ಉದ್ಯಮಿ ಅಜೀಂ ಪ್ರೇಮ್ಜಿ ವಿರುದ್ಧದ ಪ್ರಕರಣ ರದ್ದು
ಬೆಂಗಳೂರು, ಜನವರಿ 21: ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ಜಿ ಮತ್ತು ಇತರರ ವಿರುದ್ಧ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಭಾರತೀಯ ರಿಸರ್ವ್ ಬ್ಯಾಂಕ್ಗೆ ನಿರ್ದೇಶನ ನೀಡುವಂತೆ ಸಲ್ಲಿಸಿದ್ದ ಖಾಸಗಿ ದೂರನ್ನು ವಜಾಗೊಳಿಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ 'ಇಂಡಿಯಾ ಅವೇಕ್ ಫಾರ್ ಟ್ರಾನ್ಸ್ಪರೆನ್ಸಿ' ಎಂಬ ಲಾಭರಹಿತ ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ನ್ಯಾಯಪೀಠ, ಉದ್ಯಮಿ ಅಜೀಂ ಪ್ರೇಮ್ಜಿ, ಅವರ ಪತ್ನಿ ಯಾಸ್ಮಿನ್ ಎ ಪ್ರೇಮ್ಜಿ ಮತ್ತು ಪಿ.ವಿ. ಶ್ರೀನಿವಾಸನ್ ವಿರುದ್ಧ ದಾಖಲಿಸಲಾಗಿದ್ದ ಎರಡು ಖಾಸಗಿ ದೂರುಗಳನ್ನು ರದ್ದುಗೊಳಿಸಿದೆ.
ಅಜೀಂ ಪ್ರೇಮ್ಜಿ ಅವರು ತಮ್ಮ ಒಡೆತನಕ್ಕೆ ಸೇರಿದ ವಿವಿಧ ಕಂಪೆನಿಗಳನ್ನು ಒಂದೇ ಕಂಪೆನಿ ವ್ಯಾಪ್ತಿಗೆ ತಂದಿದ್ದರು. ಇದು ಕಾನೂನು ಬಾಹಿರ. ಈ ಕಂಪೆನಿಗಳ ಆಸ್ತಿ ಸರ್ಕಾರಕ್ಕೆ ಸೇರಬೇಕು. ಅವರ ವಿರುದ್ಧ ಕಂಪೆನಿ ಕಾಯ್ದೆ 2013ರ ಅಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಚೆನ್ನೈ ಮೂಲದ ಸಂಸ್ಥೆ ದೂರು ದಾಖಲು ಮಾಡಿತ್ತು.
ಮೂರು ಕಂಪೆನಿಗಳಿಗೆ ಅಜೀಂ ಪ್ರೇಮ್ಜಿ ಮತ್ತು ಇನ್ನಿಬ್ಬರು ನಿರ್ದೇಶಕರಾಗಿದ್ದಾರೆ. ಎಲ್ಲ ಷೇರುಗಳು ಕೂಡ ಕಂಪೆನಿಯ ಮಾಲೀತ್ವದಲ್ಲಿಯೇ ಇದೆ. ಈ ಮಧ್ಯೆ ಮೂರು ಕಂಪೆನಿಗಳ ಆಸ್ತಿಯನ್ನು ಪ್ರೇಮ್ಜಿ ದಂಪತಿ ಒಡೆತನದ ಟ್ರಸ್ಟ್ಗೆ ವರ್ಗಾವಣೆ ಮಾಡಲಾಗಿದೆ. ಒಂದು ವೇಳೆ ಕಂಪೆನಿಗಳು ಸಂಕಷ್ಟಕ್ಕೆ ಸಿಲುಕಿದರೆ ಸಂಪೂರ್ಣ ಸ್ವತ್ತನ್ನು ಸರ್ಕಾರವು ವಶಕ್ಕೆ ಪಡೆದುಕೊಳ್ಳಬಹುದಾಗಿತ್ತು. ಆದರೆ ಅಜೀಂ ಪ್ರೇಮ್ಜಿ ಅವರ ನಡೆಯಿಂದ ಅದಕ್ಕೆ ಅವಕಾಶ ಇಲ್ಲದಂತಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಲಾಗಿತ್ತು.
ಈ ಅರ್ಜಿಯು ಕಾನೂನು ಪ್ರಕ್ರಿಯೆ ಮತ್ತು ಈ ನ್ಯಾಯಾಲಯದ ದುರ್ಬಳಕೆ ಪ್ರಯತ್ನ ಎಂದು ಪರಿಗಣಿಸುತ್ತೇನೆ. ಅರ್ಜಿದಾರರ ಮನವಿಯನ್ನು ಅರ್ಬಿಐ ಈಗಾಗಲೇ ಪರಿಹರಿಸಿದೆ ಎಂದು ನ್ಯಾಯಮೂರ್ತಿ ಹೇಳಿದರು.