ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 17ಕ್ಕೆ ಆದೇಶ ಕಾಯ್ದಿರಿಸಿದ ಸುಪ್ರೀಂ: ಅಡಕತ್ತರಿಯಲ್ಲಿ ಅತೃಪ್ತರ ಭವಿಷ್ಯ

|
Google Oneindia Kannada News

ನವದೆಹಲಿ, ಜುಲೈ 16: ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಂತೆ ಸ್ಪೀಕರ್‌ಗೆ ಸೂಚನೆ ನೀಡುವಂತೆ ಕೋರಿ 15 ಶಾಸಕರು ಹೂಡಿರುವ ಅರ್ಜಿಯ ವಿಚಾರಣೆ ಇಂದು ಸುಪ್ರಿಂ ಕೋರ್ಟ್‌ನಲ್ಲಿ ನಡೆಯಲಿದೆ.

ಶಾಸಕರ ಅರ್ಜಿಯ ವಿಚಾರಣೆಯ ಜೊತೆಗೆ, ಸ್ಪೀಕರ್ ರಮೇಶ್ ಕುಮಾರ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯೂ ನಡೆಯಲಿದೆ. ರಾಜೀನಾಮೆ ಅಂಗೀಕಾರ ವಿಚಾರವನ್ನು ಸ್ಪೀಕರ್ ವಿವೇಚನೆಗೆ ಬಿಡುವಂತೆ ರಮೇಶ್ ಕುಮಾರ್ ಅವರು ಅರ್ಜಿ ಸಲ್ಲಿಸಿದ್ದಾರೆ.

ಶಾಸಕರ ರಾಜೀನಾಮೆ: ಸುಪ್ರೀಂಕೋರ್ಟ್‌ನಲ್ಲಿ ಮಂಗಳವಾರ ಏನಾಗಲಿದೆ?ಶಾಸಕರ ರಾಜೀನಾಮೆ: ಸುಪ್ರೀಂಕೋರ್ಟ್‌ನಲ್ಲಿ ಮಂಗಳವಾರ ಏನಾಗಲಿದೆ?

ಶುಕ್ರವಾರ ನಡೆದಿದ್ದ ವಿಚಾರಣೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರಿಕೋರ್ಟ್ ಆದೇಶ ನೀಡಿತ್ತು, ಅದರಂತೆಯೇ ಸ್ಪೀಕರ್ ರಮೇಶ್ ಕುಮಾರ್ ಅವರು ಯಥಾಸ್ಥಿತಿ ಕಾಯ್ದುಕೊಂಡಿದ್ದಾರೆ.

 Karnataka politics LIVE: Supreme court , dissident MLA, resignation

ಇಂದು ವಿಚಾರಣೆ ನಡೆಯಲಿದ್ದು, ಅತ್ಯಂತ ಮಹತ್ವಪೂರ್ಣವಾದ ಆದೇಶ ಹೊರಬೀಳಲಿದ್ದು, ರಾಜ್ಯ ರಾಜಕಾರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಗುತ್ತದೆಯೇ ಎಂಬ ಕುತೂಹಲ ಮೂಡಿದೆ.

Newest FirstOldest First
3:24 PM, 16 Jul

ವಾದ-ಪ್ರತಿವಾದಗಳನ್ನು ಆಲಿಸಿದ ಸುಪ್ರಿಂಕೋರ್ಟ್ ನ್ಯಾಯಮೂರ್ತಿಗಳ ಪೀಠವು ನಾಳೆ (ಜುಲೈ 17) ರ ಬೆಳಿಗ್ಗೆ ಆದೇಶವನ್ನು ಕಾಯ್ದಿರಿಸಿದ್ದಾರೆ.
3:24 PM, 16 Jul

ಶಾಸಕರಿಗೆ ತಮಗೆ ಇಷ್ಟ ಬಂದಾಗ ರಾಜೀನಾಮೆ ನೀಡುವ ಮತ್ತು ತಮಗೆ ಇಷ್ಟ ಬಂದ ಹಾಗೆ ನಡೆದುಕೊಳ್ಳುವ ಹಕ್ಕಿದೆ ಎಂದು ಹೇಳಿ ಅತೃಪ್ತ ಶಾಸಕರ ಪರ ವಕೀಲ ರೊಹ್ಟಗಿ ವಾದ ಮುಕ್ತಾಯಗೊಳಿಸಿದರು.
3:22 PM, 16 Jul

ಕರ್ನಾಟಕದ ಮೈತ್ರಿ ಸರ್ಕಾರವು ತನ್ನ ಬಹುಮತವನ್ನು ಕಳೆದುಕೊಂಡಿದೆ. ಸ್ಪೀಕರ್ ಅವರು ಸರ್ಕಾರಕ್ಕೆ ಇನ್ನಷ್ಟು ದಿನ ಸಮಯ ದಕ್ಕಿಸಿಕೊಡುವ ಸಲುವಾಗಿ ರಾಜೀನಾಮೆ ಅಂಗೀಕಾರವನ್ನು ತಡ ಮಾಡುತ್ತಿದ್ದಾರೆ ಎಂದು ರೊಹ್ಟಗಿ ವಾದ ಮಂಡಿಸಿದರು.
3:17 PM, 16 Jul

ರಾಜೀನಾಮೆಯು ಸ್ವ-ಇಚ್ಛೆಯಿಂದ ನೀಡಿದ್ದಾರೆಯೇ ಹಾಗೂ ಅದು ನಕಲು ಅಲ್ಲವೇ ಎಂಬುದನ್ನು ಗಮನಿಸಿ ಅದನ್ನು ಅಂಗೀಕರಿಸುವ ಹಕ್ಕು ಮಾತ್ರವೇ ಸಂವಿಧಾನದ ಪ್ರಕಾರ ಸ್ಪೀಕರ್ ಅವರಿಗೆ ಇದೆ. ಶಾಸಕರು ಏಕೆ ರಾಜೀನಾಮೆ ನೀಡಿದ್ದಾರೆ, ರಾಜೀನಾಮೆ ಉದ್ದೇಶವೇನು? ಎಂಬಿತ್ಯಾದಿ ವಿವೇಚನೆ ಮಾಡುವ ಅಧಿಕಾರ ಸಂವಿಧಾನವು ಸ್ಪೀಕರ್ ಅವರಿಗೆ ನೀಡಿಲ್ಲ ಎಂದು ರೊಹ್ಟಗಿ ವಾದಿಸಿದ್ದಾರೆ.
3:14 PM, 16 Jul

ಈ ಪ್ರಕರಣದಲ್ಲಿ ಶಾಸಕರ ಮೂಲಭೂತ ಹಕ್ಕು ಉಲ್ಲಂಘನೆ ಆಗಿದೆ. ನನಗೆ ಬೇಕಾದಾಗ ರಾಜೀನಾಮೆ ನೀಡುವ ನನ್ನಿಷ್ಟದಂತೆ ವರ್ತಿಸುವ ಹಕ್ಕು ಉಲ್ಲಂಘನೆ ಆಗಿದೆ ಎಂದು ರೊಹ್ಟಗಿ ವಾದಿಸಿದ್ದಾರೆ.
3:14 PM, 16 Jul

ಸ್ಪೀಕರ್ ಪರ ವಕೀಲ ಸಿಂಘ್ವಿ ಅವರಿಗೆ ವಾದಕ್ಕೆ ಪ್ರತಿವಾದವನ್ನು ಅತೃಪ್ತ ಶಾಸಕರ ಪರ ವಕೀಲ ರೊಹ್ಟಗಿ ಆರಂಭಿಸಿದ್ದಾರೆ.
3:10 PM, 16 Jul

ಒಟ್ಟಿಗೆ ರಾಜೀನಾಮೆ ನೀಡಿರುವ ಶಾಸಕರ ಉದ್ದೇಶದ ಬಗ್ಗೆ ಚರ್ಚೆ ಆಗಬೇಕಿದೆ, ವಿಚಾರಣೆ ನಡೆಯಬೇಕಿದೆ ಹಾಗಾಗಿ ಸ್ಪೀಕರ್ ಅವರಿಗೆ ನಿರ್ಣಯ ತೆಗೆದುಕೊಳ್ಳಲು ಸಮಯಾವಕಾಶ ನೀಡಬೇಕು ಎಂದು ಸಿಎಂ ಪರ ವಕೀಲ ಧವನ್ ವಾದ ಮಂಡಿಸಿದರು. ಧವನ್ ಅವರ ವಾದ ಮುಕ್ತಾಯವಾಗಿದೆ.
Advertisement
2:54 PM, 16 Jul

ಮೂಲಭೂತ ಹಕ್ಕು ಉಲ್ಲಂಘನೆ ಆಗದ ಹೊರತು ಸ್ಪೀಕರ್‌ಗೆ ಸೂಚನೆ ನೀಡುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ ಎಂದು ಸಿಎಂ ಪರ ವಕೀಲ ಧವನ್ ವಾದ ಮಂಡಿಸಿದರು.
2:41 PM, 16 Jul

ಈ ಪ್ರಕರಣ ಸ್ಪೀಕರ್ vs ನ್ಯಾಯಾಲಯ ಅಲ್ಲ , ಈ ಪ್ರಕರಣ ಮುಖ್ಯಮಂತ್ರಿ vs ಅಡ್ಡ ದಾರಿಯ ಮೂಲಕ ಮುಖ್ಯಮಂತ್ರಿ ಆಗಲಿಚ್ಛಿಸಿರುವವರ ನಡುವಿನ ಹೋರಾಟವಾಗಿದೆ. ಇಂತಹುಗಳನ್ನು ನೀವು ಪ್ರೋತ್ಸಾಹ ನೀಡಬಾರದು ಎಂದು ಸಿಎಂ ಪರ ವಕೀಲ ಧವನ್ ವಾದಿಸಿದರು.
2:31 PM, 16 Jul

ಅವರು (ಅತೃಪ್ತ ಶಾಸಕರು) ಗುಂಪಾಗಿ ದಾಳಿ ಮಾಡಿ ಸರ್ಕಾರವನ್ನು ಕೆಡವಲು ಯತ್ನಿಸುತ್ತಿದ್ದಾರೆ. ಸ್ಪೀಕರ್ ಅವರನ್ನು ಭೇಟಿ ಮಾಡುವ ಅವಕಾಶ ಇದ್ದರೂ ಸಹ ಅವರು ಒಟ್ಟಾಗಿ ಮುಂಬೈಗೆ ಹಾರಿದರು ಎಂದು ಧವನ್ ವಾದ ಮಂಡಿಸಿದರು.
2:30 PM, 16 Jul

ರಾಜೀನಾಮೆ ಅಂಗೀಕಾರವಾದರೆ ಅವರೆಲ್ಲರೂ (ಅತೃಪ್ತ ಶಾಸಕರು) ಮಂತ್ರಿ ಆಗಲಿದ್ದಾರೆ, ಹಾಗಾಗಿ ಈ ಉದ್ದೇಶದ ಬಗ್ಗೆಯೇ ಸ್ಪೀಕರ್ ಗಮನವಹಿಸಬೇಕಾಗಿದೆ, ಹೀಗಾಗಿಯೇ ಅವರ ರಾಜೀನಾಮೆ ಅಂಗೀಕಾರ ತಡವಾಗಿದೆ ಎಂದು ಸಿಎಂ ಪರ ವಕೀಲ ರಾಜೀವ್ ಧವನ್ ಹೇಳಿದರು.
2:28 PM, 16 Jul

ಸ್ಪೀಕರ್ ಪರ ವಕೀಲ ಸಿಂಘ್ವಿ ತಮ್ಮ ವಾದವನ್ನು ಮುಗಿಸಿದರು. ಸಿಎಂ ಕುಮಾರಸ್ವಾಮಿ ಪರ ರಾಜೀವ್ ಧವನ್ ಅವರು ವಾದ ಮಂಡನೆ ಪ್ರಾರಂಭ ಮಾಡಿದ್ದಾರೆ.
Advertisement
2:26 PM, 16 Jul

ಅನರ್ಹತೆಯನ್ನು ತಪ್ಪಿಸುವುದಕ್ಕಾಗಿ ರಾಜೀನಾಮೆ ನೀಡಿದ್ದಾರೆ ಎಂದು ನೀವು (ಸಿಂಘ್ವಿ) ಹೇಳುತ್ತೀರಿ. ರೊಹ್ಟಗಿ (ಅತೃಪ್ತರ ಪರ ವಕೀಲ) ಹೇಳುತ್ತಾರೆ ಶಾಸಕರ ಹಕ್ಕು ರಕ್ಷಣೆ ಮಾಡಬೇಕು ಎಂದು. ಇಬ್ಬರ ವಾದವೂ ತೂಕದ್ದಾಗಿದೆ. ನಾವು (ಸುಪ್ರೀಂ) ಸಮತೋಲನ ಮಾಡಬೇಕಿದೆ: ರಂಜನ್ ಗೋಗೊಯ್
2:13 PM, 16 Jul

ಭೋಜನ ವಿರಾಮದ ನಂತರ ವಿಚಾರಣೆ ಪುನರಾರಂಭವಾಗಿದೆ.
12:59 PM, 16 Jul

ಸುಪ್ರಿಂಕೋರ್ಟ್‌ ವಿಚಾರಣೆ ಪೀಠವು ಭೋಜನ ವಿರಾಮವನ್ನು ತೆಗೆದುಕೊಂಡಿದ್ದು, ವಿಚಾರಣೆಯು 2 ಗಂಟೆ ವೇಳೆಗೆ ಪ್ರಾರಂಭವಾಗುತ್ತದೆ.
12:56 PM, 16 Jul

ಎಲ್ಲ ಅತೃಪ್ತ ಶಾಸಕರು ರಾಜೀನಾಮೆ ಸಲ್ಲಿಸಿದ್ದು ಜುಲೈ 11 ರಂದು ಅದಕ್ಕೆ ಮುನ್ನಾ ಜುಲೈ 10ರಂದೇ ಶಾಸಕರ ವಿರುದ್ಧ ದೂರು ಸಲ್ಲಿಕೆ ಆಗಿದೆ ಹಾಗಾಗಿ ಶಾಸಕರ ಅನರ್ಹತೆ ವಿಚಾರವನ್ನೇ ರಾಜೀನಾಮೆಗೆ ಮೊದಲು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಿಂಘ್ವಿ ವಾದ ಮಂಡಿಸಿದರು.
12:49 PM, 16 Jul

ಈ ಪ್ರಕರಣದಲ್ಲಿ ರಾಜೀನಾಮೆ ಮತ್ತು ಅನರ್ಹತೆಗೆ ನೇರವಾದ ಸಂಬಂಧ ಇದೆ. ನ್ಯಾಯಾಲಯವು ಇವುಗಳ ಬಗ್ಗೆ ಸ್ವತಂತ್ರ್ಯವಾಗಿ ಬೇಕಾದರೆ ತನಿಖೆ ನಡೆಸಬಹುದು ಎಂದು ಸಿಂಘ್ವಿ ವಾದಿಸಿದರು.
12:41 PM, 16 Jul

2018ರ ಮೇ ನಲ್ಲಿ ಸುಪ್ರಿಂ ಕೋರ್ಟ್‌ ಸ್ಪೀಕರ್‌ ಅವರ ಕಾರ್ಯದಲ್ಲಿ ಮಧ್ಯಪ್ರವೇಶಿಸಿರಲಿಲ್ಲ, ರಾಜ್ಯಪಾಲರು ವಿಶ್ವಾಸಮತ ಯಾಚನೆಗೆ 15 ದಿನಗಳ ಕಾಲಾವಕಾಶ ಕೊಟ್ಟಿದ್ದರು, ಇದು ಸರಿಯಾದ ಕ್ರಮವಲ್ಲ ಎನಿಸಿದ ಕಾರಣದಿಂದ 24 ಗಂಟೆಯಲ್ಲಿ ವಿಶ್ವಾಸಮತಯಾಚನೆ ಮಾಡುವಂತೆ ಸುಪ್ರಿಂ ಹೇಳಿತ್ತು ಎಂದು ಸಿಂಘ್ವಿ ವಾದ ಮಂಡಿಸಿದರು.
12:30 PM, 16 Jul

ಅನರ್ಹತೆ ಅರ್ಜಿಗೆ ಮುನ್ನಾ ರಾಜೀನಾಮೆಯನ್ನು ಏಕೆ ಪರಿಗಣಿಸಬಾರದು ಎಂದು ಸಿಜೆಐ ಪ್ರಶ್ನಿಸಿದರು. ಕಳೆದ ವರ್ಷ ನಾವು (ಸುಪ್ರಿಂ) ಸ್ಪೀಕರ್‌ಗೆ, 24 ಗಂಟೆಯಲ್ಲಿ ವಿಶ್ವಾಸಮತ ಯಾಚನೆ ಮಾಡಿಸಿ ಎಂದು ಆದೇಶ ನೀಡಿದ್ದೆವು, ಆಗ ನೀವು ವಿರೋಧಿಸಲಿಲ್ಲ ಏಕೆ? ಅದು ನಿಮ್ಮ ಪಕ್ಷದ ಪರವಾಗಿತ್ತು ಎಂದಾ? ಎಂದು ರಂಜನ್ ಗೊಗೊಯ್ ಸಿಂಘ್ವಿ ಅವರನ್ನು ಪ್ರಶ್ನಿಸಿದರು.
12:26 PM, 16 Jul

ಈ ಘಟನೆಯನ್ನು ಹೀಗೆಯೇ ಬಿಟ್ಟು, ನಂತರ ಸ್ಪೀಕರ್ ಅವರು ತೆಗೆದುಕೊಳ್ಳುವ ನಿರ್ಣಯವನ್ನು ಬೇಕಾದರೆ ನ್ಯಾಯವ್ಯವಸ್ಥೆಯಲ್ಲಿ ಪುನರ್‌ ವಿಮರ್ಶೆ ಮಾಡಬಹುದು ಆ ಅಧಿಕಾರ ನ್ಯಾಯಾಲಯಕ್ಕೆ ಇದೆ ಎಂದು ಸಿಂಘ್ವಿ ವಾದಿಸಿದರು.
12:21 PM, 16 Jul

ಅಕಸ್ಮಾತ್, ನಾಳೆ ವಿಶ್ವಾಸಮತ ಯಾಚನೆ ಇದ್ದು, ಇಂದು ಒಬ್ಬ ಶಾಸಕ ರಾಜೀನಾಮೆ ನೀಡಲು ಬಯಸಿದ್ದಾನೆ ಎಂದುಕೊಳ್ಳೋಣ, ಆತನ ರಾಜೀನಾಮೆ ಇಂದ ಸರ್ಕಾರ ಬೀಳುತ್ತದೆಯೆಂದರೆ ಅದು ಪಕ್ಷಕ್ಕೆ ವಿರುದ್ಧವಾದ ನಡೆಯೇ, ಆತ ಅನರ್ಹತೆಗೆ ಅರ್ಹನೇ ಆಗಿರುತ್ತಾನೆ, ಇಲ್ಲಿಯೂ ಸಹ ಅದೇ ನಡೆದಿದೆ ಎಂದು ಸಿಂಘ್ವಿ ವಾದಿಸಿದರು.
12:17 PM, 16 Jul

ಅನರ್ಹತೆಯಿಂದ ಪಾರಾಗಲು ರಾಜೀನಾಮೆ ದಾರಿ ಆಗಬಾರದು ಎಂದು ಸ್ಪೀಕರ್ ಪರ ವಕೀಲ ಸಿಂಘ್ವಿ ವಾದಿಸಿದರು.
12:16 PM, 16 Jul

ಅನರ್ಹತೆಯಿಂದ ಪಾರಾಗಲು ಆ (ಅತೃಪ್ತ) ಶಾಸಕರು ರಾಜೀನಾಮೆ ನೀಡಿದ್ದಾರೆ. ಸ್ಪೀಕರ್ ಅವರು ಖಡ್ಡಾಯವಾಗಿ ಶಾಸಕರ ಅನರ್ಹರನ್ನಾಗಿ ಮಾಡಬೇಕು ಎಂದು ನಾನು ವೈಯಕ್ತಿಕವಾಗಿ ಒತ್ತಾಯಿಸುತ್ತೇನೆ ಎಂದು ಸಿಂಘ್ವಿ ವಾದಿಸಿದರು.
12:14 PM, 16 Jul

ಸ್ಪೀಕರ್ ಅವರು ಲಭ್ಯವಿರಲಿಲ್ಲ ಹಾಗಾಗಿ ಸುಪ್ರಿಂಕೋರ್ಟ್‌ಗೆ ಬಂದಿದ್ದೇವೆ ಎಂದು ಅತೃಪ್ತ ಶಾಸಕರು ಅರ್ಜಿಯಲ್ಲಿ ತಿಳಿಸಿದ್ದಾರಲ್ಲ ಎಂದು ಸಿಜೆಐ ರಂಜನ್ ಗೊಗೊಯ್ ಅವರು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಸಿಂಘ್ವಿ ಅವರು ಸ್ಪೀಕರ್ ಅವರು ಇದರ ಬಗ್ಗೆ ಅಫಿಡವಿಟ್ ಸಲ್ಲಿಸಿದ್ದು, ರಾಜೀನಾಮೆ ಸಲ್ಲಿಸಲು ಬರುವ ಶಾಸಕರು ನನ್ನ(ಸ್ಪೀಕರ್) ಅನುಮತಿ ಅಥವಾ ಅಪಾಯಿಂಟ್‌ಮೆಂಟ್ ಪಡೆದಿರಲಿಲ್ಲ ಎಂದು ಸಿಂಘ್ವಿ ಉತ್ತರಿಸಿದರು.
12:11 PM, 16 Jul

190 ವಿಧಿ ಪ್ರಕಾರ ರಾಜೀನಾಮೆ ನೀಡಿರುವ ಶಾಸಕರು ಸ್ಪೀಕರ್ ಮುಂದೆ ಹಾಜರಾಗಿ ವಿಚಾರಣೆ ಎದುರಿಸಬೇಕು. ಆದರೆ ಈ ಪ್ರಕರಣದಲ್ಲಿ ಜುಲೈ 11 ರಂದು ಹದಿನೈದರಲ್ಲಿ 11 ಶಾಸಕರು ಸ್ಪೀಕರ್ ಮುಂದೆ ಹಾಜರಾಗಿದ್ದಾರೆ, ಇನ್ನೂ ನಾಲ್ಕು ಶಾಸಕರು ಇನ್ನೂ ಹಾಜರಾಗಿಲ್ಲ ಎಂದು ಸಿಂಘ್ವಿ ಅವರು ಸ್ಪೀಕರ್ ಪರ ವಾದ ಮಂಡಿಸಿದರು.
12:03 PM, 16 Jul

ಪ್ರತಿವಾದಿ ವಕೀಲರು ವಾಸ್ತವಿಕ ದೋಷ ಮಾಡಿದ್ದಾರೆ. ಎಲ್ಲ ಅನರ್ಹತೆ ಪ್ರತಿಕ್ರಿಯೆಗಳು ರಾಜೀನಾಮೆಗೆ ಮುಂಚೆ ಆರಂಭಗೊಂಡಿವೆ ಎಂದು ಸಿಂಘ್ವಿ ವಾದ ಆರಂಭಿಸಿದ್ದಾರೆ.
12:00 PM, 16 Jul

ಅತೃಪ್ತ ಶಾಸಕರ ಪರ ವಾದ ಮಂಡನೆಯನ್ನು ರೊಹ್ಟಗಿ ಮುಕ್ತಾಯಗೊಳಿಸಿದರು. ಕರ್ನಾಟಕ ವಿಧಾನಸಭೆ ಸ್ಪೀಕರ್ ಪರವಾಗಿ ಎ.ಎಂ.ಸಿಂಘ್ವಿ ಅವರು ವಾದ ಮಂಡನೆ ಪ್ರಾರಂಭಿಸಿದ್ದಾರೆ.
11:57 AM, 16 Jul

ಕೆಲವು ಶಾಸಕರ ರಾಜೀನಾಮೆ ಪತ್ರಗಳನ್ನು ತೆಗೆದ ರೊಹ್ಟಗಿ, ನ್ಯಾಯಾಧಿಪತಿಗಳ ಮುಂದೆ ಹಿಡಿದು, ಇವು ಕ್ರಮಬದ್ಧವಾದ ರಾಜೀನಾಮೆಗಳು, ಇವುಗಳನ್ನು ಸ್ವ-ಇಚ್ಛೆಯಿಂದ ರಾಜೀನಾಮೆ ನೀಡುತ್ತಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಯಾರೋ ವಕೀಲರು ಅವರಗೆ ಸೂಕ್ತ ಸಲಹೆ ನೀಡಿದ್ದಾರೆ ಎಂದು ರೊಹ್ಟಗಿ ವಾದ ಮಂಡಿಸಿದರು.
11:51 AM, 16 Jul

ಸುಪ್ರಿಂಕೋರ್ಟ್‌ನಿಂದ ಯಾವ ರೀತಿಯ ಆದೇಶದ ನಿರೀಕ್ಷಿಯನ್ನು ನೀವು ಮಾಡುತ್ತಿದ್ದೀರ ಎಂದು ಸಿಜೆಐ ರಂಜನ್ ಗೊಗೊಯ್ ಕೇಳಿದರು. ಇದಕ್ಕೆ ಉತ್ತರಿಸಿದ ಶಾಸಕರ ಪರ ವಕೀಲ ರೊಹ್ಟಗಿ, ಶೀಘ್ರವಾಗಿ ರಾಜೀನಾಮೆ ಅಂಗೀಕರಿಸುವಂತೆ ಆದೇಶಿಸಿರೆಂದು ಮನವಿ ಮಾಡಿದರು.
11:47 AM, 16 Jul

ರಾಜೀನಾಮೆ ಆಗಲಿ ಅಥವಾ ಅನರ್ಹತೆಯನ್ನಾಗಲಿ ಹೇಗೆ ಮಾಡಬೇಕೆಂದು ನಾವು (ಕೋರ್ಟ್‌) ನಿರ್ದೇಶನ ನೀಡಲು ಸಾಧ್ಯವಿಲ್ಲ. ಸ್ಪೀಕರ್ ಅವರಿಗೆ ನಿಭಂದನೆ ಹೇರಲು ಸಾಧ್ಯವಿಲ್ಲ. ಆದರೆ ಸ್ಪೀಕರ್‌ಗೆ ರಾಜೀನಾಮೆಗೆ ಮೊದಲು ಅನರ್ಹತೆ ಅಥವಾ ಅನರ್ಹತೆಗೆ ಮೊದಲು ರಾಜೀನಾಮೆ ಎಂದು ನಿರ್ಧರಿಸುವಲ್ಲಿ ಸಾಂವಿಧಾನಿಕ ಬಾಧ್ಯತೆಗಳೇನಾದರೂ ಇದೆಯಾ ಎಂಬುದನ್ನು ನಾವು ನಿರ್ಧರಿಸಬಹುದಷ್ಟೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
READ MORE

English summary
Dissident MLAs application will be inquiry today in Supreme Court. Today's Supreme court order will give new dimension to present political situation in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X