ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

KRS ಅಣೆಕಟ್ಟಿನ ಕಲ್ಲಿನ ಮೇಲಿನ ರಕ್ತದ ಕಲೆ ಹಾಗೂ ಸುಣ್ಣದ ಕಲ್ಲಿನ ಸಾವಿನ ಕಥೆಗಳು!

|
Google Oneindia Kannada News

ಬೆಂಗಳೂರು, ಜು.07: ಕೃಷ್ಣರಾಜ ಸಾಗರ ಅಣೆಕಟ್ಟು ಬಿರುಕು ವಿಚಾರದಲ್ಲಿ ಸಂಸದೆ ಸುಮಲತಾ ಅಂಬರೀಶ್ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕಾರಣ ಮಾಡಲು ಹೊರಟಿದ್ದಾರೆ. ಕೆಆರ್ಎಸ್ ಬಿರುಕು ಬಿಟ್ಟಿದೆ ಎನ್ನುವ ಮೂಲಕ ಮಂಡ್ಯದ ಗಣಿಗಾರಿಕೆ ವಿಚಾರ ಇಟ್ಟುಕೊಂಡು ಸಂಸದೆ ವಿವಾದ ಹುಟ್ಟು ಹಾಕಿದ್ದಾರೆ. 'ಕೆಆರ್ಎಸ್ ಬಿರುಕು ಬಿಟ್ಟಿದ್ದರೆ ಸುಮಲತಾ ಅವರನ್ನು ಅಡ್ಡ ಮಲಗಿಸಲಿ' ಎನ್ನುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಜನ ಪ್ರತಿನಿಧಿಗಳಾಗಿ ಇವರಿಬ್ಬರೂ ಸಾವಿರ ರೈತರಿಗೆ ನೆರವಾಗುವ ಸಣ್ಣ ಕೆರೆ, ಕಟ್ಟೆ ಕಟ್ಟಿಸಿದವರಲ್ಲ. ಆದರೆ ಕೆಆರ್ಎಸ್ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ. ಕೃಷ್ಣರಾಜಸಾಗರ ಕಟ್ಟಿರುವ ಹಿಂದೆ ಮೈಸೂರು ಸಂಸ್ಥಾನದ ದೂರದೃಷ್ಠಿ ಮಾತ್ರವಲ್ಲ, ಅಣೆಕಟ್ಟಿಗೆ ಜೋಡಿಸಿರುವ ಪ್ರತಿ ಕಲ್ಲಿನ ಮೇಲೆ ಬಡವರ ಬೆವರು ಹನಿಗಳಿವೆ. ಅಲ್ಲಿ ಕರಗಿರುವ ಸುಣ್ಣದ ಕಲ್ಲಿನಲ್ಲಿ ಕಾರ್ಮಿಕರ ನೆತ್ತರು ಬೆರೆತಿದೆ. ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿರುವ ಕೆಆರ್ಎಸ್ ಅಣೆಕಟ್ಟು ನಿರ್ಮಾಣದ ಹಿಂದಿನ ರಣ ರೋಚಕ ವರದಿಯನ್ನು 'ಒನ್ಇಂಡಿಯಾ ಕನ್ನಡ' ಪ್ರಸ್ತುತ ಪಡಿಸುತ್ತಿದೆ.

ಹಸಿದ ಹೊಟ್ಟೆ ತುಂಬಿಸಿಕೊಳ್ಳಲು ಬಂದಿದ್ದ ಕಾರ್ಮಿಕರ ಶ್ರಮದಾನ

ಹಸಿದ ಹೊಟ್ಟೆ ತುಂಬಿಸಿಕೊಳ್ಳಲು ಬಂದಿದ್ದ ಕಾರ್ಮಿಕರ ಶ್ರಮದಾನ

ಕೃಷ್ಣರಾಜ ಸಾಗರ ಎಂದರೆ ನೆನಪಾಗುವುದು ಮೈಸೂರು ಸಂಸ್ಥಾನದ ದೂರದೃಷ್ಠಿ, ಒಡವೆಗಳನ್ನು ಮಾರಾಟ ಮಾಡಿದ ಮಹಾರಾಣಿಯ ಮಹಾತ್ಯಾಗ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಜಾ ಪ್ರೇಮತ್ವ, ಸರ್. ಎಂ. ವಿಶ್ವೇಶ್ವರಯ್ಯ ಅವರ ಚಾಣಾಕ್ಷತೆ. ಇವೆಲ್ಲವನ್ನೂ ಮೀರಿದ ರೋಚಕ ಸಂಗತಿ ಕೃಷ್ಣರಾಜ ಸಾಗರ ಅಣೆಕಟ್ಟಿನ ಕಲ್ಲುಗಳ ಹಿಂದಿದೆ. ಕೆಆರ್ಎಸ್ ಅಣೆಕಟ್ಟಿಗೆ ಜೋಡಣೆಯಾಗಿರುವ ಒಂದೊಂದು ಕಲ್ಲಿನ ಹಿಂದೆಯೂ ಒಬ್ಬೊಬ್ಬ ಕೂಲಿ ಕಾರ್ಮಿಕನ ಕಥೆಯಿದೆ. ಹರಿಸಿದ ಬೆವರು ಹನಿಗಳಿವೆ. ಹಸಿದ ಹೊಟ್ಟೆ ತುಂಬಿಸಿಕೊಳ್ಳಲು ಹೋದ ಜೀವವನ್ನೇ ಸುಟ್ಟಿದ ಸುಣ್ಣದ ಕಲ್ಲಿನ ಸಾವಿನ ಕಥೆಗಳಿವೆ. ಕೆಆರ್ಎಸ್ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸುಮಾರು ನಾಲ್ಕೂವರೆ ಸಾವಿರ ಕಾರ್ಮಿಕರನ್ನು ಕರೆದುಕೊಂಡು ಹೋಗಿದ್ದ ಧರ್ಮವಾರಪಲ್ಲಿ ವೆಂಕಟರಾಮಣ್ಣ ಅವರು ಅನುಭವ ಆಧಾರಿಸಿ ವಕೀಲ ಶಂಕರಪ್ಪ ಅವರು ಬರೆದಿರುವ 'ಜನ್ಮ ಶಾಸನ' ಮತ್ತಿತರ ಮಾಹಿತಿ ಆಧರಿಸಿ ಈ ವರದಿಯನ್ನು ಮಾಡಲಾಗಿದೆ. ಇತಿಹಾಸದಲ್ಲಿ ಎಲ್ಲೂ ಉಲ್ಲೇಖವಾಗದ ಕಾರಣ ಕಾಲಕ್ರಮಕ್ಕೆ ಕೆಲವು ಸಂಗತಿ ಹೊಂದಾಣಿಕೆಯಾಗಿದ್ದರೂ ಅನ್ಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ.

ಕಡಿಮೆ ವೆಚ್ಚಕ್ಕಾಗಿ ಮಾಡಿದ ಕಲ್ಲು ಪ್ಲಾನ್

ಕಡಿಮೆ ವೆಚ್ಚಕ್ಕಾಗಿ ಮಾಡಿದ ಕಲ್ಲು ಪ್ಲಾನ್

ಮೈಸೂರು ಸಂಸ್ಥಾನದ ರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ರೈತರು ಸುಭಿಕ್ಷವಾಗಿರಬೇಕೆಂದು ಸಾವಿರಾರು ಕೆರೆಗಳನ್ನು ನಿರ್ಮಾಣ ಮಾಡಿದ್ದರು. ಅವರ ನೆನಪಿನಾರ್ಥ ಕಾವೇರಿ ನದಿಗೆ ಅಣೆಕಟ್ಟು ನಿರ್ಮಾಣ ಮಾಡುವ ಪ್ರಸ್ತಾಪವನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂದಿಟ್ಟಿದ್ದರು. ಪ್ರಮುಖವಾಗಿ 1880 ರ ದಶಕದಲ್ಲಿ ಭೀಕರ ಬರಗಾಲ ಎದುರಾಗಿತ್ತು. ನೀರಿನ ಸೌಲಭ್ಯ ಇಲ್ಲದೇ ಕೃಷಿಕರು ಸಂಕಷ್ಟಕ್ಕೆ ಈಡಾಗಿದ್ದರು. 1911 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೆಆರ್‌ಎಸ್ ಡ್ಯಾಮ್ ಕಟ್ಟುವ ಬಗ್ಗೆ ಪ್ರಸ್ತಾಪಿಸುತ್ತಾರೆ. ಆಗ ಮೈಸೂರು ಸಂಸ್ಥಾನದ ಆರ್ಥಿಕ ಪರಿಸ್ಥಿತಿ ನೀಡಿ ದಿವಾನರೇ ಈ ಯೋಜನೆ ಬೇಡ ಎಂದಿದ್ದರಂತೆ. ವಿಶ್ವೇಶ್ವರಯ್ಯ ಅವರು ಈ ಪರಿಸ್ಥಿತಿಯಲ್ಲಿ ನೀರಾವರಿ ಯೋಜನೆ ಬೇಡ ಎಂದೇ ಹೇಳಿದ್ದರಂತೆ. ವಿದ್ಯಾವಂತರು, ದೂರದೃಷ್ಠಿ ಹೊಂದಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದಲೇ ಫ್ರಾನ್ಸ್‌ ನಿಂದ ತಜ್ಞರನ್ನು ಕರೆಸಿ ಯೋಜನೆ ರೂಪಿಸಲು ಸೂಚಿಸಿದ್ದರಂತೆ. ಆದರೆ, ಫ್ರಾನ್ಸ್ ತಜ್ಞರು ನೀಡಿದ ಯೋಜನೆಯಂತೆ ಕೆಆರ್ಎಸ್ ನಿರ್ಮಾಣ ಮಾಡಲಿಕ್ಕೆ ದುಬಾರಿ ವೆಚ್ಚ ತಗುಲುತ್ತಿತ್ತು. ಹೀಗಾಗಿ ಫ್ರಾನ್ಸ್ ತಜ್ಞರ ಮಾತಿಗೆ ಸೊಪ್ಪು ಹಾಕದೇ ಮೈಸೂರು ಸಂಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸರ್. ಎಂ. ವಿಶ್ವೇಶ್ವರಯ್ಯ ಅವರೇ ಕಡಿಮೆ ವೆಚ್ಚದಲ್ಲಿ ನಿರ್ಮಾಣ ಮಾಡಲು ಪ್ಲಾನ್ ರೂಪಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಕೊಟ್ಟಿದ್ದಾರೆ.

ಕೂಲಿಗಾಗಿ ಕೋಲಾರದಿಂದ ಬಂದಿದ್ದ ಕಾರ್ಮಿಕರು

ಕೂಲಿಗಾಗಿ ಕೋಲಾರದಿಂದ ಬಂದಿದ್ದ ಕಾರ್ಮಿಕರು

ಸರ್. ಎಂ. ವಿಶ್ವೇಶ್ವರಯ್ಯ ತಮ್ಮ ಚಾಣಾಕ್ಷತೆ ಮತ್ತು ಸ್ಥಳೀಯ ವಾಸ್ತವಿಕತೆ ಆಧಾರವಾಗಿಟ್ಟುಕೊಂಡು ಮೂಲ ಪ್ಲಾನ್ ಬದಲಿಸುತ್ತಾರೆ. 1911 ರಲ್ಲಿ ಕೆಆರ್ಎಸ್ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡುತ್ತಾರೆ. ಕಟ್ಟಡ ನಿರ್ಮಾಣ ಮಾಡಲಿಕ್ಕೆ ಕೋಲಾರ ಜಿಲ್ಲೆಯಿಂದ ಸುಮಾರು ನಾಲ್ಕೂವರೆ ಸಾವಿರ ಕಾರ್ಮಿಕರನ್ನು ಎತ್ತಿನ ಗಾಡಿ, ಕೋಣದ ಮೂರು ಚಕ್ರದ ಗಾಡಿಗಳ ಮೂಲಕ KRS ಅಣೆಕಟ್ಟು ನಿರ್ಮಾಣಕ್ಕೆ ಕರೆದುಕೊಂಡು ಹೋಗಿದ್ದು ಧರ್ಮವಾರಪಲ್ಲಿ ವೆಂಕಟರಾಮಣ್ಣ. ಸರ್‌. ಎಂ. ವಿಶ್ವೇಶ್ವರಯ್ಯ ಅವರಿಗೆ ಆಪ್ತರಾಗಿದ್ದ ಧರ್ಮವಾರಪಲ್ಲಿ ವೆಂಕಟರಾಮಣ್ಣ ಅವರಿಗೆ KRS ಅಣೆಕಟ್ಟು ನಿರ್ಮಾಣ ದೊಡ್ಡ ಜವಾಬ್ಧಾರಿಯನ್ನು ವಿಶ್ವೇಶ್ವರಯ್ಯ ವಹಿಸಿದ್ದರಂತೆ. ಭೀಕರ ಬರಗಾಲದಿಂದ ತತ್ತರಿಸಿದ್ದ ಕೋಲಾರದ ಜನರಿಗೆ ಊಟ ಮತ್ತು ಕೂಲಿಯ ಭರವಸೆಯೊಂದಿಗೆ ಕರೆದೊಯ್ದಿದ್ದರಂತೆ. ಕೆಆರ್ಎಸ್ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗುತ್ತಿದ್ದಂತೆ ಮದ್ರಾಸ್ ಪ್ರೆಸಿಡೆನ್ಸಿ ಕೆಆರ್ಎಸ್ ಕಟ್ಟಡ ನಿರ್ಮಾಣಕ್ಕೆ ತಡೆಯಾಜ್ಞೆ ನೀಡುತ್ತದೆ. ಕೇವಲ ಎರಡು ತಿಂಗಳು ಕೆಲಸ ಮಾಡಿದ ಸಾವಿರಾರು ಕಾರ್ಮಿಕರಿಗೆ ಕೆಲಸ ಇಲ್ಲ. ಕೂಲಿ ಇಲ್ಲದೇ ವಾಪಸು ಕರೆದುಕೊಂಡು ಹೋಗುವ ಪರಿಸ್ಥಿತಿ ಅದಾಗಿರಲಿಲ್ಲ. ಇಂತಹ ಸಂಕಷ್ಟ ಪರಿಸ್ಥಿತಿಗೆ ಕೂಲಿ ಕಾರ್ಮಿಕರು ಸಿಕ್ಕಿಬಿದ್ದಿದ್ದರು. ಆಗ ಹೊಳೆದ ಐಡಿಯಾದ ಮೂಲವೇ ಇವತ್ತಿನ ಕೆಆರ್ಎಸ್ ಕಟ್ಟಡಕ್ಕೆ ಬಳಸಿರುವ ಕಲ್ಲುಗಳ ವಿಶೇಷತೆ.

ಮದ್ರಾಸ್ ಪ್ರೆಸಿಡೆನ್ಸಿ ತಡೆಯಾಜ್ಞೆಯಿಂದ ಆದ ಅನುಕೂಲ

ಮದ್ರಾಸ್ ಪ್ರೆಸಿಡೆನ್ಸಿ ತಡೆಯಾಜ್ಞೆಯಿಂದ ಆದ ಅನುಕೂಲ

ಕೃಷ್ಣರಾಜ ಅಣೆಕಟ್ಟು ನಿರ್ಮಾಣಕ್ಕೆ ಮದ್ರಾಸು ಪ್ರೆಸಿಡೆನ್ಸಿ ತಡೆಯಾಜ್ಞೆ ನೀಡುತ್ತದೆ. ಕೆಆರ್ಎಸ್ ನಿರ್ಮಾಣ ಕಾರ್ಯ ನಿಂತು ಹೋಗುತ್ತದೆ. ಈ ವಿವಾದ ಇತ್ಯರ್ಥ ಆಗುವವೆರೆಗೂ ಕಟ್ಟಡ ನಿರ್ಮಾಣ ಕಾರ್ಯ ಮಾಡುವಂತಿರಲಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿತು. ಹಸಿವು ನೀಗಿಸಲು ಹಗರಳಿರುಳು ದುಡಿಯಲು ಬಂದಿದ್ದ ಕೂಲಿ ಕಾರ್ಮಿಕರು ವಾಪಸು ಊರಿಗೆ ಹೋಗಲಾರದ ಪರಿಸ್ಥಿತಿ. ಇಂತಹ ಸಂದರ್ಭದಲ್ಲಿ ಧರ್ಮವಾರಪಲ್ಲಿ ವೆಂಕಟರಾಮಣ್ಣ ಸರ್.ಎಂ. ವಿಶ್ವೇಶ್ವರಯ್ಯ ಅವರ ಬಳಿ ಚರ್ಚೆ ನಡೆಸಿದ್ದಾರೆ. ಫ್ರಾನ್ಸ್ ತಜ್ಞರು ನೀಡಿದಂತೆ ನಾವು ಮಾಗಡಿ ಕಲ್ಲು ಹಾಕುವುದು ಯೋಜನೆಗೆ ತುಂಬಾ ದುಬಾರಿಯಾಗುತ್ತದೆ. ಚಾಮುಂಡಿ ತಪ್ಪಲಲ್ಲಿರುವ ಕಲ್ಲನ್ನು ಬಳಸೋಣ ಎಂದು ಸಲಹೆ ನೀಡಿದ್ದರಂತೆ. ಇನ್ನು ಸಿಮೆಂಟ್ ಬದಲಿಗೆ ಸ್ಥಳೀಯವಾಗಿ ಸಿಗುತ್ತಿದ್ದ ಬೆಣಚು ಕಲ್ಲಿನಿಂದ ಸುಣ್ಣ ತಯಾರಿಸಿ ಸುರಿಕಿ ಸಿದ್ಧತೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣಕ್ಕೆ ನೀಡಿದ್ದ ತಡೆಯಾಜ್ಞೆ ತೆರವು ಆಗುವ ವರೆಗೂ ಕಾರ್ಮಿಕರು ಲಿಂಗಾಬುಧಿ ಕೆರೆಯನ್ನು ಮೂರು ಭಾಗವಾಗಿ ಇಬ್ಭಾಗ ಮಾಡಿ ಒಂದು ಕಡೆ ಕಲ್ಲುಗಳನ್ನು ಸಮಾನಾಂತರವಾಗಿ ಕೆತ್ತನೆ ಮಾಡುವುದು, ಮತ್ತೊಂದು ಕಡೆ ಕತ್ತಾಳಿಯಿಂದ ನಾರನ್ನು ತೆಗೆದು ಹಗ್ಗ ತಯಾರಿಸುವುದು.ಇದೇ ಹಗ್ಗ ಬಳಸಿ ಕಬ್ಬಿಣದ ಮೂರು ಚಕ್ರದ ಗಾಡಿಗಳಿಗೆ ಕೋಣ ಕಟ್ಟಿ ಕಲ್ಲು ಸಾಗಿಸುವುದು. ಹೀಗೆ ಕೆಆರ್ಎಸ್ ಕಟ್ಟಡ ನಿರ್ಮಾಣಕ್ಕೆ ನೀಡಿದ್ದ ತಡೆಯಾಜ್ಞೆ ತೆರವು ಆಗುವ ವರೆಗೂ ಧರ್ಮವಾರಪಲ್ಲಿ ವೆಂಕಟರಾಮಣ್ಣ ಸಾರಥ್ಯದಲ್ಲಿ ಕೆಎರ್ ಎಸ್ ಕಟ್ಟಡಕ್ಕೆ ಬೇಕಾದ ಕಲ್ಲು ಕೆತ್ತನೆ, ಹಗ್ಗ ತಯಾರು, ಸುಣ್ಣದ ಕಲ್ಲಿನ ಸಂಗ್ರಹ ಮಾಡಿಕೊಂಡಿದ್ದರಂತೆ.

ಒಂದೊಂದು ಸ್ಟೇಜ್‌ಗೆ ಒಂದೊಂದು ಕಲ್ಲು:

ಒಂದೊಂದು ಸ್ಟೇಜ್‌ಗೆ ಒಂದೊಂದು ಕಲ್ಲು:

ಕೆಆರ್ಎಸ್ ಕಟ್ಟಡ ನಿರ್ಮಾಣಕ್ಕೆ ತಗಾದೆ ತೆಗೆದಿದ್ದ ತಮಿಳುನಾಡಿಗೆ ಮೆಟ್ಟೂರು ಡ್ಯಾಮ್ ಕಟ್ಟಲು ಅನುಮತಿ ನೀಡಲಾಯಿತು. ಈ ಕುರಿತು ಮದ್ರಾಸು ಪ್ರೆಸಿಡೆನ್ಸಿ ಹಾಗೂ ಮೈಸೂರು ಸಂಸ್ಥಾನದ ಜತೆ ಮಾಡಿಕೊಂಡ ಒಪ್ಪಂದದಿಂದ 1924 ರಲ್ಲಿ ಪುನಃ ಕೆಆರ್ಎಸ್ ನಿರ್ಮಾಣ ಕಾರ್ಯಕ್ಕೆ ಹಸಿರು ನಿಶಾನೆ ಸಿಗುತ್ತದೆ. ಕಟ್ಟಡ ನಿರ್ಮಾಣ ಕಾರ್ಯಕ್ಕೆ ಬಳಸಿರುವುದು ಚಾಮುಂಡೇಶ್ವರಿ ತಪ್ಪಲಲ್ಲಿಇರುವ ಕಲ್ಲು. ಸತತ ಏಳು ವರ್ಷಗಳ ಕಾಲ ಕಾರ್ಮಿಕರು ಶ್ರಮಿಸಿದ್ದರಿಂದ ಕೆಆರ್ಎಸ್ ನಿರ್ಮಾಣ ಆಯಿತು. ಕಟ್ಟಡದ ಪ್ರತಿಯೊಂದು ಸ್ಟೇಜ್‌ಗೂ ಒಂದೇ ರೀತಿಯ ಸೈಜು ಕಲ್ಲು ಬಳಸಲಾಗಿದೆ. ಆ ತಂತ್ರಜ್ಞಾನವನ್ನು ಫ್ರಾನ್ಸ್ ನವರು ಆಗಲೀ, ಸರ್. ಎಂ. ವಿಶ್ವೇಶ್ವರಯ್ಯ ನವರಾಗಲೀ ನೀಡಿದ್ದಲ್ಲ. ಅದು ಸ್ವತಃ ಸ್ಥಳೀಯ ಮೇಸ್ತ್ರಿಗಳಾಗಿದ್ದ ಧರ್ಮವಾರಪಲ್ಲಿ ವೆಂಕಟರಾಮಣ್ಣ ಹಾಗೂ ಅವರ ಕೈಕೆಳಗೆ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು ಬುದ್ಧಿವಂತಿಕೆಯಿಂದ ತಯಾರಿಸಿದ್ದ ಕಲ್ಲುಗಳು. ಇನ್ನು ಕಲ್ಲು ಕಟ್ಟಡಕ್ಕೆ ಬಳಕೆ ಮಾಡಿರುವುದು ಸುಣ್ಣದ ಕಲ್ಲು. ಸುಟ್ಟ ಸುಣ್ಣದ ಕಲ್ಲು ತಲೆ ಮೇಲೆ ಇಟ್ಟುಕೊಂಡು ಕಾರ್ಮಿಕರು ಸಾಗಿಸುತ್ತಿದ್ದ ವೇಳೆ ದಿಢೀರನೆ ಮಳೆ ಬಿದ್ದು ಕಾರ್ಮಿಕರು ಸುಟ್ಟು ಸತ್ತೇ ಹೋಗಿದ್ದರಂತೆ. ಈ ವಿಚಾರವನ್ನು ನಮ್ಮ ತಾತ ಹೇಳಿಕೊಂಡಿದ್ದರು. ಹಸಿದ ಹೊಟ್ಟೆ ತುಂಬಿಸಿಕೊಳ್ಳಲು ಕಾರ್ಮಿಕರು ಕತ್ತಾಳಿ ಗೆಡ್ಡೆ ಬೇಯಿಸಿ ಒಣಗಿಸಿ ತಿನ್ನುತ್ತಿದ್ದರು. ಕತ್ತಾಳಿ ನಾರನ್ನು ಹಗ್ಗಗಳನ್ನಾಗಿ ಮಾಡಿಕೊಂಡು ಕಲ್ಲುಗಳನ್ನು ಕೆ.ಆರ್.ಎಸ್‌ಗೆ ಸಾಗಿಸಿದ್ದರು. ಕೇವಲ ಹಸಿದ ಹೊಟ್ಟೆ ತುಂಬಿಸಿಕೊಳ್ಳಲು ವರ್ಷಗಳ ಕಾಲ ಕೆಆರ್ಎಸ್ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಕೂಲಿ ಕಾರ್ಮಿಕರ ಹಸಿವನ್ನು ನೋಡಲಾಗದೇ ಮೈಸೂರು ಸಂಸ್ಥಾನದ ಮಹಾರಾಣಿ ಒಡವೆಗಳನ್ನು ಅಡವಿಟ್ಟು ಕಟ್ಟಡ ನಿರ್ಮಾಣಕ್ಕೆ ನೆರವಾಗಿದ್ದು, ಕಟ್ಟಡ ನಿರ್ಮಾಣದ ಉದ್ದೇಶಕ್ಕಿಂತಲೂ ಮಹಾರಾಣಿಯವರಿಗೆ ಕೆಲಸಗಾರರರಿಗೆ ನೆರವಾಗುವ ಉದ್ದೇಶವಿತ್ತು ಎಂದು ಧರ್ಮವಾರಪಲ್ಲಿ ವೆಂಕಟರಾಮಣ್ಣ ಅವರು ಹೇಳಿಕೊಂಡಿದ್ದನ್ನು ಅವರ ಮೊಮ್ಮಗ ಆಗಿರುವ ವಕೀಲ ಶಂಕರಪ್ಪ ಒನ್ಇಂಡಿಯಾ ಕನ್ನಡ ಜತೆ ಹಂಚಿಕೊಂಡಿದ್ದಾರೆ.

ವಿಶ್ವೇಶ್ವರಯ್ಯ ಸಾವಿಗೆ ಹೋಗದ ವೆಂಕಟರಾಮಣ್ಣ

ವಿಶ್ವೇಶ್ವರಯ್ಯ ಸಾವಿಗೆ ಹೋಗದ ವೆಂಕಟರಾಮಣ್ಣ

ಅಂದುಕೊಂಡಂತೆ ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣ ಮಾಡಿದ ಸಾವಿರಾರು ಕಾರ್ಮಿಕರು ವಾಪಸು ಊರುಗಳಿಗೆ ತೆರಳುವ ಸಮಯ. '1924 ರಿಂದ 1931ರ ವರೆಗೆ ಕಷ್ಟ ಪಟ್ಟು ಕೆಆರ್ಎಸ್ ನಿರ್ಮಿಸಿದ್ದೀರಿ, ನಿಮಗೆ ಏನು ಬೇಕು ಹೇಳಿ ಎಂದು ಕೇಳಿದ್ದರಂತೆ. ಕೋಲಾರ ಭಾಗದ ರೈತರಿಗೆ ನೆರವಾಗುವ ಇದೇ ರೀತಿ ಅಣೆಕಟ್ಟನ್ನು ಕಣಿವೆ ಬಸವಣ್ಣನ ಸಮೀಪ ನಿರ್ಮಾಣ ಮಾಡಿಸಿಕೊಡಿ ಎಂದು ಧರ್ಮವಾರಪಲ್ಲಿ ವೆಂಕಟರಾಮಣ್ಣ ಮನವಿ ಮಡಿದ್ದರಂತೆ. ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯವರೇ ಆದ ಸರ್.ಎಂ. ವಿಶ್ವೇಶ್ವರಯ್ಯ ಭರವಸೆ ನೀಡಿದ್ದರು. ಆದರೆ ಅಂತಿಮವಾಗಿ ಕಟ್ಟಡ ನಿರ್ಮಾಣ ಮಾಡಿಕೊಡದ ಕಾರಣಕ್ಕೆ ಆಪ್ತರಾಗಿದ್ದ ಸರ್. ಎಂ. ವಿಶ್ವೇಶ್ವರಯ್ಯ ಅವರ ಸಾವಿಗೆ ಹೋಗಲು ಧರ್ಮವಾರಪಲ್ಲಿ ವೆಂಕಟರಾಮಣ್ಣ ನಿರಾಕರಿಸಿದ್ದಾರೆ. ಮಾತ್ರವಲ್ಲ, ಕರ್ನಾಟಕದ ಮೊದಲ ಮುಖ್ಯಮಂತ್ರಿ. ಕೆ.ಸಿ. ರೆಡ್ಡಿ ಅವರನ್ನು ಸಂಪರ್ಕಿಸಿ ಬರ ಪೀಡಿತ ಅವಿಭಜಿತ ಕೋಲಾರ ಜಿಲ್ಲೆಗೆ ಅಣೆಕಟ್ಟು ನಿರ್ಮಾಣ ಮಾಡುವಂತೆ ಕೋರಿದ್ದರು. ಅವರ ಮನವಿಗೆ ಸ್ಪಂದನೆ ಸಿಗಲಿಲ್ಲ. ಕೊನೆ ದಿನಗಳಲ್ಲಿ ಶ್ರೀ ಕೈವಾರ ತಾತಯ್ಯ ಅನುಯಾಯಿಯಾಗಿ ಅಂತಿಮ ದಿನಗಳನ್ನು ಕಳೆದಿದ್ದನ್ನು ಅವರ ಮೊಮ್ಮಗ ಶಂಕರಪ್ಪ ನೆನಪಿಸಿಕೊಂಡಿದ್ದಾರೆ.

Recommended Video

ಸಂಸದ ಡಿ. ವಿ. ಸದಾನಂದ ಗೌಡ ಸಚಿವ ಸ್ಥಾನಕ್ಕೆ ರಾಜೀನಾಮೆ | Oneindia Kannada
ರಾಜಕಾರಣಿಗಳಿಗೆ ನಾಚಿಕೆ ಆಗಲ್ಲವೇ ?

ರಾಜಕಾರಣಿಗಳಿಗೆ ನಾಚಿಕೆ ಆಗಲ್ಲವೇ ?

ರೈತರಿಗೆ ಖುಷಿ ಬದುಕು ಕಟ್ಟಿಕೊಡಲು ಮೈಸೂರು ಮಹಾರಾಜರ ಸಂಸ್ಥಾನ ಮಾಡಿದ ತ್ಯಾಗ, ವಿಶ್ವೇಶ್ವರಯ್ಯ ಚಾಣಾಕ್ಷತೆಗಿಂತಲೂ ಮಿಗಿಲಾಗಿ ಮಹತ್ವ ಪಡೆದುಕೊಂಡಿರುವುದು ಕೆಆಎಸ್ ಗೆ ಬೇಕಿದ್ದ ಕಲ್ಲು, ಸುರಿಕಿ, ಹಗ್ಗ ಅಲ್ಲಿಯೇ ತಯಾರಿಸಿಕೊಂಡು ಕಡಿಮೆ ವೆಚ್ಚದಲ್ಲಿ ನಿರ್ಮಾಣಕ್ಕೆ ಕಾರಣ ವಾಗಿದ್ದು ಕೂಲಿ ಕಾರ್ಮಿಕರದ್ದು. ಅಲ್ಲಿನ ಪ್ರತಿಯೊಂದು ಕಲ್ಲಿನ ಮೇಲೂ ಒಂದೊಂದು ಕೂಲಿ ಕಾರ್ಮಿಕನ ಬೆವರು ಹನಿಗಳ ಕಥೆ ಅಡಗಿದೆ. ಅಂತಹ ಕೆಆರ್ಎಸ್ ಕಟ್ಟಡವನ್ನು ಮುಂದಿಟ್ಟುಕೊಂಡು ಕೇವಲ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ. ಕೆಆರ್ಎಸ್ ಬಿರುಕು ವಿಚಾರದಲ್ಲಿ ಮಾತನಾಡುವ ಇವರು ಇಬ್ಬರೂ ಸೇರಿ ಕನಿಷ್ಠ ಸಾವಿರ ರೈತರಿಗೆ ಸಹಾಯ ಆಗುವ ಸಣ್ಣ ಅಣೆಕಟ್ಟು ಆದರೂ ಕಟ್ಟಿಕೊಡುವರೇ ? ಅದು ಬಿರುಕು ಬಿಟ್ಟಾಗ ರಾಜಕಾರಣ ಮಾಡಲಿ. ತಮ್ಮ ರಾಜಕೀಯ ಸ್ವಾರ್ಥಕ್ಕೆ ಕೆಆರ್ಎಸ್ ಬಳಸಿಕೊಳ್ಳುತ್ತಿರುವುದು ನೋಡಿದರೆ ಬೇಸರ ಎನಿಸುವುದಿಲ್ಲವೇ ?

English summary
MP Sumalatha vs HD Kumaraswamy spar over KRS Dam Safety: Here is the Real Story of KRS Dam Construction and labors Limestone Death Stories.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X