ನೇಪಥ್ಯಕ್ಕೆ ಸರಿದ ಕೊಡಗಿನ ಜೇನು ಉತ್ಪಾದನೆ

By: ಬಿ.ಎಂ.ಲವಕುಮಾರ್
Subscribe to Oneindia Kannada

ಕೊಡಗು, ಮೇ 21 : ಕಾಡಿನಲ್ಲಿ, ಕಾಫಿ ತೋಟಗಳ ಮರದ ಪೊಟರೆಗಳಲ್ಲಿ, ಹುತ್ತಗಳ ಸಂದಿನಲ್ಲಿ, ಮನೆಗಳ ಮುಂದಿನ ಪೆಟ್ಟಿಗೆಯಲ್ಲಿ..ಹೀಗೆ ಎಲ್ಲೆಂದರಲ್ಲಿ ಕಂಡು ಬರುತ್ತಿದ್ದ ಕೊಡಗಿನ ಜೇನನ್ನು ಕಾಣುವುದೇ ಅಪರೂಪವಾಗುತ್ತಿದೆ. ಜೇನು ಉತ್ಪಾದನೆ ನೇಪಥ್ಯಕ್ಕೆ ಸರಿಯುತ್ತಿದೆ.

ಮೊದಲೆಲ್ಲ ಕೊಡಗಿನ ಕಾಫಿ ಬೆಳೆಗಾರರಿಗೆ ಜೇನು ಉಪ ಕಸುಬಾಗಿ ಒಂದಷ್ಟು ಆದಾಯ ತರುತ್ತಿತ್ತು. ಕೆಲವರು ಮನೆ ಸುತ್ತಮುತ್ತ ಜೇನು ಪೆಟ್ಟಿಗೆಯನ್ನಿಟ್ಟು ಸಾಕಣೆ ಮಾಡುತ್ತಿದ್ದರು. ಇದರಿಂದ ವರ್ಷದ ಖರ್ಚಿಗೆ ಜೇನು ಸಿಗುತ್ತಿತ್ತಲ್ಲದೆ, ಹೆಚ್ಚಾದ ಜೇನನ್ನು ಮಾರಾಟ ಮಾಡುತ್ತಿದ್ದರು. [ಕೃಷಿ ತಜ್ಞ ಗದಗದ ಭರಮಗೌಡ್ರ ಹೆಸರಲ್ಲಿ ಪ್ರತಿಷ್ಠಾನ]

kodagu

ಆದರೆ. ಕಳೆದ ಎರಡು ದಶಕಗಳಿಂದ ಜೇನು ಸಾಕಾಣಿಕೆ ಅವಸಾನದ ಅಂಚಿಗೆ ತಲುಪಿದೆ. ಇದಕ್ಕೆ ಕೊಡಗಿನ ನಿಸರ್ಗದಲ್ಲಾದ ಬದಲಾವಣೆ, ಪರಿಸರ ನಾಶ, ಹೇರಳವಾಗಿ ಉಪಯೋಗಿಸುತ್ತಿರುವ ಕ್ರಿಮಿನಾಶಕಗಳು ಕಾರಣ ಎಂದರೂ ತಪ್ಪಾಗಲಾರದು. [ಸಾಂಬಾರ ಪದಾರ್ಥಗಳ ರಾಣಿ ಏಲಕ್ಕಿ ನೇಪಥ್ಯಕ್ಕೆ ಸರಿದದ್ಯಾಕೆ?]

ಏಲಕ್ಕಿ ತೋಟಗಳಿದ್ದ ಕಾಲದಲ್ಲಿ ಹೆಮ್ಮರಗಳಿದ್ದವು. ಅವು ಹೂ ಬಿಡುತ್ತಿದ್ದವು. ಈ ಹೂಗಳಿಂದ ಮಕರಂದ ಹೀರಿ ಜೇನುನೊಣಗಳು ಜೇನು ತಯಾರಿಸುತ್ತಿದ್ದವು. ಏಲಕ್ಕಿ ತೋಟ ನಾಶವಾಗಿ ಕಾಫಿ ತೋಟವಾಗಿ ಮಾರ್ಪಟ್ಟ ಕಾರಣ ಹೆಮ್ಮರಗಳು ನಾಶವಾದವು. ಮೊದಲಿಗೆ ಹೋಲಿಸಿದರೆ ಅರಣ್ಯವೂ ಕಡಿಮೆಯಾಗಿದೆ. ಜತೆಜತೆಯಲ್ಲೇ ಬೆಳೆಗಳಿಗೆ ಕೀಟ ನಾಶಕ ಸಿಂಪಡಣೆ ಮಾಡುತ್ತಿರುವುದರಿಂದ ಮಕರಂದ ಹೀರಲು ಬರುವ ಜೇನು ನೊಣಗಳು ಸಾವನ್ನಪ್ಪುತ್ತಿವೆ. [ಕೃಷಿಯನ್ನೇ ಬದುಕಾಗಿಸಿಕೊಂಡ ಮೈಸೂರಿನ ಎಂ.ಕಾಂ ಪದವೀಧರೆ]

ಹಿಂದೆ ಕೊಡಗಿನಾದ್ಯಂತ ಹಲವರು ಜೇನು ಸಾಕಣೆ ಮಾಡಿ ಯಶಸ್ಸು ಕಂಡಿದ್ದರು. ಜೇನು ಕೃಷಿಕರಿಗೆ ಉತ್ತೇಜನ ನೀಡಲು ಹಲವು ಜೇನು ಸಾಕಾಣಿಕೆ, ಮಾಹಿತಿ, ತರಬೇತಿ ಕೇಂದ್ರಗಳು ಹುಟ್ಟಿಕೊಂಡಿದ್ದವು. ಆದರೆ, ಯಾವಾಗ ಜೇನು ಹುಳುಗಳಿಗೆ ರೋಗ ಬಂದು ಅವುಗಳ ಸಂತತಿ ಕಡಿಮೆಯಾಯಿತೋ ಈ ತರಬೇತಿ ಕೇಂದ್ರಗಳು ಬಾಗಿಲು ಮುಚ್ಚಿವೆ. [ಕೊಡಗಿನ ಕಿತ್ತಳೆ ಬೆಳೆದ ಸುರೇಶ್ ಸುಬ್ಬಯ್ಯ ಸಾಧನೆ ಕಥೆ]

coorg honey

ಮನೆಗಳ ಮುಂದಿನ ತೋಟಗಳಲ್ಲಿ ಕಂಡು ಬರುತ್ತಿದ್ದ ಜೇನು ಪೆಟ್ಟಿಗೆಗಳು ಜೇನು ಕುಟುಂಬಗಳಿಲ್ಲದೆ ಗೆದ್ದಲು ಹಿಡಿಯತೊಡಗಿವೆ. ಸಾಮಾನ್ಯವಾಗಿ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಜಾಗ ಅರಸಿಕೊಂಡು ಬರುತ್ತಿದ್ದ ಜೇನು ನೊಣಗಳು ಈಗ ಬರುವುದೇ ಕಡಿಮೆಯಾಗಿವೆ.

ಜೇನು ಕುಟುಂಬಗಳನ್ನು ಹುಡುಕಿ ಅವುಗಳನ್ನು ಜೇನುಪೆಟ್ಟಿಗೆಯಲ್ಲಿಟ್ಟು ಸಾಕುವುದು ಕೂಡ ಕಷ್ಟಸಾಧ್ಯವಾಗಿದೆ. ಇದರಿಂದಾಗಿ ಜೇನು ಕೃಷಿಯತ್ತ ಆಸಕ್ತಿ ಹೊರಟು ಹೋಗಿದೆ. ಕೃಷಿಕರೇ ಇಲ್ಲದ ಮೇಲೆ ಜೇನು ಸಾಕಾಣಿಕೆ ಕೇಂದ್ರಗಳಿಗೇನು ಕೆಲಸ? ಹೀಗಾಗಿ ಅವುಗಳಿಗೂ ಬೀಗ ಬಿದ್ದಿದೆ.

croog

ಜೇನು ಕೃಷಿ ಬಗ್ಗೆ ಆಸಕ್ತಿ ಮೂಡಿಸಿ ಅವರಿಗೆ ಸೂಕ್ತ ತರಬೇತಿ ನೀಡಲು ತೆರೆಯಲಾಗಿದ್ದ ಜೇನು ಸಾಕಾಣಿಕೆ ಮತ್ತು ತರಬೇತಿ ಕೇಂದ್ರಗಳಲ್ಲಿ ಈಗ ಜೇನು ಪೆಟ್ಟಿಗೆಯಿಲ್ಲದ ಖಾಲಿ ಜಾಲರಿಗಳು, ಗೆದ್ದಲು ಹಿಡಿಯುತ್ತಿರುವ ಪೆಟ್ಟಿಗೆಗಳು, ತುಕ್ಕು ಹಿಡಿಯುತ್ತಿರುವ ಯಂತ್ರೋಪಕರಣಗಳು ಕಣ್ಣಿಗೆ ಕಾಣುತ್ತಿವೆ.

ಹಾಗೆನೋಡಿದರೆ ಕೊಡಗಿನ ಜೇನಿಗೆ ಇಂದಿಗೂ ಬೇಡಿಕೆಯಿದೆ. ಆದರೆ ಪರಿಶುದ್ಧ ಜೇನಿನ ಅಗತ್ಯತೆ ಇರುವುದರಿಂದ ಮತ್ತು ಮುಂದಿನ ಪೀಳಿಗೆಗೂ ಕೊಡಗಿನ ಜೇನನ್ನು ಉಳಿಸಿಕೊಳ್ಳಬೇಕಾದ ಕಾರಣದಿಂದಾಗಿ ಜೇನಿನ ಬಗ್ಗೆ ಆಸಕ್ತಿ ಮೂಡಿಸಿ, ಉತ್ತೇಜನ ನೀಡಬೇಕಾಗಿದೆ. ತಪ್ಪಿದಲ್ಲಿ ಕೊಡಗಿನ ಜೇನು ಕಣ್ಮರೆಯಾಗುವ ದಿನಗಳು ದೂರವಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Due to deforestation, environment changes Coorg honey production sidelined in Kodagu district. Kodagu's honey is known for its aroma, flavour and colour.
Please Wait while comments are loading...