ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಕೀಲನಾಗಬೇಕಿದ್ದವ ಕೃಷಿಗೆ ವಕಾಲತ್ತು ಹಾಕಿದ ಕಥೆ!

By ಎನ್.ಕೇಶವಮೂರ್ತಿ
|
Google Oneindia Kannada News

ಲಾಯರ್ ಆಗಬಹುದಾಗಿದ್ದ ಯುವಕ ಕೃಷಿಕನಾದ ಕಥೆ ಇದು. ತೇಜಸ್ (31) ನಾಣಯ್ಯ ಓದಿದ್ದು ಎಲ್‌ಎಲ್‌ಬಿ, ಸ್ವಲ್ಪ ಸಮಯ ಕೊಡಗಿನಲ್ಲಿ ಲಾಯರ್ ಆಗಿ ಪ್ರಾಕ್ಟೀಸ್ ಮಾಡಿದವರು. ಇದ್ದುದ್ದು 50 ಎಕರೆ ಜಮೀನು. ತಂದೆಗೆ ಒಬ್ಬನೇ ಮಗ ಕೃಷಿಕನಾಗಲಿ ಎಂಬ ಆಸೆ. ವಯಸ್ಸಾದ ತಂದೆಯ ಆಸೆ ಈಡೇರಿಸಲು ಬೇಸರದಿಂದಲೇ ಬಂದ ತೇಜಸ್‌ಗೆ ಈಗ ಕೃಷಿ ತೃಪ್ತಿ, ಸಂತೋಷ, ನೆಮ್ಮದಿ ನೀಡಿದೆ.

ವ್ಯವಸಾಯವನ್ನು ವೃತ್ತಿಯಾಗಿ ಸ್ವೀಕರಿಸಲು ಯುವಕರಿಗೆ ಹಿಂಜರಿಕೆ ಏಕೆ ? ಎಂದು ಹೇಳುವ ತೇಜಸ್ 'ಸಾರ್, ಈಗ ವ್ಯವಸಾಯ ಬೇಕಾಗಿರೋದು ಯುವಕರಿಗೆ. ಹೊಸ ಬೆಳೆ ಬೆಳೆಯಬಹುದು, ಪ್ರಯೋಗ ಮಾಡಬಹುದು, ಸಾಧನೆ ಮಾಡಬಹುದು. ಬುದ್ಧಿವಂತ ಯುವಕರು ಕೃಷಿಗೆ ಬರುವುದೇ ಒಳ್ಳೆಯದು' ಎಂದು ಹೇಳುತ್ತಾರೆ ತೇಜಸ್.

ಅತ್ಯುತ್ತಮ ಕೃಷಿಕ ಪ್ರಶಸ್ತಿ : ತೇಜಸ್ ಅವರು ಹೇಳುವಂತೆ ಪ್ರಧಾನವಾಗಿ ಅವರು ಭತ್ತ ಬೆಳೆಯುತ್ತಾರೆ. ತುಂಗಾ, ಬಿ.ಕೆ.ಬಿ., ಬಾಸುಮತಿ, ಮೈಸೂರು ಮಲ್ಲಿಗೆ, ಹೇಮಾವತಿ, ಕರ್ತ ತಳಿಯ ಭತ್ತಗಳನ್ನು ಬೆಳೆಯುತ್ತಾರೆ. ಗದ್ದೆಯಲ್ಲಿ ಟ್ರಾಕ್ಟರ್, ಟಿಲ್ಲರ್ ಬಳಸುವ ತೇಜಸ್ ಭತ್ತ ಬೆಳೆಯೋದು ಸಾವಯವ ವಿಧಾನದಲ್ಲಿ.

Tejas Nanaiah

ಉತ್ತಮ ಗುಣಮಟ್ಟದ ಬೆಳೆ ಬರುತ್ತದೆ : ಬಿ.ಕೆ.ಬಿ.ತಳಿಯಲ್ಲಿ ಹೆಕ್ಟೇರಿಗೆ 70 ಕ್ವಿಂಟಾಲ್ ಇಳುವರಿ ಬಂದಿದ್ದರೆ, ತುಂಗಾ ದಲ್ಲಿ 78 ಕ್ವಿಂಟಾಲ್ ಇಳುವರಿಯನ್ನು ಸಾವಯವ ವಿಧಾನದಲ್ಲಿ ಪಡೆದಿದ್ದಾರೆ. ಇದಕ್ಕಾಗಿ ಕೊಡಗು ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. [ಕೊಪ್ಪಳ ರೈತರ ಬಾಯಲ್ಲಿ ಪಪ್ಪಾಯಿ ಜಪ!]

ಏಲಕ್ಕಿ, ಅಡಿಕೆ ಬೆಳೆಗಳಿವೆ : ತೇಜಸ್ 18 ಎಕರೆಯಲ್ಲಿ ಏಲಕ್ಕಿ ಬೆಳೆದಿದ್ದಾರೆ. ಕ್ಲೋನ್ 37, ಮಂಜಿರಾಬಾದ್, ಮಲಬಾರ್, ಮಲ್ಟಿ ಕ್ಲೋನ್ ತಳಿಗಳಿವೆ. 5 ಎಕರೆಯಲ್ಲಿ ತೀರ್ಥಹಳ್ಳಿ ಅಡಿಕೆ ಬೆಳೆದಿದ್ದಾರೆ. ಅದರ ಮಧ್ಯದಲ್ಲಿ ಕಾಫಿ ಗಿಡಗಳಿವೆ. 20 ರಿಂದ 30 ಜನ ಕೆಲಸಗಾರರು ತೋಟದಲ್ಲಿ ಖಾಯಂ ಆಗಿ ಕೆಲಸ ಮಾಡುತ್ತಿದ್ದು, ಅವರಿಗಾಗಿ ತೋಟದಲ್ಲಿಯೇ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ.

ತೋಟದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿದ್ದಾರೆ. ಮನೆಯ ಉಪಯೋಗಕ್ಕೂ ಟ್ಯಾಂಕ್‌ನಿಂದ ನೀರು ಪೂರೈಕೆಯಾಗುತ್ತದೆ. ತೋಟದಲ್ಲಿ ಪಣಿಯೂರು ಜಾತಿಯ ಕಾಳುಮೆಣಸು ಬೆಳೆದಿದ್ದಾರೆ. 10 ರಿಂದ 15 ಎಕರೆಯಲ್ಲಿ ಅರಸೀಕರೆ ಜಾತಿಯ ತೆಂಗು ಬೆಳೆದಿದ್ದಾರೆ. ತೆಂಗಿನ ತೋಟದಲ್ಲಿ ಮಧ್ಯದಲ್ಲಿ ಅಂತರ ಬೆಳೆಯಾಗಿ ಕೊಡಗಿನ ಕಿತ್ತಳೆ ಬೆಳೆಯುತ್ತಿದ್ದಾರೆ.

ಕಾಫಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ತೋಟದಲ್ಲಿ ನೆರಳಿಗಾಗಿ ಸಿಲ್ವರ್ ಮರಗಳನ್ನು ಮಾತ್ರ ಬೆಳೆಸಿಲ್ಲ. ಕಾಡು ಜಾತಿಯ ಹಲಸು, ನೇರಳೆ, ಅತ್ತಿ ಮರಗಳನ್ನು ಬೆಳೆಸಿದ್ದಾರೆ. ಮಳೆಗಾಲದಲ್ಲಿ ಕಾಫಿ ಗಿಡಗಳಿಗೆ ನೆರಳು ಬೇಕಾಗುವುದಿಲ್ಲ. ಆಗ ಬಳಂಜಿ ಮರ ಎಲೆ ಉದುರುತ್ತದೆ, ಅದು ಗೊಬ್ಬರವಾಗುತ್ತೆ. ಬೇಸಿಗೆಯಲ್ಲಿ ಮರದ ಎಲೆಗಳು ಬೆಳೆದು ನೆರಳು ನೀಡುತ್ತದೆ.

kodagu

ತೋಟದ ತುಂಬಾ ಟ್ರಾಕ್ಟರ್ ಹೋಗುತ್ತೆ : ತೋಟದ ತುಂಬಾ ರಸ್ತೆ ವ್ಯವಸ್ಥೆ ಮಾಡಿದ್ದಾರೆ. ಈ ರಸ್ತೆಯ ಮೂಲಕ ಟ್ರಾಕ್ಟರ್‌ನಲ್ಲಿ ಗೊಬ್ಬರ ಸಾಗಿಸಲು ಅನುಕೂಲಾವಾಗುತ್ತದೆ. ತೋಟದಲ್ಲಿ ಅಂತರ ಬೆಳೆಯಾಗಿ ಬಾಳೆ ಬೆಳೆಯುತ್ತಿದ್ದಾರೆ. ಮನೆಯಲ್ಲಿ ಹಾಲಿಗಾಗಿ ಹಸು ಸಾಕಿದ್ದು, ಗೊಬ್ಬರಕ್ಕಾಗಿ 40 ಕೋಣಗಳನ್ನು ಸಾಕಿದ್ದಾರೆ. ಇದರಿಂದಾಗಿ ಮನೆಯಲ್ಲಿ ಗೊಬರ್ ಗ್ಯಾಸ್ ಘಟಕ ನಿರ್ಮಾಣವಾಗಿದ್ದು, ಸಿಲಿಂಡರ್ ಚಿಂತೆ ದೂರವಾಗಿದೆ.

ಕಾಫಿ ತೋಟದ ನೀರಿನ ವ್ಯವಸ್ಥೆಗಾಗಿ ಏಳು ಕೆರೆಗಳನ್ನು ನಿರ್ಮಿಸಲಾಗಿದೆ. ಈ ಕೆರೆಯಲ್ಲಿ ಕಾಟ್ಲ, ಕಾಮನ್ ಕಾರ್ಪ್, ಸಿಲ್ವರ್ ಕಾರ್ಪ, ಗ್ರಾಸ್ ಕಾರ್ಪ ಜಾತಿಯ ಮೀನುಗಳನ್ನು ಸಾಕಿದ್ದಾರೆ. ಟೈಗರ್ ಪಾನ್ ಜಾತಿಯ ಸೀಗಡಿ ಮೀನುಗಳಿ ಇಲ್ಲಿವೆ. ಸುಮಾರು 40 ಕೆಜಿ ತೂಕವಿರುವ ಫಂಗೇಶಿಯಸ್ ಜಾತಿ ಮೀನುಗಳನ್ನು ಕೆರೆಯಲ್ಲಿ ಸಾಕುತ್ತಿದ್ದಾರೆ.

ತರಕಾರಿ ಬೆಳೆಯುತ್ತಾರೆ : ಮನೆಗೆ ಬೇಕಾದ ಬೀನ್ಸ್, ಬದನೆ, ಗೆಣಸು, ಮೂಲಂಗಿ, ಟೊಮೆಟೋ, ಬಸಳೆ, ನವಿಲುಕೋಸು, ಅಲಸಂದೆ, ಸಿಹಿಕುಂಬಳ, ಬೂದುಕುಂಬಳ ಮುಂತಾದ ತರಕಾರಿಗಳನ್ನು ಬೆಳೆಯುತ್ತಾರೆ. ಮನೆಯಲ್ಲಿ ಬಳಸಿ ಮಾರಾಟ ಮಾಡುವಷ್ಟು ನಿಂಬೆ, ಕಹಿ ಹುಳಿ, ಸಪೋಟ, ಮಾವು, ಸೀಬೆ, ಹಲಸು ದೊರೆಯುತ್ತದೆ.

farmer

ಕೃಷಿಯಲ್ಲಿ ಲಾಭ, ನೆಮ್ಮದಿ ಇದೆ : 'ಯುವಕರು ಕೃಷಿ ಮಾಡಬೇಕು. ಇದ್ರಲ್ಲಿ ತುಂಬಾ ಲಾಭ ಮತ್ತು ನೆಮ್ಮದಿ ಇದೆ. ಮಾನವೀಯತೆ, ಸಹಬಾಳ್ವೆಯನ್ನು ಇದು ಕಲಿಸುತ್ತೆ. ನಾನೊಬ್ಬ ಉತ್ತಮ ಲಾಯರ್ ಆಗಬಹುದಿತ್ತು. ಆದ್ರೆ ಕೃಷಿಯಲ್ಲಿರುವ ಸುಖ ಅದರಲ್ಲಿ ಸಿಗುತ್ತಿರಲಿಲ್ಲ' ಎಂದು ತೇಜಸ್ ನಾಣಯ್ಯ ಸಂತಸ ಹಂಚಿಕೊಂಡರು.

ಲೇಖಕರು : ಎನ್.ಕೇಶವಮೂರ್ತಿ
ಕಾರ್ಯಕ್ರಮ ನಿರ್ವಾಹಕರು (ಕೃಷಿ)
ಆಕಾಶವಾಣಿ, ಮೈಸೂರು.

ತೇಜಸ್ ಅವರ ವಿಳಾಸ : ಎಂ.ಎನ್. ತೇಜಸ್ ನಾಣಯ್ಯ, ಕಗ್ಗೊಡಲು ಗ್ರಾಮ ಮತ್ತು ಅಂಚೆ,
ಮಡಿಕೇರಿ ತಾಲ್ಲೂಕು, ಕೊಡುಗು ಜಿಲ್ಲೆ-571201

English summary
Tejas Nanaiah (31) is a role model for youth and farming community. Kodagu based Tejas studied LLB and turned-farmer, Now he farming in 50 acres of land and bagged successful Farmer award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X