• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ಬಜೆಟ್ 2018 : ಕುಮಾರಸ್ವಾಮಿ ಆಯವ್ಯಯದ Highlights

By Gururaj
|

ಬೆಂಗಳೂರು, ಜುಲೈ 05 : ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 2018-19ನೇ ಸಾಲಿನ ಬಜೆಟ್‌ ಅನ್ನು ಮಂಡಿಸಿದರು. ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಇದಾಗಿದೆ.

ಜುಲೈ 5ರ ಗುರುವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸೌಧದಲ್ಲಿ ಬಜೆಟ್ ಮಂಡನೆ ಮಾಡಿದರು. ರೈತರ ಸಾಲ ಮನ್ನಾ ಮಾಡುವ ಕುರಿತು ಬಹಳ ನಿರೀಕ್ಷೆ ಇತ್ತು. ಬಜೆಟ್‌ನಲ್ಲಿ ಕುಮಾರಸ್ವಾಮಿ ಈ ಕುರಿತು ಹಲವು ಘೋಷಣೆಗಳನ್ನು ಮಾಡಿದರು.

ಕರ್ನಾಟಕ ಬಜೆಟ್: ಸಿದ್ದರಾಮಯ್ಯ VS ಎಚ್ ಡಿ ಕುಮಾರಸ್ವಾಮಿ

ಹಣಕಾಸು ಖಾತೆಯನ್ನೂ ತಮ್ಮ ಬಳಿಯೇ ಇಟ್ಟುಕೊಂಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 2018-19ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಈ ಬಾರಿಯ ಬಜೆಟ್ ಗಾತ್ರ 2,14,488 ಕೋಟಿ ರೂ.ಗಳು.

ಕುಮಾರಸ್ವಾಮಿ ಜೆಡಿಸ್ ಭದ್ರಕೋಟೆ ಹಾಸನಕ್ಕೆ ಕೊಟ್ಟಿದ್ದೇನು?

ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಫೆಬ್ರವರಿ 16, 2018ರಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಘೋಷಿಸಿರುವ ಎಲ್ಲಾ ಕಾರ್ಯಕ್ರಮಗಳನ್ನು ಮುಂದುವರೆಸಲಾಗುತ್ತದೆ ಎಂದು ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದರು. ಕುಮಾರಸ್ವಾಮಿ ಅವರು ಮಂಡನೆ ಮಾಡದಿ ಬಜೆಟ್‌ನಲ್ಲಿನ ಮುಖ್ಯಾಂಶಗಳು ಇಲ್ಲಿವೆ...ಯಾವ ಕ್ಷೇತ್ರಕ್ಕೆ ಏನು ಸಿಕ್ಕಿದೆ? ಎಂದು ಚಿತ್ರಗಳಲ್ಲಿ ನೋಡಿ

ಕುಮಾರಸ್ವಾಮಿ ಕೊಟ್ಟಿದ್ದೇನು

ಕುಮಾರಸ್ವಾಮಿ ಕೊಟ್ಟಿದ್ದೇನು

* ಕೃಷಿ ವಲಯದ ಚಟುವಟಿಕೆಗಳಲ್ಲಿ ರೈತರ ಸಹಭಾಗಿತ್ವಕ್ಕೆ ಒತ್ತು; ಪ್ರತಿಜಿಲ್ಲೆಯ ಇಬ್ಬರು ಪ್ರಗತಿಪರ ರೈತರನ್ನೊಳಗೊಂಡ ಕರ್ನಾಟಕ ರಾಜ್ಯ ರೈತರ ಸಲಹಾ ಸಮಿತಿ ರಚನೆ.

* ಕೋಲಾರ, ಚಿತ್ರದುರ್ಗ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ತಲಾ 5000 ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯ ಒದಗಿಸಲು 150 ಕೋಟಿ ರೂ. ಅನುದಾನ.

* ಆಂಧ್ರಪ್ರದೇಶ ಮಾದರಿಯಲ್ಲಿ ಶೂನ್ಯ ಬಂಡವಾಳ ಸಹಜ ಕೃಷಿಗೆ ಒತ್ತು ನೀಡುವ ಯೋಜನೆಗೆ 50 ಕೋಟಿ ರೂ. ಅನುದಾನ.

* ಕೃಷಿ ವಲಯದ ವಿವಿಧ ಇಲಾಖೆಗಳಲ್ಲಿ ಸಮನ್ವಯತೆ ಸಾಧಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಸಮನ್ವಯ ಉನ್ನತ ಸಮಿತಿ ರಚನೆ.

* ರೈತರ ಸಂಘಟನೆ ಹಾಗೂ ಸಾಮರ್ಥ್ಯ ಬಲವರ್ಧನೆ ಮಾಡಲು ರಾಜ್ಯದ ರೈತ ಉತ್ಪಾದಕ ಸಂಸ್ಥೆ (FPO) ನೀತಿ ಜಾರಿಗೆ ಕ್ರಮ.

* ರೈತರು ಅಂಟುವಾಳ ಕಾಯಿ ಮರವನ್ನು ವ್ಯಾಪಕವಾಗಿ ಬೆಳೆಯಲು ರೂಪಿಸುವ ಕಾರ್ಯಕ್ರಮಕ್ಕೆ 10 ಕೋಟಿ ರೂ. ಮೀಸಲು.

* ರೈತರ ಹಂತದಲ್ಲಿಯೇ ಸಣ್ಣ ಸಣ್ಣ ಯಂತ್ರಚಾಲಿತ ಎಣ್ಣೆ ಗಾಣಗಳನ್ನು ನೀಡಿ ಶುದ್ಧ ಎಣ್ಣೆ ಪೂರೈಕೆಗೆ ಪ್ರೋತ್ಸಾಹ. ಈ ಯೋಜನೆಗೆ 5 ಕೋಟಿ ರೂ. ಅನುದಾನ.

* ಧಾರವಾಡ ಕೃಷಿ ವಿವಿ ಅಭಿವೃದ್ಧಿಪಡಿಸಿದ ನಿರ್ವಾತ ತಂತ್ರಜ್ಞಾನವನ್ನು ರೈತರಿಗೆ ಪ್ರಚುರಪಡಿಸಲು 3 ಕೋಟಿ ರೂ. ಅನುದಾನ.

* ಕೃಷಿಗೆ ಪೂರಕ ತಂತ್ರಜ್ಞಾನ ಆವಿಷ್ಕಾರ ಮಾಡುವ ನವೋದ್ಯಮಗಳಿಗೆ ಉತ್ತೇಜನ; 5 ಕೋಟಿ ರೂ. ಅನುದಾನ.

* ಕರ್ನಾಟಕ ಅಂತರಗಂಗ ಸೂಕ್ಷ್ಮ ನೀರಾವರಿ ನಿಗಮ ನಿಯಮಿತ ಸಂಸ್ಥೆಯ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ.

* ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ದೃಢೀಕರಣ ಸಂಸ್ಥೆಗೆ ಬೀಜ ಪ್ರಮಾಣೀಕರಣ ಮತ್ತು ದೃಢೀಕರಣ ಕೇಂದ್ರವನ್ನು ಸ್ಥಾಪಿಸಲು 5 ಕೋಟಿ ರೂ. ಅನುದಾನ.

ತೋಟಗಾರಿಕೆಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು?

ತೋಟಗಾರಿಕೆಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು?

* ತೋಟಗಾರಿಕಾ ವಲಯದಲ್ಲಿ ಕಾರವಾರ, ತುಮಕೂರು, ಯಾದಗಿರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ತಲಾ 5000 ಹೆಕ್ಟೇರ್ ಪ್ರದೇಶದಲ್ಲಿ ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯ ಒದಗಿಸಲು 150 ಕೋಟಿ ರೂ. ನಿಗದಿ.

* 2017ರ ಬೇಸಿಗೆಯ ಬರಗಾಲದಿಂದ ಸಂಪೂರ್ಣವಾಗಿ ಒಣಗಿ ಅನುತ್ಪಾದಕವಾಗಿರುವ ತೆಂಗಿನ ಬೆಳೆಗಾರರ ಹಿತರಕ್ಷಣೆಗೆ 190 ಕೋಟಿ ರೂ. ಸಹಾಯಧನ.

ರೇಷ್ಮೆ ಇಲಾಖೆ

* ಮೈಸೂರು ಜಿಲ್ಲೆಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪನೆ. 2018-19ರಲ್ಲಿ 1 ಕೋಟಿ ರೂ. ಅನುದಾನ.

* ತಲಘಟ್ಟಪುರದ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಪುನಶ್ಚೇತನಕ್ಕೆ 5 ಕೋಟಿ ರೂ. ಅನುದಾನ.

* ರೇಷ್ಮೆ ಉಪ ಉತ್ಪನ್ನಗಳಿಗೆ ಮಾರುಕಟ್ಟೆಯ ಅವಕಾಶ ಕಲ್ಪಿಸಲು 2 ಕೋಟಿ ರೂ. ಅನುದಾನ.

* ಚನ್ನಪಟ್ಟಣದಲ್ಲಿರುವ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ (ಕೆ.ಎಸ್.ಐ.ಸಿ.) ಪುನಶ್ಚೇತನಕ್ಕೆ 5 ಕೋಟಿ ರೂ. ಅನುದಾನ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

* ಕರೆ ಸಂಖ್ಯೆ 108 ಮತ್ತು 104ರಲ್ಲಿ ಲಭ್ಯವಿರುವ ತುರ್ತು ಪ್ರತಿಕ್ರಿಯೆ ವ್ಯವಸ್ಥೆ (Emergency Response Services) ಮತ್ತು ವೈದ್ಯಕೀಯ ಸಹಾಯವಾಣಿ ಸೇವೆಗಳ ವ್ಯಾಪ್ತಿಯ ವಿಸ್ತರಣೆ. ಇದರಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳು ಮತ್ತು ಮಾನಸಿಕ ಆರೋಗ್ಯ ರಕ್ಷಣಾ ಸೇವೆಗಳ ಸಂಯೋಜನೆಗೆ ಕ್ರಮ.

* ಮುಂದಿನ ಎರಡು ವರ್ಷಗಳಲ್ಲಿ ಔಷಧ ನಿಯಂತ್ರಣ ವ್ಯವಸ್ಥೆ ಬಲಪಡಿಸಲು 40 ಕೋಟಿ ರೂ. ವೆಚ್ಚದ ಯೋಜನೆ ಜಾರಿ.

* ಬಡ ರೋಗಿಗಳಿಗೆ ಹೃದಯ, ಮೂತ್ರಪಿಂಡ, ಯಕೃತ್ತು ಇತ್ಯಾದಿ ಅಂಗಾಂಗ ಕಸಿಗಾಗಿ ಪ್ರತ್ಯೇಕ ಯೋಜನೆಗೆ 30 ಕೋಟಿ ರೂ. ಅನುದಾನ.

* ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿ, ಆಂಕಾಲಜಿ ಆರೋಗ್ಯ ಸೇವೆಯ ಘಟಕ ಹಾಗೂ ಟ್ರಾಮಾ ಘಟಕ ಸ್ಥಾಪನೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ

* ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳ ಕಟ್ಟಡಗಳ ದುರಸ್ತಿಗೆ 150 ಕೋಟಿ ರೂ. ಗಳ ವಿಶೇಷ ಪ್ಯಾಕೇಜ್.

* ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ತರಬೇತಿ ಕೇಂದ್ರಗಳ ಬಲವರ್ಧನೆಗೆ 5 ಕೋಟಿ ರೂ. ಅನುದಾನ.

* 1000 ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ಹೊಸದಾಗಿ ಪ್ರಾರಂಭ.

* ಮುಂದಿನ ಮೂರು ವರ್ಷದಲ್ಲಿ ಎಲ್ಲಾ 48 ಸಾವಿರ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಮತ್ತು ಮಕ್ಕಳ ಹಾಜರಾತಿಯ ನಿಗಾವಹಿಸಲು ಬಯೋಮೆಟ್ರಿಕ್ ಸಾಧನ ಅಳವಡಿಕೆ. ಪ್ರಸಕ್ತ ಸಾಲಿನಲ್ಲಿ 5 ಕೋಟಿ ರೂ. ಅನುದಾನ.

* ಆಯ್ದ 4100 ಸರ್ಕಾರಿ ಪ್ರಾಥಮಿಕ ಶಾಲೆಗಳ ಆವರಣಕ್ಕೆ ಅಂಗನವಾಡಿ ಕೇಂದ್ರಗಳ ಸ್ಥಳಾಂತರ; ಬಾಲ ಸ್ನೇಹಿ ಕೇಂದ್ರಗಳಾಗಿ ಬಲವರ್ಧನೆ; ಎಲ್‌ಕೆಜಿ, ಯುಕೆಜಿ ತರಗತಿಗಳ ಪ್ರಾರಂಭ.

* ಒಂದು ಕಿ.ಮೀ ವ್ಯಾಪ್ತಿಯಲ್ಲಿ ಕಡಿಮೆ ದಾಖಲಾತಿ ಹೊಂದಿರುವ 28847 ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಹತ್ತಿರದ 8530 ಸರ್ಕಾರಿ ಶಾಲೆಗಳೊಂದಿಗೆ ವಿಲೀನಗೊಳಿಸಲು ಕ್ರಮ.

ಉನ್ನತ ಶಿಕ್ಷಣ

* ರಾಜ್ಯದ ಸರ್ಕಾರಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್.

* ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯವೇ ಬುನಾದಿಯಾದ ಹೊಸ ವಿಶ್ವವಿದ್ಯಾಲಯಗಳ ಪ್ರಾರಂಭ; 9 ಕೋಟಿ ರೂ. ಅನುದಾನದಲ್ಲಿ ತುಮಕೂರು ಜಿಲ್ಲೆಯಲ್ಲಿ ಕ್ರೀಡೆ ಮತ್ತು ಅಂಗಸಾಧನೆಗೆ ಸಂಬಂಧಿಸಿದ ವಿಶ್ವವಿದ್ಯಾಲಯ, ಶಿವಮೊಗ್ಗ ಜಿಲ್ಲೆಯಲ್ಲಿ ತಾಯಿನಾಡು ಭದ್ರತಾ ವಿಶ್ವವಿದ್ಯಾಲಯ, ಹಂಪಿಯಲ್ಲಿ ಪ್ರವಾಸೋದ್ಯಮ ವಿಶ್ವವಿದ್ಯಾಲಯ ಸ್ಥಾಪನೆಗೆ ಕ್ರಮ.

* ಪದವಿ ಪೂರ್ವ ಮತ್ತು ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಮಾಹಿತಿ ಸಂವಹನ ತಂತ್ರಜ್ಞಾನ (ಐ.ಸಿ.ಟಿ) ಬಳಕೆಯ ಮೂಲಕ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ.

* ಹಳೆ ವಿದ್ಯಾರ್ಥಿಗಳ ನೆರವಿನೊಂದಿಗೆ ಶಾಲೆಗಳ ಮೂಲಭೂತ ಸೌಕರ್ಯ ಬಲವರ್ಧಿಸಲು ಕ್ರೌಡ್ ಫಂಡಿಂಗ್ ಪೋರ್‍ಟಲ್ ಆರಂಭ. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದಲ್ಲಿ ಸಹಾಯ ಮಾಡುವವರಿಗೂ ಈ ಪೋರ್‍ಟಲ್ ಮೂಲಕ ಶಾಲೆಗಳಿಗೆ ನೆರವು; 3 ಕೋಟಿ ರೂ. ಅನುದಾನ.

ಆರೋಗ್ಯ ಕ್ಷೇತ್ರ

ಆರೋಗ್ಯ ಕ್ಷೇತ್ರ

* ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ.

* ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯನ್ನು 800 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು 30 ಕೋಟಿ ರೂ. ಅನುದಾನ.

* ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ bone marrow transplant ಚಿಕಿತ್ಸೆಗಾಗಿ ಪ್ರತ್ಯೇಕ ಘಟಕ ಸ್ಥಾಪಿಸಲು 12 ಕೋಟಿ ರೂ. ಅನುದಾನ.

* ರಾಮನಗರದಲ್ಲಿ 40 ಕೋಟಿ ರೂ. ವೆಚ್ಚದಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಕ್ರಮ.

* ಬೆಳಗಾವಿ, ಕಲಬುರಗಿ ಮತ್ತು ಮೈಸೂರು ನಗರಗಳಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ ಹಾಗೂ ಇತರ ರೋಗಗಳಿಗೆ ಸಂಬಂಧಿಸಿದ ತೃತೀಯ ಹಂತದ ಆರೋಗ್ಯ ಸೇವೆ ಒದಗಿಸಲು ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭ. ಗದಗ, ಕೊಪ್ಪಳ, ಚಾಮರಾಜನಗರ ಮತ್ತು ಹಾಸನ ನಗರಗಳ ವೈದ್ಯಕೀಯ ಕಾಲೇಜುಗಳಲ್ಲಿ 450 ಹಾಸಿಗೆ ಸಾಮರ್ಥ್ಯದ ಹೊಸ ಆಸ್ಪತ್ರೆ ಸ್ಥಾಪನೆ. 200 ಕೋಟಿ ರೂ. ಅನುದಾನ.

ಇಂಧನ ಮತ್ತು ವಸತಿ ಇಲಾಖೆ

ಇಂಧನ ಮತ್ತು ವಸತಿ ಇಲಾಖೆ

ಇಂಧನ

* ವಿದ್ಯುತ್ ಪ್ರಸರಣಾ ಜಾಲ ಬಲವರ್ಧನೆಗೆ 35 ವಿದ್ಯುತ್ ಉಪಕೇಂದ್ರ ಸ್ಥಾಪನೆ; 75 ಉಪ ಕೇಂದ್ರ ಮೇಲ್ದರ್ಜೆಗೆ ಏರಿಕೆ.

* ಬೆಂಗಳೂರು ನಗರದಲ್ಲಿ ಎಲ್ಲಾ Overhead ಮಾರ್ಗಗಳನ್ನು ಭೂಗತ ಮಾರ್ಗ(Underground Cable)ಗಳಾಗಿ ಪರಿವರ್ತಿಸಲು ವಿಸ್ತೃತ ಯೋಜನೆ ತಯಾರಿ; ಹಂತ ಹಂತವಾಗಿ ಅನುಷ್ಠಾನಕ್ಕೆ ಕ್ರಮ.

ವಸತಿ

* ಬೆಂಗಳೂರು ನಗರದ ಬಡವರಿಗಾಗಿ ಜಾರಿಗೊಳಿಸಿದ ಮುಖ್ಯಮಂತ್ರಿಯವರ ಒಂದು ಲಕ್ಷ ಮನೆಗಳು ಯೋಜನೆ ಎಲ್ಲಾ ನಗರಗಳಿಗೆ ವಿಸ್ತರಣೆ.

* ಬೆಂಗಳೂರು ನಗರದಲ್ಲಿ ಬಡವರಿಗೆ ಬಹುಮಹಡಿ ಮನೆಗಳ ನಿರ್ಮಾಣ.

* ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಕೊಳೆಗೇರಿಗಳ ಅಭಿವೃದ್ಧಿ; 2019-20 ರಿಂದ ಮಾರ್ಗಸೂಚಿ ಜಾರಿ.

* ವಿಕಲಚೇತನ ಫಲಾನುಭವಿಗಳಿಗೆ "ಬೇಡಿಕೆಯ ಮೇರೆಗೆ" ಆನ್‌ಲೈನ್‌ನಲ್ಲಿ ಅರ್ಜಿ ಪಡೆದು ಮನೆ ಹಂಚಿಕೆ.

ಪ್ರವಾಸೋದ್ಯಮ

ಪ್ರವಾಸೋದ್ಯಮ

* ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ.

* ಈ ವರ್ಷ ಬೇಲೂರು, ಹಂಪಿ ಮತ್ತು ವಿಜಯಪುರದಲ್ಲಿ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಸಂಕಲ್ಪ. ಈ ನಿಟ್ಟಿನಲ್ಲಿ ಯುವಕ ಯುವತಿಯರಿಗೆ ಕೌಶಲ್ಯ ತರಬೇತಿಗಾಗಿ ಮುಂದೆ ಬರುವ ಖಾಸಗಿ ತರಬೇತಿ ಸಂಸ್ಥೆಗಳಿಗೆ ತಲಾ 60 ಲಕ್ಷ ರೂ.ಗಳ ಷೇರು ಬಂಡವಾಳ ಹೂಡಿಕೆ; ಈ ಮೂರು ಪ್ರವಾಸಿ ಕೇಂದ್ರಗಳಲ್ಲಿ ಪರಿಸರ ಹಾಗೂ ಆಹಾರದ ಶುದ್ಧತೆಯನ್ನು ಕಾಪಾಡಲು ಸರ್ಕಾರಿ ಸ್ಥಳೀಯ ಸಂಸ್ಥೆಗಳಿಗೆ 20 ಕೋಟಿ ರೂ. ಅನುದಾನ.

* ಪ್ರವಾಸೋದ್ಯಮಕ್ಕೆ ಬೇಕಾಗುವ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಮುಂದೆ ಬರುವ ಖಾಸಗಿ ಸಂಸ್ಥೆಗಳಲ್ಲಿ ಶೇ.30ರಷ್ಟು ಷೇರು ಬಂಡವಾಳ ಹೂಡಿಕೆ; ಪ್ರವಾಸಿ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಈ ವರ್ಷ 80 ಕೋಟಿ ರೂ. ನಿಗದಿ.

* ಕೆ.ಎಸ್.ಟಿ.ಡಿ.ಸಿ ಸಂಸ್ಥೆಗೆ ಹೋಟೆಲ್ ಸೌಲಭ್ಯ ಕಲ್ಪಿಸಲು 80 ಕೋಟಿ ರೂ.

* ಪ್ರಮುಖ ಹೆದ್ದಾರಿಗಳಲ್ಲಿ ಪ್ರವಾಸಿಗರಿಗಾಗಿ ಮೂರು ಮಾದರಿ ರಸ್ತೆ ಬದಿ ಸೌಲಭ್ಯಗಳ (Model way side Facilities) ನಿರ್ಮಾಣ.

* ಜಗತ್ಪ್ರಸಿದ್ಧ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತ ಪ್ರದೇಶಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ಹೆಚ್ಚುವರಿ ಪ್ರವಾಸಿ ಸೌಲಭ್ಯ ಒದಗಿಸಲು 5 ಕೋಟಿ ರೂ. ಅನುದಾನ.

* ರಾಮನಗರದ ಬಳಿ ಆರ್ಟ್ಸ್ ಅಂಡ್ ಕ್ರಾಫ್ಟ್ ವಿಲೇಜ್ ಮತ್ತು ಕಣ್ವ ಜಲಾಶಯದ ಪ್ರದೇಶದಲ್ಲಿ ಚಿಲ್ಡ್ರನ್ಸ್ ವರ್ಲ್ಡ್ ಯೋಜನೆ ಖಾಸಗಿ ಸಹಭಾಗಿತ್ವದೊಂದಿಗೆ ಅಭಿವೃದ್ಧಿ.

ಸಮಾಜ ಕಲ್ಯಾಣ

ಸಮಾಜ ಕಲ್ಯಾಣ

* ಗಂಗಾ ಕಲ್ಯಾಣ ಯೋಜನೆಯಡಿ ಸಹಾಯಧನ ಮಿತಿ 50 ಸಾವಿರ ರೂ. ಗಳಷ್ಟು ಹೆಚ್ಚಳ.

* ಸಾಮಾಜಿಕ ಉದ್ಯಮಶೀಲತಾ ಯೋಜನೆಯಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ 5000 ನಿರುದ್ಯೋಗಿ ಯುವಕ /ಯುವತಿಯರಿಗೆ ಆದಾಯ ಬರುವ ಆರ್ಥಿಕ ಚಟುವಟಿಕೆ ಪ್ರಾರಂಭಿಸಲು ಗರಿಷ್ಠ 10 ಲಕ್ಷ ರೂ. ಆರ್ಥಿಕ ನೆರವು.

* ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ 5000 ನಿರುದ್ಯೋಗಿಗಳಿಗೆ 15 ಕೋಟಿ ರೂ. ವೆಚ್ಚದಲ್ಲಿ ಉದ್ಯೋಗಾಧಾರಿತ ತಾಂತ್ರಿಕ ತರಬೇತಿ.

* ಕಲಬುರಗಿ ನಗರದಲ್ಲಿ ಖಾಸಗಿ ತರಬೇತಿ ಕೇಂದ್ರಗಳ ಸಹಯೋಗದೊಂದಿಗೆ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಪದವೀಧರರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ನೆರವು.

* ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಕಾಲೋನಿ/ ತಾಂಡಗಳ ಸಮಗ್ರ ಅಭಿವೃದ್ಧಿಗೆ ತಲಾ ಕನಿಷ್ಠ 1 ಕೋಟಿ ರೂ.ಗಳಿಂದ ಗರಿಷ್ಠ 5 ಕೋಟಿ ರೂ. ಗಳವರೆಗೆ ಅನುದಾನ ಒದಗಿಸುವ ಪ್ರಗತಿ ಕಾಲೋನಿ ಯೋಜನೆ ಜಾರಿ.

* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಪ್ರತಿಷ್ಠಿತ ಕ್ರೀಡಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ನೀಡಲು 2 ಕೋಟಿ ರೂ. ಅನುದಾನ.

* ಆಯ್ದ ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡಗಳ ಮಾದರಿ/ ನವಗ್ರಾಮಗಳ ನಿರ್ಮಾಣ; ಆದಿವಾಸಿ ಸಮುದಾಯಗಳಿಗೆ ಆದ್ಯತೆ.

* ಪರಿಶಿಷ್ಟ ಪಂಗಡದ ಯುವಕರು ಹಾಗೂ ನಿರುದ್ಯೋಗಿಗಳಿಗೆ ಟ್ಯಾಕ್ಸಿ, ಹೋಂ ಸ್ಟೇ ಇತರೆ ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ.

* ಶಿಳ್ಳೇಕ್ಯಾತ, ದೊಂಬಿದಾಸ, ಗೌಳಿ, ಹೆಳವ, ಶಿಕಾರಿಗಳು, ಹೂವಾಡಿಗ, ಕಂಚುಗಾರ, ಕಮ್ಮಾರ, ದರ್ಜಿ, ದೇವಾಡಿಗ, ಬುಡಬುಡಿಕೆ, ತಿಗಳ, ಬಡಿಗೆ, ಹಟ್ಗಾರ, ಕರೆಒಕ್ಕಲಿಗ ಇತ್ಯಾದಿ ಅತ್ಯಂತ ಹಿಂದುಳಿದ ಸಮಾಜಗಳ ಅಭಿವೃದ್ಧಿಗಾಗಿ 10 ಕೋಟಿ ರೂ. ಅನುದಾನ.

* ಜಾತ್ಯತೀತವಾಗಿ ದಾಸೋಹ, ಶಿಕ್ಷಣ, ಸಾಮಾಜಿಕ ಸೇವೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಿವಿಧ ಧಾರ್ಮಿಕ ಪೀಠಗಳು ಹಾಗೂ ಸಂಘ ಸಂಸ್ಥೆಗಳಿಗೆ ಒಟ್ಟು 25 ಕೋಟಿ ರೂ. ಅನುದಾನ.

ಆಹಾರ ಮತ್ತು ನಾಗರಿಕ ಸರಬರಾಜು

ಆಹಾರ ಮತ್ತು ನಾಗರಿಕ ಸರಬರಾಜು

* ಅನ್ನಭಾಗ್ಯ ಯೋಜನೆಯ ಮೌಲ್ಯವರ್ಧನೆ. ಪ್ರತಿ ಫಲಾನುಭವಿಗೆ 5 ಕೆ.ಜಿ ಉಚಿತ ಅಕ್ಕಿ ಮತ್ತು ರಿಯಾಯಿತಿ ದರದಲ್ಲಿ ಅರ್ಧ ಕೆ.ಜಿ. ತೊಗರಿಬೇಳೆ ಹಾಗೂ ಪ್ರತಿ ಬಿಪಿಎಲ್ ಪಡಿತರ ಚೀಟಿಗೆ 1 ಕೆ.ಜಿ. ಪಾಮ್ ಎಣ್ಣೆ, 1 ಕೆ.ಜಿ. ಅಯೋಡಿನ್ ಮತ್ತು ಕಬ್ಬಿಣಾಂಶಯುಕ್ತ ಉಪ್ಪು ಹಾಗೂ 1 ಕೆ.ಜಿ. ಸಕ್ಕರೆ ವಿತರಣೆ.

* ವರ್ಷಕ್ಕೊಂದು ತಿಂಗಳು ಆಹಾರ ಸುರಕ್ಷಾ ಮಾಹೆ ಆಯೋಜನೆ; ಜಾಗೃತ ಸಮಿತಿಯ ಸದಸ್ಯರ ಸಹಕಾರದೊಂದಿಗೆ ಪಡಿತರ ಚೀಟಿಗಳ ವಾರ್ಷಿಕ ಪರಿಷ್ಕರಣೆ.

ಸಹಕಾರ

* ಕಾಯಕ ಯೋಜನೆಯಡಿ ಸ್ವಸಹಾಯ ಗುಂಪುಗಳು ಸ್ವಂತ ಉದ್ಯೋಗ ಕೈಗೊಳ್ಳಲು 3000 ಸ್ವಸಹಾಯ ಗುಂಪುಗಳಿಗೆ ಸಾಲ ಒದಗಿಸಲು 5 ಕೋಟಿ ರೂ. ಅನುದಾನ.

* ರಾಜ್ಯದ 5 ನಗರ ಪ್ರದೇಶಗಳಲ್ಲಿ ಬೀದಿ ವ್ಯಾಪಾರಿಗಳು / ಸಣ್ಣ ವ್ಯಾಪಾರಿಗಳಿಗೆ ಕಿರು ಹಣಕಾಸು ಸಾಲ (Micro Finance) ಸೌಲಭ್ಯ ಒದಗಿಸಲು ಬಡವರ ಬಂಧು ಸಂಚಾರಿ ಸೇವೆ ಪ್ರಾರಂಭ.

ಕೌಶಲ್ಯಾಭಿವೃದ್ಧಿ

* ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರದ (ಸಿಡಾಕ್) ಸಂಭಾವ್ಯ ಉದ್ದಿಮೆದಾರರಿಗೆ ತರಬೇತಿ ನೀಡುವ ದಿಶಾ ಯೋಜನೆ ಎಲ್ಲಾ ಜಿಲ್ಲೆಗಳಿಗೆ ವಿಸ್ತರಣೆ; 2 ಕೋಟಿ ರೂ. ಅನುದಾನ; 1 ಲಕ್ಷ ಜನರಿಗೆ ಪ್ರಯೋಜನ.

* ವಿದೇಶಗಳಲ್ಲಿ ಉದ್ಯೋಗ ಮತ್ತು ಜೀವನೋಪಾಯವನ್ನು ಹೊಂದಲು ರಾಜ್ಯದ ಯುವ ಜನತೆಗೆ ಅಗತ್ಯ ತರಬೇತಿ ನೀಡಲು ಕರ್ನಾಟಕ ಅಂತರಾಷ್ಟ್ರೀಯ ವಲಸಿಗ ಕೇಂದ್ರಕ್ಕೆ 2 ಕೋಟಿ ರೂ. ಅನುದಾನ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ

ಮಹಿಳಾ ಮತ್ತು ಮಕ್ಕಳ ಕಲ್ಯಾಣ

* ಮುಖ್ಯಮಂತ್ರಿ ಮಾತೃಶ್ರೀ ಯೋಜನೆ 2018ರ ನವೆಂಬರ್ 1ರಿಂದ ಜಾರಿ; ಬಿಪಿಎಲ್ ಕುಟುಂಬದ ಗರ್ಭಿಣಿಯರಿಗೆ ಮೂರು ತಿಂಗಳು ಹಾಗೂ ಬಾಣಂತಿಯರಿಗೆ ಮೂರು ತಿಂಗಳ ಅವಧಿಗೆ ಮಾಸಿಕ 1,000 ರೂ. ನಂತೆ ಒಟ್ಟು 6,000 ರೂ. ನೀಡಲು ಕ್ರಮ; ಈ ಯೋಜನೆಗೆ 350 ಕೋಟಿ ರೂ. ಅನುದಾನ.

* ಆಧಾರ ಸ್ವಯಂ ಉದ್ಯೋಗ ಯೋಜನೆಯ ಘಟಕ ವೆಚ್ಚ 1 ಲಕ್ಷ ರೂ.ಗಳಿಗೆ ಹೆಚ್ಚಳ; ಇದರಲ್ಲಿ ಶೇ.50ರಷ್ಟು ಬ್ಯಾಂಕ್ ಸಾಲ ಮತ್ತು ಶೇ.50ರಷ್ಟು ಸಹಾಯಧನ ಒದಗಿಸಲು ಕ್ರಮ.

* 2016ರ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯಡಿ ಎಲ್ಲಾ 21 ವಿಧದ ವಿಕಲಚೇತನ ವ್ಯಕ್ತಿಗಳ ಸಮೀಕ್ಷೆಗೆ 5 ಕೋಟಿ ರೂ. ಅನುದಾನ.

* ಪ್ರಸ್ತುತ ಜಿಲ್ಲೆಗೊಂದರಂತೆ ಇರುವ ವೃದ್ಧಾಶ್ರಮವನ್ನು ರಾಜ್ಯದ ಎಲ್ಲಾ ಉಪವಿಭಾಗಗಳಿಗೆ ತಲಾ ಒಂದರಂತೆ ವಿಸ್ತರಣೆಗೆ ಕ್ರಮ.

* ರಾಷ್ಟ್ರೀಯ ಅಂಗವಿಕಲರ ಹಣಕಾಸು ಅಭಿವೃದ್ಧಿ ನಿಗಮದಿಂದ ವಿಕಲಚೇತರಿಗೆ ನೀಡಿರುವ ಸಾಲ ಮತ್ತು 2014ರಿಂದ ಸುಸ್ತಿಯಾಗಿರುವ ಬಡ್ಡಿ ಮೊತ್ತ ಮನ್ನಾ ಮಾಡಲು 4 ಕೋಟಿ ರೂ. ಅನುದಾನ.

* ವಿಕಲಚೇತನ ಪಾಲನೆ ಹಾಗೂ ನಿರ್ವಹಣೆ ಬಗ್ಗೆ ಪಾಲಕರಿಗೆ ತರಬೇತಿ ನೀಡಲು 20 ಎಕರೆ ಜಾಗದಲ್ಲಿ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳ ಪಾಲುದಾರಿಕೆಯಲ್ಲಿ ವಿಕಲಚೇತನರ ಕ್ಯಾಂಪಸ್ ಪ್ರಾರಂಭ.

* ಬೆಂಗಳೂರಿನ ಇಂದಿರಾನಗರದಲ್ಲಿರುವ ಸರ್ಕಾರಿ ಕಿವುಡು ಮಕ್ಕಳ ಶಾಲೆಯ ಕಟ್ಟಡದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವಿಶೇಷ ಶಿಕ್ಷಕರ ಶಿಕ್ಷಣಕ್ಕಾಗಿ ತರಬೇತಿ ಕೇಂದ್ರ ಪ್ರಾರಂಭ.

* ಪಿ.ಹೆಚ್.ಡಿ. ಮಾಡುತ್ತಿರುವ ಹಾಗೂ ವಿದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಕೈಗೊಳ್ಳುವ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು 1 ಕೋಟಿ ರೂ. ಅನುದಾನ.

* ವಿವಿಧ ಅಭಿವೃದ್ಧಿ ಇಲಾಖೆಗಳ ಸಹಭಾಗಿತ್ವದಲ್ಲಿ ಲೈಂಗಿಕ ಕಾರ್ಯಕರ್ತೆಯರ ಜೀವನಕ್ಕೆ ಭದ್ರತೆ ಒದಗಿಸುವ ಕಾರ್ಯಕ್ರಮ ಜಾರಿ.

ಜಲ ಸಂಪನ್ಮೂಲ, ಸಣ್ಣ ನೀರಾವರಿ

ಜಲ ಸಂಪನ್ಮೂಲ, ಸಣ್ಣ ನೀರಾವರಿ

* ಮೇಕೆದಾಟು ಯೋಜನೆ ಕಾರ್ಯಗತಗೊಳಿಸಲು ಕ್ರಮ.

* ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಮೆರಿಕಾದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆ.ಆರ್.ಎಸ್. ಅಭಿವೃದ್ಧಿಗೆ ಕ್ರಮ. ಡಿಪಿಆರ್ ತಯಾರಿಕೆಗೆ 5 ಕೋಟಿ ರೂ. ಅನುದಾನ.

* ಮಹದಾಯಿ ನದಿ ವಿವಾದದ ನ್ಯಾಯಾಧಿಕರಣ ತೀರ್ಪು ಆಗಸ್ಟ್ 2018 ರಲ್ಲಿ ಬರುವ ನಿರೀಕ್ಷೆ; ತೀರ್ಪಿನ ಅನ್ವಯ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮ.

* ಕೃಷ್ಣಾ ಮೇಲ್ದಂಡೆ ಯೋಜನೆ 3 ನೇ ಹಂತದ ಪುನರ್ವಸತಿ ಮತ್ತು ಪುನರ್‌ನಿರ್ಮಾಣ ಕಾರ್ಯಕ್ಕೆ ಚುರುಕು.

ಸಣ್ಣ ನೀರಾವರಿ

* ಹಾಸನ ತಾಲ್ಲೂಕು ದುದ್ದ ಮತ್ತು ಶಾಂತಿಗ್ರಾಮ ಹೋಬಳಿ ವ್ಯಾಪ್ತಿಯ 160 ಕೆರೆಗಳಿಗೆ 70 ಕೋಟಿ ರೂ. ವೆಚ್ಚದಲ್ಲಿ ಹೇಮಾವತಿ ನದಿಯಿಂದ ನೀರು ತುಂಬಿಸುವ ಯೋಜನೆ ಜಾರಿ.

* ಲೋಕಪಾವನಿ ನದಿಯಿಂದ ಮಂಡ್ಯ ಜಿಲ್ಲೆಯ ದುದ್ದ ಹಾಗೂ ಇತರೆ ಕೆರೆಗಳಿಗೆ ನೀರು ತುಂಬಿಸುವ ಹಾಗೂ ಮಂಡ್ಯ ತಾಲ್ಲೂಕಿನ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ 30 ಕೋಟಿ ರೂ.ಗಳ ಅನುದಾನ.

* ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನಲ್ಲಿ ಕೃಷ್ಣಾ ನದಿಯಿಂದ 100 ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಜಾರಿ; ಸುಮಾರು 10,225 ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ.

ಸಾರಿಗೆ ಇಲಾಖೆಯ ಯೋಜನೆಗಳು

ಸಾರಿಗೆ ಇಲಾಖೆಯ ಯೋಜನೆಗಳು

* ಬೆಂಗಳೂರಿನ ಸಾರಿಗೆ ಸೇವೆಯ ಸಮಗ್ರ ಸುಧಾರಣೆಗಾಗಿ ಕಾರ್ಯತಂತ್ರ ಹಾಗೂ ಕ್ರಿಯಾಯೋಜನೆ ರೂಪಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಏಕೀಕೃತ ಭೂ ಸಾರಿಗೆ ಪ್ರಾಧಿಕಾರ ಸ್ಥಾಪನೆ.

* ಸಾರ್ವಜನಿಕ ಸಾರಿಗೆ ಸೇವೆ ಬಲವರ್ಧನೆ; ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 100 ಕೋಟಿ ರೂ. ನೇರ ಸಹಾಯಧನ ನೀಡಲು ತೀರ್ಮಾನ.

* ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಪ್ರೋತ್ಸಾಹಿಸಲು 4 ಕೋಟಿ ರೂ. ವೆಚ್ಚದಲ್ಲಿ 100 ಚಾರ್ಜಿಂಗ್ ಘಟಕ ಸ್ಥಾಪನೆ.

* ಸಾರಿಗೆ ಸಂಸ್ಥೆಗಳಿಗಾಗಿ 4236 ಬಸ್ ಖರೀದಿ. ಈ ಪೈಕಿ ವಿದ್ಯುತ್ ವಾಹನ ನೀತಿ-2017ರಡಿ ಬಿಎಂಟಿಸಿಯಿಂದ 80 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗೆ ಕ್ರಮ.

ವಿವಿಧ ಇಲಾಖೆಗಳಿಗೆ ಸಿಕ್ಕಿದ್ದು

ವಿವಿಧ ಇಲಾಖೆಗಳಿಗೆ ಸಿಕ್ಕಿದ್ದು

* ಗ್ರಾಮೀಣ ಪ್ರದೇಶಗಳಿಗೆ ಜೀವನದಿ ಅಥವಾ ಜಲಾಶಯಗಳಿಂದ 85 LPCD ನೀರು ಒದಗಿಸಲು 53,000 ಕೋಟಿ ರೂ.ಗಳ ಜಲಧಾರೆ ಯೋಜನೆಗೆ ಚಾಲನೆ, ಯೋಜನೆಯ ಡಿಪಿಆರ್ ತಯಾರಿಕೆಗೆ ಕ್ರಮ.

* ಶ್ರೀರಂಗಪಟ್ಟಣ ತಾಲ್ಲೂಕಿನ 29 ಹಳ್ಳಿಗಳಿಗೆ 42.9 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಜಾರಿ.

ಕಂದಾಯ

* ಸಂಧ್ಯಾ ಸುರಕ್ಷಾ ಯೋಜನೆ ಮಾಸಾಶನ ಮೊತ್ತ ಸಾವಿರ ರೂ. ಗಳಿಗೆ ಹೆಚ್ಚಳ. 32.92 ಲಕ್ಷ ಫಲಾನುಭವಿಗಳಿಗೆ ಅನುಕೂಲ; 660 ಕೋಟಿ ರೂ. ಹೆಚ್ಚುವರಿ ಅನುದಾನ; 1ನೇ ನವೆಂಬರ್ 2018 ರಿಂದ ಜಾರಿ.

* ಐದು ಜಿಲ್ಲೆಗಳಲ್ಲಿ ಮರು ಭೂಮಾಪನಾ ಕಾರ್ಯ ಪ್ರಾರಂಭ.

* 50 ನಾಡಕಛೇರಿಗಳಿಗೆ ಮೂಲಸೌಕರ್ಯ ಅಭಿವೃದ್ಧಿಗಾಗಿ 10 ಕೋಟಿ ರೂ. ಅನುದಾನ.

ಮುಜರಾಯಿ

* ಬ್ರಾಹ್ಮಣ ಸಮುದಾಯದ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ 25 ಕೋಟಿ ರೂ. ಅನುದಾನ.

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ

* ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 96 ಕೋಟಿ ರೂ. ವೆಚ್ಚದಲ್ಲಿ 42 ನಿರಂತರ ಪರಿವೇಷ್ಟಕ ವಾಯುಗುಣಮಟ್ಟ ಮಾಪನ ಕೇಂದ್ರಗಳ (Continuous Ambient Air Quality Monitoring Stations) ಸ್ಥಾಪನೆ.

* ರಾಜ್ಯದಲ್ಲಿ ಸಾಮಾಜಿಕ ಅರಣ್ಯ ಬೆಳವಣಿಗೆಗೆ ಒತ್ತು; ಆಂದೋಲನದ ಮಾದರಿಯಲ್ಲಿ ಹಸಿರು ಕರ್ನಾಟಕ ಯೋಜನೆ ಜಾರಿಗೆ 10 ಕೋಟಿ ರೂ. ಅನುದಾನ.

* 750 ಮಿಲಿಮೀಟರ್‌ಗಿಂತ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿರುವ ಅರಣ್ಯ ವೃದ್ಧಿಗಾಗಿ ಸರ್ಕಾರಿ ಬೆಟ್ಟ ಗುಡ್ಡದ ಜಮೀನುಗಳಿಗೆ ಬೇಲಿ ಸಂರಕ್ಷಣೆ ಕಲ್ಪಿಸಲು 40 ಕೋಟಿ ರೂ. ಅನುದಾನ.

English summary
Karnataka Chief minister and Finance minister H.D.Kumaraswamy presented Karnataka budget 2018-19 on July 5, 2018. This is the 1st Budget of the Congress-JD(S) alliance government in Karnataka. Here is a highlights of the Karnataka Buget 2018.ಕರ್ನಾಟಕ ಬಜೆಟ್ 2018 Highlights
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more