ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಲೋಕ' ಮೈತ್ರಿಗೆ ಸ್ಥಳೀಯ ಸಂಸ್ಥೆ ಚುನಾವಣೆ ಅಡ್ಡಗಾಲಾಗುತ್ತಾ?

By ಬಿ.ಎಂ.ಲವಕುಮಾರ್
|
Google Oneindia Kannada News

ಮೈಸೂರು, ಆಗಸ್ಟ್ 04: ಮುಂದಿನ ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸಲು ಹೊರಟಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಇದೀಗ ಘೋಷಣೆಯಾಗಿರುವ ಸ್ಥಳೀಯ ಸಂಸ್ಥೆ ಚುನಾವಣೆ ಅಡ್ಡಗಾಲಾಗುವ ಎಲ್ಲ ಲಕ್ಷಣಗಳು ಕಂಡು ಬರತೊಡಗಿದೆ.

ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಸದ್ಯ ನಾವು ಒಗ್ಗಟ್ಟಾಗಿದ್ದೇವೆ ಎಂಬುದನ್ನು ತೋರಿಸುವ ಸಲುವಾಗಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆಯುತ್ತಿದೆ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆಯಾದರೂ ಇದನ್ನು ಸ್ಥಳೀಯ, ತಳಮಟ್ಟದ ಯಾವ ಮುಖಂಡರೂ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂಬುದು ಜಗಜ್ಜಾಹೀರಾಗಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ ಮೈತ್ರಿ, ಕಾಂಗ್ರೆಸ್ ಹೇಳಿದ್ದೇನು?ಸ್ಥಳೀಯ ಸಂಸ್ಥೆಗಳ ಚುನಾವಣೆ ಮೈತ್ರಿ, ಕಾಂಗ್ರೆಸ್ ಹೇಳಿದ್ದೇನು?

ಹಾಗೆನೋಡಿದರೆ ವಿಧಾನಸಭಾ ಚುನಾವಣೆಯಲ್ಲಿ 104 ಸ್ಥಾನಪಡೆದು ದೊಡ್ಡಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ಅಧಿಕಾರ ಹಿಡಿಯಲು ಬಿಡಬಾರದು ಎಂಬ ಒಂದೇ ಕಾರಣಕ್ಕೆ ಕಾಂಗ್ರೆಸ್ ಬೇಷರತ್ ಬೆಂಬಲ ನೀಡುವ ಮೂಲಕ ಅತಿ ಕಡಿಮೆ ಸ್ಥಾನ ಪಡೆದಿದ್ದ ಜೆಡಿಎಸ್ ನ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದರೊಂದಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ರಾಜ್ಯದಲ್ಲಿ ತರಲಾಗಿದೆ.

ಕೋಮುವಾದಿ, ಜಾತಿವಾದಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಉದ್ದೇಶದಿಂದ ಮೈತ್ರಿ ಮಾಡಿಕೊಂಡಿರುವುದಾಗಿ ಎರಡು ಪಕ್ಷಗಳ ನಾಯಕರು ಭಾಷಣ ಬಿಗಿಯುತ್ತಿದ್ದಾರೆ. ಅಧಿಕಾರ ಸ್ಥಾಪಿಸಿದಾಗಿನಿಂದಲೂ ಇದೆರಡು ಪಕ್ಷಗಳ ನಾಯಕರ ಬಹಿರಂಗ ಹೇಳಿಕೆಗಳು ಮತ್ತು ಅವರ ಕಾರ್ಯಚಟುವಟಿಕೆಗಳು ಎಲ್ಲವೂ ಸರಿ ಇಲ್ಲ ಎಂಬುದನ್ನು ಬಹಿರಂಗಪಡಿಸುತ್ತಿದೆ.

ಮೈತ್ರಿ ಸರ್ಕಾರಕ್ಕೆ ತಪ್ಪದ ತಲೆನೋವು

ಮೈತ್ರಿ ಸರ್ಕಾರಕ್ಕೆ ತಪ್ಪದ ತಲೆನೋವು

ಮಾಧ್ಯಮಗಳು ಕೂಡ ಸರ್ಕಾರದ ಕಾರ್ಯ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು ಎಲ್ಲವನ್ನೂ ಬಹಿರಂಗಗೊಳಿಸುತ್ತಿರುವುದು ಈಗ ಮೈತ್ರಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ರೈತರ ಸಾಲ ಮನ್ನಾ ಸಂಬಂಧಿಸಿದ ವಿಚಾರ ತಣ್ಣಗಾಗಿ ಇನ್ನೇನು ನೆಮ್ಮದಿಯುಸಿರು ಬಿಡಬಹುದೇನೋ ಎಂದು ಆಲೋಚಿಸುತ್ತಿರುವಾಗಲೇ ಈಗ ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕತೆಯ ಕೂಗು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ.

ಜೆಡಿಎಸ್ ಮರ್ಜಿಯಲ್ಲಿ ಕಾಂಗ್ರೆಸ್

ಜೆಡಿಎಸ್ ಮರ್ಜಿಯಲ್ಲಿ ಕಾಂಗ್ರೆಸ್

ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದಕ್ಕೆ ಬೆಂಬಲ ನೀಡಿ ಇದೀಗ ಅವರ ಮರ್ಜಿಯಲ್ಲಿ ಎಲ್ಲದಕ್ಕೂ ತಲೆಯಾಡಿಸಿಕೊಂಡು ನಿಲ್ಲಬೇಕಾದ ಅನಿವಾರ್ಯತೆ ಬಂದಿರುವುದು ಬಹುಶಃ ದುರಂತವೇ. ಇಲ್ಲಿ ಏನೇ ಮಾಡಿದರೂ ಅದರ ಲಾಭ-ನಷ್ಟ, ಖ್ಯಾತಿ- ಅಪಖ್ಯಾತಿ ಎಲ್ಲವೂ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಅವರ ಪಕ್ಷಕ್ಕೆ ಸಲ್ಲುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಕೆಲವು ನಾಯಕರಿಗೆ ಅಸಮಾಧಾನ ತಂದಿದ್ದರೂ ಹೈಕಮಾಂಡ್ ಕುಮಾರಸ್ವಾಮಿ ಅವರ ಬೆನ್ನಿಗೆ ನಿಂತಿರುವಾಗ ನಮ್ಮದೇನು ನಡೆಯಲ್ಲ ಎಂಬುವುದು ಅವರಿಗೆ ಗೊತ್ತಾಗಿ ತೆರೆ ಮರೆಗೆ ಸರಿದಿದ್ದಾರೆ.

ಲೋಕಸಭೆ ಚುನಾವಣೆಯೂ ಹತ್ತಿರವಾಗುತ್ತಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿರುವುದರಿಂದ ಈ ವೇಳೆ ಏನೇ ಎಡವಟ್ಟು ಮಾಡಿದರೂ ಅದರ ಪರಿಣಾಮ ಚುನಾವಣೆ ಮೇಲೆ ಬೀರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೀಗಿದ್ದೂ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆಯಾಗಿಯೇ ಹೋಗುವುದಾಗಿ ಹೇಳಲಾಗುತ್ತಿದೆ. ಒಂದು ವೇಳೆ ಇದು ಸಾಧ್ಯವಾದರೆ ಪರಿಣಾಮ ಎರಡು ಪಕ್ಷಗಳ ಮೇಲಾಗಲಿದ್ದು, ಬಿಜೆಪಿಗೆ ಹೆಚ್ಚಿನ ಲಾಭವಾಗುತ್ತದೆ ಎಂಬುದು ಕೆಲವರ ಲೆಕ್ಕಾಚಾರವಾಗಿದೆ.

ಒಮ್ಮತ ಮೂಡುತ್ತಾ ಎನ್ನುವುದೇ ಸಂಶಯ!

ಒಮ್ಮತ ಮೂಡುತ್ತಾ ಎನ್ನುವುದೇ ಸಂಶಯ!

ಸಾಮಾನ್ಯವಾಗಿ ಚುನಾವಣಾ ಸಂದರ್ಭ ರಾಜಕೀಯ ಪಕ್ಷದೊಳಗೆ ಮುಖಂಡರ ನಡುವೆ ಭಿನ್ನಾಭಿಪ್ರಾಯಗಳು ಬರುವುದೇ ಟಿಕೆಟ್ ವಿಚಾರಕ್ಕೆ ಹೀಗಿರುವಾಗ ಒಮ್ಮತದದಿಂದ ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಹೇಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಇಲ್ಲಿ ಸ್ವಲ್ಪ ಎಡವಟ್ಟಾದರೂ ಬಂಡಾಯವೇಳುವ ಸಾಧ್ಯತೆ ಹೆಚ್ಚಿರುವುದರಿಂದ ಹಾಗೊಂದು ವೇಳೆ ಆದರೆ ಅದರ ಲಾಭ ಬಿಜೆಪಿಗೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕರ್ನಾಟಕದಿಂದ ಶುರುವಾಗಿದೆ ಮಹಾಬಂಧನ್

ಕರ್ನಾಟಕದಿಂದ ಶುರುವಾಗಿದೆ ಮಹಾಬಂಧನ್

ಲೋಕ ಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳು ಒಂದಾಗಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎನ್ನುವ ಅಜೆಂಡಾವನ್ನು ಈಗಾಗಲೇ ಸಿದ್ಧಗೊಳಿಸಿವೆ.. ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳನ್ನು ಒಂದು ಗೂಡಿಸುವ ಯತ್ನಗಳು ನಡೆಯುತ್ತಿದ್ದು, ಇತರೆ ಪಕ್ಷಗಳು ರಾಹುಲ್‍ಗಾಂಧಿ ಅವರ ಸಾರಥ್ಯವನ್ನು ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳುತ್ತಾರೆ ಎಂಬುದು ಕೂಡ ಯೋಚಿಸಬೇಕಾಗಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಕರ್ನಾಟಕದಿಂದಲೇ ಬಿಜೆಪಿಯೇತರ ರಾಜಕೀಯ ಪಕ್ಷಗಳ ಸಂಗಮ ಆರಂಭವಾಗಿದ್ದು ಅದಕ್ಕೆ ಅಡಿಗಲ್ಲು ಹಾಕಿರುವುದು ಸಿಎಂ ಕುಮಾರಸ್ವಾಮಿ ಪ್ರಮಾಣವಚನ ಸಮಾರಾಂಭ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.

ಮೈತ್ರಿಗೆ ಹಸಿರು ನಿಶಾನೆ ತೋರುತ್ತಾ ಕರ್ನಾಟಕ?

ಮೈತ್ರಿಗೆ ಹಸಿರು ನಿಶಾನೆ ತೋರುತ್ತಾ ಕರ್ನಾಟಕ?

ಕರ್ನಾಟಕದಲ್ಲಿ ಮುಂದಿನ ಲೋಕಸಭಾ ಚುನಾವಣೆ ಜೆಡಿಎಸ್ ಮತ್ತು ಕಾಂಗ್ರೆಸ್ ಒಟ್ಟಾಗಿ ಹೋಗಿ ಅದನ್ನು ಜಯಿಸಿದ್ದೇ ಆದರೆ ಅದಕ್ಕಿಂತ ದೊಡ್ಡ ರಾಜಕೀಯ ಬದಲಾವಣೆ ಮತ್ತೊಂದಿರಲಾರದು. ಆದರೆ ಅದಕ್ಕೂ ಮುನ್ನ ಬರುತ್ತಿರುವ ಸ್ಥಳೀಯ ಸಂಸ್ಥೆ ಚುನಾವಣೆ ಅವರ ಮುಂದಿನ ಮೈತ್ರಿಗೆ ದಿಕ್ಸೂಚಿಯಾಗಲಿದೆ.

ಎರಡು ಪಕ್ಷಗಳಲ್ಲಿಯೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿ ನಿಂತಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಒಂದಲ್ಲ ಒಂದು ರೀತಿಯ ಚಟುವಟಿಕೆಗಳನ್ನು ಮಾಡುತ್ತಾ ಜನರಲ್ಲಿ ವಿಶ್ವಾಸ ಮೂಡಿಸಿದ್ದಾರೆ. ಹೀಗಿರುವಾಗ ತಮ್ಮ ಕ್ಷೇತ್ರವನ್ನು ಮತ್ತೊಂದು ಪಕ್ಷದ ಅಭ್ಯರ್ಥಿಗೆ ಬಿಟ್ಟು ಕೊಡುವುದು ಮಾತ್ರವಲ್ಲದೆ, ಅವರಿಗೆ ಸಹಕಾರ ನೀಡಲು ಮುಂದೆ ಬರುತ್ತಾರಾ ಎಂಬುದು ಈಗ ಎದ್ದಿರುವ ಪ್ರಶ್ನೆಯಾಗಿದೆ.

ಮೈತ್ರಿಯಾದರೆ ನಷ್ಟ ಮಾತ್ರ ಕಾಂಗ್ರೆಸ್ ಗೆ!

ಮೈತ್ರಿಯಾದರೆ ನಷ್ಟ ಮಾತ್ರ ಕಾಂಗ್ರೆಸ್ ಗೆ!

ಒಂದು ವೇಳೆ ರಾಜ್ಯ ನಾಯಕರು ಮಾಡಿಕೊಂಡ ಒಪ್ಪಂದದಂತೆ ತಮ್ಮ ಕ್ಷೇತ್ರವನ್ನು ಬಿಟ್ಟು ಕೊಡಬೇಕಾದ ಪರಿಸ್ಥಿತಿ ಬಂದರೆ ಅವರು ಬಂಡಾಯವಾಗಿ ಸ್ಪರ್ಧೆ ಮಾಡುವ ಸಾಧ್ಯತೆಯೂ ಹೆಚ್ಚಾಗಿದೆ. ಇಲ್ಲಿ ಹೆಚ್ಚಿನ ತೊಂದರೆ ಅನುಭವಿಸುವುದು ಕಾಂಗ್ರೆಸ್ ಎನ್ನುವುದನ್ನು ತಳ್ಳಿಹಾಕಲಾಗುವುದಿಲ್ಲ. ಇದೆಲ್ಲವನ್ನು ಮನಗಂಡ ಕೆಲವು ಕಾಂಗ್ರೆಸ್ ನಾಯಕರು ಜೆಡಿಎಸ್ ನೊಂದಿಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಬೇಡ ಎಂದು ಹೇಳುತ್ತಿದ್ದಾರೆ. ಆದರೆ ಹೈಕಮಾಂಡ್ ಯಾವ ತೀರ್ಮಾನ ಮಾಡುತ್ತದೆಯೋ ಅದರ ಮೇಲೆ ಮುಂದಿನ ಬೆಳವಣಿಗೆಯಾಗಲಿದೆ.

English summary
Will Congress and JDS Alliance in Local body elections in Karnataka affect on Lok Sabha Elections 2019? Local body election scheduled on August 29, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X