ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ ವಾರ್ಡ್ ವೈದ್ಯರ ಮೌನ ಪ್ರತಿಭಟನೆ ಹಿಂದಿವೆ ಈ ಎಲ್ಲ ಕಾರಣಗಳು!

|
Google Oneindia Kannada News

ಬೆಂಗಳೂರು, ಮೇ 09: ಎಂಬಿಬಿಎಸ್ ಮುಗಿಸಿ ಎಂ.ಡಿ. ಅಥವಾ ಎಂಎಸ್ (ಸ್ನಾತಕೋತ್ತರ) ಸೀಟು ಪಡೆದಿರುವ ವೈದ್ಯರು ಈಗ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್. ಆದರೆ ಈ ಕೊರೊನಾ ವಾರಿಯರ್ಸ್ ಅಥವಾ ಕೊರೊನಾ ಸೈನಿಕರನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಮಾತ್ರ ಸರಿಯಿಲ್ಲ.

Recommended Video

ತಡರಾತ್ರಿ ಮನೆಗೆ ನುಗ್ಗಿ ಮಗುವನ್ನು ಕೊಂಡೊಯ್ದ ಚಿರತೆ , ಸ್ಥಳಕ್ಕೆ ಆಗಮಿಸಿದ ಅರಣ್ಯ ಸಚಿವ ಆನಂದ್ ಸಿಂಗ್ | Cheetah

ಕರ್ನಾಟಕ ರಾಜ್ಯದ ಸುಮಾರು 8 ಸಾವಿರ ನಿವಾಸಿ ವೈದ್ಯರು ರಾಜ್ಯದ ಸರ್ಕಾರಿ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಅವರು ಪಡೆಯುತ್ತಿರುವ ಕಡಿಮೆ ಮಾಸಿಕ ಸ್ಟೈಫಂಡ್ ಹಾಗೂ ಭರಿಸುತ್ತಿರುವ ಹೆಚ್ಚಿನ ಶುಲ್ಕದ ಬಗ್ಗೆ ಧ್ವನಿ ಎತ್ತಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಮೌನವಾಗಿ ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ.

ಕೊರೊನಾ ಭೀತಿಯ ನಡುವೆ ವಾಣಿ ವಿಲಾಸ್ ಆಸ್ಪತ್ರೆ ಸಿಬ್ಬಂದಿಗಳ ಆಕ್ರೋಶ!ಕೊರೊನಾ ಭೀತಿಯ ನಡುವೆ ವಾಣಿ ವಿಲಾಸ್ ಆಸ್ಪತ್ರೆ ಸಿಬ್ಬಂದಿಗಳ ಆಕ್ರೋಶ!

ರಾಜ್ಯ ಸರ್ಕಾರ ಕಳೆದ 5 ವರ್ಷಗಳಿಂದ ಹಲವು ಬಾರಿ ವೈದ್ಯಕೀಯ ಸ್ನಾತಕೋತ್ತರ ಸೀಟಿನ ಶುಲ್ಕವನ್ನು ಹೆಚ್ಚಳ ಮಾಡಿದೆ. ಒಂದು ಅಂದಾಜಿನಂತೆ ಶೇಕಡಾ 600ರಷ್ಟು ಶುಲ್ಕ ಹೆಚ್ಚಳ ಕಳೆದ 5 ವರ್ಷಗಳಲ್ಲಿ ಆಗಿದೆ. ಆದರೆ ನಿವಾಸಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಪಿಜಿ ವಿದ್ಯಾರ್ಥಿಗಳಿಗೆ ಕೊಡುವ ಮಾಸಿಕ ಸ್ಟೈಫಂಡ್‌ ಅನ್ನು ಮಾತ್ರ ಹೆಚ್ಚಳ ಮಾಡಿಲ್ಲ.

ಈ ಕೊರೊನಾ ವೈರಸ್ ಸಂಕಷ್ಟದ ಸಮಯದಲ್ಲಿ ನಮ್ಮನ್ನು ವೈದ್ಯರಂತೆ ಬೇಡ, ಕನಿಷ್ಠ ಮನುಷ್ಯರಂತೆ ನೋಡಿ ಎಂದು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಸಮಸ್ಯೆಗಳ ಕುರಿತು ನಿವಾಸಿ ವೈದ್ಯರು ಒನ್‌ಇಂಡಿಯಾ ಜೊತೆಗೆ ತಮ್ಮ ನಿಲುವು ಹಂಚಿಕೊಂಡಿದ್ದಾರೆ.

ಮುಂದುವರೆದ ನಿವಾಸಿ ವೈದ್ಯರ ಪ್ರತಿಭಟನೆ

ಮುಂದುವರೆದ ನಿವಾಸಿ ವೈದ್ಯರ ಪ್ರತಿಭಟನೆ

ರಾಜ್ಯಾದ್ಯಂತ ಸ್ನಾತಕೋತ್ತರ ಎಂಎಸ್‌ ಹಾಗೂ ಎಂಡಿ ವಿದ್ಯಾರ್ಥಿಗಳು ಕಪ್ಪು ಪಟ್ಟಿ ಧರಿಸುವ ಮೂಲಕ ತಮ್ಮ ಮೌನ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಸರ್ಕಾರ ಒಂದು ಕಡೆಗೆ ನಿವಾಸಿ ವೈದ್ಯರನ್ನು ಕೊರೊನಾ ಸೈನಿಕರು ಎಂದು ಅವರ ಮೇಲೆ ಹೂಮಳೆ ಸುರಿಸುತ್ತಿದೆ. ಆದರೆ ಅವರಿಗೆ ಕೊಡಬೇಕಾದ ಸೌಲಭ್ಯ ಹಾಗೂ ಧನ ಸಹಾಯವನ್ನು ಮಾತ್ರ ಹೆಚ್ಚಿಸುತ್ತಿಲ್ಲ. ದಿನ ಕಳೆದಂತೆ ಇದು ಕೊರೊನಾ ವೈರಸ್‌ ವಿರುದ್ಧದ ಹೋರಾಟದ ಮೇಲೂ ಪರಿಣಾಮ ಬೀರುವುದನ್ನು ತಳ್ಳಿಹಾಕುವಂತಿಲ್ಲ. ಜೀವವನ್ನೇ ಪಣಕ್ಕಿಟ್ಟು ಸೋಂಕಿತರಿಗೆ ಚಿಕಿತ್ಸೆ ಕೊಡುತ್ತಿರುವ ನಿವಾಸಿ ವೈದ್ಯರಿಗೆ ಕೊಡುತ್ತಿರುವ ಸ್ಟೈಫಂಡ್ ಯಾವುದಕ್ಕೂ ಸಾಲುವುದಿಲ್ಲ ಎಂಬುದಂತು ಸತ್ಯ. ಹೀಗಾಗಿಯೆ ಸೋಂಕಿತರಿಗೆ ಚಿಕಿತ್ಸೆ ಕೊಡುವಾಗ ಧರಿಸುವ ಪಿಪಿಇ ಜೊತೆಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.

ದೇಶದಲ್ಲಿಯೇ ಅತಿಹೆಚ್ಚು ಶುಲ್ಕ ನಿಗದಿ

ದೇಶದಲ್ಲಿಯೇ ಅತಿಹೆಚ್ಚು ಶುಲ್ಕ ನಿಗದಿ

ದೇಶದಲ್ಲಿಯೇ ಗರಿಷ್ಠ ಶುಲ್ಕವನ್ನು ಕರ್ನಾಟಕದಲ್ಲಿರುವ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಭರಿಸುತ್ತಿದ್ದಾರೆ. ಜೊತೆಗೆ ದೇಶದಲ್ಲಿಯೇ ಅತಿ ಕಡಿಮೆ ಸ್ಟೈಫಂಡ್ ಪಡೆಯುತ್ತಿರುವುದು ನಮ್ಮ ರಾಜ್ಯದ ನಿವಾಸಿ ವೈದ್ಯರುಗಳು ಎಂದರೂ ತಪ್ಪಾಗಲಿಕ್ಕಿಲ್ಲ. ಸರ್ಕಾರಿ ಸೀಟು ಪಡೆಯುವ ವೈದ್ಯಕೀಯ ವಿದ್ಯಾರ್ಥಿಗಳು ವರ್ಷಕ್ಕೆ 7.14 ಲಕ್ಷ ರೂ. ಶುಲ್ಕ ಕಟ್ಟುತ್ತಾರೆ. ಅವರ ಹಾಸ್ಟೆಲ್ ಶುಲ್ಕ ಸೇರಿಸಿದ್ರೆ ಪ್ರತಿ ತಿಂಗಳು ಸುಮಾರು 75 ರಿಂದ 80 ಸಾವಿರ ರೂ.ಗಳಷ್ಟು ವ್ಯಯಿಸಬೇಕಾಗುತ್ತದೆ. ಆದರೆ ರಾಜ್ಯದಲ್ಲಿ ಗರಿಷ್ಠ 40 ಸಾವಿರ ರೂ.ಗಳಷ್ಟು ಶಿಷ್ಯವೇತನವನ್ನು ಕೊಡಲಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಕಾಲೇಜ್‌ಗಳಲ್ಲಿ ಮಾಸಿಕ 25 ರಿಂದ 30 ಸಾವಿರ ರೂ.ಗಳ ಸ್ಟೈಫಂಡ್ ಕೊಡುವುದಾಗಿ ಹೇಳುತ್ತವೆ. ಆದರೆ ಕೇವಲ 6 ರಿಂದ 8 ಸಾವಿರ ರೂ.ಗಳನ್ನು ಸ್ಟೈಫಂಡ್ ರೂಪದಲ್ಲಿ ಕೊಡುತ್ತಾರೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬರು.

ಹೊರ ರಾಜ್ಯಗಳಲ್ಲಿ ಶುಲ್ಕ ಕಡಿಮೆ, ಸ್ಟೈಫಂಡ್ ಹೆಚ್ಚು

ಹೊರ ರಾಜ್ಯಗಳಲ್ಲಿ ಶುಲ್ಕ ಕಡಿಮೆ, ಸ್ಟೈಫಂಡ್ ಹೆಚ್ಚು

ಕರ್ನಾಟಕ ರಾಜ್ಯದಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಭರಿಸುತ್ತಿರುವ ಶುಲ್ಕ ಹಾಗೂ ಪಡೆಯುತ್ತಿರುವ ಸ್ಟೈಫಂಡ್‌ಗೆ ಹೋಲಿಕೆ ಮಾಡಿದರೆ ಹೊರ ರಾಜ್ಯಗಳಲ್ಲಿ ತದ್ವಿರುದ್ದ ಪರಿಸ್ಥಿತಿಯಿದೆ. ಉದಾಹರಣೆಗೆ, ದೆಹಲಿಯಲ್ಲಿ ಶುಲ್ಕ 25 ಸಾವಿರ ರೂ.ಗಳು ಮಾತ್ರ. ಆದರೆ ಶಿಷ್ಯವೇತನ 90 ಸಾವಿರ ರೂ.ಗಳು. ಅದೇ ರೀತಿ ಮಹಾರಾಷ್ಟ್ರ, ಗೋವಾ, ಕೇರಳ, ಛತ್ತೀಸ್‌ಗಡಗಳಲ್ಲಿ ಇಲ್ಲಿಯಷ್ಟು ಶುಲ್ಕ ಇಲ್ಲ. ಅಲ್ಲಿ ರಾಜ್ಯಕ್ಕಿಂತ ಹೆಚ್ಚು ಶಿಷ್ಯವೇತನ ನೀಡಲಾಗುತ್ತಿದೆ. ಮಧ್ಯಪ್ರದೇಶದಲ್ಲಿ ಶುಲ್ಕದಷ್ಟೇ ಶಿಷ್ಯವೇತನವನ್ನೂ ನೀಡಲಾಗುತ್ತಿದೆ.

ದೆಹಲಿಯಲ್ಲಿ ಎಂ.ಡಿ. ಸೀಟು ಶುಲ್ಕ ಸುಮಾರು 25 ಸಾವಿರ ರೂ.ಗಳು ಮಾತ್ರ ಇದ್ದು, ಶಿಷ್ಯವೇತನ 90 ಸಾವಿರ ರೂ. ಗಳಷ್ಟಿದೆ. ಮಹಾರಾಷ್ಟ್ರ ಸುಮಾರು 55 ಸಾವಿರ ರೂ.ಗಳು, ಕೇರಳ 50 ಸಾವಿರ ರೂ.ಗಳು ಮತ್ತು ಹರಿಯಾಣ 60 ಸಾವಿರ ರೂ. ಶಿಷ್ಯವೇತನ ಕೊಡುತ್ತಿವೆ. ಹಾಗೆಯೇ ಗುಜರಾತ್‌, ಒಡಿಶಾ, ತೆಲಂಗಾಣ, ತಮಿಳುನಾಡು, ಜಾರ್ಖಂಡ್, ರಾಜಸ್ಥಾನ, ಆಂಧ್ರಪ್ರದೇಶ, ಪಂಜಾಬ್‌, ಅಸ್ಸಾಂ ಮೊದಲಾದ ರಾಜ್ಯಗಳಲ್ಲಿ ಶುಲ್ಕಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಶಿಷ್ಯವೇತನ ನೀಡಲಾಗುತ್ತಿದೆ.

ಸ್ಟೈಫಂಡ್ ಹೆಚ್ಚು ಮಾಡುವ ಭರವಸೆ ಕೊಟ್ಟಿದ್ದ ಬಿಎಸ್‌ವೈ

ಸ್ಟೈಫಂಡ್ ಹೆಚ್ಚು ಮಾಡುವ ಭರವಸೆ ಕೊಟ್ಟಿದ್ದ ಬಿಎಸ್‌ವೈ

ಇನ್ನು 2015ರಿಂದ ಹಲವು ಬಾರಿ ಸ್ನಾತಕೋತ್ತರ ವೈದ್ಯಕೀಯ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಆದರೆ ಒಂದು ಬಾರಿಯೂ ಶಿಷ್ಯವೇತನ ಅಥವಾ ಸ್ಟೈಫಂಡ್‌ ಹೆಚ್ಚಿಸಲಾಗಿಲ್ಲ. ಈ ಕುರಿತಂತೆ ಕಳೆದ ವರ್ಷ ಭರವಸೆ ಕೊಟ್ಟಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಮೆಡಿಕಲ್ ವಿದ್ಯಾರ್ಥಿಗಳಿಗೆ ಸ್ಟೈಫಂಡ್‌ ಜಾಸ್ತಿ ಮಾಡಬೇಕು, ಫೀಸ್‌ ಕಡಿಮೆ ಮಾಡಬೇಕು ಎಂಬ ಬೇಡಿಕೆಗಳಿವೆ. ಮುಂದಿನ ಬಜೆಟ್‌ನಲ್ಲಿ ಸ್ಟೈಫಂಡ್ ಜಾಸ್ತಿಮಾಡಲು ಹಾಗೂ ಶುಲ್ಕವನ್ನು ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ ಎಂದು ಭರವಸೆಯನ್ನು ಕೊಟ್ಟಿದ್ದರು. ಆದರೆ ಅದ್ಯಾವುದು ಆಗಿಲ್ಲ ಎನ್ನುತ್ತಾರೆ ಬೆಂಗಳೂರಿನ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿ ಡಾ. ಸಂದೇಶ್ ಎಂ.

ಇಲ್ಲಿ ಸೀಟು ಆಯ್ಕೆ ಮಾಡಿಕೊಂಡು ತಪ್ಪು ಮಾಡಿದೆ

ಇಲ್ಲಿ ಸೀಟು ಆಯ್ಕೆ ಮಾಡಿಕೊಂಡು ತಪ್ಪು ಮಾಡಿದೆ

ಇನ್ನು ಹೆಚ್ಚಿನ ಶುಲ್ಕ ಹಾಗೂ ಕಡಿಮೆ ಸ್ಟೈಫಂಡ್ ಹಿನ್ನೆಲೆಯಲ್ಲಿ ಇಲ್ಲಿ ಸೀಟು ಆಯ್ಕೆ ಮಾಡಿಕೊಂಡು ತಪ್ಪು ಮಾಡಿದೆ ಎನ್ನುತ್ತಾರೆ ಬೆಂಗಳೂರು ವೈದ್ಯಕೀಯ ಕಾಲೇಜು ಸಂಶೋಧನಾ ಸಂಸ್ಥೆಯ ಮನೋವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿ ಮತ್ತು ನಿವಾಸಿ ವೈದ್ಯರ ಸಂಘದ ಅಧ್ಯಕ್ಷರಾಗಿರುವ ಡಾ. ದಯಾನಂದ್ ಸಾಗರ್. ನಾನು ಕರ್ನಾಟಕ ರಾಜ್ಯದವನು. ನನ್ನ ಜನರಿಗೆ ಸೇವೆ ಸಲ್ಲಿಸಲು ರಾಜ್ಯದಲ್ಲಿಯೇ ಕೆಲಸ ಮಾಡಲು ನಿರ್ಧರಿಸಿದೆ. ಆದರೆ ಇಡೀ ದೇಶದಲ್ಲಿಯೇ ಅತಿ ಕಡಿಮೆ ಸ್ಟೈಫಂಡ್ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಸೀಟು ಆಯ್ಕೆ ಮಾಡಿಕೊಂಡು ತಪ್ಪು ಮಾಡಿದೆ ಅನ್ನಿಸುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ ದೇಶಾದ್ಯಂತ ವೈದ್ಯರು ಕರ್ನಾಟಕವನ್ನು ಬಿಟ್ಟು ಇತರ ರಾಜ್ಯಗಳಲ್ಲಿ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ ಡಾ. ದಯಾನಂದ ಸಾಗರ್.

ವೈದ್ಯರಾದ ಮೇಲೂ ಪೋಷಕರ ಮೇಲೆ ಅವಲಂಬನೆ!

ವೈದ್ಯರಾದ ಮೇಲೂ ಪೋಷಕರ ಮೇಲೆ ಅವಲಂಬನೆ!

ಎಂಬಿಬಿಎಸ್ ಪದವಿ ಪಡೆದು ವೈದ್ಯರಾದ ಮೇಲೂ ಪೋಷಕರ ಮೇಲೆ ಆರ್ಥಿಕವಾಗಿ ಅವಲಂಬಿತರಾಗಬೇಕಾದ ಅನಿವಾರ್ಯತೆಯಿದೆ ಎಂದು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಳ್ಳುತ್ತಾರೆ. ನಿವಾಸಿ ವೈದ್ಯರಾಗಿ ಸೇವೆ ಸಲ್ಲಿಸುತ್ತಲೇ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವೈದ್ಯರು ಆರ್ಥಿಕವಾಗಿ ತಮ್ಮ ಪೋಷಕರನ್ನು ಅವಲಂಬಿಸುವ ಅನಿವಾರ್ಯತೆಯಿದೆ ಎನ್ನುತ್ತಾರೆ ಬೆಂಗಳೂರಿನ ರೇಡಿಯೊಥೆರಪಿ ನಿವಾಸಿ ವೈದ್ಯ ಡಾ. ದೀಪಕ್. ಪ್ರತಿ ತಿಂಗಳು 30 ಸಾವಿರ ರೂ.ಗಳ ಸ್ಟೈಫಂಡ್‌ನ್ನು ನಾನು ಪಡೆಯುತ್ತಿದ್ದೇನೆ. ಪ್ರತಿವರ್ಷ 1.3 ಲಕ್ಷ ರೂ. ಶುಲ್ಕ ಕಟ್ಟುತ್ತಿದ್ದೇನೆ. ಪ್ರತಿ ತಿಂಗಳು ಹಾಸ್ಟೆಲ್‌ಗೆ 7 ಸಾವಿರ ರೂ., ತಿಂಗಳ ಶುಲ್ಕ 12 ಸಾವಿರ ರೂ.ಗಳು ಹಾಗೂ ಪ್ರತಿ ತಿಂಗಳು ಪುಸ್ತಕಗಳಿಗೆ 6 ಸಾವಿರ ರೂ.ಗಳನ್ನು ವ್ಯಯಿಸುತ್ತೇನೆ. ಕೊನೆಯಲ್ಲಿ ನನಗೆ ಅಂತ ಉಳಿಯುವುದು ಕೇವಲ 4 ರಿಂದ 6 ಸಾವಿರ ರೂ.ಗಳು ಮಾತ್ರ ಎಂದು ವಿವರಿಸಿದ್ದಾರೆ ಡಾ. ದೀಪಕ್.

ಕೋವಿಡ್ ವಾರ್ಡ್‌ನಲ್ಲಿ ಪಿಪಿಇ ಕಿಟ್‌ ಸಮಸ್ಯೆ

ಕೋವಿಡ್ ವಾರ್ಡ್‌ನಲ್ಲಿ ಪಿಪಿಇ ಕಿಟ್‌ ಸಮಸ್ಯೆ

ಇನ್ನು ನಿವಾಸಿ ವೈದ್ಯರು ದಿನಕ್ಕೆ ಕನಿಷ್ಠ 15 ಗಂಟೆಗಳ ಕೆಲಸ ಮಾಡುತ್ತಾರೆ. ವಾರಕ್ಕೆ ಏನಿಲ್ಲವೆಂದರೂ 100 ಗಂಟೆಗಳಷ್ಟು ಸೇವೆ ಸಲ್ಲಿಸಬೇಕಾಗುತ್ತದೆ ಎನ್ನುತ್ತಾರೆ ನಿವಾಸಿ ವೈದ್ಯರೊಬ್ಬರು. ಜೊತೆಗೆ ಇದೀಗ ಕೋವಿಡ್ ವಾರ್ಡ್‌ನಲ್ಲಿ ಸುದೀರ್ಘವಾಗಿ 12 ರಿಂದ 13 ಗಂಟೆಗಳ ಕಾಲ ಪಿಪಿಇ ಕಿಟ್‌ಗಳನ್ನು ಧರಿಸುವುದರಿಂದ ಡಿಹೈಡ್ರೇಶನ್, ಉಸಿರಾಟದ ತೊಂದರೆ, ಹೈಪೋಕ್ಸಿಯಾ ತೊಂದರೆಗಳು ಹೆಚ್ಚಾಗುತ್ತಿವೆ. ಆದರೆ ಇದ್ಯಾವುದು ನಮಗೆ ಸಮಸ್ಯೆಯೆ ಅಲ್ಲ.

ಸುದೀರ್ಘವಾಗಿ ಮಾಸ್ಕ್, ಪಿಪಿಇ ಧರಿಸುವುದರಿಂದ ನಮ್ಮ ದೇಹಕ್ಕೆ ಗಾಯಗಳಾಗುತ್ತಿವೆ. ಆದರೆ ಈ ಗಾಯಗಳಿಗಿಂತ ಹೆಚ್ಚು ನೋವು ಕೊಡುತ್ತಿರುವುದು ನಮ್ಮ ಮೇಲೆ ರಾಜ್ಯ ಸರ್ಕಾರ ತೋರುತ್ತಿರುವ ನಿರ್ಲಕ್ಷ ಎನ್ನುತ್ತಾರೆ ಬೆಂಗಳೂರಿನ ಕೋವಿಡ್ ವಾರ್ಡ್‌ನಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಕೊಡುತ್ತಿರುವ ನಿವಾಸಿ ವೈದ್ಯರೊಬ್ಬರು.

ಸ್ಟೈಫಂಡ್ ಕೊಡದ ದಾವಣಗೆರೆ ಜೆಎಂಎಂ ಕಾಲೇಜ್‌

ಸ್ಟೈಫಂಡ್ ಕೊಡದ ದಾವಣಗೆರೆ ಜೆಎಂಎಂ ಕಾಲೇಜ್‌

ಈ ಮಧ್ಯೆ ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಕಳೆದ 15 ತಿಂಗಳಿನಿಂದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಕೊಟ್ಟಿಲ್ಲ ಎಂದು ನಿವಾಸಿ ವೈದ್ಯರು ಕಪ್ಪು ಪಟ್ಟಿ ಧರಿಸಿ, ಮೊಂಬತ್ತಿ ಬೆಳಗುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಜೆಎಂಎಂ ವೈದ್ಯಕೀಯ ಕಾಲೇಜಿನ 133 ಸ್ನಾತಕೋತ್ತರ ವೈದ್ಯರು ಮತ್ತು 97 ಇಂಟರ್ನಿಗಳಿಗೆ ಕಳೆದ 15 ತಿಂಗಳುಗಳಿಂದ ಅವರ ವೇತನ ಪಾವತಿಸಲಾಗಿಲ್ಲ. ಹೀಗಾಗಿ ಕಳೆದ ಹಲವು ದಿನಗಳಿಂದ ಅವರು ಸೇವೆಗೆ ಹಾಜರಾಗಿ ಮೌನ ಪ್ರತಿಭಟನೆ ನಡೆಸಿದ್ದಾರೆ.

ಜೊತೆಗೆ ರಾಜ್ಯದ 20 ಮೆಡಿಕಲ್ ಕಾಲೇಜುಗಳ ನಿವಾಸಿ ವೈದ್ಯರು ಆಯಾ ಜಿಲ್ಲಾಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಆವರಣಗಳಲ್ಲಿ ಕ್ಯಾಂಡಲ್ ಮಾರ್ಚ್‌ ನಡೆಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವರ ಪ್ರತಿಕ್ರಿಯೆ ಏನು?

ವೈದ್ಯಕೀಯ ಶಿಕ್ಷಣ ಸಚಿವರ ಪ್ರತಿಕ್ರಿಯೆ ಏನು?

ಇನ್ನು ಈ ಸ್ಟೈಫಂಡ್ ಹೆಚ್ಚಿಸುವುದು ಸೇರಿದಂತೆ ದಾವಣಗೆರೆ ಜೆಎಂಎಂ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವೇತನ ಕೊಡದಿರುವ ಕುರಿತು ವೈದ್ಯಕೀಯ ಶಿಕ್ಷಣ ಸಚಿವರ ಪ್ರತಿಕ್ರಿಯೆಗೆ ಒನ್‌ಇಂಡಿಯಾ ಕನ್ನಡ ಪ್ರಯತ್ನಿಸಿತು. ಆದರೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಸಂಪರ್ಕಕ್ಕೆ ಸಿಗಲಿಲ್ಲ. ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇನ್ನಾದರೂ ಕೇವಲ ಕೊರೊನಾ ಸೈನಿಕರು ಎಂದು ಹೇಳುವ ಬದಲು ಅವರಿಗೆ ಕೊಡಬೇಕಾದ ಸೌಲಭ್ಯಗಳನ್ನು ಒದಗಿಸಲಿ ಎಂಬುದು ಸಾರ್ವಜನಿಕರ ಒತ್ತಾಯ.

English summary
About 8,000 resident doctors in Karnataka have voiced the low monthly stipend and the high fees they are getting at the state's government colleges and universities. Resident doctors has continued their protest in silence during Corona virus hardship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X