ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಯೆ ಕ್ಷಣದಲ್ಲಿ ಝೀರೋ ಟ್ರಾಫಿಕ್‌ನಲ್ಲಿ ಆಗಮಿಸಿ ಪ್ರಮಾಣ ವಚನ ಸ್ವೀಕರಿಸಿದ ಶಶಿಕಲಾ ಜೊಲ್ಲೆ!

|
Google Oneindia Kannada News

ಬೆಂಗಳೂರು, ಆ. 04: ಕಳೆದ ಎಂಟು ದಿನಗಳ ಹಿಂದೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಸವರಾಜ ಬೊಮ್ಮಾಯಿ ಅವರು ಬುಧವಾರ ಪೂರ್ಣ ಪ್ರಮಾಣದ ಸಂಪುಟ ರಚನೆ ಮಾಡಿದ್ದಾರೆ. ಒಂದು ವಾರದ ಬಳಿಕ 29 ನೂತನ ಸಚಿವರು ಸಿಎಂ ಬೊಮ್ಮಾಯಿ ಅವರ ಸಂಪುಟ ಸೇರಿದ್ದಾರೆ. ಬಿಜೆಪಿ ಹೈಕಮಾಂಡ್ ಒಪ್ಪಿಗೆ ಕೊಟ್ಟ ಬಳಿಕ ಕೇವಲ ಅರ್ಧ ದಿನದಲ್ಲಿ ಪ್ರಮಾಣ ವಚನವನ್ನು ಆಯೋಜನೆ ಮಾಡಲಾಗಿದ್ದರೂ ಅತ್ಯಂತ ಅಚ್ಚುಕಟ್ಟಾಗಿ ಸಮಾರಂಭ ನಡೆಯಿತು.

ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಯಿಂದ ನೇರವಾಗಿ ದೌಢಾಯಿಸಿ ವಿಧಾನಸೌಧಕ್ಕೆ ಆಗಮಿಸಿದ್ದರು. ಅಲ್ಲಿಂದಲೇ ಪ್ರಮಾಣ ವಚನ ಸ್ವೀಕರಿಸುವ ಎಲ್ಲ ಶಾಸಕರಿಗೆ ದೂರವಾಣಿ ಕರೆ ಮಾಡಿ ಆಹ್ವಾನ ನೀಡಿದರು. ಶಶಿಕಲಾ ಜೊಲ್ಲೆ ಅವರು ಕೊನೆಯ ಕ್ಷಣದಲ್ಲಿ ಝೀರೋ ಟ್ರಾಫಿಕ್‌ನಲ್ಲಿ ರಾಜಭವನಕ್ಕೆ ಬಂದಿದ್ದು ಅಚ್ಚರಿಗೆ ಕಾರಣವಾಯ್ತು.

ರಾಜ್ಯ ಬಿಜೆಪಿ ನಾಯಕತ್ವ ಬಳಿಕ, ಇದೀಗ ಸಚಿವ ಸಂಪುಟ ವಿಸ್ತರಣೆಯೊಂದಿಗೆ ಹೆಚ್ಚು ಕಡಿಮೆ ಪೂರ್ಣ ಪ್ರಮಾಣದ ಸಂಪುಟ ರಚನೆ ಆದಂತಾಗಿದೆ. ಇಪ್ಪತ್ತೊಂಬತ್ತು ಶಾಸಕರ ಸೇರ್ಪಡೆಯೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರದ ಸಂಪುಟ ಬಲ ಇಂದು ಮೂವತ್ತಕ್ಕೆ ಏರಿದೆ. ಉಳಿದಿರುವ ನಾಲ್ಕು ಸಚಿವ ಸ್ಥಾನಗಳನ್ನು ನಂತರ ಭರ್ತಿ ಮಾಡುವ ಸಾಧ್ಯತೆಗಳಿವೆ.

ವಿಭಿನ್ನ ಸಂಸ್ಕೃತಿಯ ಹಿನ್ನೆಲೆಯ ಎಲ್ಲ ನೂತನ ಸಚಿವರು ತಮ್ಮ ಸಂಸ್ಕೃತಿಯನ್ನು ತೋರ್ಪಡಿಸಿದ್ದು ವಿಶೇಷವಾಗಿತ್ತು. ಈ ಸಂಪುಟ ವಿಸ್ತರಣೆ ಕಾರ್ಯಕ್ರಮದಲ್ಲಿ ಕಂಡು ಬಂದ ಗಮನ ಸೆಳೆಯುವ ಅಂಶಗಳು ಮುಂದಿವೆ.

ಗಮನ ಸೆಳೆದ ಸಚಿವ ಪ್ರಭು ಚೌಹಾಣ್

ಗಮನ ಸೆಳೆದ ಸಚಿವ ಪ್ರಭು ಚೌಹಾಣ್

ಪ್ರಮಾಣ ವಚನ ಸ್ವೀಕರಿಸಲು ರಾಜಭವನಕ್ಕೆ ಆಗಮಿಸಿದ ಬಹುತೇಕ ಶಾಸಕರು ತಮ್ಮ ಕೊರಳಿಗೆ ಕೇಸರಿ ವಸ್ತ್ರವನ್ನು ಧರಿಸಿದ್ದರು. ಇದು ಎಲ್ಲ ಗಮನ ಸೆಳೆಯಿತು. ಜೊತೆಗೆ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ನೂತನ ಸಚಿವ ಪ್ರಭು ಚೌಹಾಣ್ ಎಲ್ಲರ ಗಮನ ಸೆಳೆದರು. ಬಂಜಾರ ಸಮುದಾಯದ ಆಕರ್ಷಕ ಉಡುಗೆ ತೊಟ್ಟ ಬಂದಿದ್ದ ಪ್ರಭು ಚೌಹಾಣ್ ತಮ್ಮ ಉಡುಗೆ-ತೊಡುಗೆಯಿಂದ ಎಲ್ಲರ ಗಮನ ಸೆಳೆದರು.

ರಾಜ್ಯ ಬಿಜೆಪಿ ಸರ್ಕಾರದ ಏಕೈಕ ಮಹಿಳಾ ಸದಸ್ಯೆಯಾಗಿ ಶಶಿಕಲಾ ಅಣ್ಣಾ ಸಾಹೇಬ ಜೊಲ್ಲೆ ಅವರು ಗಮನ ಸೆಳೆದರು. ದೆಹಲಿಯಲ್ಲಿದ್ದ ನೂತನ ಸಚಿವೆ ಶಶಿಕಲಾ ಜೊಲ್ಲೆ ಅವರು ಬರುವುದು ತಡವಾಗಿತ್ತು. ಕೊನೆಗೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಶಶಿಕಲಾ ಜೊಲ್ಲೆ ಬಂದಿದ್ದರು. ಸಮಯದ ಅಭಾವದಿಂದ ಅವರು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ಅನುಮಾನ ಎಂಬಂತಾಗಿತ್ತು. ಹೀಗಾಗಿ ಶಶಿಕಲಾ ಜೊಲ್ಲೆ ಅವರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನಕ್ಕೆ ಆಗಮಿಸಲು ಝೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಲಾಗಿತ್ತು. ಅದರಿಂದಾಗಿ ಸಕಾಲದಲ್ಲಿ ಅವರು ರಾಜಭವನ ತಲುಪಿ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಯಿತು.

ಕ್ಷೇತ್ರದ ಜನತೆಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ

ಕ್ಷೇತ್ರದ ಜನತೆಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ

ಇಂದು ಪ್ರಮಾಣ ವಚನ ಸ್ವೀಕರಿಸಿದ ಎಲ್ಲ 29 ಸಚಿವರೂ ಕನ್ನಡ ಭಾಷೆಯಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದರು. ಜೊತೆಗೆ ದೇವರ ಹೆಸರಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದು ಗಮನ ಸೆಳೆಯಿತು. ನೂತನ ಸಚಿವ ಮುರುಗೇಶ್ ನಿರಾಣಿ ಹಾಗೂ ಶಂಕರ್ ಪಾಟೀಲ್ ಮುನೇನಕೊಪ್ಪ ಅವರುಗಳು ದೇವರ ಜೊತೆಗೆ ರೈತರ ಹೆಸರು ಸೇರಿಸಿ ಪ್ರಮಾಣ ವಚನ ಸ್ವೀಕರಿಸಿದರು.

ಜೊತೆಗೆ ನೂತನ ಸಚಿವರಾದ ಅರೆಬೈಲ್ ಶಿವರಾಂ ಹೆಬ್ಬಾರ್ ಹಾಗೂ ಶಶಿಕಲಾ ಜೊಲ್ಲೆ ಅವರು ದೇವರ ಜೊತೆಗೆ ತಮ್ಮ ಕ್ಷೇತ್ರದ ಜನರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ತಮ್ಮ ಕ್ಷೇತ್ರದ ಜನರಿಗೆ ಗೌರವ ಸಲ್ಲಿಸಿದರು. ಸಚಿವ ಆನಂದ್ ಸಿಂಗ್ ವಿಜಯನಗರದ ಪಂಪ ವಿರೂಪಾಕ್ಷ ಮತ್ತು ತಾಯಿ ಭುವನೇಶ್ವರಿ ಹೆಸರಿನಲ್ಲಿ ಹಾಗೂ ಬಿ.ಸಿ. ಪಾಟೀಲ್ ಅವರು ಜಗಜ್ಯೋತಿ ಬಸವೇಶ್ವರ ಹಾಗೂ ರೈತರ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಒಂದೂವರೆ ಗಂಟೆ ನಡೆದ ಪ್ರಮಾಣ ವಚನ ಕಾರ್ಯಕ್ರಮ

ಒಂದೂವರೆ ಗಂಟೆ ನಡೆದ ಪ್ರಮಾಣ ವಚನ ಕಾರ್ಯಕ್ರಮ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಸದಸ್ಯರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಸುಮಾರು 75 ನಿಮಿಷಗಳ ಕಾಲ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಭಾರತೀಯ ಜನತಾ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಂಸದ ಡಾ. ಉಮೇಶ್ ಜಾಧವ್ ಒಳಗೊಂಡಂತೆ ಹಲವು ಗಣ್ಯರು ಸಮಾರಂಭದಲ್ಲಿ ಹಾಜರಿದ್ದು, ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರು

ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರು

ರಾಜಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಬಿ. ಶ್ರೀರಾಮುಲು, ವಿ. ಸೋಮಣ್ಣ, ಉಮೇಶ್ ವಿಶ್ವನಾಥ ಕತ್ತಿ. ಎಸ್. ಅಂಗಾರ, ಜೆ. ಸಿ. ಮಾಧುಸ್ವಾಮಿ, ಅರಗ ಜ್ಞಾನೇಂದ್ರ, ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಸಿ.ಸಿ. ಪಾಟೀಲ್, ಆನಂದ್ ಸಿಂಗ್, ಕೋಟಾ ಶ್ರೀನಿವಾಸ ಪೂಜಾರಿ, ಪ್ರಭು ಚವ್ಹಾಣ್, ಮುರುಗೇಶ್ ರುದ್ರಪ್ಪ ನಿರಾಣಿ, ಅರೆಬೈಲ್ ಶಿವರಾಂ ಹೆಬ್ಬಾರ್, ಎಸ್.ಟಿ. ಸೋಮಶೇಖರ್, ಬಿ.ಸಿ. ಪಾಟೀಲ್, ಬಿ. ಎ. ಬಸವರಾಜ (ಬೈರತಿ ಬಸವರಾಜ್), ಡಾ. ಕೆ. ಸುಧಾಕರ್, ಕೆ. ಗೋಪಾಲಯ್ಯ, ಶಶಿಕಲಾ ಜೊಲ್ಲೆ, ಎನ್. ನಾಗರಾಜ್ (ಎಂ.ಟಿ.ಬಿ. ನಾಗರಾಜ್), ಕೆ.ಸಿ. ನಾರಾಯಣಗೌಡ, ಬಿ.ಸಿ. ನಾಗೇಶ್, ವಿ. ಸುನೀಲ್ ಕುಮಾರ್, ಹಾಲಪ್ಪ ಆಚಾರ್, ಶಂಕರ್ ಪಾಟೀಲ್ ಮುನೇನಕೊಪ್ಪ ಹಾಗೂ ಮುನಿರತ್ನ ಅವರು ಅಧಿಕಾರ ಪದ ಮತ್ತು ಗೋಪ್ಯತಾ ಪ್ರಮಾಣ ವಚನವನ್ನು ಸ್ವೀಕರಿಸಿದರು. ಇದರೊಂದಿಗೆ ಜುಲೈ 28 ರಂದು ಅಸ್ತಿತ್ವಕ್ಕೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಏಕ-ಸದಸ್ಯ ಸಚಿವ ಸಂಪುಟ ಪೂರ್ಣ ಪ್ರಮಾಣದ ರೂಪ ಪಡೆಯಿತು.

ಗೋಮಾತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ

ಗೋಮಾತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ

ಹಿಂದೆ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಪಶುಸಂಗೋಪನಾ ಸಚಿವರಾಗಿ ಗೋ ಹತ್ಯಾ ನಿಷೇಧ ಕಾನೂನು ಜಾರಿಗೆ ಶ್ರಮಿಸಿದ್ದ ಸಚಿವ ಪ್ರಭು ಚೌವ್ಹಾಣ್ ಅವರು ಗೋಮಾತೆ ಹಾಗೂ ಸಂತ ಸೇವಾಲಾಲ್ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗೌರವ ಸಲ್ಲಿಸಿದರು. ಸುಮಾರು ಒಂದೂವರೆ ಗಂಟೆ ನಡೆದ ಕಾರ್ಯಕ್ರಮದ ಬಳಿಕ ಪ್ರಮಾಣ ವಚನ ಸ್ವೀಕರಿಸಿದ ಎಲ್ಲಾ ಸಚಿವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೂ-ಗುಚ್ಛ ನೀಡಿ ಖುದ್ದು ಅಭಿನಂದಿಸಿ ಶುಭ ಹಾರೈಸಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಅವರು ರಾಜ್ಯಪಾಲರ ಅನುಮತಿ ಪಡೆದು ಕಾರ್ಯಕ್ರಮ ಆರಂಭಿಸಿ ನಿರೂಪಿಸಿ ನಿರ್ವಹಿಸಿದರು.

Recommended Video

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಮತ್ತು ಕಚೇರಿ ಮೇಲೆ ಐಟಿ ದಾಳಿ | Oneindia Kannada

English summary
Karnataka Cabinet Expansion: Highlights of today oath taking ceremony. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X