ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚರ್ಚ್ ದಾಳಿ ವರದಿ ತಿರಸ್ಕರಿಸಿದ ಸಚಿವ ಸಂಪುಟ

|
Google Oneindia Kannada News

ಬೆಂಗಳೂರು, ಅ.16 : ನ್ಯಾ.ಸೋಮಶೇಖರ್ ಆಯೋಗದ ವರದಿ ತಿರಸ್ಕಾರ, ಅಪಘಾತದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ಸಿಎಂ ಸಾಂತ್ವನ ಯೋಜನೆ, ರಾಜ್ಯ ಚುನಾವಣಾ ಆಯೋಗಕ್ಕೆ ಹೊಸ ಆಯುಕ್ತರ ನೇಮಕ ಮುಂತಾದ ನಿರ್ಣಯಗಳನ್ನು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಗುರುವಾರ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಅವರು ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ವಿವರಗಳನ್ನು ಮಾಧ್ಯಮಗಳಿಗೆ ನೀಡಿದರು.

Karnataka

ಚರ್ಚ್‌ ದಾಳಿ ವರದಿ ತಿರಸ್ಕಾರ : 2008ರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ಚರ್ಚ್ ದಾಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ನ್ಯಾ.ಬಿ.ಕೆ.ಸೋಮಶೇಖರ್ ಅವರ ಆಯೋಗದ ವರದಿಯನ್ನು ತಿರಸ್ಕಾರ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಕರಣದ ವಿಚಾರಣೆಯನ್ನು ಗೃಹ ಇಲಾಖೆಗೆ ವರ್ಗಾವಣೆ ಮಾಡಿ, ಮರು ತನಿಖೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. [ಚರ್ಚ್ ಮೇಲೆ ದಾಳಿ:ಸಿದ್ದು ಸರಕಾರ ಏನನ್ನುತ್ತೆ ಈಗ?]

ಬಿಜೆಪಿ ಸರ್ಕಾರ ನ್ಯಾ.ಸೋಮಶೇಖರ್ ಆಯೋಗವನ್ನು ರಚನೆ ಮಾಡಿತ್ತು. ವರದಿಯಲ್ಲಿ ವ್ಯತ್ಯಾಸ ಕಂಡು ಬಂದಿರುವ ಹಿನ್ನಲೆಯಲ್ಲಿ ಮತ್ತೆ ತನಿಖೆ ನಡೆಸಲಾಗುತ್ತಿದೆ. ಇದರಲ್ಲಿ ಗೃಹಸಚಿವರ ಪಾತ್ರವಿಲ್ಲ, ವರದಿಯಲ್ಲಿನ ಶಿಫಾರಸ್ಸುಗಳನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಯಚಂದ್ರ ಅವರು ತಿಳಿಸಿದ್ದಾರೆ.

ನ್ಯಾ.ಸೋಮಶೇಖರ್‌ ಆಯೋಗ ತನ್ನ ಅಂತಿಮ ವರದಿಯಲ್ಲಿ ಚರ್ಚ್‌ ದಾಳಿಯಲ್ಲಿ ಬಿಜೆಪಿ, ಸಂಘಪರಿವಾರ ಮತ್ತು ಪೊಲೀಸರ ಪಾತ್ರವಿಲ್ಲ ಎಂದು ವರದಿ ನೀಡಿತ್ತು. ಮೂಲಭೂತವಾದಿಗಳಿಂದ ದಾಳಿ ನಡೆದಿದೆ ಎಂದು ವರದಿಯಲ್ಲಿ ಹೇಳಿತ್ತು. ಕಾಂಗ್ರೆಸ್‌ ಸರ್ಕಾರ ಪ್ರಕರಣದ ಕುರಿತು ಮರು ತನಿಖೆಗೆ ಆದೇಶಿಸಿದೆ ಎಂಬ ಮಾತುಗಳಿವೆ, ಆದರೆ, ಇದನ್ನು ಜಯಚಂದ್ರ ಅವರು ನಿರಾಕರಿಸಿದ್ದಾರೆ.

ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಧಾರಗಳು

* 2014-15ರ ಬಜೆಟ್‌ನಲ್ಲಿ ಘೋಷಿಸಿದ್ದ ಅಪಘಾತಕ್ಕೆ ಒಳಗಾದವರಿಗೆ ತುರ್ತು ಚಿಕಿತ್ಸೆಗಾಗಿ 25 ಸಾವಿರ ರೂ.ವರೆಗೆ ಆರ್ಥಿಕ ನೆರವು ನೀಡುವ ಮುಖ್ಯಮಂತ್ರಿಯವರ ಸಾಂತ್ವನ ಯೋಜನೆಗೆ ಒಪ್ಪಿಗೆ ದೊರೆತಿದೆ. ಯೋಜನೆ ಅನುಷ್ಠಾನಕ್ಕಾಗಿ ಸುವರ್ಣ ಆರೋಗ್ಯ ಟ್ರಸ್ಟ್‌ಅನ್ನು ರಚಿಸಲಿದ್ದು, ಈ ಟ್ರಸ್ಟ್‌ ಯೋಜನೆ ವ್ಯಾಪ್ತಿಗೆ ಒಳಪಡುವ ಆಸ್ಪತ್ರೆಗಳನ್ನು ಗುರುತಿಸಲಿದೆ. ಈ ಯೋಜನೆಗಾಗಿ 5 ಕೋಟಿ ರೂ. ಮಂಜೂರು ಮಾಡಲಾಗಿದೆ.

* ಬೆಂಗಳೂರಿನ ಮೈಲಸಂದ್ರದಲ್ಲಿ ಡಾ. ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣ ಮಾಡಲು 11 ಕೋಟಿ ರೂ. ನೆರವು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ಆಳ್ವೆಕೋಡಿ ಬಳಿ ಮೀನುಗಾರಿಕೆ ಇಳಿದಾಣ ಕೇಂದ್ರ ಸ್ಥಾಪನೆಗೆ 5 ಕೋಟಿ ರೂ. ಮಂಜೂರು.

* ಕನ್ನಡ ಪರೀಕ್ಷೆ ತೆಗೆದುಕೊಂಡು ತೇರ್ಗಡೆಯಾದ ರಾಜ್ಯ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಒಂದು ಹೆಚ್ಚುವರಿ ಬಡ್ತಿಯನ್ನು ನೀಡಲು ತೀರ್ಮಾನ. ಅನುದಾನಿತ ಪಾಲಿಟೆಕ್ನಿಕ್‌ ವೇತನ ಪರಿಷ್ಕಾರ ಹಾಗೂ ಸೀಟು ಹಂಚಿಕೆಯು 2012ನೇ ಸಾಲಿನಲ್ಲಿ ಇದ್ದಂತೆ ಮುಂದುವರೆಸಬೇಕು ಎಂಬ ಆದೇಶ ಪಾಲನೆಗೆ ತೀರ್ಮಾನ.

* ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲೂ ಕಡತ ಯಜ್ಞ ನಡೆಸಲು ತೀರ್ಮಾನ. ಈ ಬಗೆಗಿನ ರೂಪರೇಷೆ ಸಿದ್ದಪಡಿಸಲು ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ.

* ಆರ್ಟ್‌ ಆಫ್ ಲೀವಿಂಗ್‌ನ ಶ್ರೀ ರವಿಶಂಕರ್‌ ಗುರೂಜಿ ಅವರಿಗೆ ಸೇರಿದ ರವಿಶಂಕರ್‌ ವಿದ್ಯಾಟ್ರಸ್ಟ್‌ ಸೇರಿದಂತೆ ಹಲವು ಖಾಸಗಿ ಸಂಸ್ಥೆಗಳಿಗೆ ವಾಣಿಜ್ಯ ಹಾಗೂ ಶೈಕ್ಷಣಿಕ ಉದ್ದೇಶದ ಬಳಕೆಗಾಗಿ ಸುಮಾರು 250 ಎಕರೆಗೂ ಹೆಚ್ಚು ಕೃಷಿ ಜಮೀನಿನ ಭೂ ಪರಿವರ್ತನೆಗೆ ಸಂಪುಟ ಒಪ್ಪಿಗೆ ನೀಡಿದೆ.

* ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎನ್‌. ಶ್ರೀನಿವಾಸಾಚಾರಿ ಅವರನ್ನು ರಾಜ್ಯ ಚುನಾವಣಾಧಿಕಾರಿಯಾಗಿ ನೇಮಕ ಮಾಡಲು ಸಂಪುಟ ಒಪ್ಪಿಗೆ ನೀಡಿದ್ದು, ಈ ಕುರಿತ ಆದೇಶ ಶೀಘ್ರದಲ್ಲೇ ಹೊರಬೀಳಲಿದೆ.

English summary
In a cabinet meeting on Thursday October 16 Karnataka government rejected final report of the Justice B.K. Somasekhara Commission, which probed the attacks on churches in 2008.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X