ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಅಂತಿಮ ಮೊಳೆ ಹೊಡೆಯುವ ಬಿಜೆಪಿ ಮಾಸ್ಟರ್ ಪ್ಲ್ಯಾನ್?
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದಾಗಲೇ, ಜೆಡಿಎಸ್ - ಕಾಂಗ್ರೆಸ್ ಮುಖಂಡರ ನಡುವೆ ಇದ್ದ ಸಂಬಂಧ ಅಷ್ಟಕಷ್ಟೇ.. ಸರಕಾರ ಪತನಗೊಂಡಾಗ ಒಳೊಗೊಳಗೆ ಖುಷಿ ಪಟ್ಟವರಿಗೂ ಬರವಿರಲಿಲ್ಲ.
ಈಗ, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಅಂತರವನ್ನು ಮತ್ತಷ್ಟು ದೂರಮಾಡುವ ವಿದ್ಯಮಾನಗಳು ರಾಜ್ಯ ರಾಜಕೀಯದಲ್ಲಿ ನಡೆಯುತ್ತಿದೆ. ಅದುವೇ, ಟೆಲಿಫೋನ್ ಕದ್ದಾಲಿಕೆ.
ಕುಮಾರಸ್ವಾಮಿ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಈ ಪ್ರಕರಣದಲ್ಲಿ, ಕಾಂಗ್ರೆಸ್ ಮುಖಂಡರ ಫೋನೂ ಕದ್ದಾಲಿಕೆಯಾಗಿದೆ ಎನ್ನುವ ಸುದ್ದಿ, ಎರಡು ಪಕ್ಷಗಳ ನಡುವೆ ಮನಸ್ತಾಪಕ್ಕೆ ಕಾರಣವಾಗಿದೆ.
ಫೋನ್ ಟ್ಯಾಪಿಂಗ್ ಪ್ರಕರಣ ಬಿಜೆಪಿಗೆ ಸಿಕ್ಕ ಬ್ರಹ್ಮಾಸ್ತ್ರ!
ಜೊತೆಗೆ, ಈ ಪ್ರಕರಣವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸಿಬಿಐಗೆ ವರ್ಗಾಯಿಸಲಾಗುವುದು ಎಂದು ನೀಡಿರುವ ಹೇಳಿಕೆ, ಮುಂದಿನ ದಿನಗಳಲ್ಲಿ ಎರಡು ಪಕ್ಷಗಳ ನಡುವಿನ ಮೈತ್ರಿಗೆ ಇತಿಶ್ರೀ ಹಾಡುವ ಸಾಧ್ಯತೆಯಿಲ್ಲದಿಲ್ಲ.

ಯಡಿಯೂರಪ್ಪ ಚಾಣಾಕ್ಷ ಹೆಜ್ಜೆ
ಫೋನ್ ಟ್ಯಾಪ್ಪಿಂಗ್ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವುದಿಂದಾಗುವ ಆಗುಹೋಗುಗಳನ್ನು ಕೂಲಂಕುಶವಾಗಿ ಪರಾಂಬರಿಸಿ ಯಡಿಯೂರಪ್ಪ ಚಾಣಾಕ್ಷ ಹೆಜ್ಜೆಯನ್ನು ಇಟ್ಟಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಜೊತೆಗೆ, ಬಹುತೇಕ ಐಪಿಎಸ್ ಅಧಿಕಾರಿಗಳು ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿರುವುದು, ಯಡಿಯೂರಪ್ಪನವರಿಗೆ ಇನ್ನೂ ಬಲಸಿಕ್ಕಂತಾಗಿದೆ.

ಕದ್ದಾಲಿಕೆ ಪಟ್ಟಿಯಲ್ಲಿ ಸಿದ್ದರಾಮಯ್ಯ ಕೂಡಾ
ಪ್ರಮುಖವಾಗಿ, ಟ್ಯಾಪಿಂಗ್ ಆಗಿರುವ ಪಟ್ಟಿಯಲ್ಲಿ ಸಿಎಲ್ಪಿ ನಾಯಕ ಸಿದ್ದರಾಮಯ್ಯನವರ ಹೆಸರು ಇರುವುದು, ಅವರ ಆಪ್ತರ ಗುಂಪಿನಲ್ಲಿ ಸಿಟ್ಟಿಗೆ ಕಾರಣವಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ, ಗುಪ್ತಚರ ಇಲಾಖೆ ಅವರ ಸುಪರ್ದಿಯಲ್ಲೇ ಇದ್ದಿದ್ದರಿಂದ, ಕಾಂಗ್ರೆಸ್ ಮುಖಂಡರು ನೇರವಾಗಿ ಬೇಸರ ಪಟ್ಟುಕೊಳ್ಳವಂತಾಗಿದೆ.
ಫೋನ್ ಕದ್ದಾಲಿಕೆ ಸಿಬಿಐಗೆ : ಇದು ದ್ವೇಷದ ರಾಜಕೀಯ ಹೇಗೆ?

ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಮೈತ್ರಿಗೆ ಭಾರೀ ಏಟು
ಇದು ಭವಿಷ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಮೈತ್ರಿಗೆ ಭಾರೀ ಏಟು ಬೀಳುವುದು ನಿಶ್ಚಿತ. ಒಂದು ವೇಳೆ, ಇಬ್ಬರ ನಡುವೆ ಮೈತ್ರಿ ಮುರಿದು ಬಿದ್ದರೆ, ಅದು ಭವಿಷ್ಯದಲ್ಲಿ ಬಿಜೆಪಿಗೆ ವರದಾನವಾಗಲಿದೆ, ಜೊತೆಗೆ, ಯಾವುದೇ ತೊಂದರೆಯಿಲ್ಲದೇ ಸರಕಾರದ ಉಳಿದ ಅವಧಿಯನ್ನು ನಿರಾಂತಕವಾಗಿ ಮುಗಿಸಬಹುದಾಗಿದೆ ಎನ್ನುವುದು ಬಿಜೆಪಿಯ ಲೆಕ್ಕಾಚಾರ.

ಸಿಬಿಐಗೆ ವರ್ಗಾಯಿಸುವ ನಿರ್ಧಾರ ಸ್ವಾಗತಿಸಿದ ಸಿದ್ದರಾಮಯ್ಯ
ಕದ್ದಾಲಿಕೆಯಲ್ಲಿ ತಮ್ಮ ಹೆಸರೂ ಇರುವುದರಿಂದ ಸಿದ್ದರಾಮಯ್ಯ, ಇದರ ಸೂಕ್ತ ತನಿಖೆ ನಡೆಯಬೇಕು ಎಂದು ಒತ್ತಾಯಿಸುತ್ತಲೇ ಬರುತ್ತಿದ್ದರು. ಈಗ ಸಿಬಿಐಗೆ ವರ್ಗಾಯಿಸುವ ನಿರ್ಧಾರವನ್ನು ಅವರು ಸ್ವಾಗತಿಸಿದ್ದಾರೆ. ಆದರೆ, ಇದನ್ನು ಬಿಜೆಪಿಯವರು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಫೋನ್ ಕದ್ದಾಲಿಕೆಯ ವಿಚಾರವನ್ನು ಧಾರ್ಮಿಕ ತಾಣಗಳಲ್ಲೂ ಎಚ್ಡಿಕೆ ಪ್ರಸ್ತಾಪ
ಬೇಕಾದರೆ ಅಮೆರಿಕಾದ ಅಧ್ಯಕ್ಷ ಟ್ರಂಪ್ ಕಡೆಯಿಂದ ತನಿಖೆಯನ್ನು ನಡೆಸಲಿ, ಐ ಡೋಂಟ್ ಕೇರ್ ಎಂದು ಕುಮಾರಸ್ವಾಮಿ ಹೇಳಿದ್ದರೂ, ಫೋನ್ ಕದ್ದಾಲಿಕೆಯ ವಿಚಾರವನ್ನು ಕರಾವಳಿಯ ಧಾರ್ಮಿಕ ತಾಣಗಳಲ್ಲೂ ಪ್ರಸ್ತಾವಿಸಿದ್ದಾರೆ. ಒಟ್ಟಿನಲ್ಲಿ, ಈ ಪ್ರಕರಣ, ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಅಂತಿಮ ಮೊಳೆ ಹೊಡೆಯುವ ಬಿಜೆಪಿ ಮಾಸ್ಟರ್ ಪ್ಲ್ಯಾನ್ ಎಂದು ಸದ್ಯಕ್ಕೆ ಹೇಳಲಾಗುತ್ತಿದೆ.