ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಐತಿಹಾಸಿಕ ರೀತಿಯಾಗಿ ವೈದ್ಯರ ನೇಮಕ: ಸಚಿವ ಸುಧಾಕರ್

|
Google Oneindia Kannada News

ಬೆಂಗಳೂರು, ಜೂನ್ 2: ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶ್ವದರ್ಜೆಯ ಆರೋಗ್ಯ ಸೇವೆ ದೊರೆಯುವ ಮಟ್ಟಿಗೆ ಕೆಲಸ ಮಾಡಿ, ಸರ್ಕಾರಿ ಆಸ್ಪತ್ರೆಗಳ ಬಗೆಗಿನ ಜನರ ಮನೋಧೋರಣೆ ಬದಲಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೊಸ ವೈದ್ಯರಿಗೆ ಕರೆ ನೀಡಿದರು.

ಆರೋಗ್ಯ ಇಲಾಖೆಯಿಂದ 715 ಹಿರಿಯ ತಜ್ಞರು, 1,048 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಸೇರಿದಂತೆ ಒಟ್ಟು 1,763 ವೈದ್ಯರ ನೇಮಕ ಪೂರ್ಣಗೊಂಡಿದ್ದು, ನೂತನ ವೈದ್ಯರನ್ನು ಉದ್ದೇಶಿಸಿ, ಆನ್‌ಲೈನ್ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.

ವಿಶ್ವದರ್ಜೆಯ ಆಸ್ಪತ್ರೆಯಾಗಿ ಪರಿವರ್ತಿಸಬೇಕು

ವಿಶ್ವದರ್ಜೆಯ ಆಸ್ಪತ್ರೆಯಾಗಿ ಪರಿವರ್ತಿಸಬೇಕು

ಕೋವಿಡ್ ಆರ್ಥಿಕ ಸಂಕಷ್ಟದ ನಡುವೆ ಐತಿಹಾಸಿಕ ರೀತಿಯಲ್ಲಿ ರಾಜ್ಯ ಸರ್ಕಾರವು ಕೇವಲ ಐದಾರು ತಿಂಗಳಲ್ಲಿ ವೈದ್ಯರ ನೇರ ನೇಮಕ ಮಾಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಗುಣಮಟ್ಟದ ಸೇವೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವುದಿಲ್ಲ ಎಂಬ ಭಾವನೆ ಜನರಲ್ಲಿದೆ. ಆದರೆ ವಾಸ್ತವವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಬಹಳಷ್ಟು ಮೂಲಸೌಕರ್ಯವಿದೆ. ಹೊಸ ವೈದ್ಯರು ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಲ್ಲಿ ಕೆಲಸ ಮಾಡಿ, ಆ ಆಸ್ಪತ್ರೆಯನ್ನು ವಿಶ್ವದರ್ಜೆಯ ಆಸ್ಪತ್ರೆಯಾಗಿ ಪರಿವರ್ತಿಸಬೇಕು. ಕಾರ್ಪೋರೇಟ್ ವಲಯದ ಮಾದರಿಯಲ್ಲಿ ಕಾರ್ಯನಿರ್ವಹಿಸಿ, ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಹೆಚ್ಚಿಸುವ ಸಂಕಲ್ಪ ತೊಡಬೇಕು ಎಂದರು.

1 ಸಾವಿರ ಜನಸಂಖ್ಯೆಗೆ ಒಬ್ಬ ವೈದ್ಯ

1 ಸಾವಿರ ಜನಸಂಖ್ಯೆಗೆ ಒಬ್ಬ ವೈದ್ಯ

ಸರ್ಕಾರಿ ಆಸ್ಪತ್ರೆಗೆ ಬಡವರು, ಕೆಳ ಮಧ್ಯಮ ವರ್ಗದ ಜನರು ಬರುತ್ತಾರೆ. ಇಂತಹವರು ಆರೋಗ್ಯಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬಾರದೆಂದು ಸರ್ಕಾರ ಉಚಿತ ಸೇವೆ ನೀಡುತ್ತಿದೆ. ಈ ಸೇವೆಯನ್ನು ಜನರಿಗೆ ತಲುಪಿಸುವ ಸೇತುವೆಯಾಗಿ ವೈದ್ಯರು ಕಾರ್ಯನಿರ್ವಹಿಸಬೇಕು ಎಂದು ಸಚಿವ ಸುಧಾಕರ್ ಹೇಳಿದರು.

1 ಸಾವಿರ ಜನಸಂಖ್ಯೆಗೆ ಒಬ್ಬ ವೈದ್ಯ ಇರಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ದೇಶದಲ್ಲಿ 1,511 ಮಂದಿಗೆ ಒಬ್ಬ ಅಲೋಪತಿ ವೈದ್ಯ ಇದ್ದಾರೆ ಎಂದು 15ನೇ ವೇತನ ಆಯೋಗ ತಿಳಿಸಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ವೈದ್ಯರ ನೇಮಕ ಮಾಡಿರುವುದು ಸಕಾಲಿಕವಾಗಿದೆ. ಕೋವಿಡ್ ಪರಿಸ್ಥಿತಿಯಿಂದಾಗಿ, ಈಗ ವೈದ್ಯರು ಕೇವಲ ವೈದ್ಯರಾಗಿ ಉಳಿಯದೆ ಯೋಧರಾಗಿ ಬದಲಾಗಿದ್ದಾರೆ. ವೈದ್ಯರು ಸಮಾಜಶಾಸ್ತ್ರಜ್ಞ, ಆಡಳಿತಾಧಿಕಾರಿ, ನೀತಿ ನಿರೂಪಕರು, ಮಾನಸಿಕ ತಜ್ಞರಾಗಿ ಅನೇಕ ಪಾತ್ರಗಳನ್ನು ವಹಿಸುತ್ತಿದ್ದಾರೆ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ

ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ

ರಾಜ್ಯದಲ್ಲಿ 2,508 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 204 ಸಮುದಾಯ ಆರೋಗ್ಯ ಕೇಂದ್ರಗಳಿವೆ. ಹಳ್ಳಿಗಳಲ್ಲಿ ಕಡ್ಡಾಯ ಸೇವೆ ಸಲ್ಲಿಸುವ ಕಾನೂನು ಹೇರಿಕೆಗೆ ಅವಕಾಶ ನೀಡದೆ ವೈದ್ಯರು ಈ ಭಾಗಗಳಲ್ಲಿ ಕೆಲಸ ಮಾಡಿದರೆ, ಹಳ್ಳಿ ಜನರು ಆರೋಗ್ಯ ಸೇವೆಗಾಗಿ ದೂರದ ಪ್ರದೇಶಕ್ಕೆ ಪ್ರಯಾಣಿಸುವ ಅಗತ್ಯವೇ ಇರುವುದಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದರ ಜೊತೆಗೆ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ರೂಪಿಸಲಾಗುತ್ತಿದೆ. ಎಚ್‌ಡಬ್ಲ್ಯೂಸಿ ನಿರ್ಮಾಣದಲ್ಲಿ ಕೇಂದ್ರ ಸರ್ಕಾರ ನೀಡಿದ ಗುರಿಗಿಂತ ಶೇ.125 ರಷ್ಟು ಹೆಚ್ಚು ಸಾಧನೆಯಾಗಿದೆ. ಆದರೆ ವೈದ್ಯರು ಹಳ್ಳಿಗಳಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ಈ ಸಾಧನೆ ಸಾರ್ಥಕವಾಗಲು ಸಾಧ್ಯ ಎಂದರು.

Recommended Video

IPL ಮುಂದಿನ ವರ್ಷದಿಂದ ಸಾಕಷ್ಟು ಬದಲಾಗಲಿದೆ | Oneindia Kannada
ವೈದ್ಯರೇ ದೇವರು

ವೈದ್ಯರೇ ದೇವರು

ವೈದ್ಯೋ ನಾರಾಯಣೋ ಹರಿ.. ಎಂದರೆ ವೈದ್ಯರೇ ದೇವರು. ಅನಾರೋಗ್ಯಕ್ಕೊಳಗಾದಾಗ ನೋವು ಕಡಿಮೆ ಮಾಡಿ, ಧೈರ್ಯ ಆತ್ಮವಿಶ್ವಾಸ ತುಂಬುವವರು ವೈದ್ಯರು. ಶ್ರೀಗಂಧದ ಕೊರಡು ತನ್ನನ್ನು ಸವೆಸಿಕೊಂಡಂತೆ ವೈದ್ಯರು ಸಮಾಜಕ್ಕಾಗಿ ಜೀವನ ಸವೆಸುತ್ತಾರೆ. ಎಲ್ಲಾ ವೈದ್ಯರು ತನು, ಮನ ಅರ್ಪಿಸಿ ಕೆಲಸ ಮಾಡಿದರೂ ಜನರು ವೈದ್ಯರ ಮೇಲೆ ವಿಶ್ವಾಸ ಕಡಿಮೆ ಮಾಡಿಕೊಂಡಿದ್ದಾರೆ. ಈ ಮನಸ್ಥಿತಿಯನ್ನು ಬದಲಿಸುವಂತೆ ಕೆಲಸ ಮಾಡಬೇಕು ಎಂದರು.

ಕೋವಿಡ್‌ನ ಎರಡನೇ ಅಲೆಯಿಂದ ದೇಶದಲ್ಲಿ 600ಕ್ಕೂ ಹೆಚ್ಚು ವೈದ್ಯರು ಮೃತಪಟ್ಟಿದ್ದಾರೆ. ಇವರೆಲ್ಲರೂ ಕೊರೊನಾ ಯುದ್ಧದಲ್ಲಿ ಹುತಾತ್ಮರಾದ ಯೋಧರು. ಇಂತಹ ಸನ್ನಿವೇಶ ತಪ್ಪಿಸಲು ವೈದ್ಯರು ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯದ ಬಗ್ಗೆಯೂ ಯೋಚಿಸಬೇಕು. ಲಸಿಕೆ ಬಗ್ಗೆ ಜನರು ತಪ್ಪು ಅರಿವಿನಿಂದ ಕೂಡಿರುವ ಈ ಸಮಯದಲ್ಲಿ ಎಲ್ಲಾ ವೈದ್ಯರು ಲಸಿಕೆ ಪಡೆದು, ಜನರಿಗೆ ಮಾದರಿಯಾಗಿ ಹಾಗೂ ತಮ್ಮ ಆರೋಗ್ಯ ಕಾಪಾಡಿಕೊಂಡು ಕೆಲಸ ಮಾಡಬೇಕು ಎಂದು ಸಚಿವರು ಕೋರಿದರು. ಆರೋಗ್ಯ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಜಾವೇದ್ ಅಕ್ತರ್, ಆಯುಕ್ತ ತ್ರಿಲೋಕ್ ಚಂದ್ರ ಪಾಲ್ಗೊಂಡಿದ್ದರು.

English summary
A total of 1,763 doctors, including 715 senior specialists and 1,048 general duty physicians, were direct recruited by Department of Health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X