ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ಭಾನುವಾರದ ಪರೀಕ್ಷೆ ಮುಂದೂಡಿಕೆ
ಬೆಂಗಳೂರು, ಜನವರಿ 23: ಭಾನುವಾರ ನಡೆಯಬೇಕಿದ್ದ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕರ್ನಾಟಕ ಲೋಕಸೇವಾ ಆಯೋಗ ದಿಢೀರ್ ಮುಂದೂಡಿದೆ. ಪರೀಕ್ಷೆಯ ಪ್ರಶ್ನೆಪತ್ರಿಕೆಯು ಸೋರಿಕೆಯಾಗಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಅದು ತಿಳಿಸಿದೆ.
ಪ್ರಶ್ನೆ ಪತ್ರಿಕೆಗಳ ಸೋರಿಕೆ ಹಿನ್ನೆಲೆ ಪರೀಕ್ಷೆ ಮುಂದೂಡಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ 2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗಾಗಿ ಜ. 23ರ ಶನಿವಾರ ಕಡ್ಡಾಯ ಕನ್ನಡ ಭಾಷೆಯ ಪರೀಕ್ಷೆ ಮತ್ತು ಜ.24ರಂದು (ಭಾನುವಾರ) ಎರಡು ಅಧಿವೇಶನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಲಾಗಿತ್ತು.
ಆದರೆ ಭಾನುವಾರ ನಡೆಯಬೇಕಿದ್ದ ಎರಡು ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಶನಿವಾರವೇ ಕೆಲವು ದುಷ್ಕರ್ಮಿಗಳ ಕೈಗೆ ದೊರಕಿರುವ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ನಡೆಯಬೇಕಿದ್ದ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅನಿವಾರ್ಯವಾಗಿ ಮುಂದೂಡಲಾಗಿದೆ. ಈ ಪರೀಕ್ಷೆಗಳ ದಿನಾಂಕವನ್ನು ಮರುನಿಗದಿ ಮಾಡಿ ಪ್ರಕಟಿಸಲಾಗುವುದು ಎಂದು ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ. ಸತ್ಯವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2019-20ನೇ ಸಾಲಿನ 1136 ಹುದ್ದೆಗಳ ಭರ್ತಿಗಾಗಿ ಲಿಖಿತ ಪರೀಕ್ಷೆಗಳು ನಡೆಯುತ್ತಿದ್ದು, 3,74,124 ಮಂದಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಕೋವಿಡ್ ಕಾರಣದಿಂದ ಪರೀಕ್ಷೆಗಳನ್ನು ಈ ಹಿಂದೆ ಮುಂದೂಡಲಾಗಿತ್ತು. ಈಗ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಮತ್ತೆ ಪರೀಕ್ಷೆಯನ್ನು ಮುಂದೂಡಲಾಗಿದೆ.
ಭಾನುವಾರ ನಡೆಯಬೇಕಿದ್ದ ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 24 ಲಕ್ಷ ರೂ ನಗದು, ಪ್ರಶ್ನೆಪತ್ರಿಕೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ವಿಚಾರನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.