• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ ಜುಲೈ 30ರ ರಾಜಕೀಯ ಬೆಳವಣಿಗೆಗಳ ಕುರಿತು ಒಂದು ಸಮಗ್ರ ವರದಿ!

|
Google Oneindia Kannada News

ಬೆಂಗಳೂರು, ಜು. 30: ಕರ್ನಾಟಕದ ರಾಜಕೀಯಕ್ಕೆ ಸಂಬಂಧಪಟ್ಟಂತೆ ಇವತ್ತು ಹಲವು ಬೆಳವಣಿಗೆಗಳಾಗಿವೆ. ಆಡಳಿತ ಪಕ್ಷ ಬಿಜೆಪಿಯಲ್ಲಿ ರಾಜ್ಯ ಸಚಿವ ಸಂಪುಟ ಕುರಿತಂತೆ ಮಹತ್ವದ ಚರ್ಚೆ ನಡೆದಿದೆ. ಜೊತೆಗೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ತೆರಳಿ ತಮ್ಮ ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದಾರೆ. ಮತ್ತೊಂದೆಡೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ರಾಜಕೀಯ ಜೋರಾಗಿದೆ. ಅದೇ ರೀತಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲೂ ಹಲವು ಬೆಳವಣಿಗೆಗಳಾಗಿವೆ.

ರಾಜೀನಾಮೆ ಕೊಟ್ಟು ಮೂರೇ ದಿನಗಳಲ್ಲಿ ಚಾಮರಾಜನಗರಕ್ಕೆ ಪ್ರವಾಸ ತೆರಳುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮತ್ತೆ ಸಕ್ರಿಯರಾಗಿದ್ದಾರೆ. ಇದು ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ ಗಂಟೆ ಎಂದೇ ಹೇಳಲಾಗುತ್ತಿದೆ. ಅದಕ್ಕೆ ಕಾರಣವೂ ಇದೆ.

ಇನ್ನು ಮುಂದಿನ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ಪಕ್ಷ ಹುಬ್ಬಳ್ಳಿಯಲ್ಲಿ ಮಹತ್ವದ ಸಭೆ ನಡೆಸಿದೆ. ಆ ಸಭೆಯಲ್ಲಿ ದಿ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ.

ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಜೊತೆಗೆ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕರ ಧನ್ಯವಾದಗಳನ್ನು ತಿಳಿಸಿದ್ದಾರೆ. ಮತ್ತೊಂದೆಡೆ ಮುಖ್ಯಮಂತ್ರಿಯಾಗಿ ಮಾಡಲಾಗದ್ದನ್ನು ಬಿ.ಎಸ್. ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿಗಳಾಗಿ ಮಾಡಿದ್ದಾರೆ.

ಕಾಂಗ್ರೆಸ್ ಹಾಗೂ ಬಿಜೆಪಿ ಯೊಂದಿಗೆ ಜೆಡಿಎಸ್‌ ಪಕ್ಷದಲ್ಲಿಯೂ ಹಲವು ಬೆಳವಣಿಗೆಗಳಾಗಿವೆ. ಇಂದಿನ ಕರ್ನಾಟಕದ ರಾಜಕೀಯ ಸುದ್ದಿಗಳ ಕುರಿತು ಸಣ್ಣದೊಂದು ಚಿತ್ರಣ ನಿಮ್ಮೆದುರಿಗೆ ಮುಂದಿದೆ.

ಪ್ರಧಾನಿ ಮೋದಿ ಭೇಟಿ ಮಾಡಿದ ಸಿಎಂ ಬೊಮ್ಮಾಯಿ

ಪ್ರಧಾನಿ ಮೋದಿ ಭೇಟಿ ಮಾಡಿದ ಸಿಎಂ ಬೊಮ್ಮಾಯಿ

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿ ದೆಹಲಿಗೆ ತೆರಳಿರುವ ಬಸವರಾಜ ಬೊಮ್ಮಾಯಿ ಅವರು ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ವಿವಿಧ ವಿಷಯಗಳ ಕುರಿತು ಚರ್ಚಿಸಿದ್ದಾರೆ. ಪ್ರಮುಖವಾಗಿ ಹುಬ್ಬಳ್ಳಿ-ಧಾರವಾಡಕ್ಕೆ ಏಮ್ಸ್ ಮಂಜೂರು ಮಾಡುವಂತೆ ವಿನಂತಿಸಿದ್ದಾರೆ.

ಅದೇ ರೀತಿ ರಾಯಚೂರಿಗೆ ಏಮ್ಸ್ ಮಾದರಿಯ ವೈದ್ಯಕೀಯ ಸಂಸ್ಥೆಯನ್ನು ಮಂಜೂರು ಮಾಡುವಂತೆಯೂ ಪ್ರಧಾನಿ ನರೇಂದ್ರ ಅವರಿಗೆ ಸಿಎಂ ಬೊಮ್ಮಾಯಿ ಮನವಿ ಮಾಡಿದ್ದಾರೆ. ಜೊತೆಗೆ ಕಲಬುರಗಿಯ ಇಎಸ್ಐ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಪ್ರಾದೇಶಿಕ ಏಮ್ಸ್ ಮಾದರಿಯ ಸಂಸ್ಥೆಯನ್ನಾಗಿ ಉನ್ನತೀಕರಿಸುವಂತೆ ಕೋರಿದರು.

ತಮ್ಮನ್ನು ಮೊದಲು ಬಾರಿ ಭೇಟಿ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ ಅವರು, ಕರ್ನಾಟಕದ ಅಭಿವೃದ್ಧಿಗೆ ಎಲ್ಲ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿಗಳ ಸಚಿವಾಲಯ ಮಾಹಿತಿ ಕೊಟ್ಟಿದೆ.

ಕೇಂದ್ರ ಸಚಿವರೊಂದಿಗೆ ಸಿಎಂ ಬೊಮ್ಮಾಯಿ ಸಭೆ

ಕೇಂದ್ರ ಸಚಿವರೊಂದಿಗೆ ಸಿಎಂ ಬೊಮ್ಮಾಯಿ ಸಭೆ

ಇದಕ್ಕೂ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ರಾಜ್ಯದ ನೀರಾವರಿ ವಿಷಯಗಳ ಕುರಿತು ಚರ್ಚಿಸಿದರು. ಆ ಸಂದರ್ಭದಲ್ಲಿ ಸಂಸದರಾದ ಡಾ. ಉಮೇಶ್ ಜಾಧವ್, ಮಾಜಿ ಸಚಿವರಾದ ಆರ್. ಅಶೋಕ್, ಉಮೇಶ್ ಕತ್ತಿ ಅವರು ಜೊತೆಗಿದ್ದರು. ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧನ್ಯವಾದಗಳನ್ನು ತಿಳಿಸಿದರು.

ಅಮಿತ್ ಶಾ ಭೇಟಿಯ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಅನೌಪಚಾರಿಕ ಮಾತುಕತೆ ನಡೆಸಿದರು. ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬಳಿಕ ಸಿಎಂ ಬೊಮ್ಮಾಯಿ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಧ್ಯಾಹ್ನ ದೆಹಲಿಯಲ್ಲಿ ರಾಜ್ಯದ ಸಂಸದರ ಜೊತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ರಾಜೀವ್ ಚಂದ್ರಶೇಖರ್, ಭಗವಂತ ಖೂಬಾ ಸೇರಿದಂತೆ ಸಂಸದರು ಭಾಗವಹಿಸಿದ್ದರು. ರಾಜ್ಯದ ಅಭಿವೃದ್ಧಿಗೆ ಸಹಕಾರ ಕೊಡುವಂತೆ ಬೊಮ್ಮಾಯಿ ಸಂಸದರು ಹಾಗೂ ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದಾರೆ.

ಇಂದು ದೆಹಲಿಯ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಾಸ್ತವ್ಯ ಮಾಡಲಿದ್ದು, ನಾಳೆ ಬೆಂಗಳೂರಿಗೆ ಹಿಂದಿರುಗಲಿದ್ದಾರೆ ಎಂಬ ಮಾಹಿತಿಯಿದೆ.

ಕಾಂಗ್ರೆಸ್ ಪಕ್ಷದಲ್ಲಿನ ಇಂದಿನ ಬೆಳವಣಿಗೆ

ಕಾಂಗ್ರೆಸ್ ಪಕ್ಷದಲ್ಲಿನ ಇಂದಿನ ಬೆಳವಣಿಗೆ

ದಿ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರ ಹಾಗೂ ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಅಧಿಕೃತವಾಗಿ ಇಂದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಈ ಹಿಂದೆಯೆ ಜೆಡಿಎಸ್ ತೊರೆಯಲು ನಿರ್ಧಾರ ಮಾಡಿದ್ದ ಅವರು ಹುಬ್ಬಳ್ಳಿಯ ಗೋಕುಲ್ ಗಾರ್ಡನ್‌ನಲ್ಲಿ ಕರ್ನಾಟಕ ಕಾಂಗ್ರೆಸ್ ವಿಭಾಗ ಮಟ್ಟದ ಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮುಂತಾದ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಕಳೆದ ಮಾರ್ಚ್‌ ತಿಂಗಳಿನಲ್ಲಿಯೇ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಪಕ್ಷ ಸೇರುವುದಾಗಿ ಘೋಷಣೆ ಮಾಡಿದ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.

ಇದೇ ಸಂದರ್ಭದಲ್ಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಭಿನಂದಿಸಿದ್ದಾರೆ. ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ನೀಟ್ ಮೂಲಕ ಅಖಿಲಭಾರತ ಕೋಟಾದಡಿಯಲ್ಲಿ ಸೇರ್ಪಡೆಗೊಳ್ಳುವ ಹಿಂದುಳಿದ ಜಾತಿಯ ವಿದ್ಯಾರ್ಥಿಗಳಿಗೆ ಶೇಕಡಾ 27ರಷ್ಟು ಮೀಸಲಾತಿ ನೀಡುವ ಪ್ರಧಾನಿ ನರೇಂದ್ರ ಮೋದಿ ಘೋಷಣೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಸಂಕಷ್ಟದಲ್ಲಿ ಸಂತ್ರಸ್ತರು, ದೆಹಲಿಯಲ್ಲಿ ಸರ್ಕಾರ!

ಸಂಕಷ್ಟದಲ್ಲಿ ಸಂತ್ರಸ್ತರು, ದೆಹಲಿಯಲ್ಲಿ ಸರ್ಕಾರ!

ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಅವರು, ಕೊರೊನಾ, ಪ್ರವಾಹದಿಂದ ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ. ಅವರ ಸಮಸ್ಯೆಗಳನ್ನು ಆಲಿಸಿ, ಕಷ್ಟಕಾಲದಲ್ಲಿ ಅವರ ಜೊತೆ ನಿಲ್ಲಬೇಕಿದ್ದ ಬಿಜೆಪಿ ನಾಯಕರು ಅಧಿಕಾರದ ಆಸೆಗೆ ದೆಹಲಿಗೆ ಹೋಗಿ ಕೂತಿದ್ದಾರೆ ಎಂದು ನೂತನ ಮುಖ್ಯಮಂತ್ರಿ ಹಾಗೂ ಬಿಜೆಪಿ ಶಾಸಕರನ್ನು ಟೀಕಿಸಿದ್ದಾರೆ.

ಕಾಟಾಚಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಬಾಗಲಕೋಟೆ, ಬೆಳಗಾವಿ, ಕೊಡುಗು, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ಬೊಮ್ಮಾಯಿ ಅವರು ಬರೀ ಉತ್ತರ ಕನ್ನಡಕ್ಕೆ ಹೋಗಿ ಪರಿಹಾರ ಕಾರ್ಯಕ್ಕೆ ಹಣ ಕೊಡ್ತೀನಿ ಅಂತ ಹೇಳಿ ಅಲ್ಲಿಂದ ದೆಹಲಿಗೆ ಹೋಗಿದ್ದಾರೆ. ರಾಜ್ಯದಲ್ಲಿ ಸಚಿವ ಸಂಪುಟವೂ ಇಲ್ಲದಿರುವಾಗ ಜನರ ಕಷ್ಟಗಳನ್ನು ಕೇಳಿ, ಸ್ಪಂದಿಸುವ ಕೆಲಸ ಮಾಡಬೇಕಿದ್ದ ಶಾಸಕರು, ಮುಖ್ಯಮಂತ್ರಿ ಬದಲಾವಣೆ, ಮಂತ್ರಿ ಪದವಿಯ ಲಾಬಿಯಲ್ಲಿ ಮುಳುಗಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಜೆಡಿಎಸ್ ಪಕ್ಷದ ಇಂದಿನ ಬೆಳವಣಿಗೆಗಳು

ಜೆಡಿಎಸ್ ಪಕ್ಷದ ಇಂದಿನ ಬೆಳವಣಿಗೆಗಳು

ಜೆಡಿಎಸ್ ಪಕ್ಷದಲ್ಲಿ ಇಂದು ಹೆಚ್ಚಿನ ಬೆಳವಣಿಗೆಗಳಾಗಿಲ್ಲ. ಆದರೆ ಪಕ್ಷದಿಂದ ಸ್ಪರ್ಧಿಸಿ ಸೊರಬ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮಧು ಬಂಗಾರಪ್ಪ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಜೆಡಿಎಸ್ ನಾಯಕರಿಗೆ ಇದು ನಿರೀಕ್ಷಿತ ಬೆಳವಣಿಗೆ ಆಗಿದ್ದರೂ, ಆ ಪಕ್ಷಕ್ಕೆ ಆಗಿರುವ ಹಾನಿ ಎಂದೆ ಪರಿಗಣಿಸಲಾಗುತ್ತಿದೆ.

ಅದೊಂದಿಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು, ರಾಮನಗರ ಜಿಲ್ಲೆಯಲ್ಲಿ ಸಂಭವಿಸಿರುವ ಆನೆದಾಳಿ ಘಟನೆಗಳು, ಹಾನಿ, ನಿಯಂತ್ರಣ ಪರಿಹಾರದ ಕುರಿತು ಚರ್ಚಿಸಲು ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳೊಡನೆ ಸಭೆ ನಡೆಸಿದ್ದಾರೆ.

ಇನ್ನು ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡುವ ವಿಚಾರದಲ್ಲಿ ಕರ್ನಾಟಕದ ಪರವಾಗಿ ಇರುವವರು ಯಾರು? ತಮಿಳುನಾಡಿನ ವಿರೋಧ ಪಕ್ಷ ಎಐಎಡಿಎಂಕೆಯು ಎನ್‌ಡಿಎ ಸರ್ಕಾರದ ಮೇಲೆ ಒತ್ತಡ ಹಾಕಿದೆ. ಆಡಳಿತ ಪಕ್ಷ ಡಿಎಂಕೆ ಕಾಂಗ್ರೆಸ್‌ ಮೇಲೆ ಒತ್ತಡ ಹಾಕಿದೆ. ಕರ್ನಾಟಕದಲ್ಲಿ ಮಾತ್ರ ಎರಡೂ ಪಕ್ಷಗಳು ಯೋಜನೆ ಜಾರಿಯಾಗಬೇಕು ಎನ್ನುತ್ತವೆ? ಯಾರು ಯಾರ ಪರ ಇದ್ದೀರಿ? ಎಂಬುದನ್ನು ಸ್ಪಷ್ಟಪಡಿಸಿ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.

ಅಣೆಕಟ್ಟು ನಿರ್ಮಾಣ ಮಾಡಿಯೇ ತೀರುತ್ತೇವೆ ಎಂದು ಹೇಳುತ್ತಿದ್ದ ಯಡಿಯೂರಪ್ಪ ಅವರು ಕೇಂದ್ರ ಸರ್ಕಾರದ ಅನುಮತಿ ಪಡೆಯಲಿಲ್ಲ. ಈಗ ಬೊಮ್ಮಾಯಿ ಅವರೂ ಯೋಜನೆ ಜಾರಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಇವೆಲ್ಲ ಮಾತಿನಲ್ಲೇ ಉಳಿಯಬಾರದು. ಕೇಂದ್ರದ ಬಳಿಗೆ ಹೋಗಿ ಅನುಮತಿ ಪಡೆಯಲು ಪ್ರಯತ್ನಿಸಬೇಕು. ಈ ಕಾರ್ಯವನ್ನು ಜೆಡಿಎಸ್‌ ಯಾವಾಗಲೂ ಬೆಂಬಲಿಸುತ್ತದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಜೊತೆಗೆ ಜೆಡಿಎಸ್ ಶಾಸಕ ಎಸ್.ಆರ್. ಮಹೇಶ್ ಅವರು ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ರೋಹಿಣಿ ಸಿಂಧೂರಿ ಅವರ ನಡೆಯನ್ನು ಪ್ರಶ್ನೆ ಮಾಡಿದ್ದಾರೆ.

ಮತ್ತೆ ಆ್ಯಕ್ಟಿವ್ ಆದ ಮಾಜಿ ಸಿಎಂ ಯಡಿಯೂರಪ್ಪ!

ಮತ್ತೆ ಆ್ಯಕ್ಟಿವ್ ಆದ ಮಾಜಿ ಸಿಎಂ ಯಡಿಯೂರಪ್ಪ!

ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮೂರೇ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಾಮರಾಜನಗರ ಜಿಲ್ಲೆಗೆ ತೆರಳಿದ್ದರು. ತಮ್ಮ ರಾಜೀನಾಮೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಅಭಿಮಾನಿಯ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಜೊತೆಗೆ ಅಭಿಮಾನಿಯ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳ ಪರಿಹಾರ ನೀಡಿದ್ದಾರೆ.

ಚಾಮರಾಜಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ರವಿ ಎಂಬ ವ್ಯಕ್ತಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಟ್ಟ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಹೇಳಲಾಗಿತ್ತು. ಇಂದು ಮೃತ ಅಭಿಮಾನಿಯ ಮನೆಗೆ ಯಡಿಯೂರಪ್ಪ ಭೇಟಿ ಕೊಟ್ಟಿದ್ದರು. ಮೃತ ರವಿಯ ಕುಟುಂಬಕ್ಕೆ ಸಾಂತ್ವನ ಹೇಳಿ 5 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಇದರಲ್ಲಿ 5 ಲಕ್ಷ ರೂಪಾಯಿ ಹಣವಿದೆ ಇಟ್ಟುಕೊಳ್ಳಿ. ನಾನು ಇನ್ನು 5 ಲಕ್ಷ ರೂಪಾಯಿ ಹಣವನ್ನು ಕಳುಹಿಸುತ್ತೇನೆ ಮನೆಯನ್ನು ಕಟ್ಟಿಸಿಕೊಳ್ಳಿ ಎಂದು ಹೇಳಿ ಅಭಿಮಾನಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.

ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಾಮರಾಜನಗರ ಜಿಲ್ಲೆಗೆ ಭೇಟಿ ಕೊಟ್ಟಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜೆನ್ ಕೊರತೆ ಉಂಟಾಗಿ 36 ಮಂದಿ ಕೋವಿಡ್ ರೋಗಿಗಳು ಮೃತಪಟ್ಟ ಘಟನೆ ನಡೆದಿತ್ತು.

ಆ ಘಟನೆಯಲ್ಲಿ ತಪ್ಪಿತಸ್ಥರಾಗಿದ್ದವರ ಮೇಲೆ ಈ ವರೆಗೂ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮೃತ ಕುಟುಂಬಗಳಿಗೆ ಸಾಂತ್ವನ ಹೇಳುವುದು ಹೋಗಲಿ, ಆ ಸಾವುಗಳಿಗೆ ಸೂಕ್ತ ನ್ಯಾಯ ಕೊಡಿಸುವುದನ್ನೂ ಯಡಿಯೂರಪ್ಪ ಮಾಡಿರಲಿಲ್ಲ. ಇದೀಗ ಆತ್ಮಹತ್ಯೆ ಮಾಡಿಕೊಂಡಿರುವ ಅಭಿಮಾನಿಯ ಮನೆಗೆ ತೆರಳಿ ಪರಿಹಾರ ಕೊಟ್ಟಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದಿನ ರಾಜಕೀಯ ಸುದ್ದಿಗಳ ಸಂಕ್ಷಿಪ್ತ ನೋಟ

ಇಂದಿನ ರಾಜಕೀಯ ಸುದ್ದಿಗಳ ಸಂಕ್ಷಿಪ್ತ ನೋಟ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ತೆರಳಿ ಪಕ್ಷದ ಪರಿಷ್ಠರನ್ನು ಸೌಜನ್ಯ ಭೇಟಿ ಮಾಡಿದ್ದಾರೆ. ಜೊತೆಗೆ ಹೈಕಮಾಂಡ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯ ಹಲವು ನಾಯಕರು ದೆಹಲಿಯಲ್ಲಿ ಮಂತ್ರಿ ಸ್ಥಾನಕ್ಕಾಗಿ ಲಾಬಿ ಶುರು ಮಾಡಿದ್ದಾರೆ. ಸಂಪುಟ ವಿಸ್ತರಣೆ ಕುರಿತು ಇನ್ನೆರಡು ದಿನಗಳಲ್ಲಿ ಬಿಜೆಪಿ ಹೈಕಮಾಂಡ್ ಸೂಚನೆ ಕೊಡಲಿದೆ ಎಂದು ತಿಳಿದು ಬಂದಿದೆ.

ಇನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಹೇಳಿಕೊಳ್ಳುವಂತಹ ಬೆಳವಣಿಗೆಗಳಾಗಿಲ್ಲ. ಆದರೆ ಬಿಜೆಪಿಯಲ್ಲಿ ಸಿಎಂ ದೆಹಲಿ ಪ್ರವಾಸ ಸೇರಿದಂತೆ ಹಲವು ಬೆಳವಣಿಗೆಗಳಾಗಿವೆ. ಜೊತೆಗೆ ಮಾಜಿ ಮುಖ್ಯಮಂತ್ರಿ ಮೃತ ಅಭಿಮಾನಿಯೊಬ್ಬನ ಮನೆಗೆ ಭೇಟಿ ನೀಡಿ ಪರಿಹಾರ ಕೊಡುವ ಮೂಲಕ ಹೈಕಮಾಂಡ್‌ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ.

ನಾಳೆ ಸಂಪುಟ ವಿಸ್ತರಣೆ ಕುರಿತು ಮತ್ತಷ್ಟು ಬೆಳವಣಿಗೆಗಳಾಗಬಹುದು. ಜೊತೆಗೆ ಹೈಕಮಾಂಡ್ ಭೇಟಿ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಸಂಪುಟ ವಿಸ್ತರಣೆಗೆ ವಿಳಂಬ ಮಾಡುತ್ತಿರುವ ಬಗ್ಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಬಿಜೆಪಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಶೀಘ್ರದಲ್ಲಿ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಮುಂದಾಗುವ ಸಾಧ್ಯತೆಗಳಿವೆ.

   ಮಂತ್ರಿ ಸ್ಥಾನದ ಆಕಾಂಕ್ಷಿಗಳಿಗೆ ಶುರುವಾಯ್ತು ಢವಢವ | Oneindia Kannada
   English summary
   Karnataka Political News Roundup (30th July 2021): Today's News on the latest Karnataka politics-Stay informed about the recent political developments in Karnataka today. For all the latest Karnataka politics news, follow Kannada Oneindia.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X