ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್‌ 02: ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಕುರಿತು ಸಮಗ್ರ ವರದಿ!

|
Google Oneindia Kannada News

ಬೆಂಗಳೂರು, ಆಗಸ್ಟ್ 02: ರಾಜ್ಯ ರಾಜಕೀಯದಲ್ಲಿ ಇಂದು ಹಲವು ಬೆಳವಣಿಗೆಗಳಾಗಿವೆ. ರಾಜ್ಯ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಕಸರತ್ತು ದೆಹಲಿಯಲ್ಲಿ ಮುಂದುವರೆದಿದೆ. ಜೊತೆಗೆ ರಾಜ್ಯದಲ್ಲಿಯೂ ಕೂಡ ಹಲವು ರಾಜಕೀಯ ಬೆಳವಣಿಗೆಗಳಾಗಿವೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಾಣಿಪಾಕಂನ ವರಸಿದ್ಧಿ ವಿನಾಯಕ ದೇಗುಲಕ್ಕೆ ತೆರಳಿ, ಪೂಜೆ ಸಲ್ಲಿಸಿದ್ದಾರೆ.

ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟ ಸೇರಲು ಬಿಜೆಪಿ ನಾಯಕರು ಇಂದೂ ಕೂಡ ತಮ್ಮ ಪ್ರಯತ್ನ ನಡೆಸಿದ್ದಾರೆ. ಜೊತೆಗೆ ದೆಹಲಿ ಪ್ರವಾಸದಲ್ಲಿರುವ ಬಸವರಾಜ ಬೊಮ್ಮಾಯಿ ಅವರು ಕೇಂದ್ರದ ಹಲವು ನಾಯಕರನ್ನು ಇಂದು ಭೇಟಿ ಮಾಡಿದ್ದಾರೆ. ಈಗ ಸ್ವಲ್ಪ ಹೊತ್ತಿಗೆ ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ್ದಾರೆ.

ನಾಳೆ ಸಂಜೆ ಸಂಪುಟ ಸೇರುವವರ ಪಟ್ಟಿ ಬಿಡುಗಡೆ

ನಾಳೆ ಸಂಜೆ ಸಂಪುಟ ಸೇರುವವರ ಪಟ್ಟಿ ಬಿಡುಗಡೆ

ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ ಮಾಡಿದ ಬಳಿಕ ಹೇಳಿಕೆ ಕೊಟ್ಟಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು, ನಾಳೆ ಸಂಜೆಯೊಳಗೆ ಸಚಿವ ಸಂಪುಟ ಸೇರುವವರ ಪಟ್ಟಿಯನ್ನು ನಡ್ಡಾ ಅವರು ಬಿಡುಗಡೆ ಮಾಡುತ್ತಾರೆ ಎಂದಿದ್ದಾರೆ.

"ಸಂಪುಟ ರಚನೆ ಕುರಿತು ಸಪೂರ್ಣ ಚರ್ಚೆ ಮಾಡಿದ್ದೇವೆ. ಎಷ್ಟು ಜನ ಮಂತ್ರಿಗಳಾಗಬೇಕು? ಎಷ್ಟು ಜನರು ಸಂಪುಟದಲ್ಲಿರಬೇಕು ಎಂಬುದನ್ನು ಹೈಕಮಾಂಡ್ ನಮಗೆ ತಿಳಿಸಲಿದೆ. ನಾವು ಎರಡ್ಮೂರು ಪಟ್ಟಿಗಳನ್ನು ಕೊಟ್ಟಿದ್ದೇವೆ. ನಮ್ಮ ಪಕ್ಷದಲ್ಲಿ ಯಾರೂ ವಲಸಿಗರಲ್ಲ, ಎಲ್ಲರೂ ಬಿಜೆಪಿಯವರೆ. ನಾವು ಹೇಳಿದ್ದನ್ನು ಕೇಳಿಸಿಕೊಂಡಿರುವ ಪಕ್ಷದ ವರಿಷ್ಠರು ನಾಳೆ ಸಂಪುಟ ಸೇರುವವರ ಪಟ್ಟಿ ಬಿಡುಗಡೆ ಮಾಡುತ್ತಾರೆ. ಡಿಸಿಎಂ ಹುದ್ದೆ ಸೃಷ್ಟಿ ಕುರಿತೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಪ್ರಾದೇಶಿಕತೆ, ಸಮುದಾಯ ಸೇರಿದಂತೆ ಎಲ್ಲವನ್ನೂ ಪರಿಗಣಿಸಿ ಸಂಪುಟ ಸಿದ್ಧವಾಗಲಿದೆ. ನಾಳೆ ರಾತ್ರಿಯೊಳಗೆ ಸಂಪುಟ ಸೇರುವವರ ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬಿಡುಗಡೆ ಮಾಡುತ್ತಾರೆ. ಆ ಬಳಿಕ ಪ್ರಮಾಣ ವಚನದ ಕುರಿತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕೇಂದ್ರದ ನಾಯಕರೊಂದಿಗೆ ಚರ್ಚೆ ಮಾಡಿದ ಬೊಮ್ಮಾಯಿ

ಕೇಂದ್ರದ ನಾಯಕರೊಂದಿಗೆ ಚರ್ಚೆ ಮಾಡಿದ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡುವುದಕ್ಕೂ ಮೊದಲು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸಂಪುಟ ರಚನೆ ಹಿನ್ನೆಲೆಯಲ್ಲಿ ಬಿ. ಎಲ್. ಸಂತೋಷ್ ಅವರಿಂದಲೂ ಮಹತ್ವದ ಸಲಹೆ-ಸೂಚನೆಗಳನ್ನು ಸಿಎಂ ಬೊಮ್ಮಾಯಿ ಪಡೆದಿದ್ದಾರೆ ಎಂಬ ಮಾಹಿತಿಯಿದೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿದ ಬಳಿಕ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚೆ ನಡೆಸಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರು ವೀಕ್ಷಕರಾಗಿ ಬಂದು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗುವಾಗ ಉಪಸ್ಥಿತರಿದ್ದರು. ಜೊತೆಗೆ ಈ ಹಿಂದೆ ಕರ್ನಾಟಕ ಬಿಜೆಪಿ ಉಸ್ತುವಾರಿಯಾಗಿಯೂ ಕೆಲಸ ಮಾಡಿದ ಅನುಭವವೂ ಧರ್ಮೇಂದ್ರ ಪ್ರಧಾನ್ ಅವರಿಗಿದೆ. ಹೀಗಾಗಿ ಸಂಪುಟ ರಚನೆ ಹಿನ್ನೆಲೆಯಲ್ಲಿ ಅವರೊಂದಿಗೂ ಸಿಎಂ ಬೊಮ್ಮಾಯಿ ಚರ್ಚೆ ನಡೆಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ

ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ

ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಭೇಟಿ ನೀಡಿದ್ದರು. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಕದ್ರಾ ಜಲಾಶಯವನ್ನು ಅವರು ವೀಕ್ಷಣೆ ಮಾಡಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಉಂಟಾದ ಪ್ರವಾಹದ ಭೀಕರತೆಯ ಬಗ್ಗೆ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ಅವರಿಂದ ಸಿದ್ದರಾಮಯ್ಯ ಮಾಹಿತಿ ಪಡೆದುಕೊಂಡರು.


ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, "ಕದ್ರಾ ಹಾಗೂ ಮಲ್ಲಾಪುರ ನೆರೆ ಹಾವಳಿ ಪ್ರದೇಶವನ್ನು ವೀಕ್ಷಣೆ ಮಾಡಿದ್ದೇನೆ, ಮಳೆ ಬಂದಾಗ ಪ್ರವಾಹ ಉಂಟಾಗುತ್ತದೆ ಎಂದು ಗೊತ್ತಿದ್ದರೂ, ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ" ಎಂದು ಆರೋಪಿಸಿದ್ದಾರೆ. "ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರನ್ನು ಸ್ಥಳಾಂತರ ಮಾಡುವುದೇ ಶಾಶ್ವತ ಪರಿಹಾರ. ಸಂತ್ರಸ್ತರ ಪರವಾಗಿ ರಾಜ್ಯ ಸರಕಾರದ ಗಮನ ಎರಡು ಬಾರಿ ಸೆಳೆದಿದ್ದೇವೆ. 2019ರ ಬಳಿಕ ಈ ಬಾರಿಯೂ ಅದೇ ರೀತಿಯ ಪ್ರವಾಹ ಬಂದಿದೆ" ಎಂದು ತಿಳಿಸಿದರು.

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅತಿಯಾಗಿ ಹಾನಿ ಆಗಿದ್ದ ಕದ್ರಾ ಮಲ್ಲಾಪುರ ಗ್ರಾಮದ ನೆರೆ ಸಂತ್ರಸ್ತರ ಸಮಸ್ಯೆ ಆಲಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರದಿದ್ದ ನೆರೆ ಪೀಡಿತ ಸ್ಥಳಕ್ಕೆ ಸಿದ್ದರಾಮಯ್ಯ ತೆರಳಿ, ಜನರ ಸಂಕಷ್ಟ ತಿಳಿದುಕೊಂಡು, ಸರಕಾರದ ಗಮನ ಸೆಳೆಯುವ ಭರವಸೆ ನೀಡಿದರು. ಅದೇ ವೇಳೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ಅವರು,"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನತಾ ಪರಿವಾರದ ಹಿನ್ನೆಲೆಯವರಾಗಿದ್ದರೂ ಕೂಡ ಸಹವಾಸ ದೋಷದಿಂದ ಅವರು ಬದಲಾಗಿದ್ದಾರೆ. ಅವರು ಹೇಗೆ ಜನರ ಸಮಸ್ಯೆಗೆ ಸ್ಪಂದಿಸುತ್ತಾರೆ ಕಾದು ನೋಡೋಣ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ವ್ಯಕ್ತಿತ್ವವನ್ನು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ಲೇಷನೆ ಮಾಡಿದರು.

ಪ್ರವಾಹದ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತೇನೆ. ಜನರಿಗೆ ನ್ಯಾಯಯುತವಾದ ಪರಿಹಾರ ಸಿಗುವಂತೆ ಮಾಡಲು ನಾನು ಸಂಪೂರ್ಣ ಬದ್ಧನಿದ್ದೇನೆ. ಇನ್ನು ಒಂದೂವರೆ ವರ್ಷ ಕಳೆದರೆ ಮತ್ತೆ ಚುನಾವಣೆ ಬರುತ್ತದೆ, ನಮ್ಮ ಸರ್ಕಾರ ಬರಲಿದೆ, ಆಗ ಜನರಿಗೆ ಎಲ್ಲ ರೀತಿಯ ನೆರವು ನೀಡುವ ಕೆಲಸವನ್ನು ಮಾಡುತ್ತೇವೆ ಎಂಬ ಭರವಸೆ ನೀಡುತ್ತೇನೆ ಎಂದರು.

ಅನೇಕ ಕಡೆಗಳಲ್ಲಿ ಮನೆಗಳನ್ನು ಸ್ಥಳಾಂತರ ಮಾಡುವ ಅಗತ್ಯವಿದೆ, ಇದಕ್ಕೆ ಸರ್ಕಾರ ಜಾಗ ನೀಡಬೇಕು, ಮನೆ ಕಟ್ಟಿಕೊಡಬೇಕು. ಆಗ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಅಗತ್ಯವಿರುವ ಹಳ್ಳಿಗಳ ಸ್ಥಳಾಂತರಕ್ಕೆ ನಾನು ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ. ಇದಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಇನ್ನೊಂದು ವರ್ಷ ಕಳೆದ ಮೇಲೆ ನಾವೇ ಅಧಿಕಾರಕ್ಕೆ ಬರುತ್ತೇವೆ ಆಗ ಖಂಡಿತಾ ಇದನ್ನು ಮಾಡುತ್ತೇವೆ ಎಂದು ಸಿದ್ದರಾಮಯ್ಯ ವಿವರಿಸಿದರು.

ಕಾಣಿಪಾಕಂನ ವರಸಿದ್ಧಿ ವಿನಾಯಕನಿಗೆ ಮೊರೆ ಹೋದ ಡಿಕೆಶಿ

ಕಾಣಿಪಾಕಂನ ವರಸಿದ್ಧಿ ವಿನಾಯಕನಿಗೆ ಮೊರೆ ಹೋದ ಡಿಕೆಶಿ

ಇನ್ನು ಮಹತ್ವದ ಬೆಳವಣಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಾಣಿಪಾಕಂನ ಶ್ರೀ ವರಸಿದ್ಧಿ ವಿನಾಯಕ ದೇಗುಲಕ್ಕೆ ಸೋಮವಾರ ತೆರಳಿ, ಪೂಜೆ ಸಲ್ಲಿಸಿದರು. ಅದಕ್ಕೂ ಮೊದಲು ಕಾಂಗ್ರೆಸ್, ವೈಎಸ್ಸಾರ್ ಕಾಂಗ್ರೆಸ್ ಹಾಗೂ ತೆಲುಗು ದೇಶಂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗೂಡಿ ಡಿ.ಕೆ. ಶಿವಕುಮಾರ್ ಅವರನ್ನು ಆಂಧ್ರದಲ್ಲಿ ಅದ್ಧೂರಿಯಾಗಿ ಬರಮಾಡಿಕೊಂಡದ್ದು ವಿಶೇಷವಾಗಿತ್ತು.

ಆಂಧ್ರದ ಪುಟ್ಟಲಪಟ್ಟು ಶಾಸಕ ಎಂ.ಎಸ್. ಬಾಬು, ಚಿತ್ತೂರು ಶಾಸಕ ಜೆಎಂಸಿ ಶ್ರೀನಿವಾಸ್, ವೈಎಸ್ಸಾರ್ ಕಾಂಗ್ರೆಸ್ ನಾಯಕ ವಲಿವೇಲು ರಾಜರೆಡ್ಡಿ, ಪೃಥ್ವಿ, ಕಾಂಗ್ರೆಸ್ ನಾಯಕ ಸುರೇಶ್ ಕುಪ್ಪಂ , ಕುಮಾರರಾಜು, ಪ್ರದೀಪ್ ರೆಡ್ಡಿ, ದತ್ತು, ಸರಪಂಚ ಶಾಂತಿಸಾಗರ ರೆಡ್ಡಿ, ಬುಜ್ಜಿರೆಡ್ಡಿ, ಕಾಣಿಪಾಕಂ ವಿನಾಯಕ ದೇವಸ್ಥಾನ ಮಂಡಳಿಯ ಮಾಜಿ ಅಧ್ಯಕ್ಷರಾದ ಮೋಹನ್ ರೆಡ್ಡಿ, ಜಗನ್ನಾಥ ರೆಡ್ಡಿ ಅವರೆಲ್ಲರೂ ಡಿಕೆಶಿ ಅವರನ್ನು ಸ್ವಾಗತಿಸಿದ್ದರು. ತಲೆ ಮೇಲೆ ಹಣ್ಣು-ಕಾಯಿ ಹೊತ್ತುಕೊಂಡು ಡಿಕೆ ಶಿವಕುಮಾರ್ ಅವರು ದೇವಸ್ಥಾನಕ್ಕೆ ಹೀಗಿದ್ದು ವಿಶೇಷವಾಗಿತ್ತು.

ಡಿಸಿಎಂ ಹುದ್ದೆ ಆಕಾಂಕ್ಷಿಗಳಿಗೆ ಶಾಕ್ ಕೊಟ್ಟ ಬಿಜೆಪಿ ಹೈಕಮಾಂಡ್?

ಡಿಸಿಎಂ ಹುದ್ದೆ ಆಕಾಂಕ್ಷಿಗಳಿಗೆ ಶಾಕ್ ಕೊಟ್ಟ ಬಿಜೆಪಿ ಹೈಕಮಾಂಡ್?

ರಾಜ್ಯ ಬಿಜೆಪಿ ನಾಯಕರಿಗೆ ಈ ಮಧ್ಯೆ ಹೈಕಮಾಂಡ್ ಮತ್ತೊಂದು ಶಾಕ್ ಕೊಟ್ಟಿದೆ. ಕಳೆದ ಬಾರಿ ಯಡಿಯೂರಪ್ಪ ಅವರ ಸಂಪುಟದಲ್ಲಿ ಮೂರು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಲಾಗಿತ್ತು. ಹೀಗಾಗಿ ಈ ಬಾರಿ ಎಲ್ಲ ಸಮುದಾಯಗಳಿಗೆ ಪ್ರಾತಿನಿಧ್ಯ ಕೊಡಲು ಐವರು ಡಿಸಿಎಂಗಳಾಗಲಿದ್ದಾರೆ ಎಂಬ ಮಾಹಿತಿಯೂ ಇತ್ತು. ಜೊತೆಗೆ ಬಸವರಾಜ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸುವ ವೇಳೆಯಲ್ಲಿಯೇ ಮೂವರು ಸಚಿವರಾಗುತ್ತಾರೆ. ಅವರನ್ನು ಡಿಸಿಎಂ ಮಾಡಲು ತೀರ್ಮಾನ ಮಾಡಲಾಗಿದೆ ಎಂಬ ಮಾಹಿತಿ ಬಿಜೆಪಿ ವಲಯದಿಂದಲೇ ಬಂದಿತ್ತು.

ಆದರೆ ಇದೀಗ ಯಾವುದೇ ಡಿಸಿಎಂ ಹುದ್ದೆ ಬೇಡ ಎಂಬ ತೀರ್ಮಾನಕ್ಕೆ ಬಿಜೆಪಿ ವರಿಷ್ಠರು ಬಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನ ಸಿಗದಿದ್ದರೂ ಉಪ ಮುಖ್ಯಮಂತ್ರಿಯಾಗಬಹುದು ಎಂದುಕೊಂಡಿದ್ದ ನಾಯಕರಿಗೆ ಬಿಜೆಪಿ ಹೈಕಮಾಂಡ್ ಶಾಕ್ ಕೊಟ್ಟಿದೆ.

ಮಾಜಿ ಸಿಎಂ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದವರ ಕಾರ್ಯಕ್ಷಮತೆ ನೋಡಿಕೊಂಡು ಈ ಸಲ ಸಂಪುಟದಲ್ಲಿ ಅವಕಾಶ ಮಾಡಿಕೊಡಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ. ಹೀಗಾಗಿ ಯಡಿಯೂರಪ್ಪ ಸಂಪುಟದಲ್ಲಿನ ಹಿರಿಯ ಶಾಸಕರಿಗೆ ಈಗ ಅವಕಾಶ ಸಿಗುತ್ತದೆಯಾ? ಎಂಬ ಆತಂಕ ಶುರುವಾಗಿದೆ. ಮತ್ತೊಂದೆಡೆ ಯುವ ಶಾಸಕರಿಗೆ ಹೆಚ್ಚಿನ ಅವಕಾಶ ಕೊಡಲು ಹೈಕಮಾಂಡ್ ನಿರ್ಧಾರ ಮಾಡಿದೆ.

Recommended Video

ಸಿಎಂ ಸ್ಥಾನದ ಮೇಲೆ ಆಸೆ ಇಟ್ಟುಕೊಂಡಿರುವ ಡಿಕೆ | Oneindia Kannada
ಸ್ವಾಮೀಜಿಗಳ ಭೇಟಿ ಮುಂದುವರೆಸಿದ ಮಾಜಿ ಸಿಎಂ ಯಡಿಯೂರಪ್ಪ

ಸ್ವಾಮೀಜಿಗಳ ಭೇಟಿ ಮುಂದುವರೆಸಿದ ಮಾಜಿ ಸಿಎಂ ಯಡಿಯೂರಪ್ಪ

ಇನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಯಾವುದೇ ಅಧಿಕೃತ ಕಾರ್ಯಕ್ರಮಗಳಲ್ಲಿ ಇಂದು ಭಾಗವಹಿಸಿಲ್ಲ. ಆದರೆ ತಮ್ಮ ನಿವಚಾಸಕ್ಕೆ ಆಗಮಿಸಿದ್ದ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಜಗದ್ಗುರುಗಳಿಂದ ಆಶೀರ್ವಾದ ಪಡೆದರು. ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಪುತ್ರ ಬಿ.ವೈ. ವಿಜಯೇಂದ್ರ ಅವರು ಈ ಸಂದರ್ಭದಲ್ಲಿದ್ದರು. ಜೊತೆಗೆ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಪ್ರವಾಸದ ಕುರಿತು ಮಾಜಿ ಸಿಎಂ ಯಡಿಯೂರಪ್ಪ ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಇದೇ ಸಂದರ್ಭದಲ್ಲಿ ಬಂದಿದೆ.

ಇನ್ನನು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ, ನೌಕರರು ಮತ್ತು ಗ್ರಾಮ ಪಂಚಾಯ್ತಿ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಘೋಷಣೆ ಮಾಡಿ, ರಾಜ್ಯ ಸರ್ಕಾರ ಆದೇಶಿಸಿದೆ. ಆ ಮೂಲಕ ಕೊರೊನಾ ಮೂರನೇ ಅಲೆ ಎದುರಿಸಲು ಒಂದೊಂದೆ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ.

ಇನ್ನು ಜೆಡಿಎಸ್ ಪಕ್ಷದಲ್ಲಿ ಇವತ್ತು ಮಹತ್ವದ ಬೆಳವಣಿಗೆಗಳಾಗಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಯಾವುದೇ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಲ್ಲ. ಇವು ಇಂದಿನ ಕರ್ನಾಟಕ ರಾಜಕೀಯದ ಮಹತ್ವದ ಬೆಳವಣಿಗೆಗಳು.

English summary
Karnataka Political News Roundup (2nd August 2021): Today's News on the latest Karnataka politics-Stay informed about the recent political developments in Karnataka today. For all the latest Karnataka politics news, follow Kannada Oneindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X