಿ ತಿಳಿವಳಿಕೆ ಮೂಡಿಸುವ ಅಗತ್ಯ

'ಪ್ರತಿಭಟನಾಕಾರರ ಕೋಪಕ್ಕೆ ಸಾರಿಗೆ ಬಸ್‌ಗಳು ಹಾನಿಯಾಗುತ್ತಿವೆ. ಇದು ತಮ್ಮದೇ ಹಣದಿಂದ ನಡೆಯುವ ಸಂಸ್ಥೆ, ಇವು ತಮ್ಮದೇ ಬಸ್‌ಗಳೆಂಬ ತಿಳಿವಳಿಕೆ ಜನರಲ್ಲಿ ಇಲ್ಲ. ಹಾಗಾಗಿ ಇಂತಹ ಕೃತ್ಯಗಳು ನಡೆಯದಂತೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಅದಕ್ಕಾಗಿ ಬಸ್ಸನ್ನು ಮೆಜೆಸ್ಟಿಕ್‌ನಲ್ಲಿ ಇರಿಸಿ ಅವರಲ್ಲಿ ತಿಳಿವಳಿಕೆ ಉಂಟು ಮಾಡುವ ಪ್ರಯತ್ನಕ್ಕೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮುಂದಾದರು' ಎಂದು ಕೆಎಸ್‌ಆರ್‌ಟಿಸಿಯ ಅಧಿಕಾರಿಯೊಬ್ಬರು 'ಒನ್ ಇಂಡಿಯಾ'ಕ್ಕೆ ಮಾಹಿತಿ ನೀಡಿದರು.

English summary
KSRTC is trying to create awarness against firing and pelting its buses during protests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X