ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಸ್ ಮುಷ್ಕರ: ವಿವಿಧ ಜಿಲ್ಲೆಗಳ ಪರಿಸ್ಥಿತಿ ಏನು?

By Lekhaka
|
Google Oneindia Kannada News

ಬೆಂಗಳೂರು, ಏಪ್ರಿಲ್ 7: ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪರಿಷ್ಕರಣೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಬುಧವಾರ ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದಾರೆ.

Recommended Video

ರಸ್ತೆಗಿಳಿಯದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ..! ಸಂಚಾರಕ್ಕೆ ದುಪ್ಪಟ್ಟು ಹಣ ನೀಡಬೇಕಾದ ಸ್ಥಿತಿಯಲ್ಲಿ ಸಾರ್ವಜನಿಕರು| Oneindia Kannada

ಸಾರಿಗೆ ನೌಕರರ ಮುಷ್ಕರದಿಂದ ಕರ್ನಾಟಕದ ಹಲವು ಕಡೆಗಳಲ್ಲಿ ಸರ್ಕಾರಿ ಬಸ್ಸುಗಳು ರಸ್ತೆಗಿಳಿದಿಲ್ಲ. ಕೆಲವೆಡೆ ಪೊಲೀಸ್ ಸರ್ಪಗಾವಲಿನಲ್ಲಿ ಅಂತರ್ ರಾಜ್ಯ ಬಸ್ಸುಗಳು ಸಂಚರಿಸುತ್ತಿವೆ. ಬಸ್ಸುಗಳಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ಖಾಸಗಿ ಆಟೋಗಳು ಮತ್ತು ಬಸ್ಸುಗಳು ಪ್ರಯಾಣಿಕರಿಂದ ದುಪ್ಪಟ್ಟು ದರ ವಿಧಿಸುತ್ತಿವೆ.

 Karnataka Bus Strike: What Is The Situation In Many Districts?

ಚಿತ್ರದುರ್ಗ ವರದಿ

ಇಂದು ಕೆಎಸ್ಆರ್ಟಿಸಿ ನೌಕರರ ಮುಷ್ಕರ ಹಿನ್ನೆಲೆ ಪೊಲೀಸ್ ಭದ್ರತೆಯಲ್ಲಿ ವೋಲ್ವೊ ಬಸ್ ಸಂಚಾರ ಮಾಡಿತು. ಚಿತ್ರದುರ್ಗ ಬಸ್ ನಿಲ್ದಾಣದಿಂದ ಪೋಲಿಸ್ ಎಸ್ಕಾರ್ಟ್ ಭದ್ರತೆಯಲ್ಲಿ ವೋಲ್ವೋ ಬಸ್ ಸಂಚಾರ ಬೆಳೆಸಿದೆ. ಪುಣೆ-ದಾವಣಗೆರೆ-ಚಿತ್ರದುರ್ಗ-ಬೆಂಗಳೂರು ಮಾರ್ಗದ ವೋಲ್ವೋ ಬಸ್ಸಿಗೆ ಓರ್ವ ಸಬ್-ಇನ್ಸ್‌ಪೆಕ್ಟರ್, ಮೂವರು ಕಾನ್‌ಸ್ಟೆಬಲ್ ಒಳಗೊಂಡ ಎಸ್ಕಾರ್ಟ್ ಭದ್ರತೆ ಒದಗಿಸಿತು. ಚಿತ್ರದುರ್ಗದಿಂದ ಹತ್ತಕ್ಕೂ ಹೆಚ್ಚು ಪ್ರಯಾಣಿಕರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ಇನ್ನು, ಬಿಗಿ ಪೊಲೀಸ್ ಭದ್ರತೆಯೊಂದಿಗೆ ಚಿತ್ರದುರ್ಗ ಜಿಲ್ಲೆಯಿಂದ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಕಡೆಗೆ ನಲವತ್ತಕ್ಕೂ ಹೆಚ್ಚು ಪ್ರಯಾಣಿಕರಿರುವ ಈಶಾನ್ಯ ಸಾರಿಗೆ ಬಸ್ ಸಂಚಾರ ಆರಂಭಿಸಿದೆ. ಚಿತ್ರದುರ್ಗ ಜಿಲ್ಲೆಯ ಬಸ್ ನಿಲ್ದಾಣಕ್ಕೆ ಒಂದೊಂದೇ ಸರ್ಕಾರಿ ಬಸ್ ಬರುತ್ತಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಯಾಣಿಕರಿಗೆ ಅಷ್ಟಾಗಿ ಬಿಸಿ ತಟ್ಟುತ್ತಿಲ್ಲ ಎನ್ನಬಹುದು.

 Karnataka Bus Strike: What Is The Situation In Many Districts?

ಚಿಕ್ಕಮಗಳೂರು ವರದಿ

ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಕೆಎಸ್ಆರ್ಟಿಸಿ ಸಿಬ್ಬಂದಿಗಳು ಕರೆ ನೀಡಿರುವ ಮುಷ್ಕರಕ್ಕೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಬುಧವಾರ ಮುಂಜಾನೆಯಿಂದಲೇ ನೌಕರರು ಬಸ್ ಸಂಚಾರ ನಡೆಸದೆ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಯಾವುದೇ ಕೆಎಸ್ಆರ್ಟಿಸಿ ಚಾಲಕರು, ನಿರ್ವಾಹಕರು ಹಾಗೂ ಇತರೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮುಂಜಾನೆಯೇ ಬಸ್ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಬಸ್ ಇಲ್ಲದಿರುವುದರಿಂದ ಕೆಲ ಕಾಲ ಬಸ್ ನಿಲ್ದಾಣದಲ್ಲಿ ಕೂತು ನಂತರ ಖಾಸಗಿ ಬಸ್ ನಲ್ಲಿ ಪ್ರಯಾಣ ಬೆಳೆಸಿದರು.

 Karnataka Bus Strike: What Is The Situation In Many Districts?

ಕೋಲಾರ ವರದಿ

ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಗೆ ಅದರ ಬಿಸಿ ತಟ್ಟಿದ್ದು, ಬಸ್ ನಿಲ್ದಾಣಕ್ಕೆ ಒಂದೂ ಸಾರಿಗೆ ಬಸ್ ಬಂದಿಲ್ಲ. ಪ್ರಯಾಣಿಕರಿಲ್ಲದೆ, ಬಸ್ಸುಗಳು ಇಲ್ಲದೆ ಬಸ್ ನಿಲ್ದಾಣ ಖಾಲಿ ಖಾಲಿಯಾಗಿರುವ ದೃಶ್ಯ ಕಂಡುಬಂದಿದೆ. ಬಸ್ ನಿಲ್ದಾಣದಲ್ಲಿ ಪೊಲೀಸರು ಹಾಗೂ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದಿರುವುದರಿಂದ, ಕೇವಲ ಖಾಸಗಿ ಬಸ್ಸುಗಳ ಓಡಾಟ ಕಂಡುಬಂದಿದೆ.

ಸಾರಿಗೆ ನೌಕರರ ಮುಷ್ಕರದ ಲಾಭವನ್ನು ಖಾಸಗಿ ಬಸ್ ಹಾಗೂ ಆಟೋ ಚಾಲಕರು ಪಡೆಯುತ್ತಿದ್ದಾರೆ. ಪ್ರಯಾಣಿಕರಿಂದ ಆಟೋ ಚಾಲಕರು ದುಪ್ಪಟ್ಟು ಹಣ ಪೀಕುತ್ತಿರುವುದು ಸಾಮಾನ್ಯವಾಗಿದೆ. ಕೋಲಾರ ಬಸ್ ನಿಲ್ದಾಣದಿಂದ ವೇಮಗಲ್ ಗೆ ಹೋಗಲು ಆಟೋ ಚಾಲಕರು 600 ರೂ. ಕೇಳುತ್ತಿದ್ದಾರೆ. ಬಸ್ಸಿನಲ್ಲಿ ಕೇವಲ 30 ರೂ. ಚಾರ್ಜ್ ಇದ್ದರೆ, ಇವತ್ತು 600 ರೂಪಾಯಿ ಕೇಳುತ್ತಿದ್ದಾರೆ. ದೂರದೂರುಗಳಿಗೆ ತೆರಳಲು ಪ್ರಯಾಣಿಕರು ಪರದಾಟ ನಡೆಸುತ್ತಿದ್ದು, ಅನಿವಾರ್ಯತೆಯಿಂದ ಕೇಳಿದಷ್ಟು ಹಣ ಕೊಡಬೇಕಾಗಿದೆ.

 Karnataka Bus Strike: What Is The Situation In Many Districts?

ಉಡುಪಿ ವರದಿ

ಉಡುಪಿ ಜಿಲ್ಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರ ಇನ್ನೂ ಆರಂಭವಾಗಿಲ್ಲ. ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗದಿರುವುದರಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ. ಖಾಸಗಿ ಬಸ್ಸು ಸಂಚರಿಸುವುದರಿಂದ ಉಡುಪಿ ಜಿಲ್ಲೆಯಲ್ಲಿ ಗಂಭೀರ ಸಮಸ್ಯೆ ಇಲ್ಲವಾಗಿದ್ದು, ಹೊರ ಜಿಲ್ಲೆಗಳಿಂದಲೂ ಯಾವುದೇ ಸರ್ಕಾರಿ ಬಸ್ಸುಗಳು ಬಂದಿಲ್ಲ. ಉಡುಪಿ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಯಾವುದೇ ಸರ್ಕಾರಿ ಬಸ್ ಹೋಗುತ್ತಿಲ್ಲ.

ಹೊರ ಜಿಲ್ಲೆಯಿಂದ ಬಂದ ನಾಲ್ಕಾರು ಬಸ್ಸುಗಳು ಡಿಪೋಗೆ ವಾಪಸ್ ಹೋಗುತ್ತಿದ್ದು, ಖಾಸಗಿ ಬಸ್ ಸಂಚಾರದಿಂದ ಜಿಲ್ಲೆಯೊಳಗಿನ ಪ್ರಯಾಣಕ್ಕೆ ಅಬಾಧಿತವಾಗಿದ್ದರೆ, ಅನ್ಯ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗಿದೆ.

 Karnataka Bus Strike: What Is The Situation In Many Districts?

ರಾಮನಗರ ವರದಿ

ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ, ರಾಮನಗರ ಜಿಲ್ಲೆಗೂ ಮುಷ್ಕರದ ಬಿಸಿ ತಟ್ಟಿದೆ. ಬಸ್ ನಿಲ್ದಾಣಕ್ಕೆ ಇನ್ನೂ ಕೆಂಪು ಸಾರಿಗೆ ಬಸ್ ಬಂದಿಲ್ಲ. ಪ್ರಯಾಣಿಕರಿಲ್ಲದೆ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ. ಬೆಳಗ್ಗೆ 7 ಗಂಟೆಯಾದರೂ ಬಸ್ಸುಗಳು ಬಸ್ ನಿಲ್ದಾಣದತ್ತ ಮುಖಮಾಡಿದ್ದಿಲ್ಲ. ಯಾವುದೇ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ತಿಳಿದುಬಂದಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಖಾಸಗಿ ಬಸ್ ಹಾಗೂ ಟಿಟಿ ಗಾಡಿಗಳ ಓಡಾಟ ಹೆಚ್ಚಾಗಿದ್ದು, ರಾಮನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಖಾಸಗಿ ಬಸ್ ಆಗಮಿಸಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಖಾಸಗಿ ಬಸ್ಸುಗಳಿಗೆ ಆದ್ಯತೆ ನೀಡಿದರು. ರಾಮನಗರ ಜಿಲ್ಲಾದ್ಯಂತ 150ಕ್ಕೂ ಹೆಚ್ಚು ಖಾಸಗಿ ಬಸ್ಸುಗಳ ಓಡಾಟ ಕಂಡುಬಂತು.

 Karnataka Bus Strike: What Is The Situation In Many Districts?

ಕೊಡಗು ವರದಿ

ಸಾರಿಗೆ ನೌಕರರ ಮುಷ್ಕರದಿಂದ ಕೊಡಗು ಜಿಲ್ಲೆಯಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆ ಆಗಿಲ್ಲ. ಜಿಲ್ಲೆಯಲ್ಲಿ 109 ಕೆಎಸ್‌ಆರ್‌ಟಿಸಿ ಬಸ್ಸುಗಳು ಓಡಾಡುತ್ತಿದ್ದರೆ, 149 ಖಾಸಗಿ ಬಸ್ಸುಗಳು ಸಂಚರಿಸುತ್ತಿವೆ. ಖಾಸಗಿ ಬಸ್‌, ಟಿಟಿಗಳ ಓಡಾಟಕ್ಕೆ ತಾತ್ಕಾಲಿಕ ಅನುಮತಿ ನೀಡಿರುವುದರಿಂದ ವೀರಾಜಪೇಟೆ, ಮಡಿಕೇರಿ, ಸೋಮವಾರಪೇಟೆ ಬಸ್‌ ನಿಲ್ದಾಣಗಳಲ್ಲಿ ಜನಜಂಗುಳಿ ಕಂಡು ಬಂದಿಲ್ಲ. ಅದರೆ, ಜನ ಜೀವನ ಎಂದಿನಂತಿದೆ. ಬೆಂಗಳೂರು, ಮೈಸೂರು, ಮಂಗಳೂರು, ಹಾಸನ ಭಾಗಗಳಿಗೆ ತೆರಳುವ ಪ್ರಯಾಣಿಕರಿಗೆ ನೌಕರರ ಮುಷ್ಕರದಿಂದ ತೊಂದರೆ ಆಗಿದೆ.

 Karnataka Bus Strike: What Is The Situation In Many Districts?

ಬೆಂಗಳೂರು ವರದಿ

ಸಾರಿಗೆ ನೌಕರರ ಮುಷ್ಕರದಿಂದ ಬೆಂಗಳೂರಿನ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ. ಬೇರೆ ಊರುಗಳಿಂದ ಬಂದು ಬಸ್ ಸಿಗದೆ ನೂರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಆರಕ್ಕೂ ಹೆಚ್ಚು ಖಾಸಗಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಮತ್ತೊಂದೆಡೆ ಬಸ್ ನಿಲ್ದಾಣದಲ್ಲಿ ಆಟೋಗಳ ಸಂಚಾರ ಹೆಚ್ಚಾಗಿದೆ.

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಎರಡು ಬಸ್ಸುಗಳ ವ್ಯವಸ್ಥೆ ಮಾಡಿದ್ದು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲೂ ಖಾಲಿ ಖಾಲಿ ಇದೆ. ಮಂಗಳವಾರವೇ ಬಸ್ಸುಗಳನ್ನು ಡಿಪೋದಲ್ಲಿ ಬಿಟ್ಟು ನೌಕರರು ಮನೆಗೆ ತೆರಳಿದ್ದಾರೆ. ಬೊಮ್ಮನಹಳ್ಳಿ ಮಾರ್ಗದಲ್ಲಿ ಎರಡು ಬಿಎಂಟಿಸಿ ಬಸ್ ಬಳಕೆ ಮಾಡಲಾಗುತ್ತಿತ್ತು, ರಾತ್ರಿ ಪಾಳಿಯಲ್ಲಿದ್ದ ಎರಡು ಬಸ್, ಡಿಪೋಗೆ ತೆರಳಿ ಸ್ಥಗಿತಗೊಳಿಸಲಾಯಿತು.

ಸಾರಿಗೆ ನೌಕರರು ಮುಷ್ಕರ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಹೆಚ್ಚುವರಿ ಮೆಟ್ರೋ ಸೇವೆ ಒದಗಿಸಲಾಗಿದೆ. ಪ್ರಯಾಣಿಕರಿಗೆ ತೊಂದರೆ ಆಗದಂತೆ ಹೆಚ್ಚುವರಿ ಸೇವೆ ನೀಡಲು ತೀರ್ಮಾನಿಸಲಾಗಿದ್ದು, ನೇರಳೆ ಹಾಗೂ ಹಸಿರು ಮಾರ್ಗದಲ್ಲಿ ಹೆಚ್ಚುವರಿ ಟ್ರಿಪ್ ಓಡಿಸಲಾಗುತ್ತಿದೆ. ರೈಲು ಸಂಚಾರ ಅಂತರ ತಗ್ಗಿಸುವ ಮೂಲಕ ಹೆಚ್ಚುವರಿ ಸೇವೆ ನೀಡಲಾಗಿದೆ. ಬೆಳಗ್ಗೆ ಏಳು ಗಂಟೆಯಿಂದ ರಾತ್ರಿ ಒಂಬತ್ತು ಗಂಟೆಯವರೆಗೂ ಓಡಲಿವೆ. ನೇರಳೆ ಮಾರ್ಗದಲ್ಲಿ ಪ್ರತಿ 4.5 ನಿಮಿಷ, ಹಸಿರು ಮಾರ್ಗದಲ್ಲಿ ಪ್ರತಿ 5 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಸಂಚರಿಸಲಿದೆ.

 Karnataka Bus Strike: What Is The Situation In Many Districts?

ಮೈಸೂರು ವರದಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ರಾಜ್ಯಾದ್ಯಂತ ನಡೆಸುತ್ತಿರುವ ಮುಷ್ಕರದ ಬಿಸಿ ಸಾಂಸ್ಕೃತಿಕ ನಗರಿ ಮೈಸೂರಿಗೂ ತಟ್ಟಿದ್ದು, ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸಾರಿಗೆ ನೌಕರರ ಮುಷ್ಕರದ ಪರಿಣಾಮ ಬುಧವಾರ ಬೆಳಗ್ಗೆಯಿಂದಲೇ ನಗರದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಸಾರಿಗೆ ಬಸ್ ಡಿಪೋದಿಂದ ಹೊರಬಾರದೆ, ಬಸ್ ನಿಲ್ದಾಣದಲ್ಲಿಯೇ ಬೀಡು ಬಿಟ್ಟವೆ. ಮುಷ್ಕರದ ಪರಿಣಾಮ ಸಾರ್ವಜನಿಕರಿಗೆ ಸ್ವಲ್ಪಮಟ್ಟಿಗೆ ತೊಂದರೆ ಎದುರಾಯಿತು.

ಪ್ರಮುಖವಾಗಿ ಬೇರೆ ಬೇರೆ ಊರುಗಳಿಗೆ ಹೋಗಬೇಕಾದ ಪ್ರಯಾಣಿಕರು ಬಸ್ ಸೌಲಭ್ಯ ಇಲ್ಲದೆ ಪರದಾಡುವಂತಾಗಿದೆ. ಈ ನಡುವೆ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ನಿಗಾವಹಿಸಿರುವ ಸಾರಿಗೆ ಅಧಿಕಾರಿಗಳು, ನಗರದ ಗ್ರಾಮಾಂತರ ಬಸ್ ನಿಲ್ದಾಣದಿಂದ ಖಾಸಗಿ ಬಸ್‌ಗಳಲ್ಲಿ ತೆರಳಲು ಅವಕಾಶ ಕಲ್ಪಿಸಿದ್ದಾರೆ. ಹೀಗಾಗಿ ಮೈಸೂರಿನಿಂದ ಬೆಂಗಳೂರು, ಶಿವಮೊಗ್ಗ, ಹಾಸನ ಸೇರಿದಂತೆ ಹಲವು ಜಿಲ್ಲೆಗಳಿಗೆ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ.

English summary
Employees of Karnataka State Road Transport Corporation have called for a statewide strike on Wednesday demanding pay revision and various demands as recommended by the Sixth Pay Commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X