ಕರ್ನಾಟಕ ಬಿಜೆಪಿ ಶಾಸಕನ ರಾಸಲೀಲೆ ವಿಡಿಯೋ ವೈರಲ್
ಬೆಂಗಳೂರು, ನವೆಂಬರ್ 27: ಕರ್ನಾಟಕದ ಬಿಜೆಪಿ ಶಾಸಕರೋರ್ವರ ರಾಸಲೀಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸ್ವತಃ ಶಾಸಕರೇ ಪೊಲೀಸರಿಗೆ ದೂರು ನೀಡಿದ್ದಾರೆ.
ಗದಗ ಜಿಲ್ಲೆ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕರೊಬ್ಬರ ಸೆಕ್ಸ್ ವಿಡಿಯೋ ಇದಾಗಿದ್ದು, ಹನಿಟ್ರಾಪ್ ಮೂಲಕ ಶಾಸಕನನ್ನು ಬಲೆಗೆ ಬೀಳಿಸಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ವಿಡಿಯೋವನ್ನು 2017 ರ ಫೆಬ್ರವರಿ 25 ರಂದು ರೆಕಾರ್ಡ್ ಮಾಡಿಕೊಂಡಿರುವುದಾಗಿ ವಿಡಿಯೋದಲ್ಲಿ ನಮೂದಾಗಿದೆ.
ಈ ಸಂಬಂಧ ರಾಘವೇಂದ್ರ ಹಾಗೂ ವಿಡಿಯೋದಲ್ಲಿ ಶಾಸಕರೊಟ್ಟಿಗೆ ಇದ್ದಾಳೆ ಎನ್ನಲಾಗುತ್ತಿರುವ ಯುವತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಖ್ಯ ಆರೋಪಿ ರಾಘವೇಂದ್ರ ತನ್ನ ಪ್ರೇಯಸಿಯನ್ನೇ ಬಳಸಿ ಶಾಸಕರು ಹಾಗೂ ಗಣ್ಯರನ್ನು ಹನಿಟ್ರಾಪ್ ಬಲೆಗೆ ಬೀಳಿಸಿ ಖಾಸಗಿ ಕ್ಷಣದ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬೆದರಿಸಿ ಭಾರಿ ಮೊತ್ತದ ಹಣಕ್ಕಾಗಿ ಪೀಡಿಸುತ್ತಿದ್ದ.
ಈ ಹನಿಟ್ರಾಪ್ ಬಲೆಗೆ ಸಿಕ್ಕಿಬಿದ್ದ ಬಿಜೆಪಿ ಶಾಸಕರೊಬ್ಬರು ಇದೇ ತಿಂಗಳ 23 ರಂದು ಸೈಬರ್ ಪೊಲೀಸರಿಗೆ ದೂರು ದಾಖಲಿಸಿದ್ದರು. ಅದರಂತೆ ಪೊಲೀಸರು ರಾಘವೇಂದ್ರ ಮತ್ತು ಆತನ ಪ್ರೇಯಸಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ರಾಘವೇಂದ್ರನಿಂದ ಪೆನ್ಡ್ರೈವ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಹನಿಟ್ರಾಪ್ ಅನ್ನೇ ವೃತ್ತಿಯಾಗಿಸಿಕೊಂಡಿದ್ದ ರಾಘವೇಂದ್ರ, ಐವರು ಶಾಸಕರನ್ನು ಹನಿಟ್ರಾಪ್ ಮೂಲಕ ಬಲೆಗೆ ಕೆಡವಿ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ಶಾಸಕರುಗಳು ಮಾತ್ರವಲ್ಲದೆ ದೊಡ್ಡ-ದೊಡ್ಡ ಉದ್ಯಮಿಗಳನ್ನೂ ಈತ ಬಲೆಗೆ ಬೀಳಿಸಿದ್ದನೆಂಬ ಮಾಹಿತಿ ತನಿಖೆ ವೇಳೆ ಬಹಿರಂಗವಾಗಿದೆ.
ರಾಜಕಾರಣಿಗಳ ಸ್ನೇಹ ಸಂಪಾದನೆ ಮಾಡುತ್ತಿದ್ದ ರಾಘವೇಂದ್ರ ನಂತರ ಅವರಿಗೆ ಚೆಂದದ ಯುವತಿಯರ ಚಿತ್ರಗಳನ್ನು ತೋರಿಸಿ ಅವರನ್ನು ಬಲೆಗೆ ಕೆಡವಿ ಶಾಸಕರು ಯುವತಿಯರೊಂದಿಗೆ ಖಾಸಗಿ ಕ್ಷಣದಲ್ಲಿದ್ದಾಗ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಮತ್ತು ಆತನ ಪ್ರೇಯಸಿ ಸೇರಿದಂತೆ ನಾಲ್ಕು ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.