ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಅಕ್ಟೋಬರ್ 28ರ ಜಿಲ್ಲಾ ಸುದ್ದಿಗಳು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 28; ಕರ್ನಾಟಕದ ಜಿಲ್ಲೆಗಳ ರಾಜಕೀಯ, ಶೈಕ್ಷಣಿಕ, ಅಪರಾಧ ಸುದ್ದಿಗಳ ಸುದ್ದಿಗಳು ಈ ಪುಟದಲ್ಲಿದೆ. ಜಿಲ್ಲಾಸುದ್ದಿಗಳನ್ನು ಒಂದು ಕಡೆ ನೀಡುವ ಪ್ರಯತ್ನ ಇದಾಗಿದೆ.

ಚಿತ್ರದುರ್ಗ; "ಜಿಲ್ಲೆಯಲ್ಲಿನ ಕಾಡುಗೊಲ್ಲ, ಹಟ್ಟಿಗೊಲ್ಲ ಸಮುದಾಯಗಳು ಅಲೆಮಾರಿ ಸಮುದಾಯಗಳಾಗಿದ್ದು, ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿವೆ. ಈ ನಿಟ್ಟಿನಲ್ಲಿ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವುದು ಹಾಗೂ ಕಾಡುಗೊಲ್ಲ, ಹಟ್ಟಿ ಗೊಲ್ಲರನ್ನು ಅಲೆಸಮುದಾಯಕ್ಕೆ ಸೇರ್ಪಡೆಗೊಳಿಸುವ ಸಲುವಾಗಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಅಧ್ಯಯನ ಮಾಡಲಾಗುತ್ತಿದೆ" ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.

chitradurga

ಗುರುವಾರ ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಾಡುಗೊಲ್ಲ, ಹಟ್ಟಿಗೊಲ್ಲ ಸಮುದಾಯಗಳ ಅಧ್ಯಯನ ಸಲುವಾಗಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. "ಜಿಲ್ಲೆಯಲ್ಲಿರುವ ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕೂಡಲೇ ಅಗತ್ಯಕ್ರಮಕೈಗೊಳ್ಳಬೇಕು" ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

Karnataka District News Roundup 28th October 2021 News on Politics, Crime

ಗೋಮಾಳಗಳನ್ನು ಸರ್ಕಾರದ ವಿವಿಧ ಯೋಜನೆಗಳಿಗೆ ಬಳಕೆ ಮಾಡಲಾಗುತ್ತಿದ್ದು, ಇದರಿಂದಾಗಿ ಕುರಿಗಳಿಗೆ ಮೇವಿನ ತೀವ್ರ ಅಭಾವ ಉಂಟಾಗುತ್ತಿದ್ದು, ಹಾಗಾಗಿ ಗೋಮಾಳ ಸಂರಕ್ಷಣೆಗಾಗಿ ಕ್ರಮವಹಿಸಬೇಕು ಎಂದು ಸಮುದಾಯದ ಮುಖಂಡರು ಅಧ್ಯಕ್ಷರಿಗೆ ಸಭೆಯಲ್ಲಿ ಮನವಿ ಮಾಡಿದರು. ಗೋಮಾಳಗಳ ಸಂರಕ್ಷಣೆಗೆ ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಅಧ್ಯಕ್ಷರು ಸೂಚನೆ ನೀಡಿದರು.

ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಕಾಡುಗೊಲ್ಲ, ಹಟ್ಟಿಗೊಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳಲ್ಲಿ ಸಾಕಷ್ಟು ಪ್ರವೇಶಾವಕಾಶಗಳು ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಒಟ್ಟು 3 ಅಲೆಮಾರಿ ವಿದ್ಯಾರ್ಥಿನಿಲಯಗಳಿದ್ದು, ಇದರ ಜೊತೆಗೆ ಹೆಚ್ಚುವರಿಯಾಗಿ ಎರಡು ಪ್ರತ್ಯೇಕ ಅಲೆಮಾರಿ ವಿದ್ಯಾರ್ಥಿ ನಿಲಯಗಳನ್ನು ಮಂಜೂರಾತಿ ಮಾಡಬೇಕು ಎಂದು ಸಮುದಾಯದ ಮುಖಂಡರಾದ ಶಿವುಯಾದವ್ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, "ಅಲೆಮಾರಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ನಿಲಯಗಳ ಸ್ಥಾಪನೆಗೆ ಸರ್ಕಾರದ ಹಂತದಲ್ಲಿ ಚರ್ಚಿಸಿ ಮಂಜೂರಾತಿ ಮಾಡಲು ಪ್ರಯತ್ನಿಸಲಾಗುವುದು" ಎಂದು ಭರವಸೆ ನೀಡಿದರು.

ಹೊಳಲ್ಕೆರೆ ತಾಲ್ಲೂಕಿನ ಹೆಚ್. ಡಿ. ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದನಹೊಸೂರು ಗೊಲ್ಲರಹಟ್ಟಿಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ಭೇಟಿ ನೀಡಿ, ಸಮುದಾಯದ ಕುರಿತು ಅಧ್ಯಯನ ನಡೆಸಿದರು.

ಶಿವಮೊಗ್ಗ; ದಿನೇ ದಿನೇ ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗುತ್ತಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುತ್ತಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ, "ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿಲ್ಲವೇನು?" ಎಂದು ಪ್ರಶ್ನಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಸಚಿವರು, "ಕಾಂಗ್ರೆಸ್ ಸರ್ಕಾರ ಇದ್ದಾಗ ಪೆಟ್ರೋಲ್, ಡಿಸೇಲ್ ಬೆಲೆ ಏರಲೆ ಇಲ್ಲವೇನು?. ಆಗಲೂ ಏರಿದೆ. ಈಗಲೂ ಏರುತ್ತಿದೆ. ದರ ಎಷ್ಟರ ಮಟ್ಟಿಗೆ ಇಳಿಕೆ ಮಾಡಬೇಕು ಅನ್ನುವುದನ್ನು ಕೇಂದ್ರ ಸರ್ಕಾರ ಯೋಚನೆ ಮಾಡುತ್ತಿದೆ" ಎಂದರು.

ತೈಲೋತ್ಪನ್ನಗಳ ಮೇಲಿನ ತೆರಿಗೆ ಕಡಿತದ ವಿಚಾರ ಕುರಿತು ಕೇಳಿದಾಗ, "ಈ ಕುರಿತು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಬೇಕಾಗುತ್ತದೆ. ಆ ಕುರಿತು ಚಿಂತನೆ ನಡೆಸಲಾಗುತ್ತದೆ. ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಏನೇನು ಕ್ರಮ ಕೈಗೊಳ್ಳಬೇಕೋ ಆ ಬಗ್ಗೆ ಚಿಂತಿಸಲಾಗುತ್ತಿದೆ" ಎಂದು ಈಶ್ವರಪ್ಪ ತಿಳಿಸಿದರು.

ರಾಮನಗರ; ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದ ಗೋವಿಂದಹಳ್ಳಿ ಗ್ರಾಮದಲ್ಲಿ ನೂತನ ಆಂಜನೇಯನ ದೇವಾಲಯದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಾಧ್ಯಮಗಳ ಜೊತೆ ಮಾತನಾಡಿ, "ಎರಡು ಉಪಚುನಾವಣೆಗಳಲ್ಲಿ ಗೆಲ್ಲುವ ವಿಶ್ವಾಸ ಇದೆ. ಪಕ್ಷದ ಶಾಸಕರು ಹಾಗೂ ಮುಖಂಡರು ತಳ ಮಟ್ಟದಿಂದ ಕೆಲಸ ಮಾಡಿದ್ದಾರೆ. ಜನರು ನಮ್ಮ ಪರ ನಿಲ್ಲುತ್ತಾರೆ ಎಂಬ ಆತ್ಮವಿಶ್ವಾಸ ನಮಗಿದೆ" ಎಂದರು.

"ಸಿಂಧಗಿಯಲ್ಲಿ ದೇವೇಗೌಡರು ಹಲವು ನೀರಾವರಿ ಯೋಜನೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅಲ್ಲಿನ ಮತದಾರರಿಗೆ ನೀರಾವರಿ ಯೋಜನೆಗಳ ಬಗ್ಗೆ ಮನವರಿಕೆ ಮಾಡುವ ಕೆಲಸ ಮಾಡಲಾಗಿದೆ. ಹಾನಗಲ್‌ನಲ್ಲಿ ಒಬ್ಬ ಅಲ್ಪಸಂಖ್ಯಾತ ಯುವಕನನ್ನು ಅಭ್ಯರ್ಥಿ ಮಾಡಿದ್ದೇವೆ" ಎಂದು ಹೇಳಿದರು.

ಕುಮಾರಸ್ವಾಮಿ, ಜಮೀರ್ ಹೇಳಿಕೆ ಬಗ್ಗೆ ಮಾತನಾಡಿದ ಅವರು, "ಒಬ್ಬರ ಮೇಲೆ ಒಬ್ಬರು ಕೆಸರೆರಚಾಟ ಮಾಡಿಕೊಂಡು ಹೋದರೆ ನಗೆಪಾಟಲು ಆಗುತ್ತದೆ. ಯಾರು ಯಾರು ಮಾತನಾಡಿದ್ದಾರೆ ಅಂತವರಿಗೆ ಮುಂದೆ ಸಂದರ್ಭ ಬರುತ್ತದೆ. ಆಗ ಜನತೆ ತಕ್ಕ ಪಾಠ ಕಲಿಸುತ್ತಾರೆ" ಎಂದರು.

"ಪಕ್ಷ ಸಂಘಟನೆ ವಿಚಾರದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ರಾಮನಗರ, ಚನ್ನಪಟ್ಟಣದಲ್ಲೂ ಪಕ್ಷ ಸಂಘಟನೆ ಮಾಡುತ್ತೇನೆ" ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ರಾಜ್ಯೋತ್ಸವ ಅಭಿಯಾನ; ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಸಹಯೋಗದಲ್ಲಿ ಗುರುವಾರ ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಮಾತಾಡ್ ಮಾತಾಡ್ ಕನ್ನಡ, ಕನ್ನಡಕ್ಕಾಗಿ ನಾವು ಕರ್ನಾಟಕ ರಾಜ್ಯೋತ್ಸವ ಅಭಿಯಾನದಲ್ಲಿ ಏಕಕಾಲದಲ್ಲಿ ಕನ್ನಡದ ಶ್ರೇಷ್ಠತೆ ಸಾರುವ ಗೀತೆಗಳನ್ನು ಮನಮೋಹಕವಾಗಿ ಪ್ರಸ್ತುತಪಡಿಸಲಾಯಿತು.

ವಿದ್ಯಾರ್ಥಿಗಳು ಕನ್ನಡದ ಹಾಡಿನ ಹಬ್ಬದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ರಾಷ್ಟ್ರಕವಿ ಕುವೆಂಪು ರಚಿತ ಜಯಭಾರತ ಜನನಿಯ ತನುಜಾತೆ, ಬಾರಿಸು ಕನ್ನಡ ಡಿಂಡಿಮವ, ಡಾ. ಕೆ. ಎಸ್. ನಿಸಾರ್ ಅಹ್ಮದ್ ಜೋಗದ ಸಿರಿ ಬೆಳಕಿನಲ್ಲಿ, ಹಂಸಲೇಖ ರಚನೆಯ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳು ರಾಗಬದ್ಧವಾಗಿ ಸುಶ್ರಾವ್ಯವಾಗಿ ಹಾಡಲಾಯಿತು. ನಾಡು ನುಡಿಯ ಅಭಿಮಾನವನ್ನು ಬಡಿದೆಬ್ಬಿಸಿದ ಗೀತೆಗಳಿಗೆ ವಿದ್ಯಾರ್ಥಿ ಸಮೂಹ ನೃತ್ಯ ಪ್ರದರ್ಶನ ನಡೆಸಿದರು.

Recommended Video

ಕರ್ನಾಟಕ ರಾಜ್ಯೋತ್ಸವ:ನಮ್ಮ ಭಾಷೆ ನಮ್ಮ ಹೆಮ್ಮೆ | Oneindia Kannada

ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಮಾತನಾಡಿ, "ಆಡಳಿತದಲ್ಲಿ ಕನ್ನಡ ಭಾಷೆಗೆ ಪ್ರಮುಖ್ಯತೆ ನೀಡಿ. ಪತ್ರ ವ್ಯವಹಾರವನ್ನು ಕನ್ನಡದಲ್ಲೇ ಮಾಡಿ. ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಕನ್ನಡದಲ್ಲೇ ಮಾತಾಡಿ. ಅನ್ಯ ಭಾಷೆಯ ಜನರಿಗೆ ಪ್ರೀತಿಯಿಂದ ಕನ್ನಡ ಕಲಿಸಿ" ಎಂದರು.

English summary
Karnataka district news Roundup (28th October 2021) Stay up-to-date with politics, climate, infrastructure, & education in Bangalore, Mysore, Shivamogga and other Karnataka districts. Capture every aspect of Karnataka district news only on Kannada Oneindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X