ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಮೇಲಿನ ಮೃದು ಧೋರಣೆ 'ಕೈ'ಬಿಟ್ಟ ಸಿದ್ದರಾಮಯ್ಯ!

|
Google Oneindia Kannada News

ಬೆಂಗಳೂರು, ಸೆ. 17: ವಿಧಾನ ಮಂಡಲ ಅಧಿವೇಶನ ಎಂದರೆ ಗದ್ದಲ, ಧರಣಿ, ಕೂಗಾಟ ಸಾಮಾನ್ಯ. ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡಲು ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯೆ ಪ್ರಮುಖ ಅಸ್ತ್ರ. ಹೀಗಾಗಿ ಸರ್ಕಾರದ ರೀತಿ, ನೀತಿಗಳನ್ನು ವಿರೋಧಿಸಲು ವಿರೋಧ ಪಕ್ಷಗಳು ಸದನದ ಭಾವಿಗಿಳಿದು ಧರಣಿ ಮಾಡುವುದು ಆ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕುವುದು ಕೂಡ ಕಲಾಪದಲ್ಲಿ ಸಾಮಾನ್ಯ. ಆದರೆ ಗದ್ದಲ ಮಾಡುವುದರಿಂದ ವಿರೋಧ ಪಕ್ಷದ ಬದಲು ಸರ್ಕಾರಕ್ಕೆ ಬಹಳಷ್ಟು ಅನುಕೂಲವಾಗುತ್ತದೆ.

ವಿರೋಧ ಪಕ್ಷಗಳು ಗದ್ದಲ ಆರಂಭಿಸಿದರೆ, ಆ ಗಲಾಟೆ ಮಧ್ಯೆ ತಮಗೆ ಬೇಕಾದನ್ನು ಸರ್ಕಾರ ಮಾಡಿಕೊಳ್ಳುತ್ತದೆ. ಗದ್ದಲದ ಮಧ್ಯೆ ಚರ್ಚೆ ಮಾಡದೆಯೇ ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಳ್ಳುವುದು ಸರ್ಕಾರಕ್ಕೆ ಸುಲಭವಾಗುತ್ತದೆ. ಆದರೆ ಇವತ್ತು ಬೆಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿವೇಶನದಲ್ಲಿ ಅನುಸರಿಸಬೇಕಾದ ಹೊಸ ತಂತ್ರವನ್ನು ಕಾಂಗ್ರೆಸ್ ರೂಪಿಸಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಈ ಬಾರಿಯ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ರಣತಂತ್ರ ರೂಪಿಸಿದ್ದಾರೆ. ಹೀಗಾಗಿ ಸಹಜವಾಗಿ ರಾಜ್ಯ ಬಿಜೆಪಿ ಸರ್ಕಾರ ಒತ್ತಡಕ್ಕೆ ಸಿಲುಕುವ ಎಲ್ಲ ಸಾಧ್ಯತೆಗಳು ಇವೆ.

ಒತ್ತಡದಲ್ಲಿ ಬಿಜೆಪಿ ಸರ್ಕಾರ

ಒತ್ತಡದಲ್ಲಿ ಬಿಜೆಪಿ ಸರ್ಕಾರ

ಯಾವುದೇ ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸಿದ ಬಳಿಕ ಮುಂದಿನ ಆರು ತಿಂಗಳುಗಳಲ್ಲಿ ಆಸುಗ್ರೀವಾಜ್ಞೆ ಕಾನೂನಾಗಬೇಕು. ಹೀಗಾಗಿ ಸುಗ್ರೀವಾಜ್ಞೆಗೆ ಉಭಯ ಸದನಗಳಲ್ಲಿ ಅಂಗೀಕಾರ ಪಡೆದು ಕೊಳ್ಳಬೇಕು. ಈಗ ಲಾಕ್‌ಡೌನ್ ಸಂದರ್ಭದಲ್ಲಿ ಎಪಿಎಂಸಿ ಕಾಯಿದೆ ತಿದ್ದುಪಡಿ ಸುಗ್ರೀವಾಜ್ಞೆ, ಭೂಸುಧಾರಣಾ ಕಾಯಿದೆ ತಿದ್ದುಪಡಿ ಸುಗ್ರೀವಾಜ್ಞೆ ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಸುಗ್ರೀವಾಜ್ಞೆಗಳನ್ನು ರಾಜ್ಯ ಬಿಜೆಪಿ ಸರ್ಕಾರ ಕಳೆದ ಐದು ತಿಂಗಳುಗಳಲ್ಲಿ ಹೊರಡಿಸಿದೆ.

ಜೊತೆಗೆ ಕಳೆದ ಅಧಿವೇಶನದಲ್ಲಿ ಮಂಡನೆ ಮಾಡಿರುವ ಮೂರು ತಿದ್ದುಪಡಿ ವಿಧೇಯಕಗಳು ಸೇರಿದಂತೆ, ಈ ಬಾರಿ ಮತ್ತೆ 10 ತಿದ್ದುಪಡಿ ವಿಧೇಯಕಗಳಿಗೆ ಉಭಯ ಸದನಗಳಲ್ಲಿ ಅಂಗೀಕಾರ ಪಡೆದುಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಹೀಗಾಗಿ ಒಟ್ಟು 30ಕ್ಕೂ ಹೆಚ್ಚು ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಳ್ಳುವ ಒತ್ತಡದಲ್ಲಿ ರಾಜ್ಯ ಸರ್ಕಾರವಿದೆ. ವಿರೋಧ ಪಕ್ಷ ಕಾಂಗ್ರೆಸ್ ಧರಣಿ ಸತ್ಯಾಗ್ರಹ ಆರಂಭಿಸಿದರೆ, ಆ ಗದ್ದಲದಲ್ಲಿ ಎಲ್ಲ ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಳ್ಳುವುದು ಸರ್ಕಾರದ ಲೆಕ್ಕಾಚಾರ. ಆದರೆ ಕಾಂಗ್ರೆಸ್ ಪ್ರತಿತಂತ್ರ ರೂಪಿಸಿದೆ.

ಚರ್ಚೆ, ಚರ್ಚೆ ಮತ್ತು ಚರ್ಚೆ

ಚರ್ಚೆ, ಚರ್ಚೆ ಮತ್ತು ಚರ್ಚೆ

ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿದ್ದಂತೆಯೆ ಗದ್ದಲ ಮಾಡದೇ ಚರ್ಚೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಹಾಗೆ ಮಾಡಿದರೆ ಎಲ್ಲ 30ಕ್ಕೂ ಹೆಚ್ಚು ವಿಧೇಯಕಗಳ ಮೇಲೆ ಚರ್ಚೆ ನಡೆಸಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಹಾಗಾದರೆ ಚರ್ಚೆಯ ಸಂದರ್ಭದಲ್ಲಿ ಸರ್ಕಾರವನ್ನು ಇಕ್ಕಿಟ್ಟಿಗೆ ಸಿಲುಕಿಸಬಹುದು. ಜೊತೆಗೆ 30 ವಿಧೇಯಗಳ ಮೇಲೆ ಚರ್ಚೆ ನಡೆದರೆ ಎಲ್ಲವನ್ನೂ ಅಂಗೀಕಾರ ಪಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ.


ಈಗಾಗಲೇ ಎಪಿಎಂಸಿ, ಭೂಸುಧಾರಣೆ ಸುಗ್ರೀವಾಜ್ಞೆಗಳಿಗೆ ರೈತ ಸಂಘಟನೆಗಳು, ರಾಜಕೀಯ ಪಕ್ಷಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿವೆ. ಆ ವಿಧೇಯಕಗಳ ಮೇಲೆ ಹೆಚ್ಚು ಚರ್ಚೆ ನಡೆಯುವಂತೆ ನೋಡಿಕೊಂಡು, ಆ ಮೂಲಕ ಸರ್ಕಾರದ ಜನವಿರೋಧಿ ನೀತಿಯನ್ನು ಬಹಿರಂಗ ಮಾಡುವುದು ಕಾಂಗ್ರೆಸ್ ಪಕ್ಷದ ಲೆಕ್ಕಾಚಾರವಾಗಿದೆ. ಇದನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ವಿರೋಧ ಪಕ್ಷದ ಬಳಿ ಇವೆ ಹಲವು ಅಸ್ತ್ರಗಳು

ವಿರೋಧ ಪಕ್ಷದ ಬಳಿ ಇವೆ ಹಲವು ಅಸ್ತ್ರಗಳು

ಹೀಗಾಗಿ ವಿಧಾನ ಮಂಡಲದ ಅಧಿವೇಶನವನ್ನು ಸರ್ಕಾರದ ವೈಫಲ್ಯಗಳನ್ನು ಬಯಲು ಮಾಡುವ ವೇದಿಕೆಯನ್ನಾಗಿ ಮಾಡಿಕೊಳ್ಳಲು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ. ಕೊರೊನಾ ನಿರ್ವಹಣೆ, ಡಿ.ಜೆ. ಹಳ್ಳಿ ಗಲಭೆ, ಡ್ರಗ್ಸ್ ಹಗರಣ ಸೇರಿದಂತೆ ರಾಜ್ಯದ ಕಾನೂನು ಸುವ್ಯವಸ್ಥೆ, ಪ್ರವಾಹ, ಸುಗ್ರೀವಾಜ್ಞೆ ಮೂಲಕ ವಿವಿಧ ಕಾಯಿದೆಗಳಿಗೆ ತಂದಿರುವ ತಿದ್ದುಪಡಿ ಮತ್ತಿತರ ಪ್ರಮುಖ ವಿಚಾರಗಳನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮೂಲಕ ವೈಫಲ್ಯಗಳನ್ನು ಜನತೆಯ ಮುಂದೆ ಅನಾವರಣಗೊಳಿಸಲು ಸಭೆ ನಿರ್ಧರಿಸಿದೆ.

ಕೇವಲ 8 ದಿನಗಳ ಅವಧಿಗೆ ಅಧಿವೇಶನ ಕರೆಯಲಾಗಿದೆ. ಆದ್ದರಿಂದ ಸಮಯ ವ್ಯರ್ಥ ಮಾಡದೆ ಕಲಾಪದ ಅವಧಿಯನ್ನು ಸರ್ಕಾರದ ವಿರುದ್ಧದ ಹೋರಾಟಕ್ಕೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಅಧಿವೇಶನ ಸಂದರ್ಭದಲ್ಲಿ ಅನುಸರಿಸಬೇಕಾದ ರಣತಂತ್ರದ ಬಗ್ಗೆ ಶಾಸಕರು ಚರ್ಚೆ ನಡೆಸಿದರು.

ಕೊರೊನಾ ಕಾಲದ ಭ್ರಷ್ಟಾಚಾರ

ಕೊರೊನಾ ಕಾಲದ ಭ್ರಷ್ಟಾಚಾರ

ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರವಾಗಿದೆ. ಈ ಬಗ್ಗೆ ಪಕ್ಷದ ವತಿಯಿಂದ ಈಗಾಗಲೇ ಹೋರಾಟ ಕೈಗೆತ್ತಿಕೊಳ್ಳಲಾಗಿದೆ. ಸದನದಲ್ಲಿಯೂ ಈ ಬಗ್ಗೆ ಪ್ರಸ್ತಾಪ ಮಾಡಬೇಕಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದರು.

ಡ್ರಗ್ಸ್ ಹಗರಣದ ಚರ್ಚೆಯನ್ನು ಸರ್ಕಾರ ಮುನ್ನೆಲೆಗೆ ತಂದು ಬೇರೆ ವಿಚಾರಗಳನ್ನು ಬದಿಗೆ ತರಿಸುವ ಪ್ರಯತ್ನ ಮಾಡಬಹುದು. ಇದಕ್ಕೆ ಅವಕಾಶ ಮಾಡಿಕೊಡಬಾರದು. ಎಂಟು ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳು ಜನರಿಗೆ ಮನದಟ್ಟು ಆಗುವಂತೆ ಕಾರ್ಯತಂತ್ರ ರೂಪಿಸಬೇಕಿದೆ ಎಂದು ತಿಳಿಸಿದರು.

ರಾಜ್ಯದ ಅಭಿಪ್ರಾಯ ಕೇಳದ ಕೇಂದ್ರ

ರಾಜ್ಯದ ಅಭಿಪ್ರಾಯ ಕೇಳದ ಕೇಂದ್ರ

ಭೂ ಸುಧಾರಣೆ ಕಾಯಿದೆ, ಎಪಿಎಂಸಿ ಕಾಯಿದೆ, ಕಾರ್ಮಿಕ ಕಾಯಿದೆ ಸೇರಿದಂತೆ ಹಲವಾರು ಕಾಯಿದೆಗಳಿಗೆ ತಿದ್ದುಪಡಿ ತಂದು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರುವ ಮುನ್ನ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಅಭಿಪ್ರಾಯವನ್ನೇ ಕೇಳಿಲ್ಲ. ರಾಜ್ಯ ಸರ್ಕಾರವನ್ನು ಕೇಂದ್ರ ಮುನ್ಸಿಪಾಲಿಟಿ ರೀತಿ ನಡೆಸಿಕೊಳ್ಳುತ್ತಿದೆ ಎಂದರು.

ಕಳೆದ ವರ್ಷವೂ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿತ್ತು. ಆಗ ಸಂತ್ರಸ್ಥರಾದವರಿಗೇ ಇನ್ನೂ ಪರಿಹಾರ ಸಿಕಿಲ್ಲ. ಈ ವರ್ಷ ಪ್ರವಾಹದಿಂದ ಹಾನಗೊಳಗಾದವರಿಗೂ ಪರಿಹಾರ ಎಂಬುದು ಕನಸಿನ ಮಾತಾಗಿಯೇ ಉಳಿದಿದೆ. ಇನ್ನು ರಾಜ್ಯದಲ್ಲಿ ಆರ್ಥಿಕ ವ್ಯವಸ್ಥೆ ಕುಸಿದಿದ್ದು ಸಕಾರ ದಿವಾಳಿಯಾಗಿದೆ. ಪಿಂಚಣಿ ನೀಡಲೂ ಪರದಾಡುವ ಸ್ಥಿತಿಗೆ ಸರ್ಕಾರ ತಲುಪಿದೆ.

ಮತ್ತೆ 33 ಸಾವಿರ ಕೋಟಿ ರೂ. ಸಾಲ

ಮತ್ತೆ 33 ಸಾವಿರ ಕೋಟಿ ರೂ. ಸಾಲ

53 ಸಾವಿರ ಕೋಟಿ ರೂ. ಸಾಲ ಪಡೆಯುವುದಾಗಿ ಬಜೆಟ್‍ನಲ್ಲಿ ಘೋಷಿಸಲಾಗಿತ್ತು. ಇದೀಗ ಮತ್ತೆ 33 ಸಾವಿರ ಕೋಟಿ ರೂ. ಸಾಲ ಪಡೆಯಲು ಸರ್ಕಾರ ಮುಂದಾಗಿದೆ. ಈ ಮಧ್ಯೆ ಲಾಕ್‍ಡೌನ್ ಸಂದರ್ಭದಲ್ಲಿ ವಿವಿಧ ಸಮುದಾಯಗಳಿಗೆ, ಆಟೋ, ಟ್ಯಾಕ್ಸಿ ಚಾಲಕರಿಗೆ ಘೋಷಣೆ ಮಾಡಿದ ಪರಿಹಾರವೂ ಸಿಕ್ಕಿಲ್ಲ. ಇದೆಲ್ಲವನ್ನೂ ಸದನದಲ್ಲಿ ಚರ್ಚಿಸಬೇಕಿದೆ.

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಘಟನೆಗೆ ಸರ್ಕಾರ, ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆಯ ವೈಫಲ್ಯ ಮುಖ್ಯ ಕಾರಣ. ಈ ಸಂಬಂಧ ಪಕ್ಷದ ವತಿಯಿಂದ ಈಗಾಗಲೇ ಸತ್ಯಶೋಧನಾ ಸಮಿತಿ ರಚನೆಯಾಗಿದ್ದು, ಸಮಿತಿ ನೀಡುವ ವರದಿ ಆಧರಿಸಿ ಸದನದಲ್ಲಿ ಚರ್ಚಿಸೋಣ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು. ಸದನದಲ್ಲಿ ಮಂಡಿಸಬೇಕಾದ ನಿಲುವಳಿ ಸೂಚನೆ, ಗಮನ ಸೆಳೆಯುವ ಸೂಚನೆಗಳ ಬಗ್ಗೆಯೂ ಅವರು ಸಮಗ್ರವಾಗಿ ವಿವರಿಸಿದರು.

ಪ್ರಶ್ನೆಗಳ ಬ್ಯಾಂಕ್

ಪ್ರಶ್ನೆಗಳ ಬ್ಯಾಂಕ್

ಇದೇ ಮೊದಲ ಬಾರಿಗೆ ಪಕ್ಷ ಪ್ರಶ್ನೆಗಳ ಬ್ಯಾಂಕ್ ಸಿದ್ಧಪಡಿಸಿದೆ. ಅದನ್ನು ಎಲ್ಲ ಶಾಸಕರು ಬಳಸಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮನವಿ ಮಾಡಿದರು. ಕೊರೊನಾ ಅವ್ಯವಹಾರ ನಮಗೆ ಸಿಕ್ಕಿರುವ ಬಹುದೊಡ್ಡ ಅಸ್ತ್ರ. ಅದನ್ನು ಸರ್ಕಾರದ ವಿರುದ್ಧ ಪರಿಣಾಮಕಾರಿಯಾಗಿ ಪ್ರಯೋಗಿಸಬೇಕು ಎಂದರು.


ಸಾಮಾಜಿಕ ಜಾಲ ತಾಣವನ್ನು ಶಾಸಕರು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದ ಅವರು, ಮುಂಬರುವ ಶಿರಾ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ, ಬಿಬಿಎಂಪಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳ ಬಗ್ಗೆಯೂ ಮಾತನಾಡಿದರು. ಶಿರಾ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಒಗ್ಗಟ್ಟಿನ ಹೋರಾಟ ನಡೆಸುವ ಅಗತ್ಯವಿದೆ ಎಂದು ತಿಳಿಸಿದರು.

Recommended Video

122 ಉಗ್ರರ ಬಂಧನ, ರಾಜ್ಯದಲ್ಲಿ ರಕ್ಕಸರ ಹಾವಳಿ | Oneindia Kannada
ಸಕ್ರಿಯವಾಗಿ ಭಾಗವಹಿಸಿ

ಸಕ್ರಿಯವಾಗಿ ಭಾಗವಹಿಸಿ

ಕಲಾಪದಲ್ಲಿ ಎಲ್ಲ ಶಾಸಕರು ಸಕ್ರಿಯವಾಗಿ ಭಾಗವಿಸುವುದರ ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಸಿದ್ದರಾಮಯ್ಯ ಅವರು ಶಾಸಕಾಂಗ ಸಭೆಯಲ್ಲಿ ಮನವಿ ಮಾಡಿದರು.

ಕೊರೊನಾ ಬಗ್ಗೆ ಮುಂಜಾಗ್ರತೆ ವಹಿಸಿ. ಈ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಮಾಸ್ಕ್ ಕಡ್ಡಾಯವಾಗಿ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಅಧಿವೇಶನಕ್ಕೆ ಮುನ್ನ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಅವರು ಹೇಳಿದರು. ಹಲವಾರು ಶಾಸಕರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಆದ್ದರಿಂದ ಉದಾಸೀನ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

English summary
Karnataka Congress Legislative Party Meeting meeting Highlights for Assembly Session starts from Sep 21,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X