ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳು: ಸರ್ಕಾರಿ ನೌಕರರಿಗೆ ಸಿಹಿ

|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರಗಳು | Oneindia Kannada

ಬೆಂಗಳೂರು, ಡಿಸೆಂಬರ್ 05: ಇಂದು ನಡೆದ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಮೈತ್ರಿ ಸರ್ಕಾರ ಕೈಗೊಂಡಿದೆ. ಹಲವು ಉಪಯುಕ್ತ ಯೋಜನೆಗಳಿಗೆ ಸಂಪುಟವು ಒಪ್ಪಿಗೆ ಸೂಚಿಸಿದೆ.

ಕಂದಾಯ, ಶಿಕ್ಷಣ, ಸರ್ಕಾರಿ ನೌಕರರಿಗೆ ಸೌಲಭ್ಯ, ಪ್ರವಾಸೋದ್ಯಮ ಅಭಿವೃದ್ಧಿ, ಶಾಸಕರ ಅನುದಾನ, ಇಲಾಖಾವಾರು ಕಾಮಗಾರಿಗಳಿಗೆ ಅನುದಾನ ಇನ್ನೂ ಹಲವು ಪ್ರಮುಖ ನಿರ್ಣಯಗಳಿಗೆ ಸಂಪುಟವು ಅಂಗೀಕಾರ ನೀಡಿದೆ.

ಕಾಲೇಜು ವಿದ್ಯಾರ್ಥಿನಿಯರ ಕಾಲೇಜು ಶುಲ್ಕ, ಭೂ ಪರಿವರ್ತನಾ ನಿಯಮಗಳ ಸರಳೀಕರಣ, ಆರ್‍ಟಿಇ ಕಾಯ್ದೆ ತಿದ್ದುಪಡಿ, ಆರನೇ ವೇತನ ಆಯೋಗದ ಕೆಲವು ಶಿಫಾರಸುಗಳ ಅಂಗೀಕಾರ ಮತ್ತು ಪ್ರೇಕ್ಷಣೀಯ ಸ್ಥಳಗಳಲ್ಲಿ ಚಿತ್ರೀಕರಿಸುವ ಚಿತ್ರಗಳಿಗೆ ಸಹಾಯಧನ ನೀಡುವ ಮಹತ್ವದ ನಿರ್ಧಾರಗಳನ್ನು ಸಂಪುಟ ಇಂದು ತೆಗೆದುಕೊಂಡಿದೆ.

ಮಾಜಿ ಸಿಎಂ, ಮಾಜಿ ಜಲಸಂಪನ್ಮೂಲ ಸಚಿವರ ಜೊತೆ ಸಿಎಂ ಸಭೆಮಾಜಿ ಸಿಎಂ, ಮಾಜಿ ಜಲಸಂಪನ್ಮೂಲ ಸಚಿವರ ಜೊತೆ ಸಿಎಂ ಸಭೆ

ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ಬಗ್ಗೆ ಹಾಗೂ ಅಂಗೀಕಾರಗೊಂಡ ವಿಷಯಗಳ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಸರ್ಕಾರಿ ಶಾಲೆಗಳಿರುವ ಕಡೆ ಆರ್‌ಟಿಇ ಇಲ್ಲ

ಸರ್ಕಾರಿ ಶಾಲೆಗಳಿರುವ ಕಡೆ ಆರ್‌ಟಿಇ ಇಲ್ಲ

ಸರ್ಕಾರಿ ಶಾಲೆಗಳು ಇರುವ ಕಡೆ ಆರ್‌ಟಿಇ ಅಡಿ ಖಾಸಗಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಮಾಡುವ ಹಾಗಿಲ್ಲ ಎಂಬ ನಿಯಮಕ್ಕೆ ಸಂಪುಟ ಸಭೆ ಅಸ್ತು ಎಂದಿದೆ. ನಿರ್ದಿಷ್ಟ ದೂರದವರೆಗೂ ಸರ್ಕಾರಿ ಶಾಲೆಗಳು ಇಲ್ಲದೆ ಇದ್ದಾಗ ಆರ್‌ಟಿಇ ಮೂಲಕ ಖಾಸಗಿ ಶಾಲೆಗಳಿಗೆ ಪ್ರವೇಶ ಕೊಡಿಸಿ ಸರ್ಕಾರ ಶುಲ್ಕ ಪಾವತಿಸಲು ಅವಕಾಶ ಇದೆ. ಆದರೆ ಸರ್ಕಾರ ಹಿಂದೆ ನಿಯಮವನ್ನು ಸರಿಯಾಗಿ ಪಾಲನೆ ಮಾಡದೆ ಸರ್ಕಾರಿ ಶಾಲೆಗಳಿದ್ದರೂ ಖಾಸಗಿ ಶಾಲೆಗಳಿಗೆ ಪ್ರವೇಶ ಕೊಡಿಸಲಾಗಿದೆ. ಇದರಿಂದ ಸರ್ಕಾರಿ ಶಾಲೆಗಳು ನಿರ್ಲಕ್ಷ್ಯಕ್ಕೊಳಗಾಗಿವೆ. ಹಾಗಾಗಿ ನಿಯಮದ ಮಾರ್ಪಾಡು ಜಾರಿಗೆ ತರಲು ಸಂಪುಟ ಒಪ್ಪಿಗೆ ನೀಡಿದೆ. ಇನ್ನು ಮುಂದೆ ಸರ್ಕಾರಿ ಶಾಲೆಗಳಿಲ್ಲದ ಕಡೆಗೆ ಮಾತ್ರ ಖಾಸಗಿ ಶಾಲೆಗಳ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆಗೆ ಮತ್ತೆ ರಮೇಶ್ ಜಾರಕಿಹೊಳಿ ಗೈರು! ಸಚಿವ ಸಂಪುಟ ಸಭೆಗೆ ಮತ್ತೆ ರಮೇಶ್ ಜಾರಕಿಹೊಳಿ ಗೈರು!

ಸರ್ಕಾರಿ ನೌಕರರಿಗೆ ಬಂಪರ್‌ ಸುದ್ದಿ

ಸರ್ಕಾರಿ ನೌಕರರಿಗೆ ಬಂಪರ್‌ ಸುದ್ದಿ

ಆರನೇ ವೇತನ ಆಯೋಗದ ಕೆಲವು ಭತ್ಯೆಗಳ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ಸಂಪುಟ ಸಭೆ ಅನುಮತಿ ನೀಡಿದೆ. ಹಿಂದೆ ಸಿದ್ದರಾಮಯ್ಯ ಅವಧಿಯಲ್ಲಿ ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ಮೂಲ ವೇತನ ಹೆಚ್ಚಳ ಮಾಡಲಾಗಿತ್ತು. ಭತ್ಯೆಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಈಗ ಭತ್ಯೆಗಳ ಶಿಫಾರಸ್ಸನ್ನು ಅನುಷ್ಠಾನಕ್ಕೆ ತರಲಾಗುತ್ತಿದ್ದು ಇದರಿಂದ ಸರ್ಕಾರಕ್ಕೆ ಹೆಚ್ಚುವರಿ 400 ಕೋಟಿಯಷ್ಟು ಹೊರೆಯಾಗುತ್ತಿದೆ. ವೇತನ ಆಯೋಗದ ಅಂತಿಮ ವರದಿಯಲ್ಲಿ ಶಿಫಾರಸು ಮಾಡಿದಂತೆ ಕೆಲವು ಭತ್ಯೆಗಳನ್ನು ಪರಿಷ್ಕರಣೆ ಮಾಡಲಾಗಿದೆ.

ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ತಡರಾತ್ರಿವರೆಗೂ ನಡೆದಿದ್ದೇನು?ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ತಡರಾತ್ರಿವರೆಗೂ ನಡೆದಿದ್ದೇನು?

ನಾಲ್ಕನೇ ಶನಿವಾರ ರಜೆ ಬಗ್ಗೆ ಚರ್ಚೆ

ನಾಲ್ಕನೇ ಶನಿವಾರ ರಜೆ ಬಗ್ಗೆ ಚರ್ಚೆ

ಜಯಂತಿಗಳಿಗೆ ಇರುವ ರಜೆಗಳನ್ನು ರದ್ದು ಮಾಡಿ, ಪ್ರತಿ ತಿಂಗಳು ನಾಲ್ಕನೇ ಶನಿವಾರ ರಜೆ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು. ಈ ಬಗ್ಗೆ ಉಪಸಮಿತಿ ರಚಿಸಿ ವರದಿ ನೀಡುವಂತೆ ಕೇಳಲಾಗಿದೆ. ಪೊಲೀಸರ ಸಿಬ್ಬಂದಿಯ ವೇತನ ಪರೀಷ್ಕರಣೆ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸಲಾಗುವುದು ಎಂದು ಸಿಎಂ ಅವರು ಸಭೆಗೆ ಹೇಳಿದ್ದಾರೆ.

ಭೂಪರಿವರ್ತನೆ ನಿಯಮಗಳಲ್ಲಿ ಸಡಿಲಿಕೆ

ಭೂಪರಿವರ್ತನೆ ನಿಯಮಗಳಲ್ಲಿ ಸಡಿಲಿಕೆ

ಭೂಪರಿವರ್ತನೆ (ಲ್ಯಾಂಡ್ ಕನ್ವರ್ಷನ್‌) ನಿಯಮಗಳನ್ನು ಸಡಿಲ ಮಾಡುವುದಕ್ಕೆ ಸಂಪುಟವು ಒಪ್ಪಿಗೆ ಸೂಚಿಸಿದೆ. ಅರ್ಜಿದಾರರ ಏಕಗವಾಕ್ಷಿ ಯೋಜನೆಯಡಿ ಕಂದಾಯ ಇಲಾಖೆಗಳಿಗೆ ಅರ್ಜಿ ಸಲ್ಲಿಸಬೇಕು. ಕಂದಾಯ ಇಲಾಖೆ ಇತರ ಇಲಾಖೆಗಳಿಗೆ ಪತ್ರ ಬರೆದು, ಆಕ್ಷೇಪಣೆಗಳನ್ನು ಪಡೆದುಕೊಂಡು ಸಮನ್ವಯತೆ ಸಾಧಿಸಿ ಬೇರೆ ಬೇರೆ ಇಲಾಖೆಗಳಿಂದ ಒಂದು ತಿಂಗಳೊಳಗಾಗಿ ಭೂಪರಿವರ್ತನೆಗೆ ಅನುಮತಿ ನೀಡಬೇಕು ಅಥವಾ ತಿರಸ್ಕರಿಸಬೇಕು. ಕಂದಾಯ ಇಲಾಖೆ ಬೇರೆ ಇಲಾಖೆಗಳಿಗೆ ಪತ್ರ ಬರೆಯುವುದನ್ನು ವಿಳಂಬ ಮಾಡುವಂತಿಲ್ಲ. ಅದಕ್ಕೂ ಸ್ಪಷ್ಟ ನಿಯಮಾವಳಿ ರೂಪಿಸಲಾಗಿದೆ ಎಂದು ಹೇಳಿದರು.

ಕಾಲೇಜು ವಿದ್ಯಾರ್ಥಿನಿಯರಿಗೆ ಸಿಹಿ ಸುದ್ದಿ

ಕಾಲೇಜು ವಿದ್ಯಾರ್ಥಿನಿಯರಿಗೆ ಸಿಹಿ ಸುದ್ದಿ

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರ ಶುಲ್ಕವನ್ನು ಸರ್ಕಾರವೇ ಭರಿಸುವ ನಿರ್ಧಾರಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸಿದ್ದರಾಮಯ್ಯ ಅವಧಿಯಲ್ಲಿ ಇದನ್ನು ಘೋಷಿಸಲಾಗಿತ್ತು. ಪ್ರಸಕ್ತ ಸಾಲಿನ ಒಟ್ಟು 3.17 ವಿದ್ಯಾರ್ಥಿನಿಯರ ಕಾಲೇಜು ಶುಲ್ಕವನ್ನು ಸರ್ಕಾರ ಭರಿಸಲಿದೆ. ಅದರ ಅನುಸಾರ ವಾರ್ಷಿಕ 95 ಕೋಟಿ ರೂ. ಮೀಸಲಿಡಲಾಗುತ್ತದೆ. 1.75 ಲಕ್ಷ ಪದವಿ, 1.33 ಲಕ್ಷ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿನಿಯರು ಈ ಸೌಲಭ್ಯ ಪಡೆಯಲಿದ್ದಾರೆ.

ಘಟಪ್ರಭಾ ಎಡದಂಡೆಗೆ ಅನುದಾನ

ಘಟಪ್ರಭಾ ಎಡದಂಡೆಗೆ ಅನುದಾನ

ಘಟಪ್ರಭಾ ಎಡದಂಡೆ ನಾಲೆ ಆಧುನೀಕರಣಕ್ಕೆ 583 ಕೋಟಿ ರೂ.ಗಳ ಜಲಸಂಪನ್ಮೂಲ ಇಲಾಖೆ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ. ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಆಡಿಯಾ ಸೇರಿದಂತೆ 12 ಗ್ರಾಮಗಳಿಗೆ ಕಾವೇರಿಯಿಂದ ನೀರು ಹರಿಸುವ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಬಾಗಲಕೋಟೆ ಜಿಲ್ಲೆ ಮುದೋಳ ತಾಲೂಕು ಎಡಹಳ್ಳಿಯಲ್ಲಿ ಮುಂದಿನ ವರ್ಷದಿಂದಲೇ ಪದವಿ ಕಾಲೇಜು ಸ್ಥಾಪನೆಗೆ ಸಮ್ಮತಿಸಲಾಗಿದೆ. ಕನಕಪುರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ 4 ವರ್ಷಕ್ಕೆ 450 ಕೋಟಿ ರೂ. ಖರ್ಚಾಗಲಿದ್ದು, ಈ ವರ್ಷ 90 ಕೋಟಿ ಬಿಡುಗಡೆ ಮಾಡಲಾಗಿದೆ. ಮುಂದಿನ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಏರ್‌ ಶೋ ನಡೆಯಲಿದೆ. ಇದರಿಂದ ವಾಹನಗಳ ಸಂಖ್ಯೆ ಹೆಚ್ಚಾಗಿ ಸಂಚಾರ ದಟ್ಟಣೆ ತೀವ್ರಗೊಳ್ಳಲಿದೆ. ಸಂಚಾರ ದಟ್ಟಣೆಯನ್ನು ಮಾರ್ಗ ಬದಲಾವಣೆ ಮಾಡಲು ಅನುಕೂಲವಾಗುವಂತೆ ಏರ್‌ ಶೋ ನಡೆಯುವ ಸುತ್ತಮುತ್ತಲ ಭಾಗಗಳ ರಸ್ತೆಗಳ ಅಭಿವೃದ್ಧಿಗೆ 30 ಕೋಟಿ ರೂ. ಹಣ ನೀಡಲು ಒಪ್ಪಿಗೆ ಸೂಚಿಸಲಾಗಿದೆ.

ಚಿತ್ರರಂಗಕ್ಕೆ ಶುಭ ಸುದ್ದಿ

ಚಿತ್ರರಂಗಕ್ಕೆ ಶುಭ ಸುದ್ದಿ

ರಾಜ್ಯದ ಪ್ರೇಕ್ಷಣೀಯ ಸ್ಥಳಗಳಲ್ಲಿ ಚಲನಚಿತ್ರ ಚಿತ್ರೀಕರಣ ಮಾಡಿ ಅವುಗಳಿಗೆ ಪ್ರಚಾರ ನೀಡುವ ಚಿತ್ರಗಳಿಗೆ ಸಹಾಯಧನ ನೀಡಲು ಪ್ರವಾಸೋದ್ಯಮ ಇಲಾಖೆ ಸಲ್ಲಿಸಿದ್ದ ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕಿದೆ. ಚಿತ್ರಗಳಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ಆಕರ್ಷಣೀಯವಾಗಿ ತೋರಿಸಿ ಜನ ಹೆಚ್ಚಾಗಿ ಆ ಸ್ಥಳಗಳಿಗೆ ಭೇಟಿ ನೀಡುವಂತೆ ಮಾಡಬೇಕು ಎಂಬುದು ಯೋಜನೆ ಹಿಂದಿನ ಉದ್ದೇಶ. ಸಿನಿಮಾ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿಯೇ ಚಿತ್ರೀಕರಣ ಮಾಡಲು ಬರುವವರಿಗೆ ಅವಕಾಶವಾಗದಂತೆ ಬಿಗಿಯಾದ ನಿಯಮಾವಳೀಗಳನ್ನು ರೂಪಿಸಲಾಗಿದೆ. 100 ಅಂಕಗಳ ಮಾನದಂಡಗಳನ್ನು ರೂಪಿಸಲಾಗಿದ್ದು, ಅದನ್ನು ಆಧರಿಸಿ ಸಹಾಯಧನ ಬಿಡುಗಡೆ ಮಾಡಲಾಗುವುದು. ಸಿನಿಮಾದ ಬಜೆಟ್ ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ಎಷ್ಟರ ಮಟ್ಟಿಗೆ ವೈಭವೀಕರಿಸಲಾಗಿದೆ ಎಂಬುದನ್ನು ಆಧರಿಸಿ ಸಹಾಯ ಧನ ನೀಡಲಾಗುತ್ತದೆ.

ಕಮಿಷನ್ ಹೆಚ್ಚಳ

ಕಮಿಷನ್ ಹೆಚ್ಚಳ

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ನ್ಯಾಯ ಬೆಲೆ ಅಂಗಡಿಗಳಿಗೆ ಪ್ರತಿ ಕ್ವಿಂಟಾಲ್ ಅಕ್ಕಿ ಮಾರಿದರೆ ಈವರೆಗೂ ನೀಡಲಾಗುತ್ತಿದ್ದ 87 ರೂ. ಕಮೀಷನ್‍ನನ್ನು ಈಗ 100 ರೂ.ಗಳಿಗೆ ಹೆಚ್ಚಿಸಲಾಗಿದೆ. ಆಧುನಿಕ ತಂತ್ರಜ್ಞಾನ ಅಳವಡಿಸಿರುವುದರಿಂದ ಸೋರಿಕೆಗೆ ಕಡಿವಾಣ ಹಾಕಲಾಗಿದೆ. ನಷ್ಟವಾಗಬಾರದು ಎಂಬ ಕಾರಣಕ್ಕಾಗಿ ಅವರಿಗೆ ನ್ಯಾಯಯುತ ಕಮಿಷನ್ ನೀಡಲು ಸರ್ಕಾರ ಒಪ್ಪಿದೆ ಎಂದು ಕೃಷ್ಣಬೈರೇಗೌಡ ಮಾಹಿತಿ ನೀಡಿದರು.

English summary
CM Kumaraswamy cabinet approves many important proposals and took important decisions about education, tourism, girls education, revenue department and government employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X